ಮಂಗಳವಾರ, ಜೂನ್ 15, 2021
21 °C

ಸಮ್ಮಿಶ್ರ ಸರ್ಕಾರದ ಅಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆಯಲ್ಲಿನ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಯಾಣ ದರ ಏರಿಸುವ ನಿರ್ಧಾರ ಪ್ರಕಟಿಸಿದ್ದಕ್ಕಾಗಿ ತಲೆದಂಡಕ್ಕೆ ಗುರಿಯಾಗಬೇಕಾಗಿ ಬಂದ ದಿನೇಶ್ ತ್ರಿವೇದಿ ಪ್ರಕರಣ ಸಮ್ಮಿಶ್ರ ಸರ್ಕಾರದ ನಾಜೂಕು ಸ್ವರೂಪಕ್ಕೊಂದು ನಿದರ್ಶನ.ಬಜೆಟ್ ಮಂಡಿಸಿದ ನಂತರ ಸಚಿವ ಸ್ಥಾನ ತ್ಯಜಿಸಬೇಕೆಂಬ ಪಕ್ಷದ ಕಡೆಯಿಂದ ಬಂದ ಒತ್ತಡದ ಘಟನೆ ದೇಶದ ಸಂಸತ್ತಿನಲ್ಲಿ ಪ್ರಾಯಶಃ ಇದು ಮೊದಲಿನದು. ಪ್ರಯಾಣ ದರ ಏರಿಕೆಯ ಪ್ರಸ್ತಾಪವನ್ನು ತಮ್ಮಂದಿಗೆ ಚರ್ಚಿಸಿಲ್ಲ ಎಂಬ ಕಾರಣಕ್ಕೆ ತ್ರಿವೇದಿ ಅವರು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ.ದರ ಏರಿಕೆಯ ಪ್ರಸ್ತಾಪ ರೈಲ್ವೆಯ ಸುಧಾರಣೆಗೆ ಅವಶ್ಯವಿದ್ದ ಇಲಾಖೆಯ ಅಗತ್ಯ ಎಂಬ ತ್ರಿವೇದಿಯವರ ಸಮರ್ಥನೆಯನ್ನು ಅವರ ಪಕ್ಷ, ವಾಸ್ತವ ದೃಷ್ಟಿಯಿಂದ ಗಮನಿಸುವ ತಾಳ್ಮೆಯನ್ನು ಪ್ರದರ್ಶಿಸಿಲ್ಲ. ಹೀಗೆ  ಸಂಸದೀಯ ಶಿಷ್ಟಾಚಾರವನ್ನು ಭಗ್ನಗೊಳಿಸುವ ತೃಣಮೂಲ ಕಾಂಗ್ರೆಸ್ಸಿನ ನಡವಳಿಕೆ ಸಮರ್ಥನೀಯವಲ್ಲ.

 

ರೈಲ್ವೆ ಸಚಿವರು ಬಜೆಟ್‌ಅನ್ನು ಮಂಡಿಸುವ ಮೊದಲು ಕೇಂದ್ರ ಸಂಪುಟದ ಅನುಮೋದನೆ ಪಡೆಯುವುದರಿಂದ ಅದು ಇಡೀ ಸರ್ಕಾರದ ಪ್ರಸ್ತಾವನೆಯಾಗಿರುತ್ತದೆ. ಅದನ್ನು ಬದಲಿಸುವ, ಪರಿಷ್ಕರಿಸುವ ಇಲ್ಲವೆ ಹಿಂದಕ್ಕೆ ಪಡೆಯುವಂತೆ ಮಾಡುವ ಅವಕಾಶ ರಾಜಕೀಯ ಪಕ್ಷಗಳಿಗೆ ಸಂಸತ್ತಿನಲ್ಲಿಯೇ ಇರುತ್ತದೆ.ಸರ್ಕಾರದಲ್ಲಿ ಭಾಗಿಯಾಗಿರುವ ತೃಣಮೂಲ ಕಾಂಗ್ರೆಸ್, ಪ್ರಯಾಣ ದರ ಏರಿಕೆಯ ಕುರಿತಾಗಿ ತನ್ನ ಆಕ್ಷೇಪವನ್ನು ಚರ್ಚೆಯ ಸಂದರ್ಭದಲ್ಲಿ ದಾಖಲಿಸುವ ಸಂಸದೀಯ ಮಾರ್ಗವನ್ನು ಕೈಬಿಟ್ಟು, ಬಜೆಟ್ ಮಂಡನೆಯ ಮರುಕ್ಷಣವೇ ತನ್ನ ಪಕ್ಷದ ಸಚಿವರ ತಲೆದಂಡಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿಯೇ ಬಿಕ್ಕಟ್ಟು ಎದುರಿಸುವಂತೆ ಮಾಡಿದ್ದಾರೆ.ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲೇಬಾರದು ಎಂದು ಹಠ ಹಿಡಿಯುವುದು ಸಮರ್ಥನೀಯವಲ್ಲ.ಮಮತಾ ಬ್ಯಾನರ್ಜಿ ಈಗ ರಾಜ್ಯವೊಂದರ ಮುಖ್ಯಮಂತ್ರಿ. ಜನಸಾಮಾನ್ಯರಿಗೆ ಹೊರೆ ಆಗುತ್ತಿದೆ ಎಂದು ಹಿಂದಿನ ಸರ್ಕಾರ ವಿಧಿಸಿದ್ದ ತೆರಿಗೆಗಳನ್ನು ತಮ್ಮ ಮುಂದಿನ ಬಜೆಟ್‌ನಲ್ಲಿ ರದ್ದುಪಡಿಸಲ್ದ್ದಿದಾರೆಯೇ? ಇದು ಜವಾಬ್ದಾರಿಯುತ ವರ್ತನೆಯಲ್ಲ.ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ದೃಷ್ಟಿಯನ್ನು ತಾಳಲು ನಿರಾಕರಿಸುತ್ತವೆ ಎಂಬುದಕ್ಕೆ ಮಮತಾ ಬ್ಯಾನರ್ಜಿ ಅವರ ಈ ವಿಚಿತ್ರ ವರ್ತನೆ ನಿದರ್ಶನ. ಇಂಥ ಸಂಕುಚಿತ ದೃಷ್ಟಿ, ಕೇಂದ್ರ ಸರ್ಕಾರ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗುತ್ತದೆ.ಪ್ರಾದೇಶಿಕ ಪಕ್ಷಗಳ ಬೆಂಬಲದ ಮುಲಾಜಿನಲ್ಲಿ ಸಿಲುಕಿ 2ಜಿ ಹಗರಣದಂತಹ ಲಕ್ಷಾಂತರ ಕೋಟಿ ಹಣದ ಲೂಟಿಯನ್ನು ಸಹಿಸಿಕೊಳ್ಳುವ ಅಸಹಾಯಕ ಸ್ಥಿತಿ ತಲುಪಿದ ಯುಪಿಎ, ಈಗ ಮಮತಾ ಬ್ಯಾನರ್ಜಿ ಹಠದ ಎದುರು ಪರದಾಡುತ್ತಿದೆ.

 

ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದ ಅಂಗಪಕ್ಷಗಳು ಇದೀಗ ಸಂಸತ್ತಿನಲ್ಲಿ ಉಸಿರು ಕಟ್ಟಿಸುವಂಥ ಪರಿಸ್ಥಿತಿ ನಿರ್ಮಿಸುತ್ತಿವೆ. ಇದಕ್ಕೆ ಕಾಂಗ್ರೆಸ್ಸಿನ ದುರ್ಬಲ ನಾಯಕತ್ವವೇ ಕಾರಣ.ಆಡಳಿತ ಪಕ್ಷ ಸಂಸತ್ತಿನಲ್ಲಿಯೇ ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದರೆ ಅದರಿಂದ ದೇಶದ ರಕ್ಷಣೆಯಾದರೂ ಹೇಗೆ ಸಾಧ್ಯ? ಸರ್ಕಾರದ ಅಭದ್ರತೆ ದೇಶದ ಸುರಕ್ಷತೆಗೂ ಧಕ್ಕೆ ಉಂಟು ಮಾಡಬಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.