ಬುಧವಾರ, ಏಪ್ರಿಲ್ 14, 2021
25 °C

ಸಂಶೋಧನೆಯಲ್ಲಿ ಬೇಕಿದೆ ಸುಸ್ಥಿರತೆ, ಪರಿಸರ ದೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಭಾಗದ ಹಳ್ಳಿಯಾದ ಪಸ್ತಾಪುರದ ದಲಿತ ಮಹಿಳೆ ಚಂದ್ರಮ್ಮ ತನ್ನ ಹೊಲಕ್ಕೆ ಕರೆದೊಯ್ದಾಗ ಇಳಿಸಂಜೆ ಹೊತ್ತು. ಸಾಸಿವೆ, ಜೋಳ, ಕಡಲೆ ಸೇರಿದಂತೆ ಹತ್ತಾರು ಬಗೆಯ ಬೆಳೆ ಬೆಳೆದಿದ್ದವು. ಆದರೆ ಹೊಲದ ಒಳಗೆ ಹೋಗಬೇಕೆಂದರೆ ಸುತ್ತ ಮುಳ್ಳು ತುಂಬಿದ ಕುಸುಬೆ ಬೆಳೆಯ ಭದ್ರಕೋಟೆ.  ‘ಇಲಿ, ಮೊಲ, ನರಿ ಯಾವುದೂ ಒಳಗೆ ಬರುವ ಹಾಗಿಲ್ಲ...’ ಎಂದು ಚಂದ್ರಮ್ಮ ಹೇಳಿದಳು.ಪ್ರಾಣಿಗಳಿಂದ ಬೆಳೆ ರಕ್ಷಿಸಲು ರೈತ ಮಹಿಳೆ ಚಂದ್ರಮ್ಮ ಕಂಡುಕೊಂಡಿದ್ದು ಈ ಉಪಾಯದಿಂದ ಒಂದೆಡೆ ಬೆಳೆ ರಕ್ಷಣೆ. ಇನ್ನೊಂದೆಡೆ ಅಗತ್ಯದಷ್ಟು ಖಾದ್ಯತೈಲ ಸಿಗುತ್ತದೆ.ಈ ವಿಧಾನ ನೆನಪಾಗಿದ್ದು, ಕೃಷಿ ವಿ.ವಿ.ಯೊಂದರ ವಿಜ್ಞಾನಿಗಳು ಇಲಿ ನಿಯಂತ್ರಣಕ್ಕೆ ಅನುಸರಿಸಿದ್ದ ವಿಧಾನ ಗಮನಿಸಿದಾಗ. ಇಲಿಗಳ ಹಾವಳಿ ನಿಯಂತ್ರಿಸಲು ವಿವಿಯ ‘ಇಲಿನಿಯಂತ್ರಣಾ ವಿಭಾಗ’ದ ವಿಜ್ಞಾನಿಗಳ ತಂಡವು ಭೇಟಿ ನೀಡಿ, ನಾಲ್ಕು ದಿನ ವಿಷರಹಿತ ಆಹಾರ ಹಾಗೂ ಐದನೇ ದಿನ ವಿಷಮಿಶ್ರಿತ ಆಹಾರ ಇಡಬೇಕೆಂದು ಸಲಹೆ ಮಾಡಿತು. ಹತ್ತು ದಿನದವರೆಗೆ ಒಟ್ಟು 45 ಇಲಿಗಳು ಸತ್ತವು (ಅಂದರೆ ದಿನಕ್ಕೆ ಸರಾಸರಿ ನಾಲ್ಕೂವರೆ ಇಲಿ). ‘ಇದ್ರಾಗ ಹೊಸಾದೇನದ? ನಾವು ಯಾವಾಗ್ಲೂ ಮಾಡ್ತಿರ್ತೀವಲ್ಲ?’ ಎಂದು ಸಾಮಾನ್ಯ ರೈತ ಬಸಣ್ಣ ಕೇಳುವ ಪ್ರಶ್ನೆಗೆ ಉತ್ತರವಿದೆಯೇ?ಗುಲ್ಬರ್ಗ ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ಬೆಳೆ ಹೂವು ಬಿಡುವ ಮುನ್ನ ಮೊಗ್ಗು ಚಿವುಟಿದರೆ (ಕತ್ತರಿಸಿದರೆ) ಸಸ್ಯದ ಕವಲುಗಳು ಹೆಚ್ಚಾಗಿ, ಅಧಿಕ ಇಳುವರಿ ಸಿಗುತ್ತದೆ. ಆದರೆ ಇದಕ್ಕೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಚಂದ್ರಶೇಖರ ಎಂಬ ರೈತರು ಕೀಟನಾಶಕ ಸಿಂಪಡಣಾ ಯಂತ್ರವನ್ನೇ ನೂರೈವತ್ತು ರೂಪಾಯಿ ವೆಚ್ಚದಲ್ಲಿ ಈ ಕೆಲಸಕ್ಕೆ ಬರುವಂತೆ ಮಾರ್ಪಡಿಸಿದರು. ಅದರ ನಿರ್ವಹಣಾ ವೆಚ್ಚ ಎಕರೆಗೆ ಕೇವಲ ನೂರು ರೂಪಾಯಿಗೆ ಇಳಿಯಿತು.ಆದರೆ ಕೃಷಿ ವಿಜ್ಞಾನಿಯೊಬ್ಬರು ‘ಇದು ಅನಗತ್ಯ’ ಎಂದು ಪ್ರತಿಕ್ರಿಯಿಸಬೇಕೇ!? ಕಳೆ ತೆಗೆಯಲು ಪ್ರತ್ಯೇಕ ಯಂತ್ರ ಇರುವಾಗ ಇದೇಕೆ ಎಂಬುದು ಅವರ ಪ್ರಶ್ನೆ. ಅಂದರೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಕೆಲಸ ಮಾಡಬಹುದಾದ ಯಂತ್ರವನ್ನು ಬಿಟ್ಟು, ರೈತರು ದೊಡ್ಡ ಯಂತ್ರ ಖರೀದಿಸಬೇಕು..!ತಾವು ಹೇಳಿದ್ದನ್ನೇ ರೈತರು ಅನುಸರಿಸಬೇಕು. ಸಂಶೋಧನೆ ಎಂಬುದು ಪ್ರಯೋಗಾಲಯದಿಂದಲೇ ಬರಬೇಕು ಎಂಬ ಕೃಷಿ ವಿಜ್ಞಾನಿಗಳ ಮನಸ್ಥಿತಿ ಇನ್ನೂ ದೂರವಾಗಿಲ್ಲ. ಹಳ್ಳಿಗರ ಜ್ಞಾನಕ್ಕೆ ಬೆಲೆಯೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿಯಾಗಿದ್ದು ಇಂಥ ಮನಸ್ಥಿತಿಯಿಂದಲೇ. ಅಷ್ಟಕ್ಕೂ ಸಂಶೋಧನೆ ಎಂಬುದು ಈಗ ಕೇವಲ ಇಳುವರಿ ಹೆಚ್ಚಳವನ್ನೇ ಪ್ರಮುಖವಾಗಿ ಪರಿಗಣನೆಗೆ ಸೀಮಿತಗೊಂಡಿದೆ. ಕೂಲಿಕಾರ್ಮಿಕರ ತೀವ್ರ ಕೊರತೆಯಿಂದಾಗಿ ಹೊಲ-ಗದ್ದೆ, ತೋಟಗಳು ಭಣಗುಟ್ಟುತ್ತಿವೆ. ಬಯಲುಸೀಮೆಯಲ್ಲಿ ಜೋಳ ಕಟಾವು ಮಾಡಲು ಕಾರ್ಮಿಕರಿಲ್ಲ; ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆ ಗೊನೆ ಇಳಿಸಲು ಜನರಿಲ್ಲ. ಇಂಥ ಗಂಭೀರ ಸಮಸ್ಯೆ ಬಗ್ಗೆ ಯೋಚಿಸದ ಕೃಷಿ ಸಂಶೋಧಕರು, ಇಳುವರಿ ಹೆಚ್ಚಿಸುವ ವಿಧಾನಗಳ ಬಗ್ಗೆ ಹತ್ತಾರು ಪುಟಗಳ ಪ್ರಬಂಧ ಮಂಡಿಸುತ್ತಿದ್ದಾರೆ!  ‘ಸ್ವಾಮಿ... ಇಳುವರಿಯೇನೋ ಸಿಕ್ಕಿದೆ. ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ನಮ್ಮ ಕೈಗೆಟುಕುವ ದರದಲ್ಲಿ ರೂಪಿಸಿ ಕೊಡಿ’ ಎಂಬ ಅಡಿಕೆ ಬೆಳಗಾರರ ಬೇಡಿಕೆ ಕೇಳುವವರು ಯಾರು?ಆದರೆ ಇಂಥ ನಿರಾಶೆಯ ಕತ್ತಲಲ್ಲೂ ಬೆಳಕಿದೆ. ರೈತರೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ತಮ್ಮಂತೆ ಇತರ ರೈತರೂ ಎದುರಿಸುತ್ತಿರುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು, ಸಂಶೋಧನಾ ರಂಗಕ್ಕೆ ಇಳಿದಿದ್ದಾರೆ. ಇವರಿಗೆ ಯಾವ ಪ್ರವಾಸ ಭತ್ಯೆ, ಬೋನಸ್ ಇರುವುದಿಲ್ಲ. ಸರ್ಕಾರದ ಪ್ರೋತ್ಸಾಹವೂ ಇಲ್ಲ. ಹಾಲು ಕರೆಯುವ ಸುಲಭ ಯಂತ್ರ ‘ಮಿಲ್ಕ್ ಮಾಸ್ಟರ್’ ಸಂಶೋಧಿಸಿದ ಸುಳ್ಯದ ಪಿ.ರಾಘವಗೌಡ, ಈವರೆಗೆ ನೂರಾರು ಯಂತ್ರ ಮಾರಾಟ ಮಾಡಿದ್ದಾರೆ.ಕೇರಳದ ಕಣ್ಣೂರು ಜಿಲ್ಲೆಯ ಚೆಂಬೇರಿ ಹಳ್ಳಿಯ ರೈತ ಮುತ್ತುಕೊಳತ್ತಿಲ್ ಜೋಸೆಫ್ ತೆಂಗಿನ ಮರ ಏರುವ ಅಲ್ಪವೆಚ್ಚದ, ಸರಳ ಉಪಕರಣ ರೂಪಿಸಿದ್ದು, ಈವರೆಗೆ ಮಾರಾಟವಾಗಿರುವ ಸಂಖ್ಯೆ 15 ಸಾವಿರಕ್ಕೂ ಹೆಚ್ಚು!ಕೋಲಾರ ಜಿಲ್ಲೆ ಹಳ್ಳಿಯೊಂದರಲ್ಲಿ ಮನೆಯ ಆವರಣದಲ್ಲಿ ಬೆಳೆದಿದ್ದ ತೆಂಗಿನ ಮರದಲ್ಲಿ ಕಾಯಿಗಳ ಮೇಲೆ ಸಿಮೆಂಟ್‌ನ ಚೀಲವನ್ನು ಹೊದಿಸಲಾಗಿತ್ತು. ಜೋಯಿಡಾ ತಾಲ್ಲೂಕಿನ ಶಿವಪುರ ಎಂಬ ಹಳ್ಳಿಯಲ್ಲಿ ಬಾಳೆಗೊನೆಯ ಮೇಲೆ ಸೀರೆ ಅಥವಾ ಇತರ ಬಟ್ಟೆ ಸುತ್ತಲಾಗಿತ್ತು. ಇವೆಲ್ಲ ಕೃಷಿ ಉತ್ಪನ್ನ ಉಳಿಸಿಕೊಳ್ಳುವ ತಂತ್ರಗಳು.  ‘ಕೋತೀನ ಮಂಗ್ಯಾ ಮಾಡ್ಲಿಕ್ಕ ಹೀಂಗ್ ಮಾಡ್ಲಿಲ್ಲಾಂದ್ರ ನಮ್ಮ ಕೈಗೆ ಏನೂ ಸಿಗಂಗಿಲ್ಲ’ ಎಂಬ ರೈತರ ಮಾತು ಅವರ ಅಗತ್ಯವನ್ನು ಒತ್ತಿ ಹೇಳುತ್ತದೆ.ಕುಮಟಾ ಸಮೀಪದ ಒಂದು ಹಳ್ಳಿಯಲ್ಲಿ ರೈತರು ತಮ್ಮ ಮನೆಯ ಬಳಕೆಗಾಗಿ ಕಬ್ಬು ಬೆಳೆಸಿದ್ದರು. ಆದರೆ ನರಿಗಳಿಂದ ಕಬ್ಬು ಹಾಳಾಗುತ್ತಿತ್ತು. ಇದನ್ನು ತಡೆಯಲು ಅವರು ಕಬ್ಬಿಗೆ ಮಣ್ಣಿನ ಕೆಸರು ಹಚ್ಚಿದರು. ಕಳ್ಳತನದಿಂದ ಬರುವ ನರಿಗಳು, ಕಬ್ಬಿನ ಜಲ್ಲೆಗೆ ಬಾಯಿಯಿಟ್ಟ ಕೂಡಲೇ ಮಣ್ಣು ಹತ್ತಿ, ಇನ್ನೊಂದು ಸಲ ಈ ಕಡೆ ತಲೆ ಹಾಕುವುದೇ ಇಲ್ಲ. ಹೀಗೆ ಸಮಸ್ಯೆಗಳಿಗೆ ನೆಲಮೂಲ ಜ್ಞಾನದ ಮಟ್ಟದಲ್ಲಿ ಪರಿಹಾರ ಹುಡುಕುವ ಬದಲಿಗೆ, ‘ತೆಂಗಿನ ಬೇಸಾಯ ನಿರ್ವಹಣಾ ಕ್ರಮಗಳು’, ‘ಬಾಳೆಯಲ್ಲಿ ಅಧಿಕ ಉತ್ಪಾದನಾ ವಿಧಾನಗಳು’ ಅಥವಾ ‘ಕಬ್ಬು ಉತ್ಪಾದನೆ: ಉತ್ಪಾದನೆ ಹೆಚ್ಚಳಕ್ಕೆ ಸಲಹೆಗಳು’ ಎಂಬ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಎಷ್ಟರ ಮಟ್ಟಿಗೆ ಉಪಯುಕ್ತ?!

ಕೊನೆಯ ಮಾತು: ಬೆಳೆಯನ್ನು ಕಾಡುಹಂದಿಯಿಂದ ರಕ್ಷಿಸಲು ಸಾವಿರಾರು ರೂಪಾಯಿ ವೆಚ್ಚದ ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದು ಹಲವರು. ಆದರೆ ಸಾವಯವ ಕೃಷಿಕ ‘ನಾಡೋಜ’ ಎಲ್.ನಾರಾಯಣರೆಡ್ಡಿ ಅವರ ವಿಧಾನ ಬೇರೆ. ಕ್ಷೌರಿಕರ ಅಂಗಡಿಯಿಂದ ತಂದ ತಲೆಗೂದಲನ್ನು ಹೊಲದ ಅಂಚಿನಲ್ಲಿ ತೆಳುವಾಗಿ ಹರಡುತ್ತಾರೆ. ನೆಲ ಮೂಸುತ್ತ ಬರುವಾಗ ಮೂಗಿನೊಳಗೆ ಕೂದಲು ಹೋಗಿ, ಕಿರಿಕಿರಿ ಅನುಭವಿಸಿ ಪರಾರಿಯಾಗುವ ಕಾಡುಹಂದಿಗಳು ಮತ್ತೆ ಅನೇಕ ದಿನಗಳತನಕ ಅತ್ತ ಬರುವುದೇ ಇಲ್ಲವಂತೆ!ರೈತರು ಸ್ವತಃ ಸಂಶೋಧಿಸಿದ ಸಲಕರಣೆ ಬಳಸುತ್ತಿದ್ದರೆ, ಅದರಿಂದ ಅವರಿಗೆ ಸಿಕ್ಕ ಆರ್ಥಿಕ ಲಾಭ, ಆಗಿರುವ ಕೆಲಸವನ್ನು ಸಂಶೋಧಕರು ಗಮನಿಸಬೇಕು. ಇದನ್ನು ಬಿಟ್ಟು ತಮ್ಮ ಪ್ರಯೋಗಾಲಯದ ಸಂಶೋಧನೆಗೇ ರೈತರು ಜೋತು ಬೀಳಬೇಕು ಎಂಬುದು ಎಷ್ಟರ ಮಟ್ಟಿಗೆ ಸರಿ? ಸಂಶೋಧನೆಗಾಗಿಯೇ ನಡೆಸುವ ಸಂಶೋಧನೆಗೂ, ರೈತರ ಅನುಭವದ ಮೂಸೆಯಿಂದ ಹೊರಬರುವ ಸಂಶೋಧನೆಗೂ ಅಜಗಜಾಂತರ. ಇದು ಬರೀ ವೆಚ್ಚದ ವಿಷಯದಲ್ಲಿ ಮಾತ್ರವಲ್ಲ; ಪರಿಸರದ ಸುಸ್ಥಿರತೆಗೆ ಸಂಬಂಧಿಸಿದಂತೆಯೂ...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.