ಶನಿವಾರ, ಮೇ 28, 2022
26 °C

ಸತ್ಕಾರ್ಯಗಳಿಗೆ ಶಿವಸ್ಮರಣೆ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ‘ಶಿವನಾಮ ಸ್ಮರಣೆಗೆ ಅತ್ಯಂತ ಮಹತ್ವವಿದೆ. ಇದು ನಿತ್ಯದ ಸ್ಮರಣೆಯಾಗಬೇಕು. ಇದರಿಂದ ಸಾತ್ವಿಕ ಕೆಲಸಗಳಿಗೆ ಪ್ರೇರಣೆ ದೊರೆಯುತ್ತದೆ’ ಎಂದು ಸಾಹಿತಿ ಎಂ.ಡಿ. ಗೊಗೇರಿ ಅಭಿಪ್ರಾಯಪಟ್ಟರು.ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮಹಾಶಿವರಾತ್ರಿ ಹಾಗೂ ಸತ್ಕಾರ ಸಮಾರಂಭದಲ್ಲಿ ಬುಧವಾರ ಉಪನ್ಯಾಸ ನೀಡಿದ ಅವರು, ‘ಶಿವ ಅಂದರೆ ಒಳ್ಳೆಯದು. ಇದರ ಕಡೆಗೆ ಬರುವಂತೆ ಸಾಧು, ಸಂತರು ಹಾಗೂ ಸತ್ಪುರುಷರು ಹೇಳಿದ್ದಾರೆ’ ಎಂದು ವಿವರಿಸಿದರು.‘ಪ್ರತಿ ನಡೆ, ನುಡಿಯಲ್ಲಿ ಒಳ್ಳೆಯತನವಿರಬೇಕು. ಅದು ನಾವು ದೇವರಿಗೆ ಸಲ್ಲಿಸುವ ನೈಜ ಸೇವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಆಯಾ ಧರ್ಮದಲ್ಲಿ ಅವರವರ ಪದ್ಧತಿಗೆ ಅನುಸಾರವಾಗಿ ದೇವರನ್ನು ಆರಾಧನೆ ಮಾಡಿದರೂ ಒಳ್ಳೆಯ ಪ್ರತಿಫಲ ಪಡೆಯುತ್ತೇವೆ’ ಎಂದು ಹೇಳಿದರು.‘ಪಿಎಚ್.ಡಿ ಪದವಿ ನೀಡಲು ಇಂದು ಅನೇಕ ವಿಶ್ವವಿದ್ಯಾಲಯಗಳಿವೆ. ಆದರೆ ಸಜ್ಜನ ಹಾಗೂ ಸಭ್ಯವ್ಯಕ್ತಿ ಬಿರುದು ಕೊಡಲು ಯಾವುದೇ ವಿಶ್ವವಿದ್ಯಾಲಯವಿಲ್ಲ. ಅದು ಮನುಷ್ಯನ ನಡೆ, ನುಡಿಯಿಂದ ಮಾತ್ರ ಸಾಧ್ಯ’ ಎಂದು ಗೊಗೇರಿ ನುಡಿದರು.ಸಾನ್ನಿಧ್ಯ ವಹಿಸಿದ್ದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ಭಗವಂತನ ಸಮೀಪ ವಾಸವಾಗಿರುವುದೇ ನಿಜ ಉಪವಾಸ. ಅರ್ಪಣಾ ಮನೋಭಾವನೆಯಿಂದ ಮಾತ್ರ ದೇವರ ಹತ್ತಿರ ಹೋಗಲು ಸಾಧ್ಯ’ ಎಂದರು.‘ಇಂದಿನ ಮನಸ್ಸುಗಳು ಕಲ್ಲಾಗಿವೆ. ಬದುಕಿನ ಜಂಜಾಟ ಮತ್ತು ಯಾಂತ್ರಿಕ-ತಾಂತ್ರಿಕತೆಯ ಅವಸರದ ಬದುಕಿನಿಂದ ಹೊರಬರಲು ಸತ್ಸಂಗ ವರವಾಗಿದೆ. ಇದು ಜೀವನ ಪಾಠ ಕಲಿಸಿಕೊಡುವುದು’ ಎಂದು ಮಾರ್ಮಿಕವಾಗಿ ಸ್ವಾಮೀಜಿ ನುಡಿದರು.ಗುರುದೇವರು, ತಾ.ಪಂ. ಸದಸ್ಯ ದಿನೇಶ ವಳಸಂಗ ಮಾತನಾಡಿದರು. ಉಳವಪ್ಪಣ್ಣ ಶೆಟ್ಟರ ವೇದಿಕೆಯಲ್ಲಿದ್ದರು. ನೂತನವಾಗಿ ಆಯ್ಕೆಯಾದ ಜಿ.ಪಂ. ಸದಸ್ಯರಾದ ಯಲ್ಲಪ್ಪ ವಕ್ಕುಂದ, ಪಾರ್ವತಿ ಪರವಣ್ಣವರ, ತಾ. ಪಂ. ಸದಸ್ಯರಾದ ದಿನೇಶ ವಳಸಂಗ, ಲಲಿತಾ ಸವದಿ, ಗ್ರಾ.ಪಂ. ಅಧ್ಯಕ್ಷೆ ಸುವರ್ಣ ಹಂಜಿ ಹಾಗೂ ಉಪಾಧ್ಯಕ್ಷ ಅಶೋಕ ಮಡಿವಾಳರ ಅವರನ್ನು ಸತ್ಕರಿಸಲಾಯಿತು.ಈಶ್ವರ ಗಡಿಬಿಡಿ ವಚನ ಗಾಯನ ಮಾಡಿದರು. ಆರ್.ವೈ. ಪರವಣ್ಣವರ ಸ್ವಾಗತಿಸಿದರು. ಪ್ರೊ. ಎಸ್.ಎಸ್. ಬಿರಾದಾರಪಾಟೀಲ ನಿರೂಪಿಸಿದರು. ಪ್ರೊ. ಎಸ್.ಬಿ. ದಳವಾಯಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.