ಭಾನುವಾರ, ಏಪ್ರಿಲ್ 18, 2021
33 °C

ಸದನದಲ್ಲಿ ಮೌನ: ಸಭೆಯಲ್ಲಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸದನದಲ್ಲಿ ಮೌನ ವಹಿಸಿದ ಶಾಸಕರು, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಹಾಸ್ಯಾಸ್ಪದ ಎಂದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಹೇಳಿದ್ದಾರೆ.ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮರಳು ಗುತ್ತಿಗೆ ರದ್ದುಪಡಿಸಿರುವುದು ಹಾಗೂ ಜಲ್ಲಿ ಕಲ್ಲುಗಳ ಕ್ರಷಿಂಗ್ ಮಶಿನ್‌ಗಳು ಸ್ಥಗಿತಗೊಂಡಿರುವ ಬಗ್ಗೆ ಶಾಸಕ ಶರಣಬಸಪ್ಪ ದರ್ಶನಾಪುರ, ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವುದು ಸರಿಯಲ್ಲ.

 

ಸಂಘಟನೆಗಳು, ರಾಜಕೀಯ ಪಕ್ಷಗಳು ಮುಖಂಡರು ಮರಳು ಗಣಿಗಾರಿಕೆಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕಿದ್ದಾರೆ. ಆದರೆ ಇದನ್ನು ಪರಿಗಣಿಸಿದ ಶಾಸಕ ದರ್ಶನಾಪೂರ, ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.ಮರಳು ಗುತ್ತಿಗೆ ಹಾಗೂ ಕ್ರಷಿಂಗ್ ಮಶಿನ್‌ಗಳು ಸ್ಥಗಿತಗೊಂಡಿರುವ ದೊಡ್ಡ ವಿಚಾರ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗುತ್ತಿದೆ. ಇಂತಹ ಮಹತ್ವದ ವಿಷಯದ ಬಗ್ಗೆ ಶಾಸಕರು ವಿಧಾನ ಮಂಡಲದ ಅಧಿವೇಶನದಲ್ಲಿ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದ್ದಾರೆ.ಮರಳು ಗುತ್ತಿಗೆ ನೀಡುವ ಮೂಲಕ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಓಲೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ಪ್ರತಿಯೊಬ್ಬರೂ ವಿರೋಧಿಸುತ್ತಲೇ ಇದ್ದು, ಬಿಎಸ್ಸಾರ್ ಪಕ್ಷವು ಈ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸದನಲ್ಲಿ ಮೌನ ವಹಿಸುವ ಶಾಸಕರು, ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಮನೋಭಾವವನ್ನು ಜಿಲ್ಲೆಯ ಜನರು ವೀಕ್ಷಿಸುತ್ತಿದ್ದಾರೆ. ಜಿಲ್ಲೆಯಾಗಿ ಮೂರು ವರ್ಷ ಕಳೆದರೂ ಅನೇಕ ಸಮಸ್ಯೆಗಳು ಜಿಲ್ಲೆಯಲ್ಲಿವೆ. ಈ ಬಗ್ಗೆ ಒಮ್ಮೆಯೂ ಸದನದಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೊದಲು ನೀರಾವರಿ ಸೌಲಭ್ಯ ಪಡೆದಿರುವ ಎಲ್ಲ ಕ್ಷೇತ್ರಗಳ ಶಾಸಕರಿಗೆ ಸದಸ್ಯತ್ವ ನೀಡಲಾಗಿತ್ತು. ನೀರಾವರಿ ಸಲಹಾ ಸಮಿತಿಯಲ್ಲಿ ಅಚ್ಚುಕಟ್ಟು ಪ್ರದೇಶದ ಯಾವ ಶಾಸಕರು ಸದಸ್ಯರಾಗಿಲ್ಲ. ಇದು ಸಣ್ಣ ವಿಷಯವೇ? ಇದರ ಬಗ್ಗೆ ಈವರೆಗೂ ಜಿಲ್ಲೆಯ ಯಾವ ಜನಪ್ರತಿನಿಧಿಗಳು ಧ್ವನಿ ಎತ್ತಿಲ್ಲ. ನೀರಾವರಿ ಸೌಲಭ್ಯ ಪಡೆದಿರುವ ಭಾಗದ ರೈತರ ಬವಣೆಯನ್ನು ಅರಿತಿರುವ ಶಾಸಕರು, ಯಾರ ಎದುರು ಇದನ್ನು ಹೇಳುತ್ತಾರೆ ಎಂಬುದೇ ತಿಳಿಯದಂತಾಗಿದೆ ಎಂದು ಹೇಳಿದ್ದಾರೆ.ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯಲಾಗುತ್ತಿದೆ. ಕಾಲುವೆಗಳು ಸರಿಯಾಗಿ ಇಲ್ಲದೇ ಇರುವುದರಿಂದ ಕೊನೆಯ ಭಾಗದ ರೈತರು ಈಗಲೂ ಪರಿತಪಿಸುವಂತಾಗಿದೆ. ಈ ವಿಷಯವನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುವವರು ಯಾರು? ಕ್ಷೇತ್ರದ ರೈತರ ಹಿತಕ್ಕಾದರೂ ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.ಅಧಿಕಾರಿಗಳ ವಿರುದ್ಧ ಹರಿಹಾಯುವ ಬದಲು ಜಿಲ್ಲೆಯ ಸಮಸ್ಯೆಗಳ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕು. ನೇರವಾಗಿ ಸರ್ಕಾರದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಬೇಕು. ಅವಕಾಶ ಸಿಕ್ಕಾಗ ಸುಮ್ಮನೇ ಕೂರುವ ಜನಪ್ರತಿನಿಧಿಗಳು, ಜಿಲ್ಲಾ ಕೇಂದ್ರಗಳಲ್ಲಿನ ಸಭೆಯಲ್ಲಿ ಅಧಿಕಾರಿಗಳ ಮೇಲೆ ಕಿಡಿ ಕಾರಿದರೆ ಆಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.