ಗುರುವಾರ , ಮೇ 6, 2021
31 °C

ಸಚಿವರಿಲ್ಲದೆ ಕಲಾಪ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿನದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಚರ್ಚೆಗೆ ನಿಗದಿಯಾಗಿದ್ದ ವಿಷಯಗಳಿಗೆ ಉತ್ತರಿಸಲು ಸಂಬಂಧಿಸಿದ ಇಲಾಖೆಗಳ ಸಚಿವರಿಲ್ಲದ ಕಾರಣ ವಿಧಾನ ಪರಿಷತ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ ಘಟನೆ ಗುರುವಾರ ನಡೆಯಿತು.ಕಾವೇರಿ ವಿಷಯವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಸರ್ವಪಕ್ಷ ಮುಖಂಡರ ಸಭೆ ಕರೆದಿದ್ದ ಹಿನ್ನೆಲೆಯಲ್ಲಿ ಕಲಾಪ 45 ನಿಮಿಷ ವಿಳಂಬವಾಗಿ ಆರಂಭವಾಯಿತು. ಸಭೆ ಸೇರುತ್ತಿದ್ದಂತೆಯೇ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಲಾಪ ಆರಂಭಿಸಲು ಸನ್ನದ್ಧರಾದರು. ಆದರೆ, `ಸಚಿವರಿಲ್ಲದೆ ನಾವು ಯಾರಿಗೆ ಪ್ರಶ್ನೆ ಹಾಕುವುದು, ಉತ್ತರ ನೀಡುವವರು ಯಾರು' ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಯಮ 330ರ ಅಡಿಯಲ್ಲಿ, ಸ್ಥಳೀಯ ಸಂಸ್ಥೆಗಳ ಸಬಲೀಕರಣದ ಪ್ರಸ್ತಾಪ ಮಾಡಲು ಅವಕಾಶ ಪಡೆದಿದ್ದರು. ಅಮರನಾಥ ಪಾಟೀಲ, ಹೈದರಾಬಾದ್-ಕರ್ನಾಟಕ ಭಾಗದ ನೀರಿನ ಸಮಸ್ಯೆ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು. ಎರಡೂ ವಿಷಯಗಳಿಗೆ ಉತ್ತರ ನೀಡಬೇಕಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಗೈರು ಹಾಜರಾಗಿದ್ದರು.ಗುಟ್ಕಾ ನಿಷೇಧದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸದನಕ್ಕೆ ಬಂದಿರಲಿಲ್ಲ. ಬೆಂಗಳೂರಿನ ಕಾಕ್ಸ್‌ಟೌನ್‌ನಲ್ಲಿ ಇರುವ ಆಟದ ಮೈದಾನದ ಕುರಿತು ಜೆಡಿಎಸ್‌ನ ಬಸವರಾಜ ಹೊರಟ್ಟಿ ಮಂಡಿಸಲಿದ್ದ ಗಮನ ಸೆಳೆಯುವ ಸೂಚನೆಗೂ ಮುಖ್ಯಮಂತ್ರಿಗಳೇ ಉತ್ತರಿಸಬೇಕಿತ್ತು.`ಸಾಕಷ್ಟು ಮುಂಚಿತವಾಗಿ ಕಲಾಪಗಳ ಪಟ್ಟಿ ತಯಾರು ಮಾಡಲಾಗಿದೆ. ಯಾವ ಸಚಿವರು, ಯಾವ ಸದನದಲ್ಲಿ ಇರಬೇಕು ಎಂಬುದೂ ನಿಗದಿಯಾಗಿದೆ. ಹೀಗಿದ್ದೂ ಪರಿಷತ್ ಕಲಾಪಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದು ಏಕೆ' ಎಂದು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಹೊರಟ್ಟಿ ಮತ್ತಿತರರು ಆಕ್ಷೇಪ ಎತ್ತಿದರು.`ಸಚಿವರು ಬರುವವರೆಗೆ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಸಂಬಂಧ ಚರ್ಚೆ ಮುಂದುವರಿಸಬಹುದು ಎಂದು ಸಭಾನಾಯಕ ಎಸ್.ಆರ್. ಪಾಟೀಲ ಪ್ರಸ್ತಾವ ಮುಂದಿಟ್ಟರು. ಅದಕ್ಕೆ ವಿರೋಧ ಪಕ್ಷದ ಸದಸ್ಯರು ಸಮ್ಮತಿ ಸೂಚಿಸಲಿಲ್ಲ. `ಸಚಿವರನ್ನು ಕರೆಸುತ್ತೇವೆ. ಸ್ವಲ್ಪ ಕಾಲಾವಕಾಶ ಬೇಕು. ಕೆಳ ಸದನದಲ್ಲಿ ಕಾವೇರಿ ನದಿ ನೀರಿನ ವಿಷಯವಾಗಿ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಅಲ್ಲಿದ್ದಾರೆ' ಎಂದು ಪಾಟೀಲ ಹೇಳಿದರು.ಸಚಿವರ ಹೇಳಿಕೆಯಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸದಾನಂದಗೌಡ ಅವರ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. `ಆದಷ್ಟು ಶೀಘ್ರ ಸಚಿವರನ್ನು ಸದನಕ್ಕೆ ಕರೆಸಬೇಕು' ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕರಿಗೆ ಸೂಚನೆ ನೀಡಿದ ಸಭಾಪತಿಗಳು, ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.ಶಂಕರಮೂರ್ತಿ ಅವರು ಸಭಾಪತಿಗಳ ಪೀಠದಿಂದ ಹೊರನಡೆದ ಬೆನ್ನ ಹಿಂದೆಯೇ ಸಚಿವ ಎಚ್.ಕೆ. ಪಾಟೀಲ ಸದನಕ್ಕೆ ಬಂದರು. `ಎರಡು ನಿಮಿಷ ಮೊದಲು ಬಂದಿದ್ದರೆ ಚೆನ್ನಾಗಿತ್ತು' ಎಂದು ಮತ್ತಿಕಟ್ಟಿ ಮತ್ತಿತರರು ಸಚಿವರಿಗೆ ತಿಳಿಸಿದರು. ನಂತರ ಕಲಾಪ ಆರಂಭವಾದಾಗ ಸಚಿವರು, ತಾವು ಸದನಕ್ಕೆ ಬರಲು ತಡವಾಗಿದ್ದಕ್ಕೆ ಕ್ಷಮೆ ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.