ಶುಕ್ರವಾರ, ಆಗಸ್ಟ್ 7, 2020
25 °C

ಸಮ ಸಮವಸ್ತ್ರವೆಂಬ ಸಂಕೋಲೆ ಏಕೆ?

ಬಿಂಡಿಗನವಿಲೆ ಭಗವಾನ್ Updated:

ಅಕ್ಷರ ಗಾತ್ರ : | |

ಸಮ ಸಮವಸ್ತ್ರವೆಂಬ ಸಂಕೋಲೆ ಏಕೆ?

ಕೊರಳು ಬಿಗಿಯುವ ಟಾಯ್, ಒಂದು ವರಸೆ ಹೆಚ್ಚಾಗಿಯೆ ಬಂಧಿಸುವ ಬೆಲ್ಟ್, ಪಾದಗಳಲ್ಲಿ ಸರಾಗ ರಕ್ತ ಪರಿಚಲನೆಗೆ ತಡೆಯೊಡ್ಡುವ ಬೂಟುಗಳು. ಇವರು ಹೊರಟಿರುವುದು ಶಾಲೆಗೊ ಅಥವಾ ಅಂತರಿಕ್ಷಯಾನಕ್ಕೊ ಎಂಬ ಗುಮಾನಿ ಹುಟ್ಟಿಸುವ ಬೆನ್ನಹೊರೆ ಇದ್ದಿದ್ದೆ ಬಿಡಿ. ಆದರೆ ಇಲ್ಲಿರುವ ಪ್ರಶ್ನೆಯೆಂದರೆ ಈ ನೆಲಕ್ಕಂತೂ ಒಗ್ಗದ ಸಮವಸ್ತ್ರವೆಂಬ ಸಂಕೋಲೆ ನಮ್ಮ ಮಕ್ಕಳಿಗೆ ಬೇಕೇ? ಹಿರಿಯರಾದ ನಾವು `ನಮ್ಮ ದಿರಿಸು, ನಮಗೆ ಸರಾಗ, ನಮ್ಮ ಆಯ್ಕೆ~ ಎಂದು ಬೀಗುತ್ತೇವೆ. ಅದು ಎಳೆಯರಿಗೂ ಅನ್ವಯಿಸುತ್ತದೆ ಎಂಬ ಸತ್ಯವನ್ನೇಕೆ ಮರೆಮಾಚುತ್ತೇವೆ?ಬಹುತೇಕ ಸಂದರ್ಭದಲ್ಲಿ ಶಾಲಾ ಸಮವಸ್ತ್ರ ಮಕ್ಕಳು ಬಯಸದ ಬಲವಂತದ ಉಡುಪು. ತರಗತಿಯೆನ್ನುವುದು ಆ ಕಾರಣಕ್ಕಾಗಿ ಅವರ ಪಾಲಿಗೆ ದುರ್ದೆಸೆಯಾಗುತ್ತದೆ. ಒಂದು ಸ್ವಾರಸ್ಯಕರ ಸಂಗತಿ ನೆನಪಾಗುತ್ತದೆ. ಪ್ರಮುಖ ಹುದ್ದೆಯೊಂದಕ್ಕೆ ನಡೆದಿದ್ದ ಸಂದರ್ಶನದಲ್ಲಿ ಆ ಅಭ್ಯರ್ಥಿ ತಬ್ಬಿಬ್ಬಾಗಿದ್ದ. `ನೀವು ಓದಿದ ಶಾಲೆಯಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯವಾಗಿತ್ತು ಎಂದು ಹೇಳಿದಿರಿ. ಹಾಗಾದರೆ ನಿಮಗಿಂತ ಬೇರೆ ಬೇರೆಯಾಗಿರುವರ ಜೊತೆ ನೀವು ಈಗ ಹೇಗೆ ನಿಭಾಯಿಸುವಿರಿ?~ ಎಂಬ ಕ್ಷಿಪಣಿಯಂಥ ಪ್ರಶ್ನೆ ಆತನನ್ನು ಗಲಿಬಿಲಿಗೊಳಿಸಿತ್ತು.`ನಮ್ಮದು ಸ್ವತಂತ್ರ ರಾಷ್ಟ್ರ. ನಾವು ಸ್ವತಂತ್ರರಾಗಿ ಅರವತ್ತೈದು ವರ್ಷಗಳಾಗುತ್ತಿವೆ~ ಎಂದು ಮಕ್ಕಳಿಗೆ ಬೋಧಿಸುತ್ತೇವೆ. ಆದರೆ ಅದೇ ಶಾಲೆ `ನಾವು ಹೇಳಿದ ಉಡುಗೆ ತೊಡುಗೆಯಲ್ಲೇ ನೀವು ಬರಬೇಕು. ಇಂಥ ಲೇಸ್, ಇಂಥ ಬಣ್ಣದ ಚೀಲವೇ ಆಗಬೇಕು~ ಎಂದು ಮಕ್ಕಳಿಗೆ ಹುಕುಂ ನೀಡಿರುತ್ತದೆ.ಹುಟ್ಟುತ್ತಲೆ ಪ್ರತಿಯೊಂದು ಮಗುವಿಗೆ ಅನನ್ಯವಾದ ವ್ಯಕ್ತಿತ್ವವಿರುತ್ತದೆ. ಪ್ರಕೃತಿ ಅನುರೂಪತೆಯನ್ನು ಧಿಕ್ಕರಿಸುತ್ತದೆ. ಒಂದೊಂದು ಜೀವಿಯ ಅಭಿರುಚಿಯೂ ಭಿನ್ನ ಭಿನ್ನ. ಐದು ಬೆರಳುಗಳು ಒಂದೇ ಸಮವಾಗಿಲ್ಲ.ಈ ಕಾರಣದಿಂದಲೇ ಕೈಯಿಂದ ಏನನ್ನಾದರೂ ಹಿಡಿಯಲು ಸಾಧ್ಯವಾಗಿದೆ. ಮಕ್ಕಳಿಗೆ ಸಮವಸ್ತ್ರ ವಿಧಿಸುವುದರಿಂದ ಅವರ ಸ್ವಂತಿಕೆ, ಅವರತನ, ಖಾಸಗಿತನದ ಮೇಲೆ ವೃಥಾ ಅತಿಕ್ರಮಣ ನಡೆಸಿದಂತಾಗುತ್ತದೆ. ನಿಗದಿತ ಸಮವಸ್ತ್ರ ಕೊಡಿಸಲು ಪೋಷಕರು ತಮ್ಮ ಮಕ್ಕಳನ್ನು ಶಹರಿಗೆ ಕರೆದೊಯ್ದಾಗ ಇಂಥಹದ್ದೆ ದರ್ಜೆ, ವಿನ್ಯಾಸದ್ದೇ ಬೇಕೆಂದು ಅವರು ಕೇಳಿಯೇ ತೀರುತ್ತಾರೆ. ಅವರ ಆಯ್ಕೆಯನ್ನು ಹತ್ತಿಕ್ಕಲು ಅಸಾಧ್ಯ ಎನ್ನುವುದಕ್ಕೆ ಇದಕ್ಕಿಂತ ಬೇರೇ ಸಾಬೀತು ಅನಗತ್ಯ.ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಉಡುಗೆ ತೊಡುಗೆಗಳನ್ನು ತಾವೇ ನಿರ್ಧರಿಸುವುದು ಬೆಳವಣಿಗೆಯ ಒಂದು ಭಾಗ. ಸಮವಸ್ತ್ರ ಎನ್ನುವುದು `ಅನುರೂಪತೆಯೆ ಮುಖ್ಯ. ಅದೇ ಶಿಸ್ತು~ ಎಂಬ ಸಲ್ಲದ ಭಾವನೆಯನ್ನು ಮಕ್ಕಳಲ್ಲಿ ಬಿತ್ತುತ್ತದೆ. ಒಬ್ಬರ ಅಭಿರುಚಿ ಅವರ ದಿರಸಿನಲ್ಲಿ ಪ್ರಕಟವಾಗುತ್ತದೆ.ಮಕ್ಕಳು ಅವರವರು ಒಪ್ಪುವ ಮೆಚ್ಚುವ ಉಡುಪಿನಲ್ಲಿರಲಿ. ಆದರೆ ಜೊತೆಗೆ ವಸ್ತ್ರಸಂಹಿತೆ ಎನ್ನುವುದೂ ಇರಲಿ. ಪರಸ್ಪರ ಒಬ್ಬರು ಇನ್ನೊಬ್ಬರಲ್ಲಿ ಹೊಸತನ್ನು ಕಂಡುಕೊಳ್ಳುವಂಥ ಪರಿಸರ ಶಾಲೆಯ ಆವರಣದಲ್ಲಿರಲಿ.ಇವರು ಇಂಥ ಶಾಲೆಯ ಮಕ್ಕಳು ಎಂದು ಗುರುತಿಸಲು ಸಮವಸ್ತ್ರ ಸಹಕಾರಿ ಎಂಬ ವಾದವಿದೆ. ಅಸಲಿಗೆ ಹಾಗೆ ಯಾರು, ಏಕೆ ತಿಳಿಯಬೇಕು? ವಿದ್ಯಾಸಂಸ್ಥೆಗಳ ನಡುವೆಯೆ ಪೈಪೋಟಿ ಹುಟ್ಟಬೇಕೆ? ಕಲಿಯಲು ಶಾಲೆಯ ಆಯ್ಕೆ ಅವರವರ ವೈಯಕ್ತಿಕ ಅನುಕೂಲ, ಆಸಕ್ತಿಗೆ ಬಿಟ್ಟದ್ದು.ವೈವಿಧ್ಯಮಯ ದಿರಿಸುಧಾರಿ ಮಕ್ಕಳನ್ನು ನೋಡುವುದೆ ಹಬ್ಬ. ಎಲ್ಲರಲ್ಲೂ ಸೃಜನಶೀಲತೆ, ಪ್ರತಿಭೆ ಇದ್ದೇ ಇರುತ್ತದೆ. ಎಂದ ಮೇಲೆ ಪ್ರತಿ ವಿದ್ಯಾರ್ಥಿಯಲ್ಲೂ ಸಕಾರಾತ್ಮಕವಾದುದನ್ನು ಕಾಣಬೇಕಾದ ಹೊಣೆ ಅಧ್ಯಾಪಕರದ್ದು. ಈಗಾಗಲೇ ಸುಪ್ತವಾಗಿರುವ ಕೌಶಲವನ್ನು ಹೆಕ್ಕಿ ತೆಗೆಯುವುದೇ ಶಿಕ್ಷಣ ಎಂಬ ನುಡಿಯಿದೆ. ಹೇಳಿದಂತೆಯೆ ಉಡಿ, ತೊಡಿ ಎಂಬ ಒತ್ತಾಯ ಶಿಷ್ಟಾಚಾರವೂ ಅಲ್ಲ. ಸಮವಸ್ತ್ರವೆಂಬ ಪಂಜರದಲ್ಲಿ ಮಕ್ಕಳು ಪಾಠದಲ್ಲಿ ತನ್ಮಯರಾಗುವುದು ಎಷ್ಟರ ಮಟ್ಟಿಗೆ ಸಾಧ್ಯ?ಇನ್ನು ಮಕ್ಕಳು ಒಂದೇ ತರಹದ ವೇಷಭೂಷಣದಲ್ಲಿದ್ದರೆ ಅವರಲ್ಲಿ ಸಮಾನತೆಯ ಪರಿಕಲ್ಪನೆ ಮೂಡುವುದೆಂಬ ಆಶಯ ಕೇವಲ ಭ್ರಮೆ. ಏಕೆಂದರೆ ಶಾಲೆಯಲ್ಲಿ ಅವರು ಕಳೆಯುವುದು ಹೆಚ್ಚೆಂದರೆ ಆರು ತಾಸು ಮಾತ್ರ. ಬದಲಿಗೆ ಪರಸ್ಪರ ಗೌರವಿಸುವುದು, ನಾಗರಿಕ ಪ್ರಜ್ಞೆ, ಸಾರ್ವಜನಿಕ ಶಿಸ್ತು ಕುರಿತ ಮೌಲ್ಯಗಳನ್ನು ಬೋಧಿಸಿದರೆ ಮಕ್ಕಳ ಬದುಕಿನುದ್ದಕ್ಕೂ ಅವು ಅವರಲ್ಲಿ ಜಾಗೃತವಾಗಿದ್ದಾವು.ತಮ್ಮ ಮಕ್ಕಳಿಗೆ ಪೋಷಕರು ಬಯಸುವುದು ಗುಣಮಟ್ಟದ ಶಿಕ್ಷಣ. ಇಂದಿನ ದಿನಮಾನಗಳಿಗೆ ಸರಿಹೊಂದುವ ಆಧುನಿಕ ಮತ್ತು ವ್ಯಕ್ತಿತ್ವ ನಿರ್ಮಾಣ ಕೇಂದ್ರೀಕೃತ ಶಿಕ್ಷಣ. ದುಬಾರಿಯೂ, ಶಾಲೆಗೆ ಹೊರತಾಗಿ ಬೇರೆಡೆ ಧರಿಸಲಾಗದ್ದೂ ಆದ ಉಡುಪಿಗೆ ತಗಲುವ ಹಣದಿಂದ ಇನ್ನಷ್ಟು ಪುಸ್ತಕಗಳನ್ನು ಪರಿಕರಗಳನ್ನು ಕೊಳ್ಳೋಣವೆನ್ನುವುದೇ ಅವರ ಇರಾದೆ. ಹೀಗಿರುವಾಗ ನಿಗದಿತ ಸಮವಸ್ತ್ರವನ್ನು ಅಡಿಯಿಂದ ಮುಡಿತನಕ ಉಡಿಸಿ ತೊಡಿಸಿ ತಮ್ಮ ಮಕ್ಕಳನ್ನು ಶಾಲೆಗೆ ಹೊರಡಿಸುವಷ್ಟರಲ್ಲಿ ವಿಶೇಷವಾಗಿ ತಾಯಂದಿರು ಹೈರಾಣಾಗಿರುತ್ತಾರೆ.ಎಲ್ಲವೂ ಮಾರುಕಟ್ಟೆಯಾಗಿರುವಂತೆ ಸಮವಸ್ತ್ರದ ಹಿಂದೆಯೂ ಜಾಲವಿದೆ. ಇಂಥ ಟಾಯ್, ಬೆಲ್ಟ್, ಬ್ಯಾಡ್ಜ್ ಇಲ್ಲೇ ಸಿಗುತ್ತದೆ ಅಂತ ಶಾಲೆಯವರೇ ಮಾರ್ಗದರ್ಶನ ನೀಡಿರುತ್ತಾರೆ! ಹೇಗೂ ಸಮವಸ್ತ್ರಗಳು ಸಗಟಾಗಿ ಉತ್ಪಾದಿತವಾಗುವುದರಿಂದ ಧರಿಸಲು ಅಳತೆಗೆತಕ್ಕಂತೆ ಇರುತ್ತವೆಯೆಂದು ನಿರೀಕ್ಷಿಸಲಾಗದು. ಶಾಲೆಯಲ್ಲಿ ತಾನೆ ಉಸ್ತುವಾರಿ ಸರಳವೆ? ಯಾರ‌್ಯಾರು ಸಮವಸ್ತ್ರ ಧರಿಸಿಲ್ಲ, ಬೇರೆ ಬಣ್ಣದ ಬೆಲ್ಟ್, ಲೇಸ್ ಕಟ್ಟಿದ್ದಾರೆ, ಟಾಯ್‌ಗೆ ಇಸ್ತ್ರಿ ಇಲ್ಲ ಮುಂತಾದ ತಪಾಸಣೆಯಲ್ಲಿ ಪಾಠಪ್ರವಚನಗಳು ಸೊರಗಿರುತ್ತವೆ.ಅರ್ನೆಸ್ಟ್ ಡಿಮ್ನೆಟ್ ಎಂಬ ಶಿಕ್ಷಣ ತಜ್ಞ `ಮಕ್ಕಳಿಗೆ ಕಲಿಸಬೇಕು. ಆದರೆ ಅವರಾಗಿಯೇ ಕಲಿಯಲೂ ಸಹ ಬಿಡಬೇಕು~ ಎನ್ನುತ್ತಾನೆ. `ನಮ್ಮ ಸ್ವಾತಂತ್ರ್ಯವನ್ನು ಸೇನೆಗಿಂತಲೂ ಸಮರ್ಥವಾಗಿ ರಕ್ಷಿಸುವುದು ನಮ್ಮ ಶಿಕ್ಷಣ~ ಎಂಬ ಎಡ್ವರ್ಡ್ ಎವ್ರೆಟ್‌ನ ನುಡಿ ಅಷ್ಟೇ ಮನನೀಯ. ಸಮವಸ್ತ್ರದ ವಿರುದ್ಧ ಒಗೆದ ಅಸ್ತ್ರದಂತಿದೆ ಅವನ ಚಾಟಿಯೇಟು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.