ಮಂಗಳವಾರ, ಏಪ್ರಿಲ್ 20, 2021
32 °C
ಕ್ರಿಕೆಟ್: ಕೋಲ್ಕತ್ತ ಟೆಸ್ಟ್‌ಗೆ ಮಾತ್ರ ತಂಡ ಆಯ್ಕೆ, ಬದಲಾವಣೆಗೆ ದೋನಿ ವಿರೋಧ

ಸಚಿನ್ ಹೆಸರು ಮುಟ್ಟದ ಆಯ್ಕೆ ಸಮಿತಿ

ಕೆ.ಓಂಕಾರ ಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿನ್ ಹೆಸರು ಮುಟ್ಟದ ಆಯ್ಕೆ ಸಮಿತಿ

ಮುಂಬೈ: ಸತತ ವೈಫಲ್ಯದ ಕಾರಣ ಈಗ ಎಲ್ಲರ ಕೇಂದ್ರ ಬಿಂದುವಾಗಿರುವ ಸಚಿನ್ ತೆಂಡೂಲ್ಕರ್ ಅವರನ್ನು ಕೈಬಿಡುವ ಧೈರ್ಯವನ್ನು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ತೋರಿಲ್ಲ. ಆದರೆ, ತಂಡದಲ್ಲಿ ಯಾವುದೇ ಬದಲಾವಣೆ ಮಾಡದ ಆಯ್ಕೆ ಸಮಿತಿ ಸಚಿನ್ ಸೇರಿದಂತೆ ಪ್ರಮುಖರಿಗೆ ಫಾರ್ಮ್ ಕಂಡುಕೊಳ್ಳಲು ಕೊನೆಯ ಎಚ್ಚರಿಕೆ ರವಾನಿಸಿದೆ.ಕೋಲ್ಕತ್ತದಲ್ಲಿ ನಡೆಯಲಿರುವ   ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯಕ್ಕೆ ಮಾತ್ರ ಭಾರತ ತಂಡ ಪ್ರಕಟಿಸಿರುವ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆ ಸಮಿತಿ ನಿಗೂಢ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತಂಡ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಸೋಮವಾರ ಮಧ್ಯಾಹ್ನವಷ್ಟೇ ಹೇಳಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಆ ನಿರ್ಧಾರದಲ್ಲಿ ಬದಲಾಗಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.ಕೊನೆಯ ಅವಕಾಶ

ವೈಫಲ್ಯಕ್ಕೆ ಒಳಗಾಗಿರುವ ಆಟಗಾರರಿಗೆ ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಕಲ್ಪಿಸಿದೆ. ಈ ಮೂಲಕ ಸಚಿನ್, ಹರಭಜನ್ ಸಿಂಗ್, ಜಹೀರ್ ಖಾನ್ ಅವರಿಗೆ ಪರೋಕ್ಷವಾಗಿ ಮೊದಲ ಎಚ್ಚರಿಕೆ ನೀಡಿದೆ.ವಾಂಖೇಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಹಿಂದಿನ ಬಾಗಿಲಿನಿಂದ ಹೊರಬಂದ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ `ಬಿಸಿಸಿಐನೊಂದಿಗಿನ ನನ್ನ ಒಪ್ಪಂದ ಮಾತನಾಡಲು ಅವಕಾಶ ನೀಡುವುದಿಲ್ಲ' ಎಂದು ಹೇಳಿ ತಮ್ಮ ಕಾರಿನ ಕಿಟಕಿ ಮುಚ್ಚಿದರು. `ಸಚಿನ್ ಜೊತೆ ಸಮಾಲೋಚನೆ ನಡೆಸಿದ್ದೀರಾ' ಎಂಬುದಕ್ಕೂ ಅವರು ಪ್ರತಿಕ್ರಿಯಿಸಿಲಿಲ್ಲ.

ಎರಡನೇ ಪಂದ್ಯದಲ್ಲಿ ದೋನಿ ಬಳಗ ಹೀನಾಯ ಸೋಲು ಕಂಡ ಕಾರಣ ಆಯ್ಕೆ ಸಮಿತಿ ಕೂಡ ಒತ್ತಡಕ್ಕೆ ಒಳಗಾಗಿತ್ತು. ಆದರೂ ಡಿಸೆಂಬರ್ 5ರಂದು ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಲಿರುವ ಮೂರನೇ ಪಂದ್ಯಕ್ಕೆ ಪ್ರಕಟಿಸಲಾಗಿರುವ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆನ್ನು ನೋವಿಗೆ ಒಳಗಾಗಿರುವ ವೇಗಿ ಉಮೇಶ್ ಯಾದವ್ ಬದಲಿಗೆ ಅಶೋಕ್ ದಿಂಡಾಗೆ ಈ ಮೊದಲೇ ಸ್ಥಾನ ನೀಡಲಾಗಿತ್ತು.ಒಂದು ಗಂಟೆ ನಡೆದ ಸಭೆಯಲ್ಲಿ ಸಮಿತಿ ಸದಸ್ಯರಾದ ರೋಜರ್ ಬಿನ್ನಿ, ಸಬಾ ಕರೀಮ್ ಹಾಗೂ ನಾಯಕ ದೋನಿ ಪಾಲ್ಗೊಂಡಿದ್ದರು. `ನಾಗಪುರದಲ್ಲಿ ನಡೆಯಲಿರುವ ನಾಲ್ಕನೇ ಹಾಗೂ ಅಂತಿಮ ಪಂದ್ಯಕ್ಕೆ ಆಮೇಲೆ ತಂಡ ಪ್ರಕಟಿಸಲಾಗುವುದು' ಎಂದಷ್ಟೇ ಬಿಸಿಸಿಐ ಹೇಳಿದೆ.ಬದಲಾವಣೆಗೆ ದೋನಿ ವಿರೋಧ

ತಂಡದಲ್ಲಿ ಬದಲಾವಣೆಗೆ ದೋನಿ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಸೋಮವಾರ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಅವರು, `ಮುಂದಿನ ಪಂದ್ಯಗಳಿಗೆ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಒಂದೆರಡು ಪಂದ್ಯಗಳಲ್ಲಿ ವಿಫಲವಾದ ಮಾತ್ರಕ್ಕೆ ಬದಲಾವಣೆ ಮಾಡುವುದು ಸರಿಯಲ್ಲ. ಮತ್ತಷ್ಟು ಅವಕಾಶ ನೀಡಿ ನೋಡಬೇಕು' ಎಂದಿದ್ದರು.

ಮುಂಬೈ ಪಂದ್ಯದಲ್ಲಿ ವಿಫಲರಾದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೈಬಿಟ್ಟು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅಥವಾ ಪಿಯೂಷ್ ಚಾವ್ಲಾ ಅವರಿಗೆ ಸ್ಥಾನ ನೀಡಬೇಕೆಂಬ ಚರ್ಚೆ ಸಭೆಯಲ್ಲಿ ನಡೆದಿದೆ. ಆದರೆ ಅದಕ್ಕೆ ದೋನಿ ಸಹಮತ ವ್ಯಕ್ತಪಡಿಸಿಲ್ಲ ಎಂಬುದು ತಿಳಿದು ಬಂದಿದೆ.ಯಾದವ್‌ಗೆ ವಿಶ್ರಾಂತಿ

ಬೆನ್ನು ನೋವಿಗೆ ಒಳಗಾಗಿರುವ ಯಾದವ್ ಅವರಿಗೆ 10-12 ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳ್ದ್ದಿದಾರೆ. ಹಾಗಾಗಿ ಅವರು ಕೊನೆಯ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವುದೂ ಅನುಮಾನ. ಎರಡನೇ ಪಂದ್ಯಕ್ಕೆ ಮುನ್ನವೇ ಯಾದವ್ ಬೆನ್ನು ನೋವಿಗೆ ಒಳಗಾಗಿದ್ದ ಕಾರಣ ಪಶ್ಚಿಮ ಬಂಗಾಳದ ವೇಗಿ ದಿಂಡಾ ಅವರನ್ನು ಹೆಚ್ಚುವರಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಈಡನ್‌ನಲ್ಲಿ ಮೂರನೇ ಪಂದ್ಯ ಡಿ.5ರಿಂದ 9ರವರೆಗೆ ನಡೆಯಲಿದೆ. ನಾಲ್ಕನೇ ಪಂದ್ಯ ನಾಗಪುರದಲ್ಲಿ ಡಿ.13ರಿಂದ 17ರವರೆಗೆ ಜರುಗಲಿದೆ. ನಾಲ್ಕು ಪಂದ್ಯಗಳ ಸರಣಿ ಈಗ 1-1 ಸಮಬಲವಾಗಿದೆ.ಮೂರನೇ ಪಂದ್ಯಕ್ಕೆ ತಂಡ ಇಂತಿದೆ:

ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಆರ್. ಅಶ್ವಿನ್, ಹರಭಜನ್ ಸಿಂಗ್, ಜಹೀರ್ ಖಾನ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮ, ಮುರಳಿ ವಿಜಯ್, ಅಜಿಂಕ್ಯ ರಹಾನೆ ಹಾಗೂ ಅಶೋಕ್ ದಿಂಡಾ.

ತೆಂಡೂಲ್ಕರ್ ವಿದಾಯ ಸನ್ನಿಹಿತವಾಗಿದೆಯೇ?

ಪ್ರಜಾವಾಣಿ ವಾರ್ತೆ

ಮುಂಬೈ: `ಇ
ಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ವಿದಾಯ ಹೇಳುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ' ಎಂದು ಸಚಿನ್ ಕೆಲ ವಾರಗಳ ಹಿಂದಷ್ಟೇ ಹೇಳಿದ್ದರು. `ನನಗೀಗ 39 ವರ್ಷವಾಯಿತು. ನನ್ನಲ್ಲಿ ಹೆಚ್ಚು ಕ್ರಿಕೆಟ್ ಉಳಿದಿಲ್ಲ. ಆದರೆ ಹೃದಯದ ಮಾತು ಕೇಳಿ ನಿರ್ಧರಿಸುತ್ತೇನೆ' ಎಂದಿದ್ದರು.ತಮ್ಮ ತವರೂರಿನ ವಾಂಖೇಡೆ ಕ್ರೀಡಾಂಗಣದಲ್ಲಿ ಬಹುತೇಕ ಕೊನೆಯ ಪಂದ್ಯ ಆಡಿದ ಸಚಿನ್ ಇಲ್ಲಿಯೇ ವಿದಾಯ ಪ್ರಕಟಿಸಲಿದ್ದಾರೆ ಎಂಬ ಗುಸುಗುಸು ಸೋಮವಾರ ಇಂಗ್ಲೆಂಡ್ ವಿರುದ್ಧ ಸೋಲು ಕಂಡ ಬಳಿಕ ಹಬ್ಬಿತ್ತು. ಆದರೆ ಆ ರೀತಿ ಆಗಲಿಲ್ಲ.ಆಯ್ಕೆ ಸಮಿತಿಯು ಮಂಗಳವಾರ ಈ ಸರಣಿಯ ಮೂರನೇ ಪಂದ್ಯಕ್ಕೆ ಮಾತ್ರ ತಂಡ ಪ್ರಕಟಿಸಿರುವುದು ಮತ್ತಷ್ಟು ಅನುಮಾನಗಳಿಗೆ         ದಾರಿ ಮಾಡಿಕೊಟ್ಟಿದೆ. ಫಾರ್ಮ್ ಕಂಡುಕೊಳ್ಳಲು ಸಚಿನ್‌ಗೆ ಮತ್ತೊಂದು ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಈ ಸರಣಿಯ ಬಳಿಕ ಅವರು ವಿದಾಯ ಹೇಳಿದರೂ ಅಚ್ಚರಿ ಇಲ್ಲ.ಇದಕ್ಕೆ ಕಾರಣ ಎರಡು ವರ್ಷಗಳಿಂದ ಕುಸಿದಿರುವ ತೆಂಡೂಲ್ಕರ್ ಫಾರ್ಮ್‌ನ ಗ್ರಾಫ್. 23 ವರ್ಷ ಆಡಿರುವ ಸಚಿನ್ ಉತ್ತಮ        ಫಾರ್ಮ್‌ನಲ್ಲಿದ್ದಾಗಲೇ ವಿದಾಯ ಹೇಳಬೇಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಸುನಿಲ್ ಗಾವಸ್ಕರ್ ವಿದಾಯ ಹೇಳುವ ಮುನ್ನ ಅದ್ಭುತ ಫಾರ್ಮ್‌ನಲ್ಲಿದ್ದರು.ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್‌ದೇವ್ `ವಿದಾಯದ ಸಂಬಂಧ ಎದ್ದಿರುವ ಗೊಂದಲದ ಬಗ್ಗೆ ಸಚಿನ್ ಆಯ್ಕೆದಾರರೊಂದಿಗೆ ಚರ್ಚಿಸಲು ಇದು ಸೂಕ್ತ ಸಮಯ. ಸಮಸ್ಯೆ ಎಂದರೆ ಸಚಿನ್ ಆ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಆಯ್ಕೆದಾರರು ಕೂಡ ಈ ವಿಷಯದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ' ಎಂದಿದ್ದಾರೆ.`ತೆಂಡೂಲ್ಕರ್ ಬಗ್ಗೆ ಮಾತನಾಡಲು ಸಾಧ್ಯವೇ? ವಿದಾಯ ಬಗ್ಗೆ ಮಾತನಾಡಲು ಸಚಿನ್ ಹೊರತು ಬೇರೆ ಯಾರೂ ಯೋಗ್ಯರಲ್ಲ' ಎಂದು ಮಾಜಿ ಆಟಗಾರರೊಬ್ಬರು ನುಡಿದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.