ಗುರುವಾರ , ಜನವರಿ 30, 2020
23 °C

ಸಂಸ್ಕಾರ ಬೆಳೆಸಲು ಮಂದಿರ ಅವಶ್ಯ: ಶ್ರೀಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ‘ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ಒಂದು ಮಂದಿರ ಜನತೆಯನ್ನು ಧಾರ್ಮಿಕವಾಗಿ, ಸಂಸ್ಕಾರಿಗಳನ್ನಾಗಿ ಪರಿವರ್ತಿಸುತ್ತದೆ’ ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಈಶ್ವರ ಸ್ವಾಮೀಜಿ ಹೇಳಿದರು.ಇಲ್ಲಿನ ಅಕ್ಕೋಳ ರಸ್ತೆಯ ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಜರುಗಿದ ಸಾಮೂಹಿಕ ಗುಗ್ಗಳೋತ್ಸವ ಮತ್ತು ಪುರವಂತರ ಸಮಾವೇಶದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.‘ದೇವರು ಎಲ್ಲೆಡೆ ಇರುವನು. ಆದರೆ ಮಂದಿರವಿದ್ದಲ್ಲಿ ಆ ಒಂದು ಜಾಗದಲ್ಲಿಯ ದೇವರ ದರ್ಶನದಿಂದ ಭಕ್ತಿ ಮತ್ತಷ್ಟು ಹೊರಹೊಮ್ಮುತ್ತದೆ. ಮಂದಿರಗಳು ಹಿಂದುತ್ವ, ಹಿಂದೂ ಧರ್ಮವನ್ನು ಉಳಿಸಿವೆ’ ಎಂದರು.‘ಯಾವುದೇ ಕಾರ್ಯಕ್ರಮಗಳು ಇದ್ದಲ್ಲಿ ಹೊಟೇಲ್‌ನಲ್ಲಿ ಕಾರ್ಯಕ್ರಮವಿಟ್ಟು ಆರೋಗ್ಯಕ್ಕೆ ಹಾನಿಕರ ಊಟ ಹೇಳಿ ಹಣದ ಪ್ರದರ್ಶನ ತೋರುವ ಈ ಜಗತ್ತಿನಲ್ಲಿ ಹಸಿದವರಿಗೆ ಅವರ ಮನೆಯ ಗೇಟು ಮುಚ್ಚಿರುತ್ತದೆ. ಈ ಕೆಡುತ್ತಿರುವ ಹೊಸ ಸಂಪ್ರದಾಯವನ್ನು ಬಿಟ್ಟು ಎಲ್ಲರೂ ಒಬ್ಬರನ್ನೊಬ್ಬರ ಸುಖ–ದುಃಖದಲ್ಲಿ  ಭಾಗಿಯಾದಲ್ಲಿ ಏಕಾತ್ಮತೆ ಬೆಳೆಯುತ್ತದೆ’ ಎಂದರು.‘ಹಿಂದೂ ಧರ್ಮದ ಸಂಪ್ರದಾಯ ಮರೆಯುತ್ತಿ­ರುವ ಇಂದಿನ ಜನಾಂಗಕ್ಕೆ ವೀರಭದ್ರ ದೇವರ ಜಾತ್ರೆ ನಿಮಿತ್ತ ಎಲ್ಲ ಜಾತಿ–ಧರ್ಮದವರನ್ನು ಒಟ್ಟುಗೂಡಿಸಿ ಸಾಮೂಹಿಕ ಕಾರ್ಯಕ್ರಮ ಮಾಡಿರುವುದು ದೇವಸ್ಥಾನದ ಸಮಿತಿಯ ಯುವ ಪ್ರತಿಭೆ ಸುನೀಲ ನೇಜೆ ಮತ್ತು ಸದಸ್ಯರ ಕಾರ್ಯ ಹೆಮ್ಮೆ ಪಡೆಯುವಂತಹದ್ದು. ಎಲ್ಲ ವರ್ಗಕ್ಕೆ ಈ ಸಮಿತಿ ಒಂದು ಮಾದರಿಯಾಗಿದೆ’ ಎಂದರು.ಚಿಂಚಣಿಯ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನದಲ್ಲಿ ‘ಎಲ್ಲ ಕ್ಷೇತ್ರದಲ್ಲಿಯೂ ಗುರು ಇರಬೇಕು. ಇದು ಸಾಧ್ಯವಾಗುತ್ತಿಲ್ಲವಾದ್ದರಿಂದ ದೇಶದಲ್ಲಿ ಅಧರ್ಮ, ದುರಾಚಾರ, ಅಹಿತಕರ ಘಟನೆಗಳು ನಡೆಯುತ್ತಿವೆ’ ಎಂದದು ವಿಷಾದಿಸಿದರು.

ಸಾನಿಧ್ಯ ವಹಿಸಿದ್ದ ನಿಡಸೋಸಿಯ  ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ‘ಧಾರ್ಮಿಕತೆ ಎಂದರೆ ಪೂಜೆ ಪುನಸ್ಕಾರ ಮಾಡುವುದು. ಆದರೆ ಧರ್ಮ ಕಲಿಸುವುದು ಸಾಮೂಹಿಕ ಕಾರ್ಯಕ್ರಮಗಳಿಂದ ಮಾತ್ರ’ ಎಂದರು. ‘ಕೇವಲ ಮನೆಯಲ್ಲಿಯೇ ಉಳಿದು­ಕೊಂಡು ಮಕ್ಕಳು ಸಂಸ್ಕೃತಿ ಮರೆಯುತ್ತಿದ್ದಾರೆ. ಸಾಮೂಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದ­ರಿಂದ ಮಕ್ಕಳ ಜತೆಗೆ ಎಲ್ಲರೂ ಧರ್ಮ ಕಲಿಯುತ್ತಾರೆ’ ಎಂದು ಹಿತೋಪದೇಶ ನೀಡಿದರು.ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮತ್ತು ಮುರುಘೇಂದ್ರಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಿತವಚನ ನುಡಿದರು.ಇದಕ್ಕೂ ಮುನ್ನ ಬೆಳಿಗ್ಗೆ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ, ಸೋಮನಾಥ ಮಂದಿರದಲ್ಲಿ ಅಭಿಷೇಕ ಮತ್ತು ಪೂಜೆ ನಡೆಯಿತು. ಸಾಯಿಶಂಕರ ನಗರದ ಸಾಯಿ ಮಂದಿರದಿಂದ ಗುಗ್ಗಳೋತ್ಸವ ಆರಂಭವಾಗಿ ಸೋಮನಾಥ ಮಂದಿರಕ್ಕೆ ಸಂಪನ್ನಗೊಂಡಿತು.ಅಲ್ಲಿಂದ ವೀರಭದ್ರ ಮಂದಿರದವರೆಗೆ ಪೂರ್ಣಕುಂಭಗಳೊಂದಿಗೆ ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.

ಗಣ್ಯರಾದ ಬಿ.ಆರ್‌. ಪಾಟೀಲ, ಸುರೇಶ ಶೆಟ್ಟಿ, ಪ್ರಭಾಕರ ವಂಟಮುರೆ, ಮಹಾರುದ್ರ ಲುಕ್‌, ರಾವಸಾಹೇಬ ಹುನ್ನರಗಿ, ಯಾತ್ರಾ ಸಮಿತಿಯ ಸದಸ್ಯರು, ಭಕ್ತರು ಭಾಗವಹಿಸಿದ್ದರು. ಪ್ರೊ. ಎನ್‌.ಎಸ್‌. ಮಾದನ್ನವರ ಸ್ವಾಗತಿಸಿದರು. ವಿದ್ಯಾವತಿ ಜನವಾಡೆ ನಿರೂಪಿಸಿದರು. ಚಂದ್ರಕಾಂತ ತಾರಳೆ ವಂದಿಸಿದರು.ಸಾಯಂಕಾಲ ಸ್ಥಳೀಯ ಅಥರ್ವ ಎಂಟರ್‌ಟೇನ್‌ಮೆಂಟ್‌ ಗ್ರೂಪ್‌ ವತಿಯಿಂದ ಭಾವಗೀತೆ, ಭಕ್ತಿಗೀತೆ ಹಾಗೂ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮ ಜರುಗಿತು.

ಪ್ರತಿಕ್ರಿಯಿಸಿ (+)