ಸೋಮವಾರ, ಮಾರ್ಚ್ 8, 2021
31 °C

ಸಣ್ಣಕಾರಿನ ದೊಡ್ಡ ವಿಶೇಷಗಳು

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಸಣ್ಣಕಾರಿನ ದೊಡ್ಡ ವಿಶೇಷಗಳು

ಮಾರುತಿ ಸುಜುಕಿ ಸ್ವಿಫ್ಟ್

ಸಣ್ಣ ಕಾರುಗಳ `ಡಾರ್ಲಿಂಗ್~ ಎಂದೇ ಕರೆಸಿಕೊಳ್ಳುವ ಮಾರುತಿ ಸುಜುಕಿ ಸ್ವಿಫ್ಟ್ ಭಾರತಕ್ಕೆ ಕಾಲಿಟ್ಟಿದ್ದು 2005ರಲ್ಲಿ. 2007ರಲ್ಲಿ ಡೀಸಲ್ ಸ್ವಿಫ್ಟ್‌ನ ಪದಾರ್ಪಣೆಯಾಯಿತು. ಅಲ್ಲಿಂದ ಇಲ್ಲಿಯವರೆಗೂ ಸ್ವಿಫ್ಟ್ ದಾಖಲೆ ಮಾರಾಟ ಪ್ರಗತಿ ಕಾಣುತ್ತಿದೆ.ಕೇವಲ ಹೊಸ ಕಾರಿಗೆ ಮಾತ್ರವಲ್ಲದೆ ಹಳೆಯ ಕಾರುಗಳೂ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದು ಇದರ ಪ್ರಖ್ಯಾತಿಗೆ ಸಾಕ್ಷಿ. ಇದೀಗ ಸ್ವಿಫ್ಟ್ ಹೊಸ ರೂಪ ಪಡೆದಿದೆ. ಯುರೋಪ್‌ನ ವಿನ್ಯಾಸ ಹೊಂದಿರುವ ಈ ಕಾರಿನ ತಯಾರಿಯಲ್ಲಿ 32 ಜಪಾನಿನ ಹಾಗೂ 100 ಭಾರತೀಯ ಎಂಜಿನಿಯರ್‌ಗಳು ಶ್ರಮಿಸಿದ್ದಾರೆ.ಹೊಸ ಸ್ವಿಫ್ಟ್ ಹೆಚ್ಚು ಅತ್ಯಾಕರ್ಷಕ ಹೊರ ವಿನ್ಯಾಸ ಹೊಂದಿರುವುದರ ಜತೆಗೆ ಹೆಚ್ಚು ಶಕ್ತಿಶಾಲಿಯಾಗಿ ಹಾಗೂ ಹೆಚ್ಚು ಇಂಧನ ಕ್ಷಮತೆ ನೀಡುವಂಥ ಕಾರು ಆಗಿರುವುದರಿಂದ ಯುವ ಜನತೆಯನ್ನು ಸೆಳೆಯುವುದು ಕಂಪೆನಿಯ ಯೋಜನೆ.ಹಳೆಯ ಸ್ವಿಫ್ಟ್‌ಗೆ ಹೋಲಿಸಿದಲ್ಲಿ 140 ಹೊಸ ಸೌಲಭ್ಯವನ್ನು ಹೊಂದಿದೆ ಎನ್ನುವುದು ಇದರ ಹೆಗ್ಗಳಿಕೆ. ಈ ಹಿಂದಿನಂತೆ ಹೊಸ ಸ್ವಿಫ್ಟ್ 1.2 ಲೀ. ಪೆಟ್ರೋಲ್ ಹಾಗೂ 1.3 ಲೀ. ಡೀಸಲ್ ಎಂಜಿನ್ ಹೊಂದಿದೆ. 90 ಮಿ.ಮೀ. ಹೆಚ್ಚು ಉದ್ದ ಹಾಗೂ 5 ಮಿ.ಮೀ. ಅಗಲವಾಗಿದೆ ಹಾಗೂ ಕಾಲಿಡಲು 20 ಮಿ.ಮೀ. ಹೆಚ್ಚು ಸ್ಥಳಾವಕಾಶ ನೀಡಲಾಗಿದೆ.ಆದರೆ ಹಿಂಬದಿಯಲ್ಲಿ ಸರಕು ಇಡಲು ಬೂಟ್ ಸ್ಪೇಸ್ ಈ ಹಿಂದಿಗಿಂಥ ಅತಿ ಕಡಿಮೆ ಇರುವುದು ಒಂದು ನ್ಯೂನತೆಯೇ ಸರಿ. ಕಾರಿನ ಚಕ್ರದ ಅಂತರ 40 ಮಿ.ಮೀ. ಹೆಚ್ಚಿಸಿದೆ ಹಾಗೂ ನೆಲದಿಂದ ಅಂತರ 170 ಮಿ.ಮೀ. ಇರುವುದರಿಂದ ಕಾರು ಹೆಚ್ಚು ಎತ್ತರ ಹಾಗೂ ಉದ್ದವಾಗಿದೆ.ಇದರೊಂದಿಗೆ ಲೋಹದ ಇಂಧನ ಟ್ಯಾಂಕ್ ಅನ್ನು ಪ್ಲಾಸ್ಟಿಕ್‌ಗೆ ಬದಲಾಯಿಸಿರುವುದರಿಂದ ಒಟ್ಟು ತೂಕದಲ್ಲಿ 30 ಕೆ.ಜಿ. ಕಡಿಮೆಯಾಗಿದೆ. ಇದರಿಂದ ಇಂಧನ ಕ್ಷಮತೆ ಹೆಚ್ಚಾಗಿದೆ. ಆದರೆ ಈ ರೀತಿಯ ಪ್ರಯೋಗ ಇದೇ ಮೊದಲ ಬಾರಿ ಆಗಿರುವುದರಿಂದ ಪ್ಲಾಸ್ಟಿಕ್ ಇಂಧನ ಟ್ಯಾಂಕ್ ಎಷ್ಟು ಸುರಕ್ಷಿತ ಎಂಬುದು ಇನ್ನು ಮುಂದೆ ಕಾದು ನೋಡಬೇಕಿದೆ.ಪೆಟ್ರೋಲ್ ಸ್ವಿಫ್ಟ್ 1197 ಸಿಸಿ ಉತ್ಪಾದಿಸಬಲ್ಲ ಸುಜುಕಿಯ ಕೆ ಸರಣಿಯ ಎಂಜಿನ್ ಹೊಂದಿದೆ. ಸುಧಾರಿತ ಎಂಜಿನ್ ಹೊಂದಿರುವ ಪೆಟ್ರೋಲ್ ಸ್ವಿಫ್ಟ್ ಹೆಚ್ಚು ಶಕ್ತಿ ಉತ್ಪಾದಿಸಬಲ್ಲ ಹಾಗೂ ಅತ್ಯಧಿಕ ಟಾರ್ಕ್ ಹೊಂದಿದೆ. 0ಯಿಂದ 100 ಕಿ.ಮೀ. ವೇಗವನ್ನು ಕೇವಲ 12.6 ಸೆಕೆಂಡ್‌ಗಳಲ್ಲಿ ಕ್ರಮಿಸಬಲ್ಲ ಇದು ಗರಿಷ್ಠ ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಾಯಿಸಬಹುದಾಗಿದೆ.ಇದರಂತೆ ಡೀಸಲ್ ಎಂಜಿನ್ ಸ್ವಿಫ್ಟ್ 1248 ಸಿಸಿ ಸಾಮರ್ಥ್ಯದ ಫಿಯೆಟ್ ತಂತ್ರಜ್ಞಾನದ ಡಿಡಿಐಎಸ್ ಎಂಜಿನ್ ಹೊಂದಿದೆ. ಟರ್ಬೋಚಾರ್ಜರ್ ಹಾಗೂ ಇಂಟರ್ ಕೂಲರ್ ಸೌಲಭ್ಯವಿರುವ ಎಂಜಿನ್ ಕಾಮನ್ ರೈಲ್ ವ್ಯವಸ್ಥೆ ಹೊಂದಿದೆ. ಅತ್ಯಧಿಕ ಇಂಧನ ಕ್ಷಮತೆ ಹೊಂದಿದ್ದರೂ ಟಾರ್ಕ್ ಉತ್ಪಾದನೆಯಲ್ಲಿ ಇದೇ ವಿಭಾಗದಲ್ಲಿ ಇತರ ಕಾರುಗಳಿಗೆ ಹೋಲಿಸಿದಲ್ಲಿ ಉತ್ತಮ.

 

ಅಲುಮಿನಿಯಂ ಬಳಸಿರುವುದರಿಂದ ಎಂಜಿನ್ ಹೆಚ್ಚು ಶಬ್ಧವಾಗಲೀ, ಕಂಪನವಾಗಲೀ ಇಲ್ಲ. ಅತ್ಯಧಿಕ ಶಕ್ತಿ ಉತ್ಪಾದಿಸಬಲ್ಲ ಡೀಸಲ್ ಎಂಜಿನ್ ಹೊಂದಿರುವ ಸ್ವಿಫ್ಟ್ 0ಯಿಂದ 100 ಕಿ.ಮೀ. ವೇಗ ತಲುಪಲು 14.8 ಸೆಕೆಂಡ್‌ಗಳನ್ನು ತೆಗೆದುಕೊಳ್ಳಲಿದೆ ಹಾಗೂ ಗರಿಷ್ಠ ವೇಗ ಪ್ರತಿ ಗಂಟೆಗೆ 152ರಂತೆ ಚಾಲನೆ ಮಾಡಬಹುದಾಗಿದೆ.ಇಂಧನ ಕ್ಷಮತೆ: ಪೆಟ್ರೋಲ್ ಕಾರು ನಗರ ಪ್ರದೇಶದಲ್ಲಿ 14 ಹಾಗೂ ಹೆದ್ದಾರಿಗಳಲ್ಲಿ 18 ಕಿ.ಮೀ. ಎಂದು ಕಂಪೆನಿ ಹೇಳುತ್ತದೆ. ಆದರೆ ಸರಾಸರಿ 15-16 ಕಿ.ಮೀ. ನೀಡಿದ ಉದಾಹರಣೆಗಳಿವೆ. ಅದರಂತೆ ಡೀಸಲ್ ಎಂಜಿನ್ ಹೊಂದಿರುವ ಸ್ವಿಫ್ಟ್ ನಗರದಲ್ಲಿ 22 ಹಾಗೂ ಹೆದ್ದಾರಿಯಲ್ಲಿ 23 ಕಿ.ಮೀ. ಇಂಧನ ಕ್ಷಮತೆ ನೀಡುತ್ತದೆ ಎಂದು ಹೇಳಿದರೂ ಪ್ರತಿ ಲೀಟರ್‌ಗೆ 20 ಕಿ.ಮೀ. ಇಂಧನ ಕ್ಷಮತೆಗೇನೂ ಮೋಸವಿಲ್ಲ. ಇದು ಹಿಂದಿನ ಸ್ವಿಫ್ಟ್‌ಗೆ ಹೋಲಿಸಿದಲ್ಲಿ ಶೇ. 6ರಷ್ಟು ಅಧಿಕ.ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್ ಹೊಂದಿರುವ ಸ್ವಿಫ್ಟ್ ಮೂರು ಮಾದರಿಗಳಲ್ಲಿ ಲಭ್ಯ. ಪೆಟ್ರೋಲ್ ಸ್ವಿಫ್ಟ್‌ನ ಬೆಲೆ 4.5ರಿಂದ 5.8 ಲಕ್ಷ ರೂಪಾಯಿ. ಡೀಸಲ್ ಸ್ವಿಫ್ಟ್‌ನ ಬೆಲೆ 5.5ರಿಂದ 7 ಲಕ್ಷ ರೂಪಾಯಿವರೆಗಿದೆ.  

 

ಹ್ಯುಂಡೈ ಐ-ಜೆನ್ ಐ20

ಹ್ಯುಂಡೈ ಕಂಪೆನಿ ಭಾರತದಲ್ಲಿ ಬಿಡುಗಡೆ ಮಾಡಿದ ಅತ್ಯಂತ ಯಶಸ್ವಿ ಕಾರುಗಳಲ್ಲಿ ಒಂದಾದ ಐ 20 ಈಗ `ಐ-ಜೆನ್ ಐ-20~ ಎಂಬ ಹೆಸರಿನೊಂದಿಗೆ ಹೊಸ ಅವತಾರದಲ್ಲಿ ಮತ್ತೊಮ್ಮೆ ಮಾರುಕಟ್ಟೆ ಧಾಂಗುಡಿ ಇಟ್ಟಿದೆ. ಹೆಚ್ಚು ಸ್ಥಳಾವಕಾಶ, ಅತ್ಯಾಕರ್ಷಕ ಒಳಾಂಗಣ ವಿನ್ಯಾಸ, ಇನ್ನಷ್ಟು ಸ್ಲೀಕ್ ಹಾಗೂ ಇದರ ಹೊರಭಾಗ ಈಗ ಮತ್ತಷ್ಟು ಸುಂದರವಾಗಿದೆ.ಈಗಾಗಲೇ ಯುರೋಪ್ ಹಾಗೂ ಕೊರಿಯಾಗಳಲ್ಲಿ ಬಿಡುಗಡೆಯಾಗಿರುವ ಐ-30ಯಿಂದ ಪ್ರೇರೇಪಣೆಗೊಂಡಿದೆ. ಈ ಹಿಂದಿನ ಐ-20ಗೆ ಹೋಲಿಸಿದಲ್ಲಿ ಹೊಸ ಐ-20 ಹೆಚ್ಚು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಈಗಾಗಲೇ ವರ್ನಾ ಹಾಗೂ ಸೊನಾಟಾದಲ್ಲಿರುವ ನವೀನ ಫ್ಲುಡಿಕ್ ವಿನ್ಯಾಸ ಇದರ ವೈಶಿಷ್ಟ್ಯಗಳಲ್ಲೊಂದು.

 

ದೊಡ್ಡದಾದ ಹೆಡ್‌ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್‌ಗಳಿಂದ ಕಾರಿಗೆ ಹೊಸ ಕಳೆ ಬಂದಂತಾಗಿದೆ. ಇದರ ಜತೆಯಲ್ಲಿ ಸ್ಮಾರ್ಟ್ ಕೀ, ಬಟನ್ ಸ್ಟಾರ್ಟ್, ಸ್ಟಿಯರಿಂಗ್ ಚಕ್ರಕ್ಕೆ ಹಾಗೂ ಗೇರ್ ಹಿಡಿಗೆ ಲೆದರ್ ಹೊದಿಕೆ, ವಿದ್ಯುತ್ ಬಳಕೆಯಿಂದ ಮಡಿಚಬಲ್ಲ ಹಾಗೂ ಬಿಸಿ ಮಾಡಬಲ್ಲ ಹೊರಗಿನ ಕನ್ನಡಿ, ಚಾಲಕನ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ ಸ್ಟಿಯರಿಂಗ್ ಇದೆ.ಇದು ಮೋಟಾರ್ ಡ್ರಿವನ್ ಪವರ್ ಸ್ಟಿಯರಿಂಗ್ (ಎಂಡಿಪಿಎಸ್) ಎಂಬ ಹೊಸ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾದ ಸ್ಟಿಯರಿಂಗ್ ಆಗಿದೆ. ಜತೆಗೆ ಹೊಸದಾದ ಹಾಗೂ ಅಷ್ಟೇ ಪ್ರಯಾಣಿಕರ ಸ್ನೇಹಿಯಾಗಿರುವ ಸಸ್ಪೆಷನ್ ಕೂಡಾ ಇದರಲ್ಲಿದೆ.60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿಯ ಆಸನ ಇದರಲ್ಲಿದೆ. ಇದರೊಂದಿಗೆ ಮನರಂಜನೆಗಾಗಿ 2-ಡಿನ್ ಸಿಡಿ/ಎಂಪಿ3 ಪ್ಲೇಯರ್, ಜತೆಗೆ 4 ಸ್ಪೀಕರ್ ಹಾಗೂ 2 ಟ್ವಿಟರ್, ಯುಎಸ್‌ಬಿ, ಆಕ್ಸ್-ಇನ್ ಹಾಗೂ ಬ್ಲೂಟೂತ್ ಸಂಪರ್ಕಗಳು ಮತ್ತು ಇವೆಲ್ಲದರ ಸುಲಭ ನಿರ್ವಹಣೆಗೆ ಸ್ಟಿಯರಿಂಗ್‌ನಲ್ಲೇ ಗುಂಡಿಗಳನ್ನು ನೀಡಲಾಗಿದೆ.ಆರು ಗೇರ್‌ಗಳನ್ನು ಹೊಂದಿರುವ ಭಾರತದ ಮೊದಲ ಸಣ್ಣ ಕಾರು ಎಂಬ ಹೆಗ್ಗಳಿಕೆಗೆ ಹ್ಯುಂಡೈ ಐ-20 ಪಾತ್ರವಾಗಿದೆ. ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್‌ಗಳಲ್ಲಿ ಲಭ್ಯವಿರುವ ಐ-20ಯಲ್ಲಿ ಹಲವು ಬಗೆ.1.4ಯುಟಿ ಸಿಆರ್‌ಡಿಐ ಡೀಸಲ್ ಎಂಜಿನ್ ಹೊಂದಿರುವ ಕಾರು 90ಪಿಎಸ್ ಅತ್ಯಧಿಕ ಶಕ್ತಿ ಉತ್ಪಾದಿಸಬಲ್ಲದ್ದಾದರೆ, 1.2 ಪೆಟ್ರೋಲ್ ಎಂಜಿನ್ 84 ಪಿಎಸ್  ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಈ ಹಿಂದಿನಂತೆ 5 ಗೇರ್‌ಗಳನ್ನು ಹೊಂದಿದೆ. ಆದರೂ ಮೊದಲ ಗೇರ್ ಹೊರತುಪಡಿಸಿದರೆ, ಎರಡು ಹಾಗೂ ಮೂರನೇ ಗೇರ್‌ನಲ್ಲಿ ಅಗತ್ಯಕ್ಕಿಂತ ಕಡಿಮೆ ಪಿಕ್‌ಅಪ್‌ನ ಅನುಭವವಾಗುತ್ತದೆ.1.4 ಗಾಮಾ ಎಂಜಿನ್ ಎಂಬ ಮತ್ತೊಂದು ಬಗೆಯ ಐ-20, 100ಪಿಎಸ್ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಇನ್ನು ಸ್ಪೋರ್ಟ್ಸ್ ಮಾದರಿಯ ಮುಂಭಾಗದಲ್ಲಿ ಆಕರ್ಷಕ ಗ್ರಿಲ್, ಹಿಂಬದಿ ನಿಲುಗಡೆ ಸೂಚನಾ ದೀಪ ಹೊಂದಿರುವ ಸ್ಪಾಯ್ಲರ್, 8 ಸ್ಪೋಕ್ಸ್ ಹೊಂದಿರುವ ಅಲಾಯ್ ವೀಲ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.ಇದರೊಂದಿಗೆ ಸುರಕ್ಷತೆಗಾಗಿ, ತಕ್ಷಣ ನಿಯಂತ್ರಣಕ್ಕೆ ಎಬಿಎಸ್, 6 ಏರ್‌ಬ್ಯಾಗ್‌ಗಳು, ಕಾರಿನ ವೇಗಕ್ಕೆ ತಕ್ಕಂತೆ ಬಾಗಿಲು ಭದ್ರ ಮಾಡುವ ವ್ಯವಸ್ಥೆ, ಹಿಂಭದಿ ಚಾಲನೆಗೆ ಸೂಚನಾ ವ್ಯವಸ್ಥೆ ಹೊಂದಿದೆ.ಹ್ಯುಂಡೈ ಐ-20 1.4 (1396 ಸಿಸಿ) ಸಿಆರ್‌ಡಿಐ ಎಂಜಿನ್ ಹೊಂದಿರುವ ಕಾರು ನಗರ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 18 ಕಿ.ಮೀ ಹಾಗೂ ಹೆದ್ದಾರಿಗಳಲ್ಲಿ ಪ್ರತಿ ಲೀ. 23 ಕಿ.ಮೀ. ನೀಡಬಹುದು ಎಂದು ಅಂದಾಜಿಸಲಾಗಿದೆ.

 

ಆದರೆ ಈಗಾಗಲೇ ಬಳಸಿರುವ ಹಲವರ ಪ್ರಕಾರ ಇದು ಪ್ರತಿ ಲೀ.ಗೆ 18 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ಕೊಟ್ಟ ಉದಾಹರಣೆ ಇಲ್ಲ.ಇನ್ನು 1.2 ಲೀ. (1196 ಸಿಸಿ)  ಪೆಟ್ರೋಲ್ ಕಾರು ಕೂಡಾ ಉತ್ತಮ ಇಂಧನ ಕ್ಷಮತೆ ಹೊಂದಿದ್ದು, ನಗರ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 15 ಕಿ.ಮೀ. ಹಾಗೂ ಹೆದ್ದಾರಿಗಳಲ್ಲಿ 17 ಕಿ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿದೆ.ಪೆಟ್ರೋಲ್ ಐ-20 ಬೆಲೆ 4.82ರಿಂದ 7.82 ಲಕ್ಷ ರೂಪಾಯಿ (ಎಕ್ಸ್-ಶೋರೂಂ ಬೆಲೆ). ಡೀಸಲ್ ಐ-20 ಬೆಲೆ 6.7ರಿಂದ 7.58 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ)      

   ಫಿಯೆಟ್ ಗ್ರಾಂದೆ ಪುಂಟೊ 

ಕೇವಲ ಭಾರತ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಾಗೂ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಫಿಯೆಟ್ ಗ್ರಾಂದೆ ಪುಂಟೊ 2012 ಈಗ ಹೊಸ ಅವತಾರದ ಮೂಲಕ ಮತ್ತಷ್ಟು ಭಾರತೀಯ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.2005ರಲ್ಲಿ ಫ್ರಾಂಕ್ಫರ್ಟ್‌ನಲ್ಲಿ ನಡೆದ ಕಾರುಗಳ ಪ್ರದರ್ಶನದಲ್ಲಿ ಬಿಡುಗಡೆಯಾದ ಪುಂಟೊ ಆಕರ್ಷಕ ನೋಟ, ಸುರಕ್ಷತೆ ಹಾಗೂ ತಂತ್ರಜ್ಞಾನಕ್ಕೆ ಬ್ರೆಜಿಲ್, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರಶಸ್ತಿ ಗಳಿಸಿದೆ. ಭಾರತದಲ್ಲಿ ಟಾಟಾ ಮೋಟಾರ್ಸ್‌ ಜತೆಗೂಡಿ ಫಿಯೆಟ್ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ.ಫಿಯೆಟ್ ಇಂಡಿಯಾ ಅಟೋಮೊಬೈಲ್ಸ್ ಲಿ. ಅಡಿಯಲ್ಲಿ ಫಿಯೆಟ್ ಭಾರತದಲ್ಲಿ ಬಿಡುಗಡೆ ಮಾಡಿದ ಎರಡನೇ ಕಾರು ಇದು 1.2 ಲೀ. (1172 ಸಿಸಿ) ಸಾಮರ್ಥ್ಯದ ಪೆಟ್ರೋಲ್ ಎಂಜಿನ್, 1.4 ಲೀ. (1368 ಸಿಸಿ) ಸಾಮರ್ಥ್ಯದ ಫೈರ್ ಪೆಟ್ರೋಲ್ ಎಂಜಿನ್ ಹಾಗೂ 1.3 ಲೀ. (1248 ಸಿಸಿ) ಸಾಮರ್ಥ್ಯದ ಮಲ್ಟಿಜೆಟ್ ಡೀಸಲ್ ಎಂಜಿನ್ ಹೊಂದಿರುವ ಕಾರುಗಳು ಹಲವು ಮಾದರಿಗಳಲ್ಲಿ ಲಭ್ಯ.ಫಿಯೆಟ್ ಗ್ರಾಂದೆ ಪುಂಟೊ ಒಟ್ಟು ಉದ್ದ 13.3 ಅಡಿ ಉದ್ದವಿದೆ. ಅಂದರೆ ಇದು ನಾಲ್ಕು ಮೀಟರ್‌ನಷ್ಟೇ ಆದರೂ ಕೊಂಚ ಕಡಿಮೆ ಇದೆ. ಸಣ್ಣ ಕಾರು ವಿಭಾಗಕ್ಕೇ ಸೇರಿದರೂ ಹೆಚ್ಚು ಉದ್ದವಿರುವುದರಿಂದ ಕಂಪೆನಿಗೂ ಹಾಗೂ ಗ್ರಾಹಕರಿಗೂ ಬಹಳಷ್ಟು ಅನುಕೂಲಗಳಿವೆ. ಅದು ಹೇಗೆಂದರೆ, ನಾಲ್ಕು ಮೀಟರ್‌ಗಿಂಥ ಹೆಚ್ಚು ಉದ್ದವಿರುವ ಕಾರಿಗೆ ಶೇ. 16ರಷ್ಟು ಅಬಕಾರಿ ಸುಂಕ ಅಧಿಕ. ಇಷ್ಟು ಮಾತ್ರವಲ್ಲದೆ 1.2 ಲೀ ಅಥವಾ ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರಬೇಕಾದ್ದು ಕಡ್ಡಾಯ.ಇಟಾಲಿಯನ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ಪುಂಟೊ ನಿರ್ಮಾಣದಲ್ಲಿ ಬಳಸಿರುವ ಲೋಹ ಇತರ ಕಾರುಗಳಿಗಿಂತ ಹೆಚ್ಚು ಗಟ್ಟಿಮುಟ್ಟಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವುದರಿಂದ ಇಂಧನ ಕ್ಷಮತೆ ಹಿಂದಕ್ಕೆ ಸರಿದಿದೆ. ಮುಂಭಾಗ ಮತ್ತು ಹಿಂಬದಿಯ ಆಸನಗಳೆರಡನ್ನೂ ಕಾಲಿಟ್ಟುಕೊಳ್ಳಲು ಸಾಕಷ್ಟು ಸ್ಥಳ ಒದಗಿಸಿ ವಿನ್ಯಾಸಗೊಳಿಸಲಾಗಿದೆ. ಆದರೆ ಒಳಾಂಗಣ ವಿನ್ಯಾಸಕ್ಕೆ ಬಳಸಿರುವ ಪ್ಲಾಸ್ಟಿಕ್ ಹಾಗೂ ರಬ್ಬರ್ ಗುಣಮಟ್ಟವನ್ನು ಮತ್ತಷ್ಟು ಉತ್ತಮಪಡಿಸಬೇಕಾಗಿದೆ.ಮುಂಭಾಗದ ಆಸನದಲ್ಲಿ ಎರಡು ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆ ಹೊಂದಿರುವ ಎಬಿಎಸ್ ಸೌಲಭ್ಯದಿಂದ ತಕ್ಷಣ ಬ್ರೇಕ್ ಹಾಕಿದರೂ ಕಾರು ಜಾರಿ ಉರುಳುವ ಸಾಧ್ಯತೆ ಇಲ್ಲ. ಅಗ್ನಿ ನಿಯಂತ್ರಣ ವ್ಯವಸ್ಥೆಯಿಂದ ಒಂದೊಮ್ಮೆ ಕಾರು ಅಪಘಾತವಾದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡರೆ ಅದು ಇಂಧನ ಟ್ಯಾಂಕ್‌ಗೆ ವಿಸ್ತರಿಸದಂತೆ ನಿಯಂತ್ರಿಸುವ ವ್ಯವಸ್ಥೆ ಇದಾಗಿದೆ.ಫಿಯೆಟ್ ಕೋಡ್ ಸಿಸ್ಟಂ ಎಂಬ ವ್ಯವಸ್ಥೆಯ ಮೂಲಕ ಪ್ರತಿ ಬಾರಿ ಎಂಜಿನ್ ಶುರುವಾದ ಸಂದರ್ಭದಲ್ಲಿ ಹೊಸ ಬಗೆಯ ಸುರಕ್ಷತಾ ಸಂಖ್ಯೆ ಉತ್ಪಾದಿಸುತ್ತದೆ. ಇದರಿಂದ ಕಾರಿನ ಕಳ್ಳತನ ಅಸಾಧ್ಯ. ಅಪಘಾತದ ಸಂದರ್ಭದಲ್ಲಿ ಅಪಘಾತದ ಪ್ರಮಾಣವನ್ನು ಅರಿತು ಅದಕ್ಕೆ ತಕ್ಕಂತೆ ಏರ್‌ಬ್ಯಾಗ್‌ನ ಗಾತ್ರವನ್ನು ನಿರ್ಧರಿಸಿ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ತಡೆಯುವ ಕ್ರಾಷ್ ಸಿವಿಯಾರಿಟಿ ಆಲ್ಗಾರಿದಂ ವ್ಯವಸ್ಥೆ ಇದರಲ್ಲಿದೆ.ಇದರೊಂದಿಗೆ 4 ಹಾಗೂ 5ನೇ ಗೇರ್‌ನಲ್ಲೂ ಕಡಿಮೆ ವೇಗದಲ್ಲಿ ಚಾಲನೆ ಮಾಡಬಹುದಾಗಿದೆ. ಗ್ರಾಂದೆ ಪುಂಟೊವನ್ನು ಪ್ರತಿ 15 ಸಾವಿರ ಕಿ.ಮೀ.ಗೊಮ್ಮೆ ಸರ್ವೀಸ್‌ಗಾಗಿ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾದ್ದರಿಂದ ಇದರ ನಿರ್ವಹಣೆ ಹೆಚ್ಚು ದುಬಾರಿಯಲ್ಲ. ಪಿಕ್‌ಅಪ್ ಕೊಂಚ ನಿಧಾನವೆನಿಸಿದರೂ, ಹೆದ್ದಾರಿಯಲ್ಲಿ ಇದರ ಓಟಕ್ಕೆ ಹಾಗೂ ಚಾಲನೆಗೆ ಸರಿಸಾಟಿ ಬೇರೊಂದಿಲ್ಲ.ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್‌ಗಳಲ್ಲಿ ಲಭ್ಯವಿರುವ ಗ್ರಾಂದೆ ಪುಂಟೊದಲ್ಲಿ ಸೌಲಭ್ಯಗಳಿಗನುಗುಣವಾಗಿ ಆ್ಯಕ್ಟಿವ್, ಡೈನಾಮಿಕ್, ಎಮೋಷನ್ ಹಾಗೂ ಎಮೋಷನ್ ಪ್ಯಾಕ್ ಎಂಬ ನಾಲ್ಕು ಮಾದರಿಗಳಿವೆ. 1.2 ಲೀ. ಸಾಮರ್ಥ್ಯದ ಪೆಟ್ರೋಲ್ ಎಂಜಿನ್ 68 ಬ್ರೇಕ್ ಅಶ್ವಶಕ್ತಿ ಉತ್ಪಾದಿಸಬಲ್ಲದು. ಅದರಂತೆ 1.4 ಲೀ. ಸಾಮರ್ಥ್ಯದ ಫೈರ್ ಪೆಟ್ರೋಲ್ ಎಂಜಿನ್ 90 ಬ್ರೇಕ್ ಅಶ್ವಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 12 ಕಿ.ಮೀ. ಹಾಗೂ ಹೆದ್ದಾರಿಗಳಲ್ಲಿ 16 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಇದರ ಬೆಲೆ 4.8ರಿಂದ 6.6 ಲಕ್ಷ ರೂಪಾಯಿ (ಎಕ್ಸ್ ಶೋರೂಂ ಬೆಲೆ)1.3 ಲೀ. ಸಾಮರ್ಥ್ಯದ ಮಲ್ಟಿಜೆಟ್ ಡೀಸಲ್ ಎಂಜಿನ್ ವೇರಿಯಬಲ್ ಜಿಯೋಮೆಟ್ರಿ ಟರ್ಬೋಚಾರ್ಜರ್ (ವಿಜಿಟಿ) ಸೌಲಭ್ಯ ಹೊಂದಿದ್ದು, ಎಂಜಿನ್ ಸಾಮರ್ಥ್ಯವನ್ನು ಇದು ಮತ್ತಷ್ಟು ಹೆಚ್ಚಿಸಿದೆ. ಜತೆಗೆ ಇಂಧನ ಕ್ಷಮತೆಯನ್ನೂ ಹೆಚ್ಚಿಸಿದೆ. ನಗರ ಪ್ರದೇಶದಲ್ಲಿ ಪ್ರತಿ ಲೀಟರ್ ಡೀಸಲ್‌ಗೆ 15 ಕಿ.ಮೀ. ಹಾಗೂ ಹೆದ್ದಾರಿಯಲ್ಲಿ ಪ್ರತಿ ಲೀಟರ್‌ಗೆ 21 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಇದರ ಬೆಲೆ 5.6ರಿಂದ 7.2 ಲಕ್ಷ ರೂಪಾಯಿ. 

ಫೋರ್ಡ್ ಫಿಗೊ

ಮಾರುತಿ, ಹ್ಯುಂಡೈ ಕಾರುಗಳಂತೆ ಭಾರತದಲ್ಲಿ ತನ್ನ ಬೇರು ಬಿಡುಲು ಅಮೆರಿಕದ ಫೋರ್ಡ್ ಕಂಪೆನಿಗೆ ನೆರವಾಗಿದ್ದು ಫಿಗೊ ಎಂಬ ಸಣ್ಣ ಕಾರು. ಭಾರತದಲ್ಲಿ 50 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಹೂಡುವ ಮೂಲಕ ವಾರ್ಷಿಕ ಎರಡು ಲಕ್ಷ ಕಾರುಗಳ ತಯಾರಿಕೆಗೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಇದರ ಪ್ರಗತಿಗೆ ಹಿಡಿದ ಕನ್ನಡಿ.ಗ್ರಾಹಕರು ಅಪೇಕ್ಷೆ ಪಡುವ ಬಹುತೇಕ ಸೌಕರ್ಯಗಳನ್ನು ಈ ಸಣ್ಣ ಕಾರಿನಲ್ಲಿ ಅಳವಡಿಸಿರುವ ಫೋರ್ಡ್, ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ನೀಡಿದೆ.ಲೇನ್ ಬದಲಾಯಿಸಲು ಹಿಂಭದಿಯ ವಾಹನಗಳಿಗೆ ಸೂಚನೆ ನೀಡುವ ದೀಪ, ವೇಗಕ್ಕೆ ತಕ್ಕಂತೆ ಮ್ಯೂಸಿಕ್ ಸಿಸ್ಟಂನ ಶಬ್ಧ ಹೆಚ್ಚು ಮಾಡುವ ವ್ಯವಸ್ಥೆ, ಸ್ಮಾರ್ಟ್ ಕೀ, ಇಂಧನ ಖಾಲಿಯಾಗಲು ಇನ್ನೆಷ್ಟು ಕಿಲೋ ಮೀಟರ್ ಚಲಿಸಬೇಕೆಂಬ ಮಾಹಿತಿ, 6 ಸ್ಪೀಡ್ ಇಂಟರ್‌ಮಿಟೆಂಟ್ ವೈಫರ್, ಬ್ಲೂಟೂತ್ ಸಂಪರ್ಕವಿರುವ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಮುಂತಾದವು ಫಿಗೊ ತನ್ನ ಗ್ರಾಹಕರಿಗೆ ನೀಡುವ ಸೌಲಭ್ಯಗಳು.ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್‌ನಲ್ಲಿ ಫೋರ್ಡ್ ಫಿಗೊ ಲಭ್ಯ. ಪೆಟ್ರೋಲ್ ಫಿಗೊನಲ್ಲಿ 1.2 ಲೀ ಎಂಜಿನ್ ಹೊಂದಿದ್ದು, ಗರಿಷ್ಠ 71ಪಿಎಸ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫೋರ್ಡ್ ಕಂಪೆನಿಯ ಅತ್ಯಂತ ಯಶಸ್ವಿ ಡೀಸಲ್ ಎಂಜಿನ್ 1.4 ಲೀ. ಡುರಾಟಾರ್ಕ್ ಅನ್ನು ಫಿಗೊ ಹೊಂದಿದೆ.ಈ ಎಂಜಿನ್ ಈಗಾಗಲೇ ಕಂಪೆನಿಯ ಐಕಾನ್, ಫಿಯೆಸ್ಟಾಗಳಲ್ಲಿ ಅಳವಡಿಸಲಾಗಿದೆ. ಶಕ್ತಿ ಉತ್ಪಾದನೆಯಲ್ಲಿ ಹಾಗೂ ಇಂಧನ ಕ್ಷಮತೆಯಲ್ಲಿ ಈಗಾಗಲೇ ಇದು ತನ್ನ ಸಾಮರ್ಥ್ಯವನ್ನು ತೋರಿಸಿದೆ. ಪೆಟ್ರೋಲ್ ಹಾಗೂ ಡೀಸಲ್ ಎರಡೂ ವಿಭಾಗಗಳಲ್ಲಿ ತಲಾ ನಾಲ್ಕು (ಎಲ್‌ಎಕ್ಸ್‌ಐ, ಇಎಕ್ಸ್‌ಐ, ಝಡ್‌ಎಕ್ಸ್‌ಐ ಹಾಗೂ ಡೈಟಾನಿಯಂ) ಮಾದರಿಗಳಿವೆ.ವಿನ್ಯಾಸದಲ್ಲಿ ಫಿಗೊ ಫೋರ್ಡ್ ಅವರ ಕೈನೆಟಿಕ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸವನ್ನು ಫೋರ್ಡ್ ಆಸ್ಟ್ರೇಲಿಯಾ ಮಾಡಿದೆ. ಫೋರ್ಡ್ ಮಾಂಡಿಯೊ, ಫೋಕಸ್ ಹಾಗೂ ಇತ್ತೀಚೆಗೆ ಯುರೋಪ್‌ನಲ್ಲಿ ಬಿಡುಗಡೆ ಮಾಡಿದ ಫಿಯಾಸ್ಟಾ ವಿನ್ಯಾಸವನ್ನೇ ಇದು ಹೋಲುತ್ತದೆ. 12.65 ಅಡಿ ಉದ್ದ ಇರುವ ಫಿಗೊ ಉತ್ತಮ ಸ್ಥಳಾವಕಾಶ ಹೊಂದಿದೆ.

 

ಮುಂದಿನ ಆಸನವಾಗಲೀ ಅಥವಾ ಹಿಂಬದಿಯ ಆಸನವಾಗಲೀ ಕೂರುವವರಿಗೆ ಹೆಚ್ಚು ಆರಾಮ ನೀಡುತ್ತದೆ. ಡಿಕ್ಕಿ ಜಾಗ ಕೂಡಾ ಅಷ್ಟೇ ವಿಶಾಲವಾಗಿದೆ. ಆದರೆ ನೆಲಮಟ್ಟದಿಂದ ಎತ್ತರ ಕಡಿಮೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಇದರ ಸಂಚಾರಕ್ಕೆ ರಸ್ತೆಯ ಉಬ್ಬು ತಗ್ಗು, ಹಂಪ್‌ಗಳು ಕೆಳ ಭಾಗಕ್ಕೆ ಹೊಡೆಯುವುದು ಮಾಲೀಕರ ಹೊಟ್ಟೆ ಉರಿಸದೇ ಇರದು.ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳು, ಇಬಿಡಿ ಸೌಲಭ್ಯವಿರುವ ಎಬಿಎಸ್, ಕಾರಿನ ಬಾಗಿಲುಗಳು ತೆರೆದಿರುವ ಸೂಚನೆ ಇತ್ಯಾದಿ ಸೌಲಭ್ಯಗಳಿವೆ.ಸೀಕ್ವೆನ್ಷಿಯಲ್ ಎಲೆಕ್ಟ್ರಿಕ್ ಫ್ಯುಯಲ್ ಇಂಜೆಕ್ಷನ್ ವ್ಯವಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ಪೆಟ್ರೋಲ್ ಎಂಜಿನ್ ಐದು ಗೇರ್‌ಗಳನ್ನು ಹೊಂದಿದೆ. ಪೆಟ್ರೋಲ್ ಫಿಗೊ ನಗರ ಪ್ರದೇಶಗಳಲ್ಲಿ ಪ್ರತಿ ಲೀಟರ್‌ಗೆ 12.5 ಕಿ.ಮೀ. ಹಾಗೂ ಹೆದ್ದಾರಿಯಲ್ಲಿ 15.5 ಲೀ. ಇಂಧನ ಕ್ಷಮತೆ ಹೊಂದಿದೆ. ಜತೆಗೆ ಎಂಜಿನ್ ಬಿಎಸ್-4 ಮಾಲಿನ್ಯ ನಿಯಮಾವಳಿಯನ್ನು ಅಳವಡಿಸಿಕೊಂಡಿದೆ. ಸ್ಪರ್ಧಾತ್ಮಕ ಬೆಲೆ ನಿಗಧಿಪಡಿಸಿರುವ ಫೋರ್ಡ್, ಹ್ಯುಂಡೈ ಐ-10ನ ಆರಂಭಿಕ ಬೆಲೆಯನ್ನೇ ನಿಗಧಿಪಡಿಸಿದೆ. ಆರಂಭಿಕ 3.5ರಿಂದ 5 ಲಕ್ಷ ರೂಪಾಯಿಗೆ ಪೆಟ್ರೋಲ್ ಫೋರ್ಡ್ ಲಭ್ಯ.1.4ಲೀ. ಡ್ಯೂರಾಟಾರ್ಕ್ ಡೀಸಲ್ ಎಂಜಿನ್ ಕೂಡಾ ಬಿಎಸ್-4 ಆಗಿದ್ದು,  ಹೆಚ್ಚು ಶಕ್ತಿ ಉತ್ಪಾದಿಸಬಲ್ಲ ಹಾಗೂ ಇಂಧನ ಕ್ಷಮತೆ ನೀಡಬಲ್ಲ ಎಂಜಿನ್ ಆಗಿದೆ. ನಗರ ಪ್ರದೇಶದಲ್ಲಿ ಪ್ರತಿ ಲೀಟರ್ ಡೀಸಲ್‌ಗೆ 14.5 ಕಿ.ಮೀ. ಹಾಗೂ ಹೆದ್ದಾರಿಯಲ್ಲಿ 18.5 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಡೀಸಲ್ ಫಿಗೊ ಆರಂಭಿಕ ಬೆಲೆ 4.8ರಿಂದ 6 ಲಕ್ಷ ರೂಪಾಯಿ.       

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.