ಶನಿವಾರ, ಜೂನ್ 19, 2021
28 °C

ಸದ್ದಿಲ್ಲದ ಕಾಲ್ಗೆಜ್ಜೆ ಕಾಲ

ಮಾನಸ ಬಿ.ಆರ್. Updated:

ಅಕ್ಷರ ಗಾತ್ರ : | |

ಗೆಜ್ಜೆಗಳು ಅಂದರೆ ಅದು ಹೆಣ್ಣು ಮಕ್ಕಳಿಗೆ ಭಾವನಾತ್ಮಕ ಸಂಕೇತ ಎನ್ನುವಂತಹ ಒಂದು ಕಾಲ ಇತ್ತು. ಆದರೆ ಈಗ ಅವುಗಳನ್ನು ನೋಡುವ ಸಾಂಪ್ರದಾಯಿಕ ಗಡಿ ದಾಟಿದೆ. ಗೆಜ್ಜೆಗಳು ಕೇವಲ ಫ್ಯಾಷನ್‌, ಟ್ರೆಂಡ್‌ಗಳ ಸರಕುಗಳಾಗಿವೆ.ಟ್ರೆಂಡಿ ಗೆಜ್ಜೆಗಳನ್ನು ಹಾಕುವ ಕಾಲ ಬಂದಹಾಗೆ ಅದರ ರೂಪಗಳಲ್ಲಿ ಬೇರೆ ಬೇರೆ ಬದಲಾವಣೆಗಳಾದವು. ಕಾಲಕ್ಕೆ ತಕ್ಕಂತೆ ಬದಲಾಗುವ ಬಟ್ಟೆಗಳ ಫ್ಯಾಷನ್‌ಗೆ ತಕ್ಕಂತೆ ಗೆಜ್ಜೆಗಳ ಫ್ಯಾಷನ್‌ ಕೂಡ ಬದಲಾಯಿತು. ಮೊದಲು ಹೆಣ್ಣು ಮಕ್ಕಳು ಸೀರೆ, ಚೂಡಿ, ಲಂಗ–ದಾವಣಿ ಹಾಕುವಾಗ ಗೆಜ್ಜೆಗೆ ಸಾಂಪ್ರದಾಯಿಕ ರೂಪ ಇತ್ತು. ಜೊತೆಗೆ ಗೆಜ್ಜೆ ಹಾಕದ ಹೆಣ್ಣು ಮಕ್ಕಳೇ ಇಲ್ಲ ಅನ್ನುವಷ್ಟು ಗೆಜ್ಜೆಗೂ ಹೆಣ್ಣು ಮಕ್ಕಳಿಗೂ ಒಂದು ಭಾವನಾತ್ಮಕ ನಂಟು ಇತ್ತು. ಆದರೆ ಬಟ್ಟೆಯ ಫ್ಯಾಷನ್‌ ಬದಲಾದ ಹಾಗೆ ಗೆಜ್ಜೆಗಳೂ ರೂಪಾಂತರ ಪಡೆದವು. ಮೊದಲು ಹಾಕುತ್ತಿದ್ದ ಡಿಸೈನ್‌ನ ಬೆಳ್ಳಿ ಗೆಜ್ಜೆಗಳನ್ನು ಈಗ ಮಾರುಕಟ್ಟೆಯಲ್ಲಿ ಕೇಳುವವರಿಲ್ಲ.ಹಾಗೆಯೇ ಸೀರೆ, ಚೂಡಿದಾರ, ಲಂಗ–ದಾವಣಿಗಿಂತ ಮಹಿಳೆಯರ ಆಯ್ಕೆಯಲ್ಲಿ ಜೀನ್ಸ್‌, ಸ್ಕರ್ಟ್‌, ಕುರ್ತಾ, ಲೆಗಿಂಗ್ಸ್‌, ಜೆಗ್ಗಿಂಗ್ಸ್‌, ಶಾಟ್ಸ್‌ ಬಂದಿವೆ. ಈ ಕಾಲಕ್ಕೆ ತಕ್ಕಂತೆ ಬಟ್ಟೆ ಹಾಕುವ ಹುಡುಗಿಯರಿಗೆ ಅದಕ್ಕೆ ಹೋಲುವ ಗೆಜ್ಜೆಗಳು ಬೇಕು. ಅದನ್ನೇ ಬಂಡವಾಳ ಮಾಡಿಕೊಂಡು ಹೊಸ ಮಾದರಿಯ ಟ್ರೆಂಡಿ ಗೆಜ್ಜೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ಮಣಿಗಳಿಂದ ಮಾಡಿದ ಕಾಲುಗೆಜ್ಜೆಗಳು, ದಾರದಿಂದ ತಯಾರಾದ ಕಪ್ಪು, ಬಿಳಿ, ಕೆಂಪು, ನೀಲಿ, ಕೇಸರಿ ಮಂತಾದ ಬಣ್ಣಗಳ ದಾರಗಳನ್ನೇ ಕಾಲಿಗೆ ಕಟ್ಟುವ ಫ್ಯಾಷನ್‌ ಇತ್ತೀಚಿನ ಪ್ರವೃತ್ತಿ. ಜೀನ್ಸ್‌, ಶಾಟ್ಸ್, ಸ್ಕರ್ಟ್‌ ಧರಿಸಿದಾಗ ದಾರ ಕಟ್ಟಿದರೆ ವಿಶಿಷ್ಟವಾದ ಫ್ಯಾಷನ್‌ ಎದ್ದು ಕಾಣುತ್ತದೆ ಎಂಬುದು ಹಲವರ ಅಭಿಪ್ರಾಯ.ಗೆಜ್ಜೆ ಅಂದರೆ ಮನೆಯೆಲ್ಲ ಘಲ್ ಎಂಬ ಶಬ್ದ ಬರಬೇಕು ಅನ್ನುವ ನಂಬಿಕೆ ಮೊದಲು ಇತ್ತು. ಆದರೆ ಇತ್ತೀಚೆಗೆ ಶಬ್ದ ಮಾಡುವ ಗೆಜ್ಜೆಗಳು ಫ್ಯಾಷನ್‌ ಅಲ್ಲ. ಮನೆಯಲ್ಲಿ ಅಮ್ಮಂದಿರು ಹಾಕುವ ಗೆಜ್ಜೆ ಹಳೆಯ ಕಾಲದ ಬೆಳ್ಳಿ ಗೆಜ್ಜೆಗಳಲ್ಲೂ ಅದರಲ್ಲಿ ಗಲ್‌ ಎನ್ನುವ ಚಿಕ್ಕ ಗೆಜ್ಜೆಗಳನ್ನು ತೆಗೆದಿಟ್ಟು ಹಾಕಿಕೊಳ್ಳುತ್ತಿದ್ದಾರೆ.

ಮದುವೆ ಮನೆಯಲ್ಲಿ ಮದುಮಗಳು ಈಗಲೂ ಗೆಜ್ಜೆ ಹಾಕಲೇಬೇಕು ಎಂಬ ಸಂಪ್ರದಾಯ ಇದೆ. ಮೆಹೆಂದಿ ಹಾಕುವ ಮದುಮಗಳು ಗೆಜ್ಜೆ ಹಾಕುವುದರಿಂದ ಕಾಲುಗಳು ಸುಂದರವಾಗಿ ಕಾಣುತ್ತವೆ. ಜೊತೆಗೆ ಗೆಜ್ಜೆ ಹಾಕದ ಮದುಮಗಳಿಗೆ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆ ಇದೆ. ಈ ಕಾರಣ ಮದುವೆ ಹತ್ತಿರ ಬಂದಾಗ ಮಾತ್ರ ಅದನ್ನು ಕೊಂಡು ನಂತರ ಅದನ್ನು ಭದ್ರವಾಗಿ ತೆಗೆದಿಟ್ಟುಬಿಡುತ್ತಾರೆ.ಮಹಿಳೆಯರು ಮಾತ್ರ ಗೆಜ್ಜೆ ಧರಿಸುತ್ತಿಲ್ಲ. ಬದಲಾದ ಫ್ಯಾಷನ್‌ನಲ್ಲಿ ಹುಡುಗರೂ ದಾರಗಳನ್ನು ಕಟ್ಟುತ್ತಾರೆ. ಜೀನ್ಸ್‌ ಹಾಕಿದಾಗ ದಾರ ಕಟ್ಟುವ ಹುಡುಗರೂ ಇದ್ದಾರೆ.ಖುಷಿಯಾದಾಗ ಗೆಜ್ಜೆ ಹಾಕುತ್ತೇನೆ

ನಾನು ಈಗಲೂ ಗೆಜ್ಜೆ ಹಾಕುತ್ತೇನೆ. ಗೆಜ್ಜೆ ಹಾಕುವುದೆಂದರೆ ತುಂಬಾ ಇಷ್ಟ. ತುಂಬಾ ಖುಷಿಯಾದಾಗ ಸೀರೆ, ಚೂಡಿ ಹಾಕಿದಾಗ ಮಾತ್ರ ಗೆಜ್ಜೆ ಹಾಕುತ್ತೇನೆ. ಮದುವೆಯಲ್ಲಿ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ಕೊಡುವ ವಸ್ತುವಾದ್ದರಿಂದ ಭಾವನಾತ್ಮಕತೆ ಹೆಚ್ಚು. ಆದರೆ ಜೀನ್ಸ್‌ ಧರಿಸಿದಾಗ ಹಾಕುವುದಿಲ್ಲ. ಅದು ಫ್ಯಾಷನ್‌ ಅಲ್ಲ.

ಐಶ್ವರ್ಯಾ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.