ಮಂಗಳವಾರ, ಜೂಲೈ 7, 2020
22 °C

ಸಚಿನ್, ಮುರಳಿ ಮೇಲೆ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿನ್, ಮುರಳಿ ಮೇಲೆ ಚಿತ್ತ

ಮುಂಬೈ (ಪಿಟಿಐ): ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಆಧುನಿಕ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿ ಎನಿಸಿದೆ.ಏಕದಿನ ಹಾಗೂ ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಮತ್ತು ಅತಿಹೆಚ್ಚು ವಿಕೆಟ್ ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಡುವಿನ ಹೋರಾಟವಾಗಿ ಪರಿಣಮಿಸಿದೆ. ಆದ್ದರಿಂದ ಕ್ರಿಕೆಟ್ ಪ್ರಿಯರ ಚಿತ್ತ ಇವರಿಬ್ಬರ ಮೇಲೆ ನೆಟ್ಟಿದೆ.ಆದರೆ ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಮುರಳೀಧರನ್ ಶನಿವಾರ ಆಡುವುದು ಅನುಮಾನ ಎನಿಸಿದೆ. ಮುರಳಿ ಕಣಕ್ಕಿಳಿದರೆ ಪಂದ್ಯದ ಕಾವು ಹೆಚ್ಚಲಿದೆ. ಫೈನಲ್ ಪಂದ್ಯದೊಂದಿಗೆ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಮುರಳಿ ಈಗಾಗಲೇ ಪ್ರಕಟಿಸಿದ್ದಾರೆ. ಸಚಿನ್ ಅವರು ಈ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿಲ್ಲ. ಆದರೆ ಫೈನಲ್‌ನೊಂದಿಗೆ ತಮ್ಮ ಏಕದಿನ ಕ್ರಿಕೆಟ್ ಜೀವನಕ್ಕೆ ತೆರೆ ಎಳೆಯುವ ಸಾಧ್ಯತೆಯಿದೆ.ಮುರಳೀಧರನ್ 1996 ರಲ್ಲಿ ಕಪ್ ಗೆದ್ದ ಶ್ರೀಲಂಕಾ ತಂಡದಲ್ಲಿದ್ದರು. ಇದೀಗ ಎರಡನೇ ವಿಶ್ವಕಪ್ ಟ್ರೋಫಿಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆಯುವ ಕನಸು ಅವರದ್ದು. ಮತ್ತೊಂದೆಡೆ ಸಚಿನ್ ಮೊದಲ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಈ ಇಬ್ಬರು ಮಹಾನ್ ಆಟಗಾರರಲ್ಲಿ ಅಂತಿಮ ನಗು ಬೀರುವುದು ಯಾರು ಎಂಬ ಪ್ರಶ್ನೆಗೆ ಶನಿವಾರ ರಾತ್ರಿ ಉತ್ತರ ಲಭಿಸಲಿದೆ. ಇದರ ಜೊತೆಗೆ ಸಚಿನ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕಕ್ಕೆ ಇನ್ನೊಂದು ಶತಕದ ಅವಶ್ಯಕತೆಯಿದೆ. ಹುಟ್ಟೂರ ನೆಲದಲ್ಲಿ ಸಚಿನ್ 100ನೇ ಶತಕ ಗಳಿಸುವ ಜೊತೆಗೆ ಭಾರತ ಕಪ್ ಗೆದ್ದರೆ ಕ್ರಿಕೆಟ್      ಪ್ರಿಯರಿಗೆ ಅದಕ್ಕಿಂತ ಸಂಭ್ರಮ ಬೇರೆ ಇಲ್ಲ.ಗಾಯದ ಸಮಸ್ಯೆ: ಮಹತ್ವದ ಪಂದ್ಯಕ್ಕೆ ಮುನ್ನ ಲಂಕಾ ತಂಡ ಗಾಯದ ಸಮಸ್ಯೆಗೆ ಸಿಲುಕಿದೆ. ಮುರಳೀಧರನ್ ಅಲ್ಲದೆ ಏಂಜೆಲೊ ಮ್ಯಾಥ್ಯೂಸ್ ಕೂಡಾ ಗಾಯಗಿಂದ ಬಳಲುತ್ತಿರುವುದು ಚಿಂತೆಗೆ ಕಾರಣವಾಗಿದೆ. ಇದೀಗ ಮುರಳಿ ಮತ್ತು ಮ್ಯಾಥ್ಯೂಸ್ ಅವರಿಗೆ ‘ಸ್ಟ್ಯಾಂಡ್ ಬೈ’ ಆಗಿ ಸೂರಜ್ ರಂದೀವ್ ಹಾಗೂ ಹಿರಿಯ ವೇಗಿ ಚಮಿಂದಾ ವಾಸ್ ಅವರನ್ನು ಲಂಕಾ ತಂಡ ಮುಂಬೈಗೆ ಕರೆಸಿಕೊಂಡಿದೆ.ಕಠಿಣ ಸವಾಲು: ಭಾರತದ ವಿರುದ್ಧದ ಫೈನಲ್ ಪಂದ್ಯ ಸವಾಲಿನಿಂದ ಕೂಡಿರಲಿದೆ ಎಂದು ಶ್ರೀಲಂಕಾ ತಂಡದ ಕೋಚ್ ಟ್ರೆವರ್ ಬೇಲಿಸ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.