ಶನಿವಾರ, ಮಾರ್ಚ್ 6, 2021
18 °C
ಆರು ಮಂದಿ ಹತ್ಯೆ: ಮಹಾರಾಷ್ಟ್ರದಲ್ಲಿ ‘ಡಾ. ಡೆತ್‌’ ಕೃತ್ಯ

ಸರಣಿ ಹಂತಕ ವೈದ್ಯ ತಪ್ಪೊಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಣಿ ಹಂತಕ ವೈದ್ಯ ತಪ್ಪೊಪ್ಪಿಗೆ

ಸತಾರಾ/ಮುಂಬೈ: ಮಹಾರಾಷ್ಟ್ರದ ಸತಾರಾದ ಈ ವೈದ್ಯನನ್ನು ಪೊಲೀಸರು ಬಂಧಿಸಿದ್ದು ಅಂಗನವಾಡಿ ಕಾರ್ಯಕರ್ತೆಯೊಬ್ಬರ ಹತ್ಯೆಯ ಆರೋಪದಲ್ಲಿ. ಆದರೆ ಈ ಪ್ರಕರಣ ಬಹಿರಂಗಪಡಿಸಿದ್ದು 13 ವರ್ಷಗಳಲ್ಲಿ ನಡೆದ ಇನ್ನೂ ಐದು ಭೀಕರ ಕೊಲೆಗಳ ಮಾಹಿತಿಯನ್ನು.ಮಂಗಳಾ ಜೇಧೆ ಎಂಬುವವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ವೈದ್ಯ, 2003ರಿಂದ 2016ರ ಅವಧಿಯಲ್ಲಿ  ಒಟ್ಟು ಆರು ಮಂದಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.ಘಟನೆಯ ಹಿನ್ನೆಲೆ: ಮಹಾರಾಷ್ಟ್ರ ಪೂರ್ವ ಪ್ರಾಥಮಿಕ ಶಿಕ್ಷಿಕಾ ಸೇವಿಕಾ ಸಂಘದ ಅಧ್ಯಕ್ಷೆಯೂ ಆಗಿದ್ದ ಅಂಗನವಾಡಿ ಕಾರ್ಯಕರ್ತೆ, ಮಂಗಳಾ ಜೇಧೆ (47) ಅವರು ಜೂನ್ 16ರಂದು ಕಣ್ಮರೆಯಾಗಿದ್ದರು.ಮಂಗಳಾ ನಾಪತ್ತೆಯಾದ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಅವರು ಚಿನ್ನ ದ್ವಿಗುಣಗೊಳಿಸಿಕೊಡುವುದಾಗಿ ತನ್ನಿಂದ 200 ಗ್ರಾಂ ಚಿನ್ನವನ್ನು ಪಡೆದುಕೊಂಡು ಪರಾರಿಯಾಗಿರುವುದಾಗಿ ವೈದ್ಯ ಸಂತೋಷ್‌ ಪೋಳ್‌ (42) ದೂರು ನೀಡಿದ್ದ. ಮಂಗಳಾ ಅವರ ಫೋನ್‌ಗೆ ಬಂದ ಕೊನೆಯ ಕರೆ ಪೋಳ್‌ನ ದೂರವಾಣಿಯದ್ದಾಗಿತ್ತು. ಹೀಗಾಗಿ ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂಬ ಭಯದಿಂದ ಪೋಳ್‌ ಅಲ್ಲಿಂದ ತಲೆಮರೆಸಿಕೊಂಡಿದ್ದ.

ಎಲೆಕ್ಟ್ರೊಹೋಮಿಯೊಪಥಿ ವಿಭಾಗದಲ್ಲಿ ತಜ್ಞನಾಗಿ ಗುರುತಿಸಿಕೊಂಡಿದ್ದ ಪೋಳ್‌ ಮತ್ತು ಆತನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಾದಿ ಜ್ಯೋತಿ (25) ನಡುವೆ ಅಕ್ರಮ ಸಂಬಂಧವಿತ್ತು. ಪೋಳ್‌ನ ಅಪರಾಧ ಕೃತ್ಯಗಳಿಗೆ ಆಕೆ ನೆರವು ನೀಡುತ್ತಿದ್ದಳು. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಬಳಿಕ ದಾದರ್‌ನಲ್ಲಿ ಅಡಗಿಕೊಂಡಿದ್ದ ಪೋಳ್‌ನನ್ನು ಆಗಸ್ಟ್ 11ರಂದು ಸೆರೆಹಿಡಿಯಲಾಯಿತು. ಆತನನ್ನು ಆಗಸ್ಟ್‌ 19ರವರೆಗೆ ಪೊಲೀಸ್‌ ಬಂಧನಕ್ಕೆ ಒಪ್ಪಿಸಲಾಗಿತ್ತು.ಮಂಗಳಾ ಅವರನ್ನು ಅಪಹರಿಸಿ ಸಾಯಿಸಿದ್ದು ಮಾತ್ರವಲ್ಲದೆ, ಇನ್ನೂ ಐವರನ್ನು ಕೊಂದಿರುವುದಾಗಿ ಪೋಳ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಆತ ನೀಡಿದ ಮಾಹಿತಿ ಆಧಾರದಲ್ಲಿ ಆತನ ತೋಟದ ಮನೆಯನ್ನು ಸೋಮವಾರ ರಾತ್ರಿ ಶೋಧಿಸಿದಾಗ ಮಂಗಳಾ ಅವರ ಮೃತದೇಹದ ಜತೆ ಇನ್ನೂ ನಾಲ್ಕು ದೇಹಗಳು ಪತ್ತೆಯಾಗಿವೆ.ಪೋಳ್‌ ಮತ್ತು ಜ್ಯೋತಿ ಮಾಂಡ್ರೆ ಇಬ್ಬರೂ ಸೇರಿ ಮಂಗಳಾ ಅವರನ್ನು ಅಪಹರಿಸಿದ್ದರು. ಬಳಿಕ ಅಧಿಕ ಪ್ರಮಾಣದಲ್ಲಿ ಔಷಧವೊಂದನ್ನು ನೀಡಿ ಕೊಂದು, ಅವರ ದೇಹವನ್ನು ಪೋಳ್‌ಗೆ ಸೇರಿದ ತೋಟದ ಮನೆ ಸಮೀಪ ಹೂತು ಹಾಕಿದ್ದರು.ಐವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೋಳ್‌ ಕೊಲೆ ಮಾಡಿದ್ದು, ಅಕ್ರಮ ಸಂಬಂಧಗಳು ಮತ್ತು ಚಿನ್ನ ಹಾಗೂ ಹಣದ ದುರಾಸೆಯಿಂದಾಗಿ ಆತ ಈ ಕೃತ್ಯಗಳನ್ನು ಎಸಗಿದ್ದಾನೆ ಎಂದು ಸತಾರಾದ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.‘ಆತ ಬುದ್ಧಿವಂತ ಮತ್ತು ವಂಚಕನಾಗಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ತನ್ನನ್ನು ಬಂಧಿಸಿದ ಪೊಲೀಸರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡುವುದಾಗಿಯೂ ಆತ ಬೆದರಿಕೆ ಒಡ್ಡಿದ್ದ. ಪುಣೆಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಧೋಮ್‌ ಎಂಬ ಗ್ರಾಮದ ಮೂಲದವನಾದ ಪೋಳ್‌ನ ವೈದ್ಯಕೀಯ ಪದವಿಯ ಅಧಿಕೃತತೆಯನ್ನು ಪರಿಶೀಲಿಸಲಾಗುತ್ತಿದೆ. ಧೋಮ್‌ನಲ್ಲಿ ಆತನ ಪೂರ್ವಜರ ಮನೆಯಿದ್ದು, ಒಂದು ಎಕರೆ ತೋಟವಿದೆ. ಅಲ್ಲಿ ಸಣ್ಣ ಕೊಠಡಿ ಮತ್ತು ಕೋಳಿ ಸಾಕಾಣಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ವಾಯ್ ಪೊಲೀಸ್‌ ಠಾಣೆ ಎದುರು ಜಮಾಯಿಸಿದ ಜನರು, ಸರಣಿ ಹಂತಕ ವೈದ್ಯನಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು  ಒತ್ತಾಯಿಸಿದರು.ವನಿತಾ ಗಾಯಕ್‌ವಾಡ್‌ ಎಂಬುವವರನ್ನು ಕೊಂದು ಜಲಾಶಯಕ್ಕೆ ದೇಹವನ್ನು ಎಸೆಯಲಾಗಿತ್ತು. ಹೀಗಾಗಿ ಅವರ ಮೃತದೇಹ ಹೊರತುಪಡಿಸಿ ಉಳಿದ ಬಲಿಪಶುಗಳ ದೇಹದ ಅವಶೇಷಗಳು ಪತ್ತೆಯಾಗಿವೆ ಎಂದು ಪಾಟೀಲ್‌ ತಿಳಿಸಿದ್ದಾರೆ.

ಮುಖ್ಯಾಂಶಗಳು

*ವೈದ್ಯನಿಗೆ ನೆರವಾಗಿದ್ದ ದಾದಿ

*ಹಣ, ಚಿನ್ನದ ದುರಾಸೆಯಿಂದ ಹತ್ಯೆ

*ತೋಟದ ಮನೆಯಲ್ಲಿ ಮೃತದೇಹಗಳನ್ನು ಹೂತಿದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.