ಮಂಗಳವಾರ, ಮೇ 18, 2021
22 °C

ಸಂಸ್ಕೃತ ಯಾವುದೇ ಮತಕ್ಕೆ ಸೇರಿದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಂಸ್ಕೃತ ಕೇವಲ ವೈದಿಕ ಪರಂಪರೆಗೆ ಸೀಮಿತವಾದದ್ದೆಂಬುದು ತಿಳಿವಳಿಕೆಯಿಲ್ಲದ ವಾದ. ಈ ಭಾಷೆ~ ಯಾವುದೇ ಒಂದು ಮತ ಅಥವಾ ಪಂಥಕ್ಕೆ ಸೀಮಿತವಾದುದಲ್ಲ~ ಎಂದು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿಶ್ರಾಂತ ಕುಲಪತಿ ಪ್ರೊ.ಡಿ.ಪ್ರಹ್ಲಾದಾಚಾರ್ ಅಭಿಪ್ರಾಯಪಟ್ಟರು.



ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕ ಪೂರ್ವ ದೀಕ್ಷಾಂತ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡಿದರು.



`ಬುದ್ಧ ಪಾಲಿ ಭಾಷೆಯಲ್ಲಿ ತನ್ನ ತತ್ವಗಳನ್ನು ಬೋಧಿಸುವಂತೆ ಶಿಷ್ಯರಿಗೆ ಹೇಳಿದಾಗಲೇ ಸಂಸ್ಕೃತ ಮೃತ ಭಾಷೆಯಾಯಿತು ಎಂದು ಕೆಲವರು ಹೇಳುತ್ತಾರೆ. ಆದರೆ ಕ್ರಿ.ಪೂ.1ರವರೆಗೆ ಬುದ್ಧನ ತತ್ವಗಳು ಆಡುಮಾತಿನಲ್ಲೇ ಉಳಿದಿದ್ದವು ಎಂಬುದನ್ನು ಶ್ರೀಲಂಕಾದ ಬೌದ್ಧಗ್ರಂಥದಲ್ಲಿ ಕಾಣಬಹುದು. ಬೌದ್ಧಮತದ ಥೇರಾವಾದ ಮಾತ್ರ ಪಾಲಿ ಭಾಷೆಯನ್ನು ಉಪಯೋಗಿಸಿತು. ಚಾರ್ವಾಕರು, ಬೌದ್ಧರು, ಜೈನರು ಕೂಡ ಸಂಸ್ಕೃತವನ್ನು ಬಳಸಿದ್ದಾರೆ~ ಎಂದರು.



  `ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ಭಾಷೆಯಾಗಿಲ್ಲ. ಇಂಡೊನೇಷ್ಯಾ, ಕಾಂಬೋಡಿಯಾದಲ್ಲಿ ಅಪಭ್ರಂಶ ರೂಪದಲ್ಲಿ ಸಂಸ್ಕೃತವನ್ನು ಬಳಸುತ್ತಾರೆ. ಬಂಗಾಳದಿಂದ ಗುಜಾರಾತ್‌ವರೆಗೆ ಕೇರಳದಿಂದ ಕಾಶ್ಮೀರದವರೆಗೆ ಸಂಸ್ಕೃತ ಹರಡಿದೆ. ಕಾಶ್ಮೀರಿ ಭಾಷೆಯ ಅನೇಕ ಪದಗಳು ಸಂಸ್ಕೃತದಲ್ಲಿವೆ~ಎಂದು ಉದಾಹರಣೆಗಳ ಸಹಿತ ವಿವರಿಸಿದರು.



`ಪ್ರತಿ ಭಾಷೆಯೂ ಆಯಾ ಪ್ರಾಂತ್ಯದ ಜತೆಗೆ ಗುರುತಿಸಿಕೊಳ್ಳುತ್ತದೆ. ಆದರೆ ಸಂಸ್ಕೃತವನ್ನು ಎಲ್ಲಾ ಭಾಷೆಗಳಲ್ಲಿ ಗುರುತಿಸಬಹುದು. ಎಷ್ಟೋ ಸಹಸ್ರ ವರ್ಷಗಳಿಂದ ಈ ಭಾಷೆ ಮೂಲ ಸ್ವರೂಪದಲ್ಲಿರುವಂತೆಯೇ ಬಳಕೆಯಲ್ಲಿದೆ. ಬೇರೆ ಭಾಷೆಗಳ ಸೌಂದರ್ಯ ಕಡಿಮೆಯಾಗುತ್ತಿದ್ದರೂ ಸಂಸ್ಕೃತದ ವರ್ಚಸ್ಸು ಕುಂದಿಲ್ಲ. ಆದರೆ ದುರದೃಷ್ಟವಶಾತ್ ಈಗ ಇದರ ವ್ಯಾಪ್ತಿ ಕಡಿಮೆಯಾಗಿದೆ~ ಎಂದು ಹೇಳಿದರು.



`ದೇಶದ ಮೂಲ ಅನನ್ಯತೆ ಸಂಸ್ಕೃತದಲ್ಲಿದೆ. ಇದು ದೇಶದ ಜೀವನಾಡಿ. ಇದು ಕಷ್ಟದ ಭಾಷೆಯಲ್ಲ. ಸಂಸ್ಕೃತವನ್ನು ಉಳಿಸುವ ಹೊಣೆ ಹೊತ್ತಿದ್ದೇವೆ ಎಂಬ ಅರಿವು ಶಿಕ್ಷಕರಲ್ಲಿ ಇರಬೇಕು~ ಎಂದು ಅವರು ತಿಳಿಸಿದರು.



ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, `ಲೌಕಿಕ ಹಾಗೂ ಅಧ್ಯಾತ್ಮದ ನಡುವೆ ಸಂಪರ್ಕ ಕಲ್ಪಿಸುವ ಭಾಷೆ ಸಂಸ್ಕೃತ. ಅದಕ್ಕೆ ಸಾಂಸ್ಕೃತಿಕವಾದ ಶಕ್ತಿ ಇದೆ. ವಿದ್ಯಾರ್ಥಿಗಳು ಈ ಭಾಷೆಯನ್ನು ಅಧ್ಯಯನ ಮಾಡುವ ಮೂಲಕ ಶ್ರೇಯಸ್ಸನ್ನು ಪಡೆಯಬೇಕು~ ಎಂದು ಸಲಹೆ ನೀಡಿದರು.



ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಲತಾ ಕೃಷ್ಣರಾವ್, ಕುಲ ಸಚಿವ ಡಾ.ಚಂದ್ರಮೌಳಿ ಎಸ್. ನಾಯ್ಕರ್, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಶ್ರೀನಿವಾಸ ವರಖೇಡೀ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.