ಶನಿವಾರ, ಏಪ್ರಿಲ್ 17, 2021
23 °C

ಸದಾನಂದಗೌಡ ಪದಚ್ಯುತಿಗೆ ಒಕ್ಕಲಿಗರ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ:  ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಭ್ರಷ್ಟಾಚಾರ ರಹಿತ ಹಾಗೂ ಯಾವುದೇ ಸ್ವಜನ ಪಕ್ಷಪಾತ ಎಸಗದೇ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚನ್ನಕೇಶವ ಹೇಳಿದರು.ಪಟ್ಟಣದ ಒಕ್ಕಲಿಗರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಕೇವಲ ಬಿಜೆಪಿ  ಮೆಚ್ಚುಗೆ ಅಲ್ಲದೇ ವಿರೋಧ ಪಕ್ಷದ ನಾಯಕರು ಹಾಗೂ ವಿವಿಧ ರಾಜಕೀಯ ಮುಖಂಡರಿಂದ ಉತ್ತಮ ಆಡಳಿತಗಾರ ಎಂದು ಖ್ಯಾತಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು  ಜಾತಿ ರಾಜಕೀಯಕ್ಕೆ ಬಲಿಯಾಗಿದ್ದಾರೆ ಎಂದು ವಿಷಾದಿಸಿದರು.ಲಿಂಗಾಯಿತ ಸಮುದಾಯಕ್ಕೆ ಸೇರಿದವರೇ ಈ ರಾಜ್ಯವನ್ನು ಆಳಬೇಕೇ? ಇಂತಹ ಜಾತಿ ರಾಜಕಾರಣವನ್ನು ಕರ್ನಾಟಕಕ್ಕೆ ಪರಿಚಯಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಒಕ್ಕಲಿಗರನ್ನು ಕಡೆಗಣಿಸಿದ್ದಾರೆ. ಇದನ್ನು ತಾಲ್ಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಮೂಲಕ ಒಕ್ಕಲಿಗರ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿರುವ ಬಿಜೆಪಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಕಿಡಿಕಾರಿದರು.ಸಂಘದ ಹಿರಿಯ ಮುಖಂಡರಾದ ಎನ್. ಭೀಮಪ್ಪ, ಮಾಜಿ ಅಧ್ಯಕ್ಷ ಎಚ್. ಆನಂದಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ ನಿರ್ದೇಶಕರಾದ ಎ. ನಾಗರಾಜ, ನಾಗೇಂದ್ರಪ್ಪ, ಶಿವಣ್ಣ, ಯುವ ಮುಖಂಡ ಪರಶುರಾಂಪುರ ನಾಗರಾಜ, ಜಡೇಕುಂಟೆ ಬೇಲೂರಯ್ಯ,  ಗೋವಿಂದಪ್ಪ, ರಂಗಸ್ವಾಮಿ, ಪ್ರಸನ್ನ ಕುಮಾರ್, ರವೀಶ್ ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.