ಭಾನುವಾರ, ಜೂನ್ 13, 2021
21 °C

ಸಂಸ್ಥೆಯೊಂದನ್ನು ಕಟ್ಟುವುದೆಂದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಿಮ್ಮ ಸಂಸ್ಥೆ ಅತ್ಯಂತ ಬದ್ಧತೆ ಇರುವ ಜನರನ್ನು ಒಳಗೊಂಡ ಇಷ್ಟೊಂದು ಬೃಹತ್ ಸಂಘಟನೆಯಾಗಿ ಬೆಳೆಯಲು ಹೇಗೆ ಸಾಧ್ಯವಾಯಿತು?~- ಇದು ಸ್ವಾಮಿ ವಿವೇಕಾನಂದರ ಬೋಧನೆಯಿಂದ ಪ್ರೇರಿತನಾಗಿ, 28 ವರ್ಷಗಳಿಗೂ ಹಿಂದೆ ಸಂಸ್ಥೆಯೊಂದನ್ನು ಹುಟ್ಟುಹಾಕಿದ ನನಗೆ ಜನರಿಂದ ಆಗಾಗ್ಗೆ ಕೇಳಿಬರುವ ಪ್ರಶ್ನೆ.ಸುಮಾರು ಮೂರು ದಶಕಗಳ ಕಾಲ ಸಮಾನ ಮನಸ್ಕ ಯುವಕರು ಒಟ್ಟಾಗಿ ಸೇರಿ, ಸವಾಲುಗಳನ್ನು ಎದುರಿಸಲು ಅತ್ಯಗತ್ಯವಾಗಿ ಬೇಕಾಗುವಂತಹ ನಾಯಕತ್ವ ಕಾರ್ಯತಂತ್ರ ಅಥವಾ ನಿಶ್ಚಿತವಾದ ಆಡಳಿತ ನಿರ್ವಹಣೆ ಏನಾದರೂ ಇದೆಯೇ ಎಂದು ಸಹ ಜನ ನನ್ನನ್ನು ಕೇಳುತ್ತಲೇ ಇರುತ್ತಾರೆ.ಸ್ವಾಮಿ ವಿವೇಕಾನಂದರೇ ತಮ್ಮ ಒಂದು ಭಾಷಣದಲ್ಲಿ `ಇಬ್ಬರು ಭಾರತೀಯರು ಒಟ್ಟಾಗಿ ಸೇರಿ ಕೆಲಸ ಮಾಡುವುದು ಸವಾಲಿನ ಸಂಗತಿಯೇ ಸರಿ~ ಎಂದು ಹೇಳಿದ್ದರು.  `ಇಬ್ಬರು ಭಾರತೀಯರು ಒಂದು ಕಡೆ ಸೇರಿದರೆ ಅವರಲ್ಲಿ ಮೂರು ಬಗೆಯ ಚಿಂತನೆಗಳು ಹುಟ್ಟಿಕೊಳ್ಳುತ್ತವೆ, ಕಡೆಗೆ ಜಗಳ ಆರಂಭವಾಗಿ ನಾಲ್ಕು ನಿಮಿಷದೊಳಗೆ ಅವರು ಬೇರೆ ಬೇರೆ ಆಗುತ್ತಾರೆ~ ಎಂದಿದ್ದರು.ಇದಕ್ಕೆ ತಕ್ಕುದಾದ ಉತ್ತರ ವಿವೇಕಾನಂದರ ಮತ್ತೊಂದು ಸರಳವಾದ, ಆದರೆ ತುಂಬಾ ಗಹನವಾದ ಹೇಳಿಕೆಯೊಂದಲ್ಲಿ ಅಡಗಿದೆ. ಯಾವುದೇ ಒಂದು ಸಂಸ್ಥೆಯನ್ನು ಅಥವಾ ಒಂದು ರಾಷ್ಟ್ರವನ್ನು ಉದಾತ್ತವಾಗಿ ಬೆಳೆಸಲು ಮೂರು ಸಂಗತಿಗಳು ಅತ್ಯವಶ್ಯಕ ಎಂದು ಅವರು ಬರೆದಿದ್ದಾರೆ.ಮೊದಲನೆಯದು ಮತ್ಸರ ಮತ್ತು ಅನುಮಾನ ರಹಿತ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ಎರಡನೆಯದು ಒಳ್ಳೆಯತನದ ಶಕ್ತಿಯಲ್ಲಿ ನಂಬಿಕೆ ಇರಬೇಕು. ಮೂರನೆಯದು ಒಳ್ಳೆಯದನ್ನು ಮಾಡಬೇಕು ಮತ್ತು ಯಾರು ಒಳ್ಳೆಯದನ್ನು ಮಾಡಬೇಕು ಎಂದುಕೊಂಡಿರುತ್ತಾರೋ ಅವರಿಗೆ ಸಾಧ್ಯವಾದಷ್ಟೂ ನೆರವಾಗಬೇಕು.ತಂಡದಲ್ಲಿರುವವರ ನಡುವೆ ಪರಸ್ಪರ ಗೌರವ, ಪ್ರೀತಿ ಮಾತ್ರವಲ್ಲ, ಎರಡು ಕಡೆಯಿಂದಲೂ ಅತ್ಯುನ್ನತ ವಿಶ್ವಾಸ ಇದ್ದಾಗ ಮತ್ತು ಪರಸ್ಪರ ಅವಲಂಬಿಸಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾದಾಗ ಮಾತ್ರ ನಿಜವಾದ ಸಂಘಟಿತ ಕಾರ್ಯ ಸಾಧ್ಯವಾಗುತ್ತದೆ. ಆದರೆ ಇಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಅಲ್ಲಿ ಹೊಟ್ಟೆಕಿಚ್ಚು ಮತ್ತು ಅನುಮಾನಕ್ಕೆ ಆಸ್ಪದ ಇರಬಾರದು.ನಮ್ಮ ಸುತ್ತಲಿನ ವಾತಾವರಣ ನಮಗೆ ನಿರಾಶಾದಾಯಕವಾಗೇ ಕಾಣಿಸಬಹುದು. ಸನ್ನಿವೇಶಗಳು, ಸಂಗತಿಗಳು ಆದರ್ಶವಾದಿ ಯುವ ಮನಸ್ಸುಗಳಿಗೆ  ನಿರುತ್ಸಾಹದಾಯಕವಾಗಿ ಕಾಣುವ ಸಾಧ್ಯತೆಯೂ ಇಲ್ಲದಿಲ್ಲ. ಆತ್ಮಶಕ್ತಿಯ ಬಗೆಗಿನ ಶಂಕೆ ಹಲವಾರು ಸಲ ನಮ್ಮನ್ನು ದಿಗಿಲು ಬೀಳಿಸಬಹುದು.

 

ಇದು ಒಂದು ರೀತಿಯ ಅಸಹಾಯಕ ಪರಿಸ್ಥಿತಿಯ ನಡುವೆ ಹಲವು ಸವಾಲುಗಳನ್ನೇ ತಂದೊಡ್ಡಬಹುದು. ಇವೆಲ್ಲದರಿಂದ ಹೊರಬರಲು ಅತ್ಯಂತ ಸಕಾರಾತ್ಮಕ ಮತ್ತು ರಚನಾತ್ಮಕವಾದ ಕ್ರಿಯೆಗಳೇ ನಡೆಯಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಚೈತನ್ಯ ಕಾಪಾಡಿಕೊಳ್ಳಬೇಕಾದರೆ ತನ್ನಲ್ಲಿ ತನ್ನ ಬಗ್ಗೆ ಅಗಾಧವಾದ ಶಕ್ತಿ ಮತ್ತು ನಂಬಿಕೆ ಇರಬೇಕಾಗುತ್ತದೆ.ಯಾವಾಗಲೂ ಸದ್ಗುಣಗಳಿಗೆ ಜಯ ಸಿಗುತ್ತದೆ ಎಂಬುದು ವಾಸ್ತವ ಮಾತ್ರವಲ್ಲ, ಆ ಒಂದು ನಂಬಿಕೆ ನಮಗೆ ಸತ್ಪ್ರೇರಣೆ ನೀಡುವಂತಾದ್ದು ಮತ್ತು ಸಂಕಷ್ಟದ ಸಮಯದಲ್ಲಿಯೂ ಸ್ಫೂರ್ತಿ ಉಳಿಸಿಕೊಳ್ಳಲು ಸಹಾಯ ಮಾಡುವಂತಹದ್ದು.

ಕೆಲವು ದೊಡ್ಡ ದೊಡ್ಡ ಸಂಗತಿಗಳನ್ನು ನೋಡಿದಾಗ ನಾವು ಯಾವ ಬದಲಾವಣೆ ತರಬೇಕು ಎಂದುಕೊಂಡಿರುತ್ತೇವೆಯೋ ಅದು ಅತ್ಯಂತ ಸಣ್ಣದಾದ, ಕ್ಷುಲ್ಲಕವಾದ ಮತ್ತು ಉಪಯೋಗಕ್ಕೆ ಬಾರದಂತಹ ಸಂಗತಿ ಎನ್ನಿಸಿಬಿಡಬಹುದು.

 

ಎಲ್ಲ ಸಂದರ್ಭಗಳಲ್ಲೂ ನಿಜ ಅಲ್ಲದಿರಬಹುದಾದ ಈ ಭಾವನೆ ನಮ್ಮನ್ನು ಕುಗ್ಗಿಸಿ, ಆಲಸಿಗಳನ್ನಾಗಿ ಮಾಡುವ ಸಾಧ್ಯತೆಯೂ ಇರುತ್ತದೆ. ಇಂತಹ ಕ್ಲಿಷ್ಟಸ್ಥಿತಿಯಲ್ಲಿ, ಒಳ್ಳೆಯದನ್ನು ಮಾಡಬೇಕೆಂಬ ಹಾಗೂ ಸತ್ಕಾರ್ಯದಲ್ಲಿ ನಿರತರಾದವರಿಗೆ ನೆರವಾಗಬೇಕೆಂಬ ನಮ್ಮ ದೃಢ ಸಂಕಲ್ಪಕ್ಕೆ ತುಂಬಾ ಗಂಭೀರವಾದ ಹಾಗೂ ಕಾರ್ಯಸಾಧುವಾದ ಅರ್ಥ ಬರುತ್ತದೆ.ಯಾವಾಗಲೂ ಪ್ರಾಯೋಗಿಕ ವ್ಯಕ್ತಿಯಾಗಿದ್ದ ಸ್ವಾಮೀಜಿಗೆ ಸಾಮಾನ್ಯ ಜನರಿಗೆ ಎದುರಾಗುವ ತೊಂದರೆಗಳ ಬಗ್ಗೆ ಸ್ಪಷ್ಟವಾದ ಅರಿವಿತ್ತು. ಇಂತಹ ಸ್ವಾಮೀಜಿ ಏನು ಹೇಳಿದರು ಎನ್ನುವುದನ್ನು ಅಂತರ್ಗತ ಮಾಡಿಕೊಂಡು ಸಾಮಾನ್ಯ ಸ್ತರದಿಂದ ಮೇಲೆದ್ದು ಸ್ವತಃ ನಮ್ಮನ್ನು, ನಾವು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಹಾಗೂ ಅಂತಿಮವಾಗಿ ನಮ್ಮ ದೇಶವನ್ನು ಉನ್ನತಿಯತ್ತ ಕೊಂಡೊಯ್ಯಬೇಕಾದುದು ನಮ್ಮೆಲ್ಲರ ಜವಾಬ್ದಾರಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.