ಗುರುವಾರ , ಮೇ 13, 2021
24 °C

ಸದಾ ಸ್ಮರಣೀಯ ಶಾರದಾಪ್ರಸಾದ್ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವಗಾಂಧಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಪತ್ರಕರ್ತ ಎಚ್.ವೈ.ಶಾರದಾಪ್ರಸಾದ್ ಕುರಿತಾದ `ಸದಾ ಸ್ಮರಣೀಯ... ಎಚ್.ವೈ.ಶಾರದಾಪ್ರಸಾದ್~ ಕೃತಿ ಭಾನುವಾರ ಲೋಕಾರ್ಪಣೆಗೊಂಡಿತು.ಶಾರದಾಪ್ರಸಾದ್ ಅವರ 88ನೇ ಜನ್ಮದಿನದ ಅಂಗವಾಗಿ ವಿಸ್ಮಯ ಪ್ರಕಾಶನವು ಮಾನಸಗಂಗೋ ತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕೃತಿ ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಅವರು, `ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಶಾರದಾಪ್ರಸಾದ್ ದೇಶದ ಹೆಮ್ಮಯ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಅಧಿಕಾರ ಸಿಕ್ಕ ತಕ್ಷಣ ಅನೇಕರು ಚಾಡಿಕೋರರಾಗಿ, ಗೂಢಾಚಾರರಾಗಿ ಬದಲಾಗುತ್ತಾರೆ. ಆದರೆ ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದ್ದ ಇವರು ಶುದ್ಧಹಸ್ತರಾಗಿದ್ದರು. ಅಂಥವರನ್ನು ಕನ್ನಡಿಗರು ಮರೆಯುತ್ತಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದರು.`ಸ್ವಾತಂತ್ರ್ಯ ಬಂದು 64 ವರ್ಷ ಕಳೆದರೂ ಭ್ರಷ್ಟಾಚಾರ, ಅಪ್ರಾಮಾಣಿಕತೆ ಮಿತಿ ಮೀರಿದೆ. ಬಿಹಾರ, ಉತ್ತರ ಪ್ರದೇಶಕ್ಕಿಂತಲೂ ಕರ್ನಾಟಕದ ರಾಜಕೀಯ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಗಣಿ ಕಳ್ಳರು, ಲೂಟಿಕೋರರು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಆದರೆ ಕರ್ನಾಟಕ್ಕೆ ಒಂದು ಜ್ಯಾತ್ಯತೀತ ಪರಂಪರೆ ಇದೆ. ಅದರ ಪ್ರತೀಕವಾಗಿದ್ದ ಶಾರದಾಪ್ರಸಾದ್ ಕಳಂಕಿತರಾಗದಂತೆ ಬದುಕಿ ಆದರ್ಶ ಮೆರೆದರು~ ಎಂದರು.ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಮಾತನಾಡಿ, `ಶಾರದಾಪ್ರಸಾದ್ ಪ್ರಾಮಾಣಿಕತೆಯಿಂದ ಬದುಕಿ ದರು ಎಂಬುದೇ ಈಗ ದಂತಕತೆಯಂತೆ ಅನಿಸುತ್ತದೆ. ಎಲ್ಲೆಡೆ ಭ್ರಷ್ಟರೇ ತುಂಬಿಕೊಂಡಿರುವ ಈ ದಿನಗಳಲ್ಲಿ ಆದರ್ಶ ಜೀವನವೇ ಸವಕಲಾಗಿದೆ ಎಂಬಂತೆ ನೋಡುತ್ತಾರೆ~ ಎಂದು ವಿಷಾದ ವ್ಯಕ್ತಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಆರ್.ಎನ್.ಪದ್ಮನಾಭ್ ಮಾತನಾಡಿ, `ರಾಜ್ಯದಿಂದ ದೆಹಲಿಗೆ ಹೋಗಿ ಹೆಸರು ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ದೆಹಲಿಯಲ್ಲಿ ಕರ್ನಾಟಕವನ್ನು ವಿಸ್ತರಿಸಿದವರು ಶಾರದಾಪ್ರಸಾದ್ ಮಾತ್ರ. ಇಂದಿರಾಗಾಂಧಿ ಅವರಿಗೆ ಸುದೀರ್ಘ ಕಾಲ ಮಾಧ್ಯಮ ಸಲಹೆಗಾರರಾಗಿ ಮುತ್ಸದ್ಧಿತನ ಮೆರದರು~ ಎಂದು ಕೊಂಡಾಡಿದರು.ಶಾರದಾಪ್ರಸಾದ್ ಅವರ ಸಹೋದರಿ ನೀರಜಾ ಅಚ್ಚುತರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಕರ್ತ ರವೀಂದ್ರಭಟ್ಟ ಮಾತನಾಡಿದರು. ಕೃತಿಯ ಲೇಖಕ ರಮೇಶ್ ಆರ್.ಹಂಡ್ರಂಗಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.