ಗುರುವಾರ , ಜೂನ್ 17, 2021
26 °C
‘ದಿ ಲೆಜೆಂಡ್‌ ಆಫ್‌ ಭಗತ್‌ಸಿಂಗ್’ ಚಿತ್ರ ಪ್ರದರ್ಶನ, ಸಂವಾದ ಕಾರ್ಯಕ್ರಮ

ಸಮಾನತೆಯ ಸಮಾಜದ ಕನಸು ಕಂಡಿದ್ದ ಭಗತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಮಾನತೆಯ ಸಮಾಜದ ಕಸನು ಕಂಡಿದ್ದ ಭಗತ್ ಸಿಂಗ್‌ ಅಪ್ರತಿಮ ದೇಶಭಕ್ತ. ಕೇವಲ 23 ವರ್ಷಕ್ಕೆ ನೇಣುಗಂಬ ಏರಿದ ಅವರು ಗಾಂಧೀಜಿಯಷ್ಟೇ ಜನಪ್ರಿಯತೆ ಹೊಂದಿದ್ದ ಮಹಾನ್‌ ಹೋರಾಟಗಾರ ಎಂದು ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯೂತ್‌ ಆರ್ಗನೈಜೇಷನ್‌ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕುಕ್ಕುವಾಡ ಸ್ಮರಿಸಿದರು.ಭಗತ್‌ಸಿಂಗ್, ಸುಖದೇವ್‌ ಹಾಗೂ ರಾಜಗುರು ಅವರ 83ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ‘ದಿ ಲೆಜೆಂಡ್‌ ಆಫ್‌ ಭಗತ್‌ಸಿಂಗ್’ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಮ್ಮ 12ನೇ ವಯಸ್ಸಿಗೆ ಜಲಿಯನ್‌ ವಾಲಬಾಗ್‌ ಹತ್ಯಾಕಾಂಡದಲ್ಲಿ ಸುಮಾರು 2 ಸಾವಿರ ಹೋರಾಟಗಾರರು ಮಡಿದ ಘಟನೆಯಿಂದ ಮನನೊಂದ ಅವರು, ಬಾಲ್ಯದಲ್ಲೇ ಗಾಂಧೀಜಿ ಅವರ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು.

ಆದರೆ, ಚೌರಿಚೌರ ಪ್ರಕರಣದ ನಂತರ ಗಾಂಧೀಜಿ ಸತ್ಯಾಗ್ರಹ ವಾಪಸ್ ಪಡೆದ ಘಟನೆಯಿಂದ ಮನನೊಂದು ಗಾಂಧಿವಾದದಿಂದ ವಿಮುಖರಾಗಿದ್ದರು ಎಂದು ವಿವರ ನೀಡಿದರು.ಮುಂದೆ 1928ರಲ್ಲಿ ಸೈಮನ್‌ ಕಮಿಷನ್‌ ವಿರುದ್ಧ ಪ್ರತಿಭಟನೆ ನಡೆಸಿದ ಲಾಲ್‌ ಲಜಪತ್‌ ರಾಯ್‌ ಸಾವಿಗೆ ಸೇಡು ತೀರಿಸಿಕೊಳ್ಳಲು ಬ್ರಿಟಿಷ್‌ ಅಧಿಕಾರಿ ಸ್ಯಾಂಡರ್ಸ್‌ ಅವರನ್ನು ಗುಂಡಿಕ್ಕಿಕೊಂದರು. ಜೈಲಿನಲ್ಲಿದ್ದಾಗಲೂ ಅಲ್ಲಿನ ಸಮಸ್ಯೆ ವಿರುದ್ಧ ದೀರ್ಘಾವಧಿ ಉಪವಾಸ ಕೈಗೊಂಡಿದ್ದರು ಎಂದು ಇತಿಹಾಸ ಮೆಲುಕು ಹಾಕಿದರು.ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಂಚಾಲಕ, ಡಾ.ವಸುದೇಂದ್ರ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್‌ಸಿಂಗ್ ವಿಚಾರ, ಆದರ್ಶಗಳಿಂದ ಇಂದಿನ ಯುವ ಸಮುದಾಯ ವಿಮುಖವಾಗಿದೆ. ಹಾಗಾಗಿ, ಹಸಿವು, ನಿರುದ್ಯೋಗ, ಮಹಿಳಾ ದೌರ್ಜನ್ಯದಂತಹ ಸಮಸ್ಯೆ ಸಮಾಜವನ್ನು ಕಾಡುತ್ತಿದೆ ಎಂದು ವಿಶ್ಲೇಷಿಸಿದರು.ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಘಟಕಿ ಶಬನಂ ಮಾತನಾಡಿ, ಭಗತ್‌ಸಿಂಗ್‌ ಹಿಂಸೆ, ಉಗ್ರವಾದವನ್ನು ಎಂದೂ ಪ್ರತಿಪಾದಿಸಲಿಲ್ಲ. ಕ್ರಾಂತಿಯು ಭಾರತೀಯರ ಆತ್ಮ ರಕ್ಷಣೆ ಹಾಗೂ ಸ್ವಾಭಿಮಾನದ ಪ್ರತೀಕ. ಸಂಪೂರ್ಣ ಸ್ವರಾಜ್ಯವೇ ಅವರ ಹೋರಾಟದ ಗುರಿಯಾಗಿತ್ತು ಎಂದು ಪ್ರತಿಪಾದಿಸಿದರು.ಪಿ.ಪರಶುರಾಮ್‌, ತಿಪ್ಪೇಸ್ವಾಮಿ, ಭಾರತಿ, ಲತಾ, ಬನಶ್ರೀ, ವಿನಯ್, ಸುಮಾ, ವಿನಯ್‌ಕುಮಾರಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ಪಾಲಿಕೆ ಮುಂಭಾಗ ಇರುವ ಭಗತ್‌ಸಿಂಗ್ ಪ್ರತಿಮೆಗೆ ಸಂಘಟನೆಯ ಕಾರ್ಯಕ್ರರ್ತರು ಮಾಲಾರ್ಪಣೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.