ಮಂಗಳವಾರ, ಮಾರ್ಚ್ 2, 2021
31 °C

ಸತತ 8 ಗೆಲುವು: ನಂತರ ಬರೀ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತತ 8 ಗೆಲುವು: ನಂತರ ಬರೀ ಸೋಲು

ಬೆಳಗಾವಿ: ಇದು 1996ರ ಚುನಾವಣೆ ಸಂದರ್ಭ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಕಾಂಗ್ರೆಸ್‌­ನಿಂದ ಆಯ್ಕೆಯಾಗಿದ್ದ ಬಿ. ಶಂಕರಾನಂದ 8ನೇ ಸಲವೂ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಆದರೆ ವಿರೋಧಿ­ಗಳೆಲ್ಲ ಒಳ ಒಳಗೆ ಒಂದಾಗಿ ಹೇಗಾದರೂ ಮಾಡಿ ಅವರನ್ನು ಸೋಲಿಸಲೇ ಬೇಕು ಎಂದು ರಣತಂತ್ರ ರೂಪಿಸಿದ್ದರು.ಇದಕ್ಕೆ ಪೂರಕವಾಗಿ ರಾಮಕೃಷ್ಣ ಹೆಗಡೆ ಅವರು ಕ್ಷೇತ್ರಕ್ಕೆ ಹೊಸ ಮುಖವಾದ ರತ್ನಮಾಲಾ ಸವಣೂರ ಅವರನ್ನು ಜನತಾದಳದ ಅಭ್ಯರ್ಥಿಯಾಗಿ ಜನರ ಮುಂದೆ ತಂದು ನಿಲ್ಲಿಸಿ­ದರು. ನಿಪ್ಪಾಣಿಯವರಾದ ಈ ಸಾಮಾನ್ಯ ಮಹಿಳೆ 1.12 ಲಕ್ಷ ಮತಗಳ ಅಂತರದಿಂದ ಶಂಕರಾನಂದ ಅವರನ್ನು ಸೋಲಿಸಿ ರಾಜಕೀಯ ದಿಗ್ಗಜರನ್ನೆಲ್ಲ ಬೆರಗುಗೊಳಿಸಿದ್ದರು. ‘ರಾಜಕೀಯ ಪಾಳೇಗಾರಿಕೆ’ಗೆ ಹೆಸರಾಗಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬದಲಾವಣೆಯ ಗಾಳಿ ಬೀಸಿತ್ತು.‘ರಾಯಬಾಗದ ಹುಲಿ’ ಎಂದೇ ಹೆಸರಾಗಿದ್ದ ವಿ.ಎಲ್‌. ಪಾಟೀಲರು 62ರ ಚುನಾವಣೆಯಲ್ಲಿ ಇಲ್ಲಿಂದಲೇ ಗೆದ್ದಿ­ದ್ದರು. ಇದು 1967ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾದ ಬಳಿಕ ರಾಜ್ಯ ರಾಜಕಾರಣಕ್ಕೆ ವಾಪಸಾದರು. ತಮ್ಮ ಶಿಷ್ಯನಾದ ಶಂಕರಾನಂದ ಅವರಿಗೆ ಕ್ಷೇತ್ರವನ್ನು ಬಿಟ್ಟು­ಕೊಟ್ಟರು. ಪಾಟೀಲರ ನೆರಳಿನಲ್ಲಿ ಬೆಳೆದ ಶಂಕರಾನಂದರು ಅಲ್ಲಿಂದ ಗೆಲುವಿನ ನಾಗಾಲೋಟ ಆರಂಭಿಸಿದರು. ಇಂದಿರಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರು.ಕಾಂಗ್ರೆಸ್‌ ಪಕ್ಷ ಈ ಕ್ಷೇತ್ರದಲ್ಲಿ ಇದುವರೆಗೆ ನಡೆದ 15 ಚುನಾವಣೆಗಳ ಪೈಕಿ 9 ಸಲ ಶಂಕರಾನಂದ ಅವರನ್ನೇ ಕಣಕ್ಕೆ ಇಳಿಸಿತ್ತು. 1967ರಿಂದ 1991ರವರೆಗೆ ಅವರು ಸತತ ಏಳು ಬಾರಿ (29 ವರ್ಷ) ಸಂಸದರಾದರು. ಇಂದಿರಾ, ರಾಜೀವ್‌ ಹಾಗೂ ಪಿ.ವಿ. ನರಸಿಂಹರಾವ್‌ ಸಂಪುಟದಲ್ಲಿ ಮಾನವ ಸಂಪನ್ಮೂಲ, ಜಲಸಂಪನ್ಮೂಲ, ಪೆಟ್ರೋಲಿಯಂ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಖಾತೆಗಳ ಸಚಿವರಾದರು. ಅಲ್ಲದೇ ‘ಬೊಫೋರ್ಸ್‌’ ಲಂಚ ಹಗರಣದ ತನಿಖೆ ನಡೆಸಲು ನೇಮಕಗೊಂಡಿದ್ದ ಜಂಟಿ ಸದನ ಸಮಿತಿ (ಜೆಪಿಸಿ) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.ರಾಜಕಾರಣದಲ್ಲಿ ಶಂಕರಾನಂದ ಅವರು ಗುರುವನ್ನೂ ಮೀರಿ ಮಿನುಗತೊಡಗಿದರು. ಹೀಗಾಗಿ 80ರ ದಶಕದಲ್ಲಿ ವಿ.ಎಲ್‌. ಪಾಟೀಲ ಮತ್ತು ಶಂಕರಾನಂದ ನಡುವೆ ಭಿನ್ನಾಭಿ­ಪ್ರಾಯ ಮೂಡಿತು. ರಾಜಕೀಯವಾಗಿ ಪ್ರಬಲವಾಗಿದ್ದ ಪಾಟೀಲರು ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡರು. ಅದರ ಪರಿಣಾಮ, 1984ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಎದುರು ಶಂಕರಾನಂದ ಗೆದ್ದದ್ದು ಕೇವಲ 3,646 ಮತಗಳ ಅಂತರದಿಂದ.1996ರಲ್ಲಿ ಮೊದಲ ಸಲ ಸೋತ ಅವರಿಗೆ 1998ರ ಚುನಾವಣೆಯಲ್ಲಿ ಮತ್ತೆ ಸೋಲಿನ ಪೆಟ್ಟು ಬಿತ್ತು. 1999 ರಲ್ಲಿ ತಮ್ಮ ಪುತ್ರ ಪ್ರದೀಪಕುಮಾರ ಕಣಗಲಿ ಅವರನ್ನು ಕಣಕ್ಕೆ ಇಳಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದಿನಿಂದ ಇದುವರೆಗೂ ಇಲ್ಲಿ ಕಾಂಗ್ರೆಸ್‌ ಪುನಃ  ತಲೆ ಎತ್ತಲು ಸಾಧ್ಯವಾಗಿಲ್ಲ.ಹ್ಯಾಟ್ರಿಕ್‌ ಜಿಗಜಿಣಗಿ: ಈ ಕ್ಷೇತ್ರದಲ್ಲಿ 1998ರವರೆಗೆ ಬಿಜೆಪಿ ಸಾಧನೆ ಹೇಳಿಕೊಳ್ಳುವಷ್ಟು ಇರಲಿಲ್ಲ. ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿ­ಕೊಂಡಿತು. ಹೀಗಾಗಿ ವಿಜಾಪುರದಿಂದ ಇಲ್ಲಿಗೆ ವಲಸೆ ಬಂದು ಲೋಕಶಕ್ತಿಯಿಂದ ಕಣಕ್ಕೆ ಇಳಿದ ರಮೇಶ ಜಿಗಜಿಣಗಿ ಸಂಸದರಾದರು. ನಂತರ 1999ರಲ್ಲಿ ಜೆಡಿಯು ಹಾಗೂ 2004­ರಲ್ಲಿ ಬಿಜೆಪಿಯಿಂದ ಗೆಲ್ಲುವ ಮೂಲಕ ‘ಹ್ಯಾಟ್ರಿಕ್‌’ ಸಾಧಿಸಿದರು. ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ 2009ರಲ್ಲಿ ಚಿಕ್ಕೋಡಿ­ ಸಾಮಾನ್ಯ ಕ್ಷೇತ್ರವಾಯಿತು. ಹೀಗಾಗಿ ಜಿಗಜಿಣಗಿ ತವರಿಗೆ ಮರಳಿ ವಿಜಾಪುರದಿಂದ ಗೆಲುವಿನ ಓಟ ಆರಂಭಿಸಿದರು.ಸಕ್ಕರೆ ಲಾಬಿ: ಸಕ್ಕರೆ ಕಾರ್ಖಾನೆಗಳ ಲಾಬಿ ಬಲವಾಗಿರುವ ಚಿಕ್ಕೋಡಿ ಕ್ಷೇತ್ರವು ರಾಜಕೀಯ ಪಾಳೇಗಾರಿಕೆಗೂ ಹೆಸರಾ­ಗಿದೆ. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ತಮ್ಮ ಸುತ್ತಲಿನ ವಿಧಾನಸಭಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿರುವುದು ವಿಶೇಷ. ಈ ಹಿಂದೆ ರಾಯಬಾಗ, ಚಿಕ್ಕೋಡಿ, ಹುಕ್ಕೇರಿಯಲ್ಲಿ ವಿ.ಎಲ್‌. ಪಾಟೀಲರದ್ದೇ ಕೊನೆ ಮಾತಾ­ಗಿತ್ತು. ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ

ಏಳು ಬಾರಿ ಆಯ್ಕೆ­ಯಾಗಿರುವ, ಜನತಾ ಪರಿವಾರ ಮೂಲದಿಂದ ಬಂದ ಉಮೇಶ ಕತ್ತಿ ಅವರ ಪ್ರಭಾವವೂ ಈಗ ಇಲ್ಲಿ ಜೋರಾಗಿಯೇ ಇದೆ.2008ರಲ್ಲಿ ಬಿಜೆಪಿ ಸೇರಿ ಸಚಿವರಾದ ಕತ್ತಿ, 2009ರಲ್ಲಿ ಸಹೋದರ ರಮೇಶ ಕತ್ತಿಗೆ ಪಕ್ಷದ ಟಿಕೆಟ್‌ ಕೊಡಿಸಿದರು. ಪ್ರಬಲ ಎದುರಾಳಿಯಾಗಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಸ್ಪರ್ಧಿಸಿದ್ದರು. ಆದರೆ, ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬ­ವನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸಲು ಅನುಕೂಲ­ವಾಗಲಿ ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ನಡೆದ ಒಳ ಒಪ್ಪಂದದಿಂದಾಗಿ ರಮೇಶ ಕತ್ತಿ ಗೆಲುವು ಕಂಡರು ಎನ್ನುವುದು ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.ಕರ್ನಾಟಕ ಏಕೀಕರಣದ ಪೂರ್ವದಲ್ಲಿ ಮುಂಬೈ ರಾಜ್ಯದಲ್ಲಿದ್ದ ಈ ಭಾಗವು ‘ಬೆಳಗಾವಿ ಉತ್ತರ’ ಲೋಕಸಭೆ ಕ್ಷೇತ್ರವಾಗಿತ್ತು. ಇಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಲವಂತ ನಾಗೇಶ ದಾತಾರ ಕಾಂಗ್ರೆಸ್‌ನಿಂದ ಆಯ್ಕೆ­ಯಾಗಿದ್ದರು. ‘ಚಿಕ್ಕೋಡಿ’ ಎಂಬ ಹೆಸರು ಬಂದ ಬಳಿಕ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದಿಂದ ಡಿ.ಎ. ಕಟ್ಟಿ ಆಯ್ಕೆಯಾದರು.1967ರಿಂದ 2004ರ ವರೆಗೆ ಈ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಇದುವರೆಗೆ ನಡೆದ 15 ಲೋಕಸಭಾ ಚುನಾವಣೆಗಳಲ್ಲಿ 12 ಬಾರಿ ದಲಿತರು ಹಾಗೂ ಒಂದೊಂದು ಅವಧಿಗೆ ಬ್ರಾಹ್ಮಣ, ಕುರುಬ, ಲಿಂಗಾಯತರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.