ಶುಕ್ರವಾರ, ಏಪ್ರಿಲ್ 16, 2021
31 °C

ಸಂಭ್ರಮದ ದೀಪಾವಳಿ ಮಹಾರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ:  ತಾಲ್ಲೂಕಿನ  ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿಯ ಮಹಾರಥೋತ್ಸವವು  ಬುಧವಾರ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ 10.55 ಕ್ಕೆ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದ ಮಹಾರಥದಲ್ಲಿ ಕುಳ್ಳಿರಿಸಿದ ನಂತರ, ಸಾಲೂರು ಮಠದ ಗುರುಸ್ವಾಮಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ನಂತರ ಭಕ್ತರು ಉಘೇ ಮಾದಪ್ಪ ಉಘೇ... ಎಂಬ ಹರ್ಷೋದ್ಘಾರದೊಂದಿಗೆ ರಥವನ್ನು ಎಳೆದರು. ಹಣ್ಣು, ಜವನ, ದವಸ, ಧಾನ್ಯಗಳನ್ನು ಎರಚಿ ಸಂಭ್ರಮಿಸಿದರು.ರಥೋತ್ಸವದ ನಂತರ  ದೇವಸ್ಥಾನದ ಗರ್ಭ ಗುಡಿಯ ಎದುರು ಅನ್ನ ಬ್ರಹ್ಮೋತ್ಸವ ನಡೆಯಿತು. ದೀಪಾವಳಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ಉಚಿತವಾಗಿ ಲಾಡು ವಿತರಿಸುತ್ತಿದ್ದುದು ವಿಶೇಷವಾಗಿತ್ತು.ವಿಶೇಷ ಸೌಲಭ್ಯ: ದೀಪಾವಳಿ ಜಾತ್ರೆಗೆ ಆಗಮಿಸಿದ್ದ ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಾಲಯದ ವತಿಯಿಂದ ಶುದ್ಧ ಕುಡಿಯುವ ನೀರು, ಶೌಚಾಲಯ, ಬಸ್ ವ್ಯವಸ್ಥೆ, ಶೆಲ್ಟರ್ ವ್ಯವಸ್ಥೆ, ಪಾರ್ಕಿಂಗ್, ವಸತಿ ಸೌಲಭ್ಯ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಇನ್ನೂ ಹಲವು ಸೌಲಭ್ಯ ಕಲ್ಪಿಸಲಾಗಿತ್ತು.

ಬಂದೋಬಸ್ತ್: ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸೇವಾ ಉತ್ಸವಾದಿಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ  ಡಿ.ವೈ.ಎಸ್.ಪಿ. ಚನ್ನಬಸವಣ್ಣ ಅವರ ಮಾರ್ಗದರ್ಶನದಲ್ಲಿ  ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.ಮಹಾರಥೋತ್ಸವದಲ್ಲಿ ದೇವಾಲಯದ ಆಡಳಿತಾಧಿಕಾರಿ ಜಯವಿಭವಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ  ಎಚ್.ಎಂ.ಶಿವಲಿಂಗೇಗೌಡ, ದೇವಾಲಯದ ಮಾಧುರಾಜ್, ಸದಾಶಿವಪ್ಪ, ನಾಗರಾಜು, ಮಹದೇವಸ್ವಾಮಿ, ಸ್ವಾಮಿ, ಬಸವರಾಜು, ಮಲೆಯಪ್ಪ  ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.