ಶನಿವಾರ, ಏಪ್ರಿಲ್ 17, 2021
32 °C

ಸಂಭಾವ್ಯ ದುರಂತ: ಸುರಕ್ಷಾ ಮಾನದಂಡದತ್ತ ಎಲ್ಲರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಎಎಫ್‌ಪಿ): ಭೂಕಂಪದಿಂದ ಜಪಾನ್‌ನ ಪರಮಾಣು ಸ್ಥಾವರಗಳು ಸೃಷ್ಟಿಸಿರುವ ತೀವ್ರ ದುಗುಡ ಬರೀ ಆ ದೇಶಕ್ಕಷ್ಟೇ ಸೀಮಿತಗೊಂಡಿಲ್ಲ. ಒಂದು ಸ್ಥಾವರ ಭೀಕರವಾಗಿ ಸ್ಫೋಟಗೊಂಡು ಮತ್ತೊಂದು ಸ್ಥಾವರ ನಿಗಿನಿಗಿಸುತ್ತಿರುವ ಈ ಸಂದರ್ಭದಲ್ಲಿ ಜಗತ್ತಿನ ಕಣ್ಣೆಲ್ಲಾ ಈಗ ಈ ಸಂಭಾವ್ಯ ದುರಂತದ ಪರಿಣಾಮದತ್ತಲೇ ನೆಟ್ಟಿದೆ.ಇದು ವಿಶ್ವದಾದ್ಯಂತ ಪರಮಾಣು ಸುರಕ್ಷೆಗೆ ಅನುಸರಿಸುವ ಮಾನದಂಡಗಳು ಭೂಕಂಪದಂತಹ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಎಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲವು ಎಂಬ ಬಗ್ಗೆ ಹಲವಾರು ದೇಶಗಳಲ್ಲಿ ಹೊಸ ಚರ್ಚೆಯ ಹುಟ್ಟಿಗೆ ಕಾರಣವಾಗಿವೆ. ಇಷ್ಟೇ ಅಲ್ಲ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅಣು ವಿದ್ಯುತ್ ಅನ್ನೇ ಹೆಚ್ಚು ಅವಲಂಬಿಸಬೇಕೇ ಎಂಬಂತಹ ದಶಕಗಳ ಹಿಂದಿನ ಚರ್ಚೆಗೆ ‘ಮಾಲಿನ್ಯ ಹೊರಸೂಸುವಿಕೆ’ಯ ತಡೆಗೆ ಪ್ರಯತ್ನಿಸುತ್ತಿರುವ ಅಮೆರಿಕ, ಜರ್ಮನಿ ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮರುಜೀವ ಬಂದಿದೆ.ವಿಶ್ವದ ಪರಮಾಣು ಸ್ಥಾವರಗಳಿಗೆ ಅತಿ ಹೆಚ್ಚಿನ ಯುರೇನಿಯಂ ಪೂರೈಕೆ ಮಾಡುತ್ತಿರುವ ಆಸ್ಟ್ರೇಲಿಯಾದಲ್ಲಂತೂ ಪರಮಾಣು ವಿರೋಧಿಗಳ ವಾದಕ್ಕೆ ಇನ್ನಷ್ಟು ಬಲ ಬಂದಿದೆ. ಅಣುಶಕ್ತಿಯ ಸುರಕ್ಷೆಗೆ ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ನಡುವೆಯೂ, ಜಪಾನ್‌ನ ಸ್ಥಾವರ ಸ್ಫೋಟವು ಅಣುಶಕ್ತಿಯ ಭಯಾನಕ ಅಪಾಯಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅವರು ವಾದಿಸುತ್ತಿದ್ದಾರೆ.

‘ಅಣು ವಿದ್ಯುತ್‌ಗೆ ಭಾರಿ ವೆಚ್ಚ ತಗಲುತ್ತದೆ. ಅಲ್ಲದೆ ಇದು ಅತ್ಯಂತ ಅಪಾಯಕಾರಿ ಆಯ್ಕೆಯಾಗಿದ್ದು ಭವಿಷ್ಯದ ಸುಸ್ಥಿರ ಇಂಧನ ಯೋಜನೆಗಳಲ್ಲಿ ಇದಕ್ಕೆ ಸ್ಥಳವಿಲ್ಲ’ ಎಂದು ಆಸ್ಟ್ರೇಲಿಯಾ ಕನ್ಸರ್ವೇಷನ್ ಫೌಂಡೇಷನ್‌ನ ಡೇವಿಡ್ ನೂನನ್ ಹೇಳಿದ್ದಾರೆ.ಜರ್ಮನಿಯ ಸಂಸತ್ತು 2009ರಲ್ಲಿ ಅಣು ವಿದ್ಯುತ್ ಬಳಕೆ ತಪ್ಪಿಸುವ ನಿರ್ಣಯವನ್ನು ಹಿಂತೆಗೆದುಕೊಂಡು ಈ ಶಕ್ತಿಮೂಲವನ್ನೇ ಹೆಚ್ಚು ಕಾಲ ಬಳಸಲು ನಿರ್ಧರಿಸಿದ್ದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದ್ದು, ಬರ್ಲಿನ್‌ನಲ್ಲಿ ಸಾವಿರಾರು ಜನರು ಶನಿವಾರ ಪ್ರತಿಭಟನೆ ನಡೆಸಿದರು. ಸುಮಾರು 30 ವರ್ಷಗಳಿಂದ ಯಾವುದೇ ಹೊಸ ಅಣು ವಿದ್ಯುತ್ ಘಟಕಗಳನ್ನು ಸ್ಥಾಪಿಸದಿದ್ದರೂ ಶೇ 20ರಷ್ಟು ವಿದ್ಯುತ್‌ಗೆ ಅಣುಶಕ್ತಿಯನ್ನೇ ಅವಲಂಬಿಸಿರುವ ಅಮೆರಿಕದಲ್ಲೂ ಈ ಕುರಿತ ಚರ್ಚೆ ಕಾವು ಪಡೆದುಕೊಂಡಿದೆ.ಕಲ್ಲಿದ್ದಲು ಆಧಾರಿತ ವಿದ್ಯುತ್‌ಗಿಂತ ಅಣುಶಕ್ತಿಯು ಶುದ್ಧವಾದ ಪರ್ಯಾಯ ಮಾರ್ಗ ಎಂಬ ಕಾರಣಕ್ಕೆ ಬಹಳಷ್ಟು ದೇಶಗಳು ಈಗ ಈ ಶಕ್ತಿಮೂಲವನ್ನೇ ಆಶ್ರಯಿಸಿವೆ. ಆದರೆ ವಿಜ್ಞಾನಿಗಳು ಮಾತ್ರ ಇದರಿಂದ ಜಾಗತಿಕ ತಾಪಮಾನ ಅಧಿಕವಾಗುವ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಭೂಕಂಪಕ್ಕೆ ಇಲ್ಲ ಅನುಕಂಪ...

ಲಂಡನ್ (ಐಎಎನ್‌ಎಸ್): ಜಪಾನ್‌ನ ಪ್ರಸಕ್ತ ಮಹಾ ಭೂಕಂಪದಿಂದ ಬಿಡುಗಡೆಯಾದ ಒಟ್ಟು ಶಕ್ತಿಯು ವಿಶ್ವದ ಎಲ್ಲ ಅಣ್ವಸ್ತ್ರಗಳ ಒಟ್ಟು ಶಕ್ತಿಯ ಸರಿಸುಮಾರು 1000 ಪಟ್ಟಿನಷ್ಟು ಅಥವಾ 6.7 ಲಕ್ಷ ಕೋಟಿ ಟನ್ ಟಿಎನ್‌ಟಿಯಷ್ಟು (ಟ್ರೈನೈಟ್ರೊಟಾಲ್ವೀನ್).ಇದರಿಂದ ಭೂಮಿಯಲ್ಲಿ ಸಂಭವಿಸುವ ಭೂಕಂಪಗಳಿಗಿಂತ ಸಮುದ್ರದಡಿ ಘಟಿಸುವ ಭೂಕಂಪಗಳು ಅತಿ ಹೆಚ್ಚು ವಿನಾಶಕಾರಿ ಎಂಬ ಅಂಶ ಪ್ರಮುಖವಾಗಿ ಸಾಬೀತಾಗಿದೆ. ಇಂತಹ ಭೂಕಂಪಗಳು ಭಾರಿ ಮಾರಕವಾದ ಸುನಾಮಿಗಳನ್ನು ಸೃಷ್ಟಿಸಬಲ್ಲವು.ಅದರಲ್ಲೂ ವಿವಿಧ ಭೂಖಂಡಗಳು ಜೊತೆಗೂಡುವ ಜಪಾನ್‌ನಂತಹ ಸೂಕ್ಷ್ಮ ಪ್ರದೇಶದಲ್ಲಿ ಹಾನಿಯ ಪ್ರಮಾಣ ಇನ್ನೂ ಅಧಿಕ.

ವಿಶ್ವದಲ್ಲಿ ಸಂಭವಿಸುವ ಭೂಕಂಪಗಳಲ್ಲಿ 6 ಅಥವಾ ಅದಕ್ಕಿಂತಲೂ ಹೆಚ್ಚು ತೀವ್ರತೆಯ ಶೇ 20ರಷ್ಟು ಭೂಕಂಪಗಳು ಇಲ್ಲೇ ಉಂಟಾಗುತ್ತವೆ.ಪೆಸಿಫಿಕ್, ಫಿಲಿಪ್ಪೀನ್, ಯುರೇಶಿಯ, ಉತ್ತರ ಅಮೆರಿಕದಂತಹ ಹಲವು ಭೂಖಂಡಗಳು ಮತ್ತು ಪ್ರಸ್ಥಭೂಮಿಗಳು ಜಪಾನ್ ಪ್ರದೇಶದಲ್ಲಿ ಸೇರುತ್ತವೆ. ಇದರ ಪರಿಣಾಮವಾಗೇ ದೇಶದಲ್ಲಿ ಜ್ವಾಲಾಮುಖಿಗಳು, ಬಿಸಿ ನೀರಿನ ಬುಗ್ಗೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಶಾಂತ ಮಹಾಸಾಗರವನ್ನು ಸುತ್ತುವರಿದಿರುವ ಭೂಕಂಪ ಮತ್ತು ಜ್ವಾಲಾಮುಖಿಗಳ ಆಗರವಾದ 25,000 ಮೈಲಿ ಪ್ರದೇಶದ ‘ಪೆಸಿಫಿಕ್ ಬೆಂಕಿಯುಂಗುರ’ದ ವ್ಯಾಪ್ತಿಗೆ ಇದು ಒಳಪಡುತ್ತದೆ. ಪ್ರತಿ ಶತಮಾನದಲ್ಲೂ ಇಲ್ಲಿ ಹಲವಾರು ವಿನಾಶಕಾರಿ ಭೂಕಂಪಗಳು ಘಟಿಸುತ್ತಲೇ ಇರುತ್ತವೆ.8 ಅಡಿ ಮುಂದಕ್ಕೆ ಹೋದ ದ್ವೀಪ ರಾಷ್ಟ್ರ

ವಾಷಿಂಗ್ಟನ್ (ವರದಿ): ಜಪಾನ್‌ನ ಭೀಕರ ಮತ್ತು ಐತಿಹಾಸಿಕ ದಾಖಲೆಯ ಪ್ರಬಲ ಭೂಕಂಪ ‘ದ್ವೀಪ ರಾಷ್ಟ್ರ’ವನ್ನು 8 ಅಡಿಗಳಷ್ಟು ಮುಂದಕ್ಕೆ ದೂಡಿದೆ ಎಂದು ಅಮೆರಿಕದ ಭೂಗರ್ಭ ಸಮೀಕ್ಷೆ (ಯುಎಸ್‌ಜಿಎಸ್) ತಿಳಿಸಿದೆ.  ಆದರೆ ಈ ಪ್ರಮಾಣ ಅತ್ಯಂತ ಹೆಚ್ಚಿನದೇನಲ್ಲ’ ಎಂದು ಸಂಸ್ಥೆಯ ಭೂಕಂಪ ತಜ್ಞ ಪಾಲ್ ಅರ್ಲ್ ಹೇಳಿದ್ದಾರೆ.ಮರೆಯಾಯ್ತು ಊರು; ಭಗ್ನಾವಶೇಷಗಳದ್ದೇ ಕಾರುಬಾರು

ಸೆಂಡೈ (ಎಎಫ್‌ಪಿ): ಜಪಾನ್‌ನ ಈಶಾನ್ಯ ಕರಾವಳಿ ವ್ಯಾಪ್ತಿಯಲ್ಲಿ ಪಟ್ಟಣಗಳು ಮತ್ತು ಹಳ್ಳಿಗಳಿದ್ದ ಜಾಗದಲ್ಲಿ ಈಗೇನಿದ್ದರೂ ಭಗ್ನಾವಶೇಷಗಳದ್ದೇ ಕಾರುಬಾರು. ಪ್ರಚಂಡ ಸುನಾಮಿ ಅಲೆಗಳು ಈ ಊರುಗಳನ್ನು ನಾಮಾವಶೇಷ ಮಾಡಿ ಹಾಕಿವೆ.ಬಂದರು ಪಟ್ಟಣವಾದ ಮಿನಾಮಿಸನ್‌ರಿಕು ಅಂತೂ ದುರಂತದ ಪ್ರತಿನಿಧಿಯಂತೆ ಕಂಡುಬರುತ್ತಿದೆ. ಇಲ್ಲಿನ 17,500 ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ರಭಸದ ಅಲೆಗಳ ನಡುವೆ ಕಾಣೆಯಾಗಿದ್ದಾರೆ. ಭೀಕರ ಅಲೆಗಳು ಕಾಣಿಸಿಕೊಂಡ ಕೂಡಲೇ ಸೈರನ್‌ಗಳು ಮೊಳಗಿಸಿದ ಸುನಾಮಿ ಎಚ್ಚರಿಕೆ ಕಮೈಷಿ ಅಂತಹ ಕೆಲ ನಗರಗಳ ಅದೃಷ್ಟವಂತರ ಪ್ರಾಣ ಉಳಿಸಿದೆ. ಸೈರನ್ ಕೂಗು ಕೇಳುತ್ತಿದ್ದಂತೆಯೇ ಇವರೆಲ್ಲಾ ಮನೆಗಳ ಮೇಲ್ಭಾಗಕ್ಕೆ ಓಡಿ ಹೋಗಿದ್ದಾರೆ.ಜಲ ಪ್ರಳಯದಲ್ಲಿ ಸಣ್ಣ ಆಟಿಕೆಗಳಂತೆ ಕೊಚ್ಚಿ ಹೋದ ಕಾರುಗಳು, ಲಾರಿಗಳು ಸೆಂಡೈ ನಗರದ ಬೀದಿಗಳಲ್ಲಿ ಅನಾಥವಾಗಿ ಬಿದ್ದಿವೆ. ಕರಾವಳಿ ತೀರದಲ್ಲಿ ಹಡಗುಗಳ ಕಂಟೇನರ್‌ಗಳು ಚೆಲ್ಲಾಪಿಲ್ಲಿಯಾಗಿದ್ದರೆ, ಬತ್ತದ ಗದ್ದೆಗಳ ಜಾಗದಲ್ಲಿ ಕೆಸರು, ಮಣ್ಣು ತುಂಬಿ ಹೋಗಿದೆ. ಸುನಾಮಿ ಅಬ್ಬರದಲ್ಲಿ ಕೊಚ್ಚಿ ಹೋಗಿ ಅವಶೇಷಗಳ ನಡುವೆಯೇ ಬದುಕುಳಿದಿದ್ದ 60 ವರ್ಷದ ಹಿರೋಮಿತ್ಸು ಶಿಂಕಾವ ಎಂಬ ವ್ಯಕ್ತಿಯೊಬ್ಬನನ್ನು ಎರಡು ದಿನಗಳ ಬಳಿಕ ಭಾನುವಾರ ರಕ್ಷಿಸಲಾಗಿದೆ. ಮೊದಲು ಹೊರಗೋಡಿದ ಆತ ಏನನ್ನೋ ತೆಗೆದುಕೊಳ್ಳಲು ಮತ್ತೆ ಮನೆಯೊಳಗೆ ಹೋದಾಗ ಸುನಾಮಿ ಅಲೆ ಮನೆಯ ಸಮೇತ ಆತನನ್ನು ಎಳೆದೊಯ್ದಿತ್ತು.ಪತಿಯೊಂದಿಗೆ ಸಾವಿನ ದವಡೆಯಿಂದ ಪಾರಾಗಿ ಬಂದ ಭೀಕರ ಕ್ಷಣಗಳನ್ನು ಮಿಯಾಗಿ ಪ್ರಾಂತ್ಯದ ಮಹಿಳೆಯೊಬ್ಬರು ವರ್ಣಿಸುವುದು ಹೀಗೆ: ನೀರು ರಭಸವಾಗಿ ಬರುತ್ತಿತ್ತು. ದಾರಿಯಲ್ಲಿ ಸಿಕ್ಕ ಯಾವುದೋ ಕಟ್ಟಡದ ಎರಡನೇ ಮಹಡಿಗೆ ಇಬ್ಬರೂ ಓಡಿದೆವು. ಅಲ್ಲಿಗೂ ನೀರು ಏರಿತು. ನಮ್ಮ ಕಣ್ಣ ಮುಂದೆಯೇ ಕಟ್ಟಡದ ಮಾಲೀಕ ಮತ್ತು ಅವರ ಮಗಳು ಕೊಚ್ಚಿ ಹೋದರು.ನಿರಾಶ್ರಿತರು ಆಶ್ರಯ ಪಡೆದಿರುವ ಆಸ್ಪತ್ರೆಯೊಂದರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಸೋಮವಾರದ ವೇಳೆಗೆ ಅಲ್ಲಿನ ರೋಗಿಗಳಿಗೇ ನೀರು ಮತ್ತು ಆಹಾರ ಪೂರೈಕೆ ಅಸಾಧ್ಯವಾಗುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.