ಮಂಗಳವಾರ, ಮೇ 24, 2022
31 °C

ಸಣ್ಣ ಕೈಗಾರಿಕೆ ಆರಂಭಕ್ಕೆ ಏಕಗವಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಕೈಗಾರಿಕೆ ಆರಂಭಕ್ಕೆ ಏಕಗವಾಕ್ಷಿ

ಬೆಂಗಳೂರು: ಪ್ರಸ್ತುತ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಹಲವು ಇಲಾಖೆಗಳಿಂದ ಅನುಮತಿ ಪಡೆಯುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಣ್ಣ ಕೈಗಾರಿಕೆಗಳ ಇಲಾಖೆ ಮುಂದಾಗಿದ್ದು, ಉದ್ಯಮ ಆರಂಭಕ್ಕೆ ಅಗತ್ಯವಾದ ವಿವಿಧ ಅನುಮತಿಗಳನ್ನು ಏಕಗವಾಕ್ಷಿ ಪದ್ಧತಿ ಮೂಲಕ ನೀಡುವ ಪ್ರಕ್ರಿಯೆ ಆರಂಭಿಸಲಿದೆ.ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಇಲಾಖೆ ಸಚಿವ ರಾಜೂ ಗೌಡ ಈ ಭರವಸೆ ನೀಡಿದರು.ಕಾಸಿಯಾ ಅಧ್ಯಕ್ಷ ಪ್ರಕಾಶ್ ರಾಯ್ಕರ್ ಅವರು ಉದ್ಯಮಿಗಳು ಅನುಮತಿ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟಾಗ, ಇದಕ್ಕೆ ಸ್ಪಂದಿಸಿದ ಸಚಿವರು, `ಈ ಎಲ್ಲ ಇಲಾಖೆಗಳ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರುವುದರ ಬಗ್ಗೆ ಚಿಂತನೆ ನಡೆದಿದೆ. ಶೀಘ್ರವೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೊಂದಿಗೆ ಮಾತುಕತೆ ನಡೆಸುತ್ತೇನೆ~ ಎಂದರು.`ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಗೆ ಮಾತ್ರ ಪ್ರಧಾನ ಕಾರ್ಯದರ್ಶಿ ಇದ್ದಾರೆ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಕೆಲಸಗಳು ನಿಧಾನವಾಗುತ್ತಿವೆ. ಆದ್ದರಿಂದ ನಮ್ಮ ಇಲಾಖೆಗೂ ಪ್ರತ್ಯೇಕ ಆಯುಕ್ತರನ್ನು ನೇಮಕ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.`ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳು ನನ್ನ ಅರಿವಿಗೆ ಬಂದಿವೆ. ಸಮಸ್ಯೆಗಳನ್ನು ಪರಿಹರಿಸಲು ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕೈಗಾರಿಕೆಗಳ ಒಟ್ಟಾರೆ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸುತ್ತೇನೆ. ರಾಜ್ಯಗಳಲ್ಲಿ ವ್ಯಾಟ್ ಪ್ರಮಾಣ ಶೇ 2ರಷ್ಟಿದ್ದರೆ ನಮ್ಮಲ್ಲಿ ಶೇ 14ರಷ್ಟಿದೆ.ಇದು ನನ್ನ ಗಮನದಲ್ಲಿದ್ದು, ತೆರಿಗೆ ಪ್ರಮಾಣ ಕಡಿತಗೊಳಿಸಲು ಪ್ರಯತ್ನಿಸುತ್ತೇನೆ. ಕೈಗಾರಿಕೆಗಳಿಗೆ ಪ್ರತ್ಯೇಕವಾಗಿ 400 ಮೆಗಾ ವಾಟ್ ವಿದ್ಯುತ್ ಫೀಡರ್ ಸ್ಥಾಪಿಸುವ ಯೋಜನೆಯೂ ಸರ್ಕಾರದ ಮುಂದಿದೆ~ ಎಂದರು.`ಕೃಷಿ ನಂತರ ಅತಿ ಹೆಚ್ಚು ಜನರು ಸಣ್ಣ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಹಿತರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶಿಷ್ಟ ವಸ್ತುಗಳನ್ನು ಉತ್ಪಾದಿಸುತ್ತಾರೆ.ಉದಾಹರಣೆಗೆ ಮಂಗಳೂರಿನಲ್ಲಿ ರಬ್ಬರ್, ಚಿತ್ರದುರ್ಗದಲ್ಲಿ ಬಟ್ಟೆಯನ್ನು ತಯಾರಿಸಲಾಗುತ್ತಿದೆ. ಈ ವಸ್ತುಗಳನ್ನು ಸರ್ಕಾರದ ವಿವಿಧ ಇಲಾಖೆಗಳೇ ಖರೀದಿಸಿ ಪ್ರೋತ್ಸಾಹಿಸಬೇಕು~ ಎಂದರು.`ಸಾರಿಗೆ ಸಂಸ್ಥೆಯ ಬಸ್ ಚಕ್ರಗಳ ರಿಮೌಲ್ಡ್‌ಗಳಿಗೆ ಅನ್ಯ ರಾಜ್ಯಗಳಿಂದ ತರಿಸಿದ ರಬ್ಬರ್‌ಗಳನ್ನು ಉಪಯೋಗಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವ ಆರ್.ಅಶೋಕ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ತಯಾರಾಗುವ ರಬ್ಬರ್ ಬಳಕೆ ಮಾಡಲು ವಿನಂತಿಸುತ್ತೇನೆ. ಅಲ್ಲದೆ, ಸಣ್ಣ ಕೈಗಾರಿಕೆಗಳು ಉತ್ಪಾದಿಸುತ್ತಿರುವ ಬಟ್ಟೆಗಳನ್ನು ವಿವಿಧ ಸರ್ಕಾರಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ಖರೀದಿಸುವಂತೆ ಸಮಾಜ ಕಲ್ಯಾಣ ಸಚಿವರಲ್ಲಿಯೂ ಮನವಿ ಮಾಡುತ್ತೇನೆ~ ಎಂದರು.`ಅ.ಆ.ಇ.ಈ. ಕಲಿಯುತ್ತಿದ್ದೇನೆ~!

`ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲಷ್ಟೇ ಇಲಾಖೆಯ ಬಗ್ಗೆ ಅ.ಆ.ಇ.ಈ. ಕಲಿಯುತ್ತಿದ್ದೇನೆ. ನೀವೆಲ್ಲ ಇದರಲ್ಲಿ ಮಾಸ್ಟರ್ ಡಿಗ್ರಿ ಪಡೆದವರು. ಆದ್ದರಿಂದ ನಿಮ್ಮ ಮಾರ್ಗದರ್ಶನ ಅಗತ್ಯ...~ಸಣ್ಣ ಕೈಗಾರಿಕೆಗಳ ಸಚಿವ ರಾಜೂ ಗೌಡ ಅವರು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡಿದ್ದು ಹೀಗೆ.

`ಕಾಸಿಯಾ~ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇಲಾಖೆಯಲ್ಲಿ ಎಷ್ಟೊಂದು ಸಮಸ್ಯೆಗಳು ಇವೆಯಲ್ಲಾ ಎಂದು ಮೊದಲು ವಿಷಾದವಾಯಿತು. ಆದರೆ ಹಲವು ಸಮಸ್ಯೆಗಳು ಇದ್ದಾಗಲಷ್ಟೇ ಅವುಗಳನ್ನು ಪರಿಹರಿಸುವ ಶಕ್ತಿಯೂ ಬರುತ್ತದೆ ಎಂಬ ಮಾತಿನಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ~ ಎಂದರು.ಕಾಸಿಯಾ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಮುಂದಿಟ್ಟ ಎಲ್ಲ ಬೇಡಿಕೆಗಳಿಗೂ, `ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ~ ಎಂದು ಸಚಿವರು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.