ಶನಿವಾರ, ಫೆಬ್ರವರಿ 27, 2021
31 °C

ಸತ್ತ ಹಸುವಿನ ಚರ್ಮ ಸುಲಿದಿದ್ದಕ್ಕೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸತ್ತ ಹಸುವಿನ ಚರ್ಮ ಸುಲಿದಿದ್ದಕ್ಕೆ ಹಲ್ಲೆ

ಹೈದರಾಬಾದ್: ಗೋರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ಹಲ್ಲೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚನೆ ನೀಡಿದ 24 ಗಂಟೆಯೊಳಗೆ ದಲಿತರ ಮೇಲೆ ಹಲ್ಲೆ ನಡೆಸಿದ ಇನ್ನೂ ಎರಡು ಪ್ರಕರಣಗಳು ವರದಿಯಾಗಿವೆ.ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದ  ಹಸುವಿನ ಚರ್ಮ ಸುಲಿಯುತ್ತಿದ್ದ ಇಬ್ಬರು ದಲಿತರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದಲ್ಲಿ ದೇವಾಲಯದ ಆವರಣದಲ್ಲಿದ್ದ ಕೊಳವೆಬಾವಿಯ ನೀರು ಕುಡಿಯಲು ಬಂದ ದಲಿತ ಬಾಲಕಿಯನ್ನು ತಡೆದು, ಆಕೆಯ ತಂದೆಯ ಮೇಲೆ ಹಲ್ಲೆ ನಡೆಸಲಾಗಿದೆ.ಘಟನೆ ವಿವರ:  ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರದ ರೈತರೊಬ್ಬರ ಹಸು ವಿದ್ಯುತ್‌ ತಗುಲಿ ಮೃತಪಟ್ಟಿತ್ತು. ಮಾಲೀಕರ ಅನುಮತಿ ಪಡೆದು ಇಬ್ಬರು ದಲಿತರು ಹಸುವನ್ನು ಆಟೊ ಮೂಲಕ ಊರ ಹೊರಗೆ ಸಾಗಿಸಿ, ಚರ್ಮ ಸುಲಿಯುತ್ತಿದ್ದರು. ಅದೇ ಸಮಯದಲ್ಲಿ ಕಳೆದುಹೋಗಿದ್ದ ತಮ್ಮ ಹಸುಗಳನ್ನು ಹುಡುಕಿಕೊಂಡು ರೈತರ ಗುಂಪೊಂದು ಆ ಮಾರ್ಗದಲ್ಲಿ ಬಂದಿದೆ. ದಲಿತರು ತಮ್ಮ ಹಸುವನ್ನು ಕೊಂದು ಚರ್ಮ ಸುಲಿಯುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿದ ರೈತರ ಗುಂಪು ದಲಿತರ ಹಲ್ಲೆ ನಡೆಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಇಬ್ಬರು ದಲಿತರು ಮತ್ತು ಮೃತ ಹಸುವನ್ನು ಸಾಗಿಸಲು ನೆರವಾಗಿದ್ದ ಆಟೊ ಚಾಲಕನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಹಲ್ಲೆ ನಡೆಸಿದ ಏಳೂ ಜನರನ್ನು ಬಂಧಿಸಲಾಗಿದ್ದು, ಅಸ್ಪೃಶ್ಯತೆ ನಿವಾರಣಾ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೀರು ಕೇಳಿದ್ದಕ್ಕೆ ಹಲ್ಲೆ

ಲಖನೌ: ದೇವಾಲಯದ ಆವರಣದಲ್ಲಿರುವ ಕೊಳವೆ ಬಾವಿಯಿಂದ ನಾವೇಕೆ ನೀರು ಕುಡಿಯಬಾರದು ಎಂದು  ಪ್ರಶ್ನಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ದೇವಾಲಯದ ಅರ್ಚಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್‌ ಜಿಲ್ಲೆಯಲ್ಲಿ ನಡೆದಿದೆ.

ದಲಿತ ಚರಣ್‌ ಸಿಂಗ್‌ ದೇವಾಲಯದ ಬಳಿ ಹುಲ್ಲು ಕತ್ತರಿಸುತ್ತಿದ್ದರು. ಅವರ ಜತೆಯಲ್ಲೇ ಅವರ 13 ವರ್ಷದ ಮಗಳು ಇದ್ದಳು. ಬಾಯಾರಿಕೆ ನೀಗಿಸಿಕೊಳ್ಳಲು ಬಾಲಕಿ ದೇವಾಲಯದ ಆವರಣದಲ್ಲಿದ್ದ ಕೊಳವೆಬಾವಿ ಬಳಿ ಹೋಗಿದ್ದಾಳೆ. ಆಗ ದೇವಾಲಯದ ಅರ್ಚಕ, ‘ದಲಿತರು ಈ ಕೊಳವೆಬಾವಿಯ ನೀರು ಕುಡಿಯುವಂತಿಲ್ಲ’ ಎಂದು ಗದರಿಸಿ ಬಾಲಕಿಯನ್ನು ವಾಪಸ್ ಕಳುಹಿಸಿದ್ದಾರೆ.

ಇದನ್ನು ವಿರೋಧಿಸಿದ ಚರಣ್‌ ಸಿಂಗ್‌ ಅರ್ಚಕರನ್ನು ಪ್ರಶ್ನಿಸಿದ್ದಾರೆ.  ಆಗ ವಾಗ್ವಾದ ನಡೆದು ಅರ್ಚಕ ಮತ್ತು ಅವರ ಸಹಾಯಕ ತ್ರಿಶೂಲಗಳಿಂದ ಚರಣ್ ಸಿಂಗ್‌ ಅವರನ್ನು ತಿವಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅರ್ಚಕ ಮತ್ತವರ ಸಹಾಯಕನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.