ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ತುಳು

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ತುಳು ದ್ರಾವಿಡ ಪರಿವಾರಕ್ಕೆ ಸೇರಿದ ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಪ್ರಾಚೀನತೆ ಹೊಂದಿರುವ ಒಂದು ಪ್ರೌಢ ಭಾಷೆ. ಕ್ರಿ.ಶ. 1856ರಲ್ಲಿಯೇ ಜರ್ಮನಿಯ ಭಾಷಾತಜ್ಞ ರಾಬರ್ಟ್ ಕಾಲ್ಡ್‌ವೆಲ್ ದ್ರಾವಿಡ ಭಾಷೆಗಳ ಬಗೆಗೆ ಸಂಶೋಧನೆ ನಡೆಸಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ತುಳು- ಈ ಐದು ಭಾಷೆಗಳು ಪ್ರೌಢ ಭಾಷೆಗಳೆಂದು ಗುರುತಿಸಿದ್ದಾನೆ. ಹಾಗಾಗಿಯೇ ಇವನ್ನು ಪಂಚದ್ರಾವಿಡ ಭಾಷೆಗಳೆಂದು ಕರೆಯುವ ಪದ್ಧತಿ ರೂಢಿಗೆ ಬಂದಿದೆ.

ಒಂದು ಕಾಲದಲ್ಲಿ ತುಳುನಾಡು ಈಗಿನ ಕೇರಳದ ಬಡಗರದಿಂದ ಹೊನ್ನಾವರದವರೆಗೆ ವ್ಯಾಪಿಸಿತ್ತು. ಅಲೂಪವಂಶದ ಅರಸರು ಈ ನಾಡನ್ನು ಒಂದು ಸಾವಿರ ವರ್ಷಕ್ಕಿಂತಲೂ ಹೆಚ್ಚುಕಾಲ ಆಳಿದ್ದರು. ಮುಂದೆ ಕನ್ನಡದ ಬೇರೆ ಬೇರೆ ವಂಶಗಳ ಅರಸರುಗಳ ಆಳ್ವಿಕೆಗೆ ಒಳಪಟ್ಟದ್ದರಿಂದ ತುಳುನಾಡು ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಿತು. ಕನ್ನಡವು ಮೇಲುಗೈ ಸಾಧಿಸಿತು.
 
ತುಳು ಭಾಷೆ ಕೆಳಸ್ತರಕ್ಕೆ ತಳ್ಳಲ್ಪಟ್ಟಿತು. ಈಗ ಅವಿಭಜಿತ ದಕ್ಷಿಣಕನ್ನಡ ಹಾಗೂ ಕಾಸರಗೋಡನ್ನು ಸೇರಿಸಿಕೊಂಡು ಭಾವನಾತ್ಮಕವಾಗಿ ಅಥವಾ ಸಾಂಸ್ಕೃತಿಕವಾಗಿ ತುಳುನಾಡು ಎನ್ನಲಾಗುತ್ತಿದೆ. ತುಳುವರೆಲ್ಲ ಭಾರತದಾದ್ಯಂತ ಚದುರಿ ಹೋಗಿದ್ದಾರೆ. ಈಗ ಭಾರತದಲ್ಲಿ ಒಟ್ಟು 70 ಲಕ್ಷ ಜನ ತುಳುವರು ಇರಬಹುದೆಂಬ ಅಂದಾಜಿದೆ.

ತುಳುವಿನಲ್ಲಿ ಜಾನಪದ ಸಾಹಿತ್ಯ ವಿಪುಲವಾಗಿದೆ. 15-16ನೇ ಶತಮಾನದ ಕಾಲದಲ್ಲಿ ತುಳು ಲಿಪಿಯನ್ನು ಬಳಸಿ ಓಲೆಗರಿಯಲ್ಲಿ ಬರೆಯಲಾದ ಹಲವಾರು ಗ್ರಂಥಗಳು ಈಗಾಗಲೇ ಸಂಶೋಧಿಸಲ್ಪಟ್ಟು ಕನ್ನಡಕ್ಕೆ ಲಿಪ್ಯಂತರಗೊಂಡಿವೆ. ಕ್ರಿ.ಶ. 1834 ರಲ್ಲಿ ಬಾಸೆಲ್‌ನಿಂದ ತುಳುನಾಡಿಗೆ ಬಂದ ಮಿಷನರಿ ವಿದ್ವಾಂಸರು ತುಳುವನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸಿ ಬಳಕೆಗೆ ತಂದರು.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಎ.ಯು. ಪಣಿಯಾಡಿಯವರ ನೇತೃತ್ವದಲ್ಲಿ ತುಳುವ ಸಾಹಿತ್ಯಮಾಲೆ ಎಂಬ ಪ್ರಕಾಶನದ ಮೂಲಕ ಹಲವಾರು ತುಳು ಗ್ರಂಥಗಳು ಪ್ರಕಟಗೊಂಡವು. ಕ್ರಿ.ಶ. 1994ರಲ್ಲಿ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದರು.

ಅಕಾಡೆಮಿ ಈವರೆಗೆ ನೂರಾರು ತುಳು ಪುಸ್ತಕಗಳನ್ನು ಪ್ರಕಟಿಸಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡಿದೆ. ತುಳು ಸಾಹಿತಿಗಳಲ್ಲಿ ಹಿರಿಯರಾದ ಮಂದಾರ ಕೇಶವಭಟ್ಟ ಮತ್ತು ಕೆದಂಬಾಡಿ ಜತ್ತಪ್ಪರೈಯವರು ತುಳು ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸನ್ಮಾನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
 
2010ರಲ್ಲಿ ರಾಜ್ಯ ಸರ್ಕಾರ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಕಲಿಕೆಗೆ ಅನುಮತಿ ನೀಡಿದೆ. ದ್ರಾವಿಡ ವಿಶ್ವವಿದ್ಯಾಲಯ ತುಳು ವಿಭಾಗ ತೆರೆದಿದೆ. ಅಮೆರಿಕ ಮತ್ತು ಯುರೋಪಿನ ಹಲವು ದೇಶಗಳು ತುಳುವಿಗೆ ಮಾನ್ಯತೆ ನೀಡಿವೆ.

ಅಮೆರಿಕ ಜಗತ್ತಿನ 133 ಭಾಷೆಗಳಿಗೆ ಮಾನ್ಯತೆ ನೀಡಿದ್ದು ತುಳುವನ್ನೊಳಗೊಂಡಂತೆ ಭಾರತದ 17 ಭಾಷೆಗಳು ಅದರಲ್ಲಿ ಸೇರಿವೆ. ತುಳುವನ್ನು ಸಂವಿಧಾನದ 8ನೆಯ ಪರಿಚ್ಛೇದದಲ್ಲಿ ಸೇರಿಸಲು ಕಳೆದೆರಡು ದಶಕಗಳಿಂದ ಹೋರಾಟ ನಡೆಯುತ್ತಿದೆ.ಆದರೆ ಕೇಂದ್ರ ಸರ್ಕಾ ಈ ವಿಷಯದಲ್ಲಿ ಮೌನವಾಗಿದೆ.

ಸಂವಿಧಾನ ರಚನಾ ಸಂದರ್ಭದಲ್ಲಿ ದೇಶದ 14 ಭಾಷೆಗಳಿಗೆ ಮಾನ್ಯತೆ ನೀಡಲಾಗಿತ್ತು. 1967ರಲ್ಲಿ ಸಿಂಧಿಯನ್ನೂ 1992ರಲ್ಲಿ ನೇಪಾಳಿ, ಕೊಂಕಣಿ, ಮಣಿಪುರಿಯನ್ನೂ 2003 ರಲ್ಲಿ ಡೋಗ್ರಿ, ಬೋಡೋ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಸೇರಿಸಲಾಯಿತು. ಈಗ ಒಟ್ಟು 22 ಭಾಷೆಗಳು ಸಂವಿಧಾನದ ಮಾನ್ಯತೆ ಪಡೆದಿವೆ.

ಸುಮಾರು 35 ಭಾಷೆಗಳನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಪರಿಶೀಲನೆಗೆ  ಸಮಿತಿಯೊಂದನ್ನು ರಚಿಸಲಾಗುವುದೆಂದು ಎನ್‌ಡಿಎ ಸರ್ಕಾರದ  ಗೃಹ ಸಚಿವರಾದ ಎಲ್.ಕೆ. ಅಡ್ವಾಣಿಯ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಗೃಹ ಇಲಾಖೆ ಸೀತಾಕಾಂತ ಮಹಾಪಾತ್ರರವರ ನೇತೃತ್ವದಲ್ಲಿ ಪರಿಶೀಲನೆ ಹಾಗೂ ನಿಯಮಾವಳಿ ರಚನೆಗಾಗಿ ಒಂದು ಸಮಿತಿಯನ್ನು ಸರ್ಕಾರ ರಚಿಸಿತ್ತು.

ಸೀತಾಕಾಂತ ಮಹಾಪಾತ್ರರ ವರದಿ ಬರುವಷ್ಟರಲ್ಲಿ ತುಳುವನ್ನುಳಿದು ನಾಲ್ಕು ಭಾಷೆಗಳು ಸಂವಿಧಾನದ ಮಾನ್ಯತೆ ಪಡೆದವು. ಡೋಗ್ರಿ, ಸಂತಾಲಿ, ಬೋಡೋ, ಮೈಥಿಲಿ ಭಾಷೆಗಳಿಗೆ ಸಂವಿಧಾನದ ಮಾನ್ಯತೆ ಸಿಕ್ಕಿತು. ಆ ಭಾಷೆಗಳ ಪರವಾಗಿ   ಡಾ. ಕರಣ್ ಸಿಂಗ್, ಸಿಪಿಎಂನ ಬಸುದೇವಾಚಾರ್ಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರಂತಹ ನಾಯಕರ ಒತ್ತಾಯ ಇತ್ತು.

ತುಳು ಪರವಾಗಿ ಸರ್ಕಾರದ ಮೇಲೆ ಒತ್ತಾಯ ತರುವವರು ಇರಲಿಲ್ಲವಾದ್ದರಿಂದ ಅದಕ್ಕೆ ಮಾನ್ಯತೆ ಸಿಕ್ಕಲಿಲ್ಲ.ಸೀತಾಕಾಂತ ಮಹಾಪಾತ್ರರ ವರದಿಯಲ್ಲಿ ಸೂಚಿಸಲಾದ ನಿಯಮಾವಳಿ ಪ್ರಕಾರ ತುಳುವಿಗೆ ಎಂಟನೆಯ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ರಾಜ್ಯದ ಆಡಳಿತ ಭಾಷೆಯಾಗದ ಒಂದು ಕೊರತೆ ಬಿಟ್ಟರೆ ಇನ್ನೆಲ್ಲ ಅರ್ಹತೆಗಳಿವೆ.

ತುಳು ಕನ್ನಡನಾಡಿನ ಒಂದು ಪ್ರಧಾನ ಭಾಷೆ. ತುಳುವರಿಗೆ ತುಳು ಕನ್ನಡವೆರಡೂ ಎರಡು ಕಣ್ಣುಗಳಿದ್ದಂತೆ. ಕನ್ನಡದ ನೆರಳಿನಲ್ಲಿ ಬೆಳೆಯುತ್ತಿರುವ ತುಳುವಿನ ಅಭಿವೃದ್ಧಿಯ ಬಗೆಗೆ ಕನ್ನಡಿಗರು ಆಸಕ್ತಿ ತೋರಬೇಕಾದುದು ಧರ್ಮ.

ಒಂದು ಭಾಷೆಯ ಅಸ್ತಿತ್ವವನ್ನುಳಿಸುವ ಪ್ರಶ್ನೆ ಬಂದಾಗ ಪಕ್ಷಭೇದ ಬಿಟ್ಟು ಹೋರಾಟ ನಡೆಸಬೇಕಾದುದು ಸಂಬಂಧಪಟ್ಟ ರಾಜ್ಯದ ಸಂಸದರ ಹಾಗೂ ಕೇಂದ್ರದ ಸಚಿವರ ಕರ್ತವ್ಯ. ತುಳುವು ಯಾವುದೇ ರಾಜ್ಯದ ಆಡಳಿತ ಭಾಷೆಯಾಗಿಲ್ಲವೆಂಬ ಕಾರಣವೇ ಸಂವಿಧಾನದ ಮಾನ್ಯತೆ ಪಡೆಯಲು ಅಡ್ಡಿಯಾದರೆ ಆ ತೊಡಕನ್ನು ನಿವಾರಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಆದಷ್ಟು ಬೇಗನೆ ಮಾಡಿಕೊಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT