ಶನಿವಾರ, ಮೇ 15, 2021
24 °C

ಸಂಸ್ಕೃತಿ, ಪರಿಸರ ನಾಶ ಅಭಿವೃದ್ಧಿಯಲ್ಲ: ಅನಂತಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಅಭಿವೃದ್ಧಿಯ ಓಟದ್ಲ್ಲಲಿ ಸ್ಥಳೀಯ ಸಂಸ್ಕೃತಿ, ಪರಿಸರ ಕಳೆದು ಹೋಗದಂತೆ ಎಚ್ಚರವಹಿಸಬೇಕಾಗಿದೆ. ಅಭಿವೃದ್ಧಿಯ ಉದ್ದೇಶ ಸಂಸ್ಕೃತಿ, ಪರಿಸರವನ್ನು ಕಳೆದು ಕೊಳ್ಳುವುದಲ್ಲ ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅವರು ಶುಕ್ರವಾರ ಹೇಳಿದರು.ಎರಡನೇ ವಿಶ್ವಯದ್ಧ ಕಾಲದ ನಾಜಿ ಆಡಳಿತದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ಕುರಿತ `ಪೂರ್ಣಾಹುತಿ ಸಾಹಿತ್ಯ: ನೆನಪು ಮತ್ತು ನಷ್ಟ~ ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.ಎರಡನೇ ವಿಶ್ವಯುದ್ಧದ ಅವಧಿಯ ನಂತರ ಇಸ್ರೇಲ್, ಯೂರೋಪ್‌ನಲ್ಲಿ ಆದ ಬದಲಾವಣೆಯನ್ನು  ಉಲ್ಲೇಖಿಸಿದ ಅವರು, ಇಸ್ರೇಲ್‌ನಲ್ಲಿ ಹಿಟ್ಲರ್ ಅವಧಿಯಲ್ಲಿ ದೊಡ್ಡ ರಸ್ತೆಗಳು ಸೇರಿದಂತೆ ಅಭಿವೃದ್ಧಿ ಆಯಿತು. ಆದರೆ,  ಅದಕ್ಕಾಗಿ ಸ್ಥಳೀಯ ಸಂಸ್ಕೃತಿ ಬೆಲೆ ತೆರಬೇಕಾಯಿತು ಎಂದರು.ಸಣ್ಣದೊಂದು ಗುಂಪು ಜಗತ್ತಿನ ಮೇಲೆ ದೊಡ್ಡ ಪರಿಣಾಮ ಬೀರಬಹುದು ಇದು ಉದಾಹರಣೆ. ರಾಷ್ಟ್ರಪ್ರೇಮಕ್ಕಿಂತಲೂ ರಾಷ್ಟ್ರೀಯತೆ ಮೆರೆದಾಗ ಇದು ನಿರೀಕ್ಷಬಹುದು. ಭಾರತದ ಮಟ್ಟಿಗೆ ಮಹಾತ್ಮಾಗಾಂಧಿ ಮತ್ತು ರಬೀಂದ್ರನಾಥ ಠ್ಯಾಗೋರ್ ಮಾತ್ರವೇ ರಾಷ್ಟ್ರಪ್ರೇಮವನ್ನು ಮೆರೆದವರು ಎಂದರು.ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಅಭಿವೃದ್ಧಿ ಮಾತು ಬರುತ್ತದೆ. ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಗಳು ಅಭಿವೃದ್ಧಿಯ ಬಗೆಗೆ ಮಾತನಾಡುತ್ತಾರೆ. ಅಭಿವೃದ್ದಿ ಎಂದರೆ ಏನು. ಅದು,   ಇನ್ನೊಂದರ ಪತನ ಎಂದು ವ್ಯಾಖ್ಯಾನಿಸಿದರು.ಅಭಿವೃದ್ಧಿ ಆಗಬೇಕಾದರೆ ಕಾಡು, ಬೆಟ್ಟಗಳಲ್ಲಿರುವ ಸಂಪತ್ತು ಪಡೆಯಬೇಕು. ಕಾಡು, ಬೆಟ್ಟ ಎಂದರೆ ಅದು ಅಲ್ಲಿರುವ ಬುಡಗಟ್ಟು ಜನರ ಪಾಲಿಗೆ ದೇಗುಲ. ಅಭಿವೃದ್ಧಿ  ಎಂದರೆ ಆ ದೇಗುಲವನ್ನು ನಾಶಪಡಿಸುವುದೇ ಆಗಿದೆ ಎಂದರು.ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಇಸ್ರೇಲ್‌ನ ಕಾನ್ಸುಲೇಟ್ ಜನರಲ್ ಒರ‌್ನಾ ಸಾಗಿವ್ ಅವರು, ನಾಜಿ ಅವಧಿಯ ಪೂರ್ಣಾಹುತಿ ಸಾಹಿತ್ಯವನ್ನು ಪಠ್ಯಗಳಲ್ಲಿ ಸೇರಿಸಲು ಮೈಸೂರು ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.ಪೂರ್ಣಾಹುತಿ ಸಾಹಿತ್ಯದ ಪ್ರಸ್ತುತತೆ, ಅದು ಸೃಷ್ಟಿಯಾದ ಹಿನ್ನೆಲೆಯನ್ನು ವಿವರಿಸಿದ ಅವರು, ಭಾರತದಲ್ಲಿ ಇಂದಿಗೂ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಪೂರ್ಣಾಹುತಿ ಸಾಹಿತ್ಯ ಕುರಿತ ಪುಸ್ತಕಗಳು ಲಭ್ಯವಿದೆ. ಆದರೆ, ಅದರ ಬಗೆಗೆ ಜಾಗೃತಿಯ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅದನ್ನು ಪಠ್ಯಗಳಲ್ಲಿ ಸೇರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಮತ್ತು ಮಂಡ್ಯದ ಪಿಇಟಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜು ಜಂಟಿಯಾಗಿ ಈ ಎರಡು ದಿನಗಳ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು.ಪಿಇಎಸ್ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಟಿ.ವೀರಪ್ಪ, ಪಿಇಟಿ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಮೈಸೂರು ವಿ.ವಿ. ಕುಲಪತಿ ಪ್ರೊ. ತಳವಾರ್, ಪ್ರೊ. ಕೆ.ಟಿ.ಸುನೀತಾ, ಪಿಇಟಿ ಸಂಸ್ಥೆಯ ಟ್ರಸ್ಟಿ ಪಂಚಲಿಂಗು ಮತ್ತು ಮೈಸೂರು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ. ಚಂದರ್ ಅವರು ಉದ್ಘಾಟನಾ ಸಮಾರಂಭದಲ್ಲಿ  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.