ಶುಕ್ರವಾರ, ಜೂಲೈ 3, 2020
22 °C

ಸಮಾರೋಪಗೊಂಡ ಪುಸ್ತಕ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾರೋಪಗೊಂಡ ಪುಸ್ತಕ ಮೇಳ

ಚಿಕ್ಕಬಳ್ಳಾಪುರ: ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಗ್ರಂಥಾಲಯ ಪುಸ್ತಕ ಮೇಳ ಬುಧವಾರ ಕೊನೆಗೊಂಡಿತು. ಗುಡಿಬಂಡೆ ತಾಲ್ಲೂಕಿನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತ್ತ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಪುಸ್ತಕಗಳನ್ನು ಕೊಳ್ಳುವುದರ ಜೊತೆಗೆ ಪುಸ್ತಕ ಮೇಳವು ಸಮಾರೋಪಗೊಂಡಿತು. ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚಿಸಬೇಕು, ಪುಸ್ತಕ ಓದುವ ಸಂಸ್ಕೃತಿ ಬಾಲ್ಯದಿಂದಲೇ ಬೆಳೆಯಬೇಕು ಎಂಬ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನದ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೇಳವನ್ನು ಆಯೋಜಿಸಿತ್ತು.ಜಿಲ್ಲೆಯ ಆರು ತಾಲ್ಲೂಕುಗಳಾದ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಗುಡಿಬಂಡೆ ಶಾಲೆಗಳ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮೇಳಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಿದರು. ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗಿದ್ದ 83 ಲಕ್ಷ ರೂಪಾಯಿ ಅನುದಾನದಲ್ಲಿ ಕಿರಿಯ ಪ್ರಾಥಮಿಕ ಶಾಲೆಗೆ 3 ಸಾವಿರ ರೂಪಾಯಿ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ 10 ಸಾವಿರ ರೂಪಾಯಿ ನೀಡಲಾಗಿತ್ತು. ಹಣವನ್ನು ಸಂಪೂರ್ಣವಾಗಿ ಪುಸ್ತಕಗಳ ಖರೀದಿಗೆ ಬಳಸಬೇಕು ಎಂದು ಸೂಚಿಸಲಾಗಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಸೇರಿದಂತೆ ಇತರ ಭಾಷೆಗಳ ಪುಸ್ತಕಗಳನ್ನು ಸಹ ಕೊಳ್ಳಬೇಕು ಎಂದು ಹೇಳಲಾಗಿತ್ತು. ಜಿಲ್ಲೆಯಲ್ಲಿನ 1572 ಶಾಲೆಗಳ ಪ್ರತಿನಿಧಿಗಳು ಮೇಳಕ್ಕೆ ಭೇಟಿ ನೀಡಿ, ಪುಸ್ತಕಗಳನ್ನು ಖರೀದಿಸಿದರು. 1077 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಪ್ರತಿನಿಧಿಗಳು ಮೂರು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿದರೆ, 515 ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿನಿಧಿಗಳು 10 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿದರು.ಈ ರೀತಿಯ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಗರಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಸಹ ಮೇಳಕ್ಕೆ ಆಗಾಗ್ಗೆ ಭೇಟಿ ನೀಡಿ, ಪುಸ್ತಕಗಳನ್ನು ಖರೀದಿಸಿದರು. ಪುಸ್ತಕಗಳ ಖರೀದಿ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಿದ ಶಾಲಾ ಪ್ರತಿನಿಧಿಗಳು ನಂತರದ ದಿನಗಳಲ್ಲಿ ಯೋಜನಾಬದ್ಧವಾಗಿ ಪುಸ್ತಕಗಳನ್ನು ಖರೀದಿಸಿದರು ಮತ್ತು ಸಾಗಿಸಿದರು.ಆಯಾ ತಾಲ್ಲೂಕಿನ ಶಾಲೆಗಳಿಗೆ ಒಂದೊಂದು ದಿನವನ್ನು ಮೀಸಲಿಡಲಾಗಿದ್ದ ಕಾರಣ ಆಯಾ ಶಾಲೆಗಳ ಪ್ರತಿನಿಧಿಗಳು ಪರಸ್ಪರ ಚರ್ಚಿಸಿಕೊಂಡು ಸರಕು ಸಾಗಣೆ ವಾಹನದ ಮಾಡಿಕೊಳ್ಳುತ್ತಿದ್ದರು. ಬೃಹತ್ ಗೋಣಿ ಚೀಲಗಳಲ್ಲಿ ಪುಸ್ತಕಗಳನ್ನು ತುಂಬಿಸಿಕೊಂಡು ತಮ್ಮ ಶಾಲೆಗಳಿಗೆ ಪುಸ್ತಕಗಳನ್ನು ಸಾಗಿಸುತ್ತಿದ್ದರು. ಬುಧವಾರ ಮಧ್ಯಾಹ್ನ ನಡೆದ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಯು.ಚಂದ್ರಶೇಖರ್ ಅವರು ಶಿಕ್ಷಕರನ್ನು ಅಭಿನಂದಿಸಿದರು. ಮೇಳದುದ್ದಕ್ಕೂ ಉತ್ತಮ ಬೆಂಬಲ ನೀಡಿದ್ದಕ್ಕೆ ಮತ್ತು ಪುಸ್ತಕಗಳನ್ನು ಖರೀದಿಸಿದ್ದಕ್ಕೆ ಶಿಕ್ಷಕರನ್ನು ಶ್ಲಾಘಿಸಿದರು. ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಕನ್ನಯ್ಯ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.