ಗುರುವಾರ , ಮೇ 13, 2021
31 °C

ಸಮಾಜ ಸೇವಕರೇ ನಿಜವಾದ ನಾಯಕರು: ನಟ ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಬೆಂಗಳೂರನ್ನು ಕಟ್ಟಿ ಬೆಳೆಸುವಲ್ಲಿ ಸದ್ದಿಲ್ಲದೇ ದುಡಿಯುತ್ತಿರುವ ಅದೆಷ್ಟೊ ಜನರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಬಹಳ ಸಂತೋಷದ ವಿಚಾರ~ ಎಂದು ನಟ ರಮೇಶ್ ಅರವಿಂದ್ ಶ್ಲಾಘಿಸಿದರು.

 ನಮ್ಮ ಬೆಂಗಳೂರು ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ `ನಮ್ಮ ಬೆಂಗಳೂರು 2011~ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.  `ಸೆಲೆಬ್ರಿಟಿ ಮತ್ತು ನಾಯಕ ಈ ಎರಡು ಪದಗಳು ವಿಭಿನ್ನ. ಚಿತ್ರರಂಗದಲ್ಲಿ ಸಾಧನೆ ಮಾಡುವವರು ಸೆಲೆಬ್ರಿಟಿಗಳಾಬಹುದು ಆದರೆ ಯಾವ ಅಪೇಕ್ಷೆಯನ್ನು ಬಯಸದೇ ಸಾಮಾಜಿಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವವರೇ ನಿಜವಾದ ನಾಯಕರು. ಅವರನ್ನು ಸದಾ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ~ ಎಂದು ಹೇಳಿದರು.ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್, `ನಗರ ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ನಿಜವಾದ ನಾಯಕರನ್ನು ಹುಡುಕಿ ಅವರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಪ್ರತಿಷ್ಠಾನವು ಸದಾ ಬದ್ದವಾಗಿದೆ ~ ಎಂದು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, `ಸರ್ಕಾರ ನೌಕರನಾಗಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿರುವುದಕ್ಕೆ ಹರ್ಷಿಸುತ್ತೇನೆ. ಪ್ರಶಸ್ತಿಯಲ್ಲಿರುವ ಒಂದು ಲಕ್ಷ ರೂಪಾಯಿಯನ್ನು ಸೇವೆಯಲ್ಲಿರುವಾಗಲೇ ಮೃತರಾಗುವ ಅರಣ್ಯ ಇಲಾಖೆಯ ಅಧಿಕಾರಿಗಳ ಕುಟುಂಬಗಳಿಗೆ ನೀಡಲು ಬಯಸುತ್ತೇನೆ~ ಎಂದು ಹೇಳಿದರು.  ಬಿಯಾಂಡ್ ಕಾರ್ಲ್‌ಟರ್ನ್ ಟವರ್ ಸಂಸ್ಥೆಯ ಉದಯ ವಿಜಯನ್ ( ನಾಗರಿಕ ), ಕ್ಯಾನ್ಸರ್ ರೋಗಿಗಳ ಉಚಿತ ಆಸ್ಪತ್ರೆ ಕರುಣಾಶ್ರಯದ ಕಲಾದೇವರಾಜನ್, ಘನತ್ಯಾಜ್ಯ ನಿರ್ವಹಣಾ ದುಂಡು ಮೇಜು ಸಂಸ್ಥೆಯ  ಮೀನಾಕ್ಷಿ ಭರತ್ ( ಸಂಸ್ಥೆ),  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್, ಬಿಬಿಎಂಪಿ ಪೌರ ಕಾರ್ಮಿಕರಾದ ಲಕ್ಷ್ಮಮ್ಮ ( ಸರ್ಕಾರಿ ನೌಕರರು), ಕೃಷ್ಣ ಬೈರೇಗೌಡ ( ಚುನಾಯಿತ ಪ್ರತಿನಿಧಿ), ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಯೋಗಿನಾಥ್ ( ಸರ್ಕಾರಿ ಸಂಸ್ಥೆ), ಸಾಹಸ್ ಶೂನ್ಯ ತ್ಯಾಜ್ಯ ಪರಿಹಾರ ಸಂಸ್ಥೆಯ ವಿಲ್ಮಾ ರೋಡ್ರಿಗ್ರಸ್ (ಸಾಮಾಜಿಕ ಉದ್ಯಮಿ), ನ್ಯಾಯಮೂರ್ತಿ ಸುಧೀಂದ್ರರಾವ್ (ವರ್ಷದ ಬೆಂಗಳೂರಿಗ) ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.    ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.ಜೀವನೋತ್ಸವ ತಂಡದಿಂದ ಜನಪದ ನೃತ್ಯವನ್ನು ಪ್ರದರ್ಶಿಸಲಾಯಿತು.  ಅಂಧ ಗಾಯಕ ಜಿ.ಎ.ನಾಗೇಶ್ ಅವರು ಗಾಯನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ಸಿನಿತಾರೆಯರಾದ ಧೃವ ಸರ್ಜಾ ಮತ್ತು ನೀತು ಅವರಿಂದ ನಡೆದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.  ಅವಾಸ್ ಸಂಸ್ಥೆಯ ಟ್ರಸ್ಟಿ ಅನಿತಾ ರೆಡ್ಡಿ, ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾದ ಎಚ್.ಎಸ್.ಬಲರಾಂ, ಅಶೋಕ್ ಸೂಟಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.