ಗುರುವಾರ , ಮೇ 6, 2021
23 °C

ಸಮಸ್ಯೆಗಳ `ಕೊಂಪೆ' ನಾಗಮ್ಮನಮಂಟಿ

ಪ್ರಜಾವಾಣಿ ವಿಶೇಷ ವರದಿ/ ಎಸ್.ರವಿ Updated:

ಅಕ್ಷರ ಗಾತ್ರ : | |

ಕುಶಾಲನಗರ: ಎತ್ತ ನೋಡಿದರೂ ರಸ್ತೆಗಳು ಸಿಗುವುದಿಲ್ಲ. ಚರಂಡಿಗಳ ಹೆಸರನ್ನು ಹೇಳುವಂತಿಲ್ಲ, ಇರಲು ಸೂರಿಲ್ಲ. ಆದರೂ ಮನೆ ಕಂದಾಯ ಮಾತ್ರ ಕಟ್ಟಬೇಕು...

15 ವರ್ಷಗಳಿಂದ ನಾಗಮ್ಮನಮಂಟಿಯಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರ ಸ್ಥಿತಿ ಇದು.ತುಸು ಹಿಂದೆ ಹೋಗಿ ನೋಡಿದರೆ ಇದು ಹಳೆಯ ಗ್ರಾಮವೇನೂ ಅಲ್ಲ. 30 ವರ್ಷಗಳ ಹಿಂದೆ ಕಂಬಾರಿಕೆ ಕೆಲಸ ಮಾಡಿಕೊಂಡು ಬದುಕು ನಡೆಸುವ ಸಲುವಾಗಿ ತಮಿಳುನಾಡಿನಿಂದ ಮಣಿ ಮತ್ತು ನಾಗಮ್ಮ ದಂಪತಿ ಇಲ್ಲಿಗೆ ಬಂದು ನೆಲೆಸಿದ್ದರು. ಸೂರಿಲ್ಲದೇ ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಈ ಮಂಟಿಯಲ್ಲಿ ಒಂದು ಗುಹೆಯಲ್ಲಿ ದಂಪತಿ ಬದುಕಿದ್ದರು. ಕೆಲವು ವರ್ಷಗಳ ನಂತರ ಈ ದಂಪತಿ ಇದೇ ಗುಹೆಯಲ್ಲೇ ಪ್ರಾಣ ಬಿಟ್ಟರು.ಇದಾದ ಕೆಲ ತಿಂಗಳ ನಂತರ ಕುಶಾಲನಗರ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದ 50 ಕುಟುಂಬಗಳು ಈ ಮಂಟಿಗೆ ಬಂದು ನೆಲೆ ನಿಂತವು. ಆದರೆ, ಅಂದಿನಿಂದ ಇಂದಿನವರೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕುವಂತಾಗಿದೆ.10 ವರ್ಷಗಳಿಂದ ಇದೇ ಮಂಟಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಆದರೆ, ರಸ್ತೆ ವ್ಯವಸ್ಥೆ ಕಲ್ಪಿಸುವ ಮಾತು ಆಡಲೇ ಇಲ್ಲ. ಈವರೆಗೂ ಇಲ್ಲಿನ ಯಾವುದೇ ಕುಟುಂಬಕ್ಕೂ ಪಡಿತರ ಚೀಟಿ ನೀಡಿಲ್ಲ. ಒಂದೆರಡು ಕುಟುಂಬಗಳಿಗೆ ಯಾರೋ ಪಡಿತರ ಚೀಟಿ ಮಾಡಿಸಿಕೊಟ್ಟಿದ್ದು, ಅದಕ್ಕೆ ಪಡಿತರ ಧಾನ್ಯ ದೊರೆಯುತ್ತಿಲ್ಲ. ಹೀಗಾಗಿ ಕೂಲಿ ಮಾಡಿದರೆ ಮಾತ್ರ ಒಂದು ಹಿತ್ತಿನ ಊಟ ಎನ್ನುವಂತಾಗಿದೆ ಇವರ ಬದುಕು. ಇದ ಮಂಟಿ ಆಗಿರುವುದರಿಂದ ರಸ್ತೆಗಳನ್ನು ಮಾಡಿಕೊಳ್ಳಲು ಇಲ್ಲಿನ ಜನರಿಂದಲೂ ಸಾಧ್ಯವಾಗಿಲ್ಲ. ಇನ್ನು ಸ್ಥಳೀಯ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ವಿದ್ಯುತ್ ಕಂಬಗಳೇ ಇಲ್ಲದಿರುವುದರಿಂದ ಬೀದಿ ದೀಪಗಳ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ.ತಮ್ಮ ಬದುಕಿಗೊಂದು ಸೂರು ಬೇಕೆಂದು ಜನರೇ ಕಟ್ಟಿಕೊಂಡ ಗುಡಿಸಲುಗಳಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು `ಮನೆ ನಂಬರ್' ಹಾಕಿದ್ದಾರೆ. ಅವುಗಳ ಆಧಾರದಲ್ಲಿ ಕಂದಾಯವನ್ನು ವಸೂಲಿ ಮಾಡುತ್ತಾರೆ. ಆದರೆ, ಯಾವುದೇ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ.ಒಟ್ಟಾರೆ ನಾಗಮ್ಮನ ಮಂಟಿಯಲ್ಲಿ ಬದುಕುತ್ತಿರುವ 50 ಕುಟುಂಬಗಳು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಸಂಪೂರ್ಣ ಕತ್ತಲೆಯಲ್ಲಿ ಬದುಕು ದೂಡಬೇಕಾಗಿದೆ.ಜನಪ್ರತಿನಿಧಿಗಳ ಸದ್ದೇ ಇಲ್ಲ

ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರದಿಂದ ಬರುವ ಅನುದಾನಗಳನ್ನು ಜನಪ್ರತಿನಿಧಿಗಳೇ ಬಳಸಿಕೊಳ್ಳುತ್ತಾರೆ. ಅಂತಹ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ. ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ. ಈಗಿರುವ ರಾಜಕಾರಣಿಗಳು ಇತ್ತ ಸುಳಿದೇ ಇಲ್ಲ. ಇದರಿಂದಾಗಿ ನಮ್ಮಗಳ ಬದುಕು ತುಂಬ ದುಸ್ತರವಾಗಿದೆ. ಬೇಸಿಗೆ ಕಾಲದಲ್ಲಿ ಹನಿ ನೀರಿಗೂ ಪರದಾಡಬೇಕು. ಮಳೆಗಾಲ ಬಂತೆಂದರೆ ಗುಡಿಸಲು ಬೀಳುತ್ತವೆ ಎಂಬ ಭಯದಿಂದ ಬದುಕಬೇಕು. ಸಣ್ಣಮಕ್ಕಳ ಸ್ಥಿತಿಯಂತೂ ಹೇಳತೀರದು ಎನ್ನುತ್ತಾರೆ ಇಲ್ಲಿನ ನಿವಾಸಿ ಸುರೇಶ್.ಅಲ್ಲಿ ಯಾರೂ ಬಡವರಿಲ್ಲ.

ನಾಗಮ್ಮನ ಮಂಟಿಯಲ್ಲಿ ವಾಸಿಸುತ್ತಿರುವರ‌್ಯಾರು ಬಡವರಲ್ಲ. ಅಲ್ಲಿನ ಸಾಕಷ್ಟು ಜನ ಬೇರೆಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಸುಳ್ಳು ಹೇಳಿಕೊಂಡು ನಿವೇಶನ ಪಡೆದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಡಿಮೆ ಕೂಲಿ ಇರುವುದರಿಂದ ಅವರೇ ಕೂಲಿಗೆ ಬರುವುದಿಲ್ಲ. ಬದಲಾಗಿ ಗ್ರಾಮ ಪಂಚಾಯಿತಿ ಮೇಲೆ ಗೂಬೆ ಕೂರಿಸುತ್ತಾರೆ ಎಂಬುದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಶಿವಾನಂದ ಅವರ ಮಾತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.