ಗುರುವಾರ , ಮೇ 19, 2022
25 °C

ಸತ್ಯ ಸಂಗತಿ ಹೊರಬರಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರದ ಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ನಿಕಟ ಸಹಚರ ಹಾಗು ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆಯ ಹಗರಣದಲ್ಲಿ ನಾಲ್ಕು ಬಾರಿ ಸಿಬಿಐ ತನಿಖೆಗೆ ಒಳಪಟ್ಟಿದ್ದ ಸಾದಿಕ್ ಬಚ್ಚನ ನಿಗೂಢ ಸಾವು ಹಲವು ಶಂಕೆಗಳಿಗೆ ಎಡೆಕೊಟ್ಟಿದೆ. ಈ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಜಿಜ್ಞಾಸೆಗೆ ಎಡೆಕೊಟ್ಟಿದೆ.ಸಾದಿಕ್ ಬಚ್ಚ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಈ ಉದ್ಯಮದಲ್ಲಿ ರಾಜಾ ಅವರ ಕುಟುಂಬದ ಸದಸ್ಯರೂ ಪಾಲುದಾರರಾಗಿದ್ದರು. ಈ ಸಂಬಂಧದ ಕಾರಣ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಾದಿಕ್ ಮನೆ ಮತ್ತು ಕಚೇರಿಯ ಮೇಲೂ ದಾಳಿ ನಡೆಸಿ ಬೇಕಾದ ಮಾಹಿತಿಯನ್ನು ಸಂಗ್ರಹಿಸಿತ್ತು.ಈ ತಿಂಗಳ 31ರೊಳಗೆ ರಾಜಾ ಮತ್ತು ಎರಡು ಕಂಪೆನಿಗಳ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸುವುದಾಗಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದ ಈ ಸಂದರ್ಭದಲ್ಲಿನ ಈ ‘ಆತ್ಮಹತ್ಯೆ’ ತರಂಗಾಂತರ ಪ್ರಕರಣದ ದಿಕ್ಕುತಪ್ಪಿಸುವಂತಾಗಿದೆ. ಈ  ‘ಆತ್ಮಹತ್ಯೆ’ ಪ್ರಕರಣದ ಬಗೆಗೆ ಸಿಬಿಐ ತನಿಖೆ ನಡೆಯಬೇಕೆಂದು ಬಿಜೆಪಿ, ಈ ಹಗರಣ ಕುರಿತು ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಮತ್ತು ಡಿಎಂಕೆಯೂ ಒತ್ತಾಯಿಸಿದೆ. ಇದರಿಂದಾಗಿ ಈ ‘ಆತ್ಮಹತ್ಯೆ’ಯ ಬಗೆಗೆ ವಿವಿಧ ವಲಯಗಳಲ್ಲಿ ಎದ್ದಿರುವ ಶಂಕೆಯನ್ನು ನಿವಾರಿಸುವ ಹೊಣೆ ತನಿಖಾ ಸಂಸ್ಥೆಗಳಿಗೆ ಸೇರಿದೆ.ತರಂಗಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ಆರೋಪಿಯೊಬ್ಬರ ‘ಆತ್ಮಹತ್ಯೆ’ಯಿಂದ ಹಗರಣದ ತನಿಖೆ ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಇದರಿಂದ ನಿಜವಾದ ಆರೋಪಿಗಳು ತಮ್ಮ ಮೇಲಿನ ಆರೋಪಗಳಿಂದ ಪಾರಾಗುವುದಕ್ಕೂ ಎಡೆಕೊಡುತ್ತದೆ. ‘ಸಾದಿಕ್ ಸಾವಿನಿಂದ ಹಗರಣದ ತನಿಖೆಗೆ ಯಾವುದೇ ತೊಂದರೆ ಆಗದು. ಸಾದಿಕ್‌ನಿಂದ ಪಡೆಯಬೇಕಾಗಿದ್ದ ಮಾಹಿತಿಯನ್ನೆಲ್ಲ ಈಗಾಗಲೇ ಪಡೆಯಲಾಗಿದೆ’ ಎಂದು ಸಿಬಿಐ ಸ್ಪಷ್ಟಪಡಿಸಿದೆಯಾದರೂ, ಮುಂದಿನ ವಿಚಾರಣೆಗೆ ಈ ಘಟನೆಯಿಂದ ಸತ್ಯಾಂಶ ಮುಚ್ಚಿ ಹೋಗುವ ಶಂಕೆ ಜನರ ಮನಸ್ಸಿನಲ್ಲಿ ಬಲವಾಗಿ ಉಳಿದುಕೊಳ್ಳಲಿದೆ. ಆದ್ದರಿಂದ ಈ  ‘ಆತ್ಮಹತ್ಯೆ’ಯನ್ನು ಮುಗಿದ ಅಧ್ಯಾಯ ಎಂದು ಸಿಬಿಐ ನಿರ್ಲಕ್ಷಿಸಬಾರದು.ಈ  ‘ಆತ್ಮಹತ್ಯೆ’ಯ ಅಥವಾ ಕೊಲೆಯೇ ಆಗಿದ್ದರೆ ಏಕೆ ಮತ್ತು ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವ ವಾಸ್ತವ ಸಂಗತಿ ದೇಶಕ್ಕೆ ತಿಳಿಯಬೇಕಿದೆ. ಕೆಲವು ಭಾರೀ ಭ್ರಷ್ಟಾಚಾರ ಹಗರಣಗಳಲ್ಲಿ ಹಿಂದೆಯೂ ಕೆಲವು ಆರೋಪಿಗಳ ಸಾವಿನ ಪ್ರಕರಣಗಳು ನಡೆದು ಹಗರಣದ ಸತ್ಯಾಂಶಗಳು ಮುಚ್ಚಿಹೋಗಿವೆ. ದೇಶದ ಗಮನ ಸೆಳೆದಿರುವ ಮತ್ತು ಕೇಂದ್ರ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ 2ಜಿ ತರಂಗಾಂತರ ಹಂಚಿಕೆ ಹಗರಣ ಹಾಗಾಗುವುದಕ್ಕೆ ಬಿಡಬಾರದು. ತಪ್ಪಿತಸ್ಥರನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ತನ್ನ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ತೋರಿಸುವ ಮೂಲಕ ಇನ್ನಾದರೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಿದೆ. ಆದ್ದರಿಂದ ಸಾದಿಕ್ ಸಾವಿನ ಸಂಶಯಕ್ಕೆ ಉತ್ತರ ಸಿಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.