ಶನಿವಾರ, ಮೇ 8, 2021
27 °C

ಸಣ್ಣ ಘಟನೆಗೆ ಒಡೆದ ಮನಸು....

ಪ್ರಜಾವಾಣಿ ವಾರ್ತೆ ಉದಯ. ಯು Updated:

ಅಕ್ಷರ ಗಾತ್ರ : | |

ಹಾಸನ: ಅರಕಲಗೂಡು ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಎಲ್ಲವೂ ಹಳೆಯದರಂತೆಯೇ ಇದೆ. ಆದರೆ ಮನಸ್ಸುಗಳು ಒಡೆದಿವೆ. ವರ್ಷದ ಹಿಂದೆ ನಡೆದ ಒಂದು ಸಣ್ಣ ಘಟನೆ ಇಡೀ ಊರನ್ನು `ದಲಿತರು ಮತ್ತು ಮೇಲ್ವರ್ಗದವರು~ ಎಂದು ವಿಂಗಡಿಸಿಬಿಟ್ಟಿದೆ.ಸರಿಸುಮಾರು ಒಂದು ವರ್ಷದ ಹಿಂದೆ ದಲಿತರಿಗೆ   ಬಹಿಷ್ಕಾರ ಹೇರಿದ್ದಾರೆ ಎಂದು  ಹೋರಾಟ ಮಾಡಿದವರು, ಬಂದು ಹತ್ತು ಹಲವು ಭರವಸೆಗಳನ್ನು ನೀಡಿದ್ದ ಅಧಿಕಾರಿಗಳು, ಸಚಿವರು ಎಲ್ಲರೂ ಊರನ್ನು ಮರೆತಿದ್ದಾರೆ. ಈಗ ಅದೇ ಒಂಬತ್ತು ದಲಿತ ಕುಟುಂಬಗಳು ಮತ್ತು ಮೇಲ್ವರ್ಗದ ಜನರು ಅಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಹಿಂದಿನಂತೆ ಕಷ್ಟ ಸುಖಗಳಲ್ಲಿ ಒಂದಾಗುತ್ತಿಲ್ಲ. `ನಿಮ್ಮ ಬದುಕು ನಿಮಗೆ ನಮ್ಮದು ನಮಗೆ~ ಎಂದು ನಿರ್ಲಿಪ್ತರಾಗಿದ್ದಾರೆ.ಕಳೆದ ವರ್ಷ ಯುಗಾದಿ ದಿನದಂದು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ದೇವರನ್ನು ದಲಿತರ ಕೇರಿಯಲ್ಲಿ ಒಯ್ಯುವಾಗ ಒಂದು ಮನೆಯಿಂದ ಹಣ್ಣು-ಕಾಯಿ ಸ್ವೀಕರಿಸಿಲ್ಲ ಎಂಬುದು ನೆಪ. ಒಂದು ವರ್ಗದವರು ಇದನ್ನು ದಲಿತರಿಗೆ ಬಹಿಷ್ಕಾರ ಎಂದು ವರ್ಣಿಸಿದರೆ ಮೇಲ್ವರ್ಗದವರು, `ಆ ಮನೆಯಲ್ಲಿ ವೃದ್ಧೆಯೊಬ್ಬಳು ಅದೇ ದಿನ ತೀರಿಕೊಂಡಿದ್ದರು. ಸೂತಕದ ಮನೆಯಲ್ಲಿ ಸಾಮಾನ್ಯವಾಗಿ ಪೂಜೆ ಮಾಡುವುದಿಲ್ಲ. ಇದು ಸಂಪ್ರದಾಯ~ ಎಂದು ವಾದಿಸಿದರು. ಆದರೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅಧಿಕಾರಿಗಳು, ಕೊನೆಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರೇ ಗ್ರಾಮಕ್ಕೆ ಭೇಟಿನೀಡಿ ಹತ್ತು ಹಲವು `ಭರವಸೆ~ಗಳನ್ನು ಕೊಡಬೇಕಾಯಿತು.ಊರಿನ ಈಗಿನ ಸ್ಥಿತಿ ಹಲವು ಕತೆಗಳನ್ನು ಹೇಳುತ್ತಿದೆ. ಊರ ದೇವಸ್ಥಾನದಲ್ಲಿ ಆ ಘಟನೆಯ ನಂತರ ಜಾತ್ರೆಯೇ ನಡೆದಿಲ್ಲ. ಮೇಲ್ವರ್ಗದ ಕೆಲವರು ತಮ್ಮ ಜಮೀನಿನ ಒಂದು ಭಾಗವನ್ನು ದಲಿತರಿಗೆ ಗೇಣಿಯಾಗಿ ನೀಡುತ್ತಿದ್ದರು.ಈಗ ಆ ಸಂಪ್ರದಾಯ ನಿಂತಿದೆ. ಅಗತ್ಯ ಎನಿಸಿದರೆ ಪಕ್ಕದ ಊರಿನವರಿಗೆ ಕೊಡುತ್ತಾರೆ. ಕುಳವಾಡಿಕೆಗೆ ದಲಿತರು ಹೋಗುತ್ತಿಲ್ಲ, ಮೇಲ್ವರ್ಗದವರು ಕರೆಯುತ್ತಿಲ್ಲ. ಘಟನೆಯ ಬಳಿಕ ಏಳು ದಲಿತ ಕುಟುಂಬದವರಿಗೆ ತಲಾ 25ಸಾವಿರ ರೂಪಾಯಿ ಪರಿಹಾರ ಬಂದಿರುವುದನ್ನು ಬಿಟ್ಟರೆ ಬೇರೇನೂ ಸುಧಾರಣೆ ಆಗಿಲ್ಲ. `ಇರುವ ಅರ್ಧ ಅಥವಾ ಒಂದೆಕರೆ ಭೂಮಿಯನ್ನೇ ಆಶ್ರಯಿಸಿ ನಾವು ಬದುಕಬೇಕು. ಕೂಲಿ ಮಾಡಬೇಕಾದರೆ ಬೇರೆ ಗ್ರಾಮಕ್ಕೆ ಹೋಗಬೇಕು~ ಎಂದು ದಲಿತ ಕೇರಿಯ ದೇವಮ್ಮ ಹಾಗೂ ಶಾಂತಮ್ಮ ನುಡಿಯುತ್ತಾರೆ.ಭರವಸೆಗಳ ಮಹಾಪೂರ

`ಬಹಿಷ್ಕಾರ~ ಪ್ರಕರಣ ನಡೆದ ಬಳಿಕ ಹಲವು ಶಾಂತಿ ಸಭೆಗಳು ನಡೆದರೂ ಪ್ರಕರಣ ಇತ್ಯರ್ಥವಾಗಲಿಲ್ಲ. ಕೊನೆಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರೇ ಗ್ರಾಮಕ್ಕೆ ಹೋಗಿ ಭರವಸೆಗಳ ಮಹಾಪೂರ ಹರಿಸಿದರು. `ಈ ಊರನ್ನು ಯಾವತ್ತೂ ಮರೆಯುವುದಿಲ್ಲ, ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಬದ್ಧನಾಗಿದ್ದೇನೆ~ ಎಂದರು. ಗ್ರಾಮಸ್ಥರು ಈ ಕಾರಣದಿಂದಲಾದರೂ ಗ್ರಾಮ ಉದ್ಧಾರವಾಗುತ್ತದೆ ಎಂದು ನಂಬಿದರು.ದಲಿತರ ಕೇರಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸುತ್ತೇವೆ, ಎಲ್ಲ ದಲಿತರಿಗೆ ಆಶ್ರಯ ಮನೆಗಳನ್ನು ಕೊಡುತ್ತೇನೆ, ಹಳೆಯ, ಶಿಥಿಲವಾಗಿರುವ ಮನೆಗಳನ್ನು ಕೆಡವಿ ಬೇರೆ ಮನೆ ಕಟ್ಟಿ ಕೊಡುತ್ತೇವೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಎಲ್ಲ ಅನುಕೂಲ ನೀಡಲು ಕ್ರಮ ಕೈಗೊಳ್ಳುತ್ತೇನೆ, ಗ್ರಾಮದ ರಸ್ತೆಗಳನ್ನು ಸುಧಾರಿಸುತ್ತೇನೆ, ಊರಿಗೆ ಸೇರಿದ ಬಸವೇಶ್ವರ ದೇವಸ್ಥಾನ ಹಳೆಯ ದಾಗಿದ್ದು, ದುರಸ್ತಿ ಮಾಡಬೇಕಾಗಿದೆ. ಮುಂದಿನ ಮಂಗಳವಾರ ಗ್ರಾಮದ ಒಂದಿಬ್ಬರು ಬೆಂಗಳೂರಿಗೆ ಬಂದರೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣ ಕೊಡುತ್ತೇನೆ... ಮುಂತಾದ ಭರವಸೆಗಳು ಸಚಿವರಿಂದ ಬಂದವು.ಈಗ ಗ್ರಾಮಕ್ಕೆ ಹೋಗಿ ನೋಡಿದರೆ ಅವುಗಳಲ್ಲಿ ಒಂದೂ ಈಡೇರಿಲ್ಲ. ದಲಿತ ಕೇರಿಗಳಲ್ಲೇ ಬಿ.ಎ., ಡಿ.ಇಡಿ ಆಗಿರುವ ಯುವಕ ಯುವತಿಯರಿದ್ದಾರೆ. ಇನ್ನೂ ಉದ್ಯೋಗ ಸಿಕ್ಕಿಲ್ಲ. ಹೊಸ ಕೊಳವೆ ಬಾವಿಯ ಮಾತಿರಲಿ, ಇದ್ದ ಕೊಳವೆ ಬಾವಿಗಳಲ್ಲೂ ನೀರಿಲ್ಲ. ಮೂರು ದಿನಕ್ಕೊಮ್ಮೆ ನೀರು ಬರುತ್ತಿದೆ. ಆಶ್ರಯ ಮನೆ ನೀಡಿಲ್ಲ. ದೇವಸ್ಥಾನ ದುರಸ್ತಿಯ ಮಾತಿರಲಿ, ಯುಗಾದಿ, ಬಸವಜಯಂತಿಗಳಂದು ಆಗುತ್ತಿದ್ದ ಉತ್ಸವವೂ ನಿಂತಿದೆ.ಸಚಿವರ ಭರವಸೆಯನ್ನು ನಂಬಿ ಗ್ರಾಮಸ್ಥರು ಅಧಿಕಾರಿಗಳ ಸಹಾಯದಿಂದ 98 ಲಕ್ಷ ರೂಪಾಯಿಯ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡು ಬೆಂಗಳೂರಿಗೆ ಹೋಗಿ ಬಂದಿದ್ದಾರೆ. ಕೆ.ಎಸ್. ಮಂಜುನಾಥ್ ಎಂಬುವವರು ವಿಧಾನಸೌಧಕ್ಕೆ ಹೋಗಿ ಬಂದಿದ್ದಷ್ಟೇ ಬಂತು. ಗ್ರಾಮದ ಸ್ಥಿತಿಯಲ್ಲಿ ಏನೂ ಸುಧಾರಣೆ ಆಗಿಲ್ಲ.ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ `ಬಹಿಷ್ಕಾರಕ್ಕೆ ಒಳಗಾದ ದಲಿತ ಕಾಲೋನಿಗೆ ರಸ್ತೆ ಮತ್ತು ಚರಂಡಿ ಕಾಮಗಾರಿ~ಗಾಗಿ 7.80 ಲಕ್ಷ ರೂಪಾಯಿಯ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಒಂದು ಅಂಗಳಕ್ಕೆ ಇತ್ತೀಚೆಗೆ ಕಾಂಕ್ರೀಟ್ ಹಾಕಿದ್ದಾರೆ. ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಒಟ್ಟು 1.25 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಿಷ್ಟು ಒಂದು ವರ್ಷದಲ್ಲಿ ಕೆರಗೋಡಿನ ದಲಿತ ಕೇರಿಯಲ್ಲಿ ಆಗಿರುವ ಅಭಿವೃದ್ಧಿ.ಇಷ್ಟೆಲ್ಲ ಅನುಭವಿಸಿದ ಮೇಲೆ  `ಯಾರದೊ ಮಾತು ಕೇಳಿ ದುಡಿಕಿದೆವೇನೋ~ ಎಂಬ ಭಾವನೆ ಈಗ ಎರಡೂ ವರ್ಗದವರನ್ನು ಕಾಡುತ್ತಿದೆ. `ದಲಿತರು ಮತ್ತು ಮೇಲ್ವರ್ಗದವರು ಎಂಬ ಭಾವನೆ ಗ್ರಾಮದಲ್ಲಿ ಇದ್ದರೂ, ಜತೆಯಾಗಿ ಹೊಂದಿಕೊಂಡು ಹೋಗುತ್ತಿದ್ದೆವು. ಹಿಂದೆಯೂ ನಾವು ಜಗಳ ಆಡಿದವರಲ್ಲ, ಮುಂದೆಯೂ ಆಗಲ್ಲ.ಸಣ್ಣ ಘಟನೆಯೊಂದಕ್ಕೆ ಬೇರೆ ರೂಪ ಕೊಟ್ಟು ಯಾರೋ ಎತ್ತಿಕಟ್ಟಿ ಜಗಳವಾಡಿಸಿದರು. ಈಗ ಎರಡೂ ಕಡೆಯವರ ಮನಸ್ಸು ಹುಳಿಯಾಗಿದೆ. ಗ್ರಾಮಕ್ಕೆ ಇದು ಒಳ್ಳೆಯದಲ್ಲ~ ಎಂದು ಎರಡೂ ವರ್ಗದವರು ಒಳಗೊಳಗೆ ಕೊರಗುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.