ಭಾನುವಾರ, ಮಾರ್ಚ್ 7, 2021
28 °C
ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ

ಸತತ ಮೂರನೇ ಸಲ ಫೈನಲ್‌ಗೆ ಶ್ರೀಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತತ ಮೂರನೇ ಸಲ ಫೈನಲ್‌ಗೆ ಶ್ರೀಕಾಂತ್

ಲಖನೌ (ಐಎಎನ್ಎಸ್): ಆತಿಥೇಯ ಭಾರತದ ಬ್ಯಾಡ್ಮಿಂಟನ್ ಪ್ರಿಯರಿಗೆ ಶನಿವಾರ ಖುಷಿಯ ದಿನವಾಯಿತು. ಕಿದಂಬಿ ಶ್ರೀಕಾಂತ್  ಅಭಿಮಾನಿಗಳ ಭರವಸೆ ಉಳಿಸಿಕೊಂಡರು.ಸೈಯದ್ ಮೋದಿ ಅಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ ಷಿಪ್‌ನಲ್ಲಿ ಅವರು ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸತತ ಮೂರನೇ ಬಾರಿಗೆ  ಫೈನಲ್‌ಗೆ ಲಗ್ಗೆ ಇಡುವ ಮೂಲಕ ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಮತ್ತು ಪುರುಷರ ವಿಭಾಗದಲ್ಲಿ ಪಿ. ಕಶ್ಯಪ್ ಅವರ ಸೋಲಿನ ನಂತರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಆತಿಥೇಯ ತಂಡದ ಏಕೈಕ ಭರವಸೆಯ ಆಟಗಾರರಾಗಿದ್ದರು.ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್  21–14, 21–7 ರಿಂದ ಥಾಯ್ಲೆಂಡ್‌ ಆಟಗಾರ ಬೂನ್‌ಸಾಕ್ ಪೊನ್ಸಾನಾ ವಿರುದ್ಧ ಗೆದ್ದರು. ಶ್ರೀಕಾಂತ್ 32 ನಿಮಿಷಗಳ ಪಂದ್ಯದಲ್ಲಿ  ಎದುರಾಳಿಗೆ ಸೋಲಿನ ರುಚಿ ತೋರಿಸಿದರು.ಗುಂಟೂರಿನವಾರದ ಶ್ರೀಕಾಂತ್ ಕಳೆದ ಎರಡು ಬಾರಿಯೂ ಈ ಟೂರ್ನಿಯ ಫೈನಲ್‌ ತಲುಪಿದ್ದರು.  ಶನಿವಾರದ ಸೆಮಿಫೈನಲ್‌ನಲ್ಲಿ ಅವರು ತಮ್ಮ ಎದುರಾಳಿಗೆ ಹೆಚ್ಚು ಅವಕಾಶವನ್ನೇ ನೀಡಲಿಲ್ಲ.  22 ವರ್ಷದ ಶ್ರೀಕಾಂತ್ ಮೊದಲ ಸೆಟ್‌ನ ಆರಂಭದಿಂದಲೇ ತಮ್ಮ ಪ್ರಾಬಲ್ಯ ಮೆರೆದರು.  11–6ರಿಂದ ಮುನ್ನಡೆ ಪಡೆದಿದ್ದ ಸಂದರ್ಭದಲ್ಲಿ ಅವರು ಸತತ ಐದು ಪಾಯಿಂಟ್‌ಗಳನ್ನು  ಗಳಿಸಿ 16–6ಕ್ಕೆ ಮುನ್ನಡೆಯನ್ನು ಹಿಗ್ಗಿಸಿಕೊಂಡರು.ವಿಶ್ವಶ್ರೇಯಾಂಕ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿರುವ ಪೊನ್ಸಾನ್ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಅದಕ್ಕೆ ಶ್ರೀಕಾಂತ್ ಅವಕಾಶವನ್ನೇ ನೀಡಲಿಲ್ಲ. 9ನೇ ರ‍್ಯಾಂಕ್ ಆಟಗಾರ ಶ್ರೀಕಾಂತ್ ಮೊದಲ ಸೆಟ್‌ನಲ್ಲಿ 21–14ರಿಂದ ಜಯಿಸಿದರು. ಎರಡನೇ ಸೆಟ್‌ನಲ್ಲಿಯಂತೂ ಶ್ರೀಕಾಂತ್ ಅಕ್ಷರಶಃ ಆಕ್ರಮಣಕಾರಿ ಆಟಕ್ಕೆ ಇಳಿದರು. ಒಟ್ಟು 28 ಪಾಯಿಂಟ್‌ಗಳಲ್ಲಿ 21 ಶ್ರೀಕಾಂತ್ ಪಾಲಾಗಿದ್ದು ಅವರ ಬಿರುಸಿನ ಆಟಕ್ಕೆ ಸಾಕ್ಷಿಯಾಗಿತ್ತು. ಅವರ  ಮಿಂಚಿನ ಸ್ಮ್ಯಾಷ್‌ಗಳಿಗೆ ಥಾಯ್ಲೆಂಡ್ ಆಟಗಾರನ ಬಳಿ ಉತ್ತರವೇ ಇರಲಿಲ್ಲ. ಅಲ್ಲದೇ ಅವರ ಚುರುಕಿನ ಸರ್ವ್‌ಗಳು ಹೆಚ್ಚು ಅಂಕಗಳನ್ನು ತಂದುಕೊಟ್ಟವು. ಇಡೀ ಸೆಟ್‌ನಲ್ಲಿ ಬೂನ್ಸಾಕ್‌ಗೆ ಏಳು ಪಾಯಿಂಟ್‌ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.  ಜ್ವಾಲಾ–ಅಶ್ವಿನಿಗೆ ನಿರಾಸೆ

ಮಹಿಳೆಯರ ಡಬಲ್ಸ್‌ನಲ್ಲಿ ಆತಿಥೇ ಯ ತಂಡದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಸೆಮಿ ಫೈನಲ್‌ನಲ್ಲಿ ಸೋಲು ಅನುಭವಿಸಿತು. ಜ್ವಾಲಾ–ಅಶ್ವಿನಿ ಜೋಡಿಯು 14–21, 16–21ರಿಂದ ದಕ್ಷಿಣ ಕೊರಿಯಾದ ಜೋಡಿ ಜುಂಗ್ ಕಿಯುಂಗ್ ಯುನ್ ಮತ್ತು ಶಿನ್ ಸಿಯುಂಗ್ ಚಾನ್ ವಿರುದ್ಧ ಪರಾಭವಗೊಂಡರು. ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಭಾರತದ ಪ್ರಣವ್ ಚೋಪ್ರಾ–ಅಕ್ಷಯ್ದೇ ವಳಕರ್ ಅವರು ದಕ್ಷಿಣ ಕೋರಿಯಾದ ಕಿಮ್ ಜಿ ಜುಂಗ್ –ಕಿಮ್ ಸಾ ರಂಗ್ ವಿರುದ್ಧ ಆಡಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.