ಬುಧವಾರ, ಜುಲೈ 28, 2021
21 °C
ಐಮಂಗಲ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಆಕ್ರೋಶ

ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ರೈತರ ಪ್ರತಿಭಟನೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ನೂರಾರು ರೈತರು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಐಮಂಗಲ ಗ್ರಾಮದ ವಿದ್ಯುತ್ ವಿತರಣ ಕೇಂದ್ರದ ಮುಂದೆ ಸೋಮವಾರ ನಡೆಯಿತು.ಹಿಂದಿನ 20 ದಿನಗಳಿಂದ ಮಳೆ ಬಿದ್ದಿಲ್ಲ. ಮುಂಗಾರು ಮಳೆ ಬರಬಹುದೆಂಬ ನಂಬಿಕೆಯಿಂದ ನೀರಾವರಿ ಜಮಿನುಗಳಲ್ಲಿ ದುಬಾರಿ ಬೆಲೆ ತೆತ್ತು ತಂದಿರುವ ಈರುಳ್ಳಿ ಹಾಗೂ ಹತ್ತಿ ಬೀಜ ಬಿತ್ತನೆ ಮಾಡಿದ್ದೇವೆ. ಬೀಜ ಮೊಳೆತು ಬೆಳೆಯುವ ಹಂತದಲ್ಲಿ ಮಳೆ ಕೈಕೊಟ್ಟಿದೆ.

ಕೊಳವೆ ಬಾವಿಗಳಲ್ಲಿರುವ ನೀರು ಹರಿಸೋಣವೆಂದರೆ ವಿದ್ಯುತ್ ಲಭ್ಯವಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಹಗಲು ವೇಳೆ 4 ತಾಸು ಹಾಗೂ ರಾತ್ರಿ ಎರಡು ತಾಸು 3 ಫೇಸ್ ವಿದ್ಯುತ್‌ಸರಬರಾಜು ಮಾಡಲಾಗುತ್ತದೆ ಎಂದು ಹೇಳುವ ಇಲಾಖೆಯವರು ಒಂದು ದಿನವೂ  ನಿಗದಿಯಂತೆ ವಿದ್ಯುತ್ ನೀಡಿಲ್ಲ. ಯಾವಾಗ ವಿದ್ಯುತ್ ಇರುತ್ತದೆ, ಯಾವಾಗ ಹೋಗುತ್ತದೆ ಎನ್ನುವುದೇ ತಿಳಿಯದಾಗಿದೆ. ವಿದ್ಯುತ್‌ಬರುವುದನ್ನು ಕಾಯುತ್ತ ಹೊಲದಲ್ಲಿಯೇ ಬದುಕು ಸವೆಸಬೇಕಾಗಿದೆ. ಇದ್ದಕ್ಕಿದ್ದಂತೆ ವಿದ್ಯುತ್ ಕೊಡುವ ಕಾರಣ ಐಪಿ ಸೆಟ್‌ಗಳು ಸುಡುತ್ತಿವೆ. ಸತತ ಬರಗಾಲದಿಂದ ಕಂಗೆಟ್ಟಿರುವ ನಮಗೆ ಇನ್ನಷ್ಟು ತೊಂದರೆ ಕೊಟ್ಟರೆ ಸಹಿಸಲಾಗದು ಎಂದು ರೈತರು ಎಚ್ಚರಿಸಿದರು.ಸಂಜೆ ವೇಳೆ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಇದು ದೀಪದ ಬೆಳಕನ್ನು ಅಣಕಿಸುವಂತೆ ಇರುತ್ತದೆ. ಇಂತಹ ಬೆಳಕಿನಲ್ಲಿ  ವಿದ್ಯಾರ್ಥಿಗಳು ಓದುವುದು ಕಷ್ಟದ ಮಾತು. ಈ ವ್ಯವಸ್ಥೆಯನ್ನು ರದ್ದು ಪಡಿಸಿ ಹಿಂದಿನಂತೆ ನೀಡುತ್ತಿದ್ದ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಉಮಾಪತಿ, ಆನಂದ್, ಸಿದ್ದಪ್ಪರೆಡ್ಡಿ, ಬಸವರಾಜ್, ಮನು, ನಾಗರಾಜು ಆಗ್ರಹಿಸಿದರು.ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಿರಿಯೂರು ಬೆಸ್ಕಾಂ ವಿಭಾಗದ ಹಿರಿಯ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂದೆ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.