ಮಂಗಳವಾರ, ಆಗಸ್ಟ್ 3, 2021
23 °C

ಸರಿ ದಾರಿಯೊಂದೇ ಪಥ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರೆಗಳಿಗೆ ಯತ್ನದೊಳೆ ಯಶವು ಬೇಕೆಂದೆನಲು/

ಅರಸುವನು ತರವಿರದ ಎಲ್ಲ ಯುಕ್ತಿಗಳ//

ಚಿರಕಾಲದಾಟದಲಿ ಚಿರಸುಖವ ಬಯಸಿರಲು/

ಸರಿದಾರಿಯೊಂದೆ ಪಥ!

                 - ನವ್ಯಜೀವಿ

ಬಹಳ ಹಿಂದೆ ನಾನೊಂದು ಕಂಪೆನಿಯಲ್ಲಿ ಕೆಲಸದಲ್ಲಿದ್ದೆ. ಕಾಲೇಜಿನಿಂದ ಹೊರಬಂದ ಹೊಸತು. ಆ ಕಂಪೆನಿಯ ಕೆಲಸ ನನ್ನ ಮೊದಲ ಕೆಲಸಗಳಲ್ಲಿ ಒಂದು. ಆ ಕಂಪೆನಿಯಲ್ಲಿ ನಾವು ಕಂಪ್ಯೂಟರ್‌ಗಳನ್ನು ಮಾಡುತ್ತಿದ್ದೆವು. ಅವುಗಳನ್ನು ವಿಪ್ರೊ ಅಂತಹ ದೊಡ್ಡ ಕಂಪೆನಿಗಳಿಗೆ ಕಡಿಮೆ ಬೆಲೆಯಲ್ಲಿ ನಮ್ಮ ಯಾವುದೇ ಬ್ರಾಂಡ್ ಇಲ್ಲದೆಯೇ ಮಾರಿಬಿಡುತ್ತಿದ್ದೆವು.ಅವುಗಳಿಗೆ ತಮ್ಮ ಕಂಪೆನಿಯ ಛಾಪು ಹಾಕಿ ಗ್ರಾಹಕರಿಗೆ ಅವರು ಮಾರಿಕೊಳ್ಳುತ್ತಿದ್ದರು. ಇನ್ನೊಬ್ಬರಿಗೆ ತಮ್ಮ ಯವುದೇ ಛಾಪು ಹಾಕದೆ ಸಲಕರಣೆಗಳನ್ನು ಉತ್ಪಾದಿಸಿ ಮಾರುವವರಿಗೆ (original equipment manufacturers) ಎನ್ನುತ್ತಾರೆ. ಅಂದರೆ ‘ಅಸಲು ಸಲಕರಣೆಗಳ ಉತ್ಪಾದಕರು’ ಎನ್ನಬಹುದು!ಆ ಕಂಪೆನಿ ನಡೆಸುತ್ತಿದ್ದವರು ಆ ಕಾಲಕ್ಕೆ ಕಂಪ್ಯೂಟರುಗಳನ್ನು ಅಷ್ಟು ಕಡಿಮೆ ಬೆಲೆಗೆ ತಯಾರಿಸುವ ಕಲೆ ತಮ್ಮದಾಗಿಸಿಕೊಂಡಿದ್ದರು. ಹಾಗಾಗಿ ಕಂಪೆನಿಯೂ ಲಾಭದಾಯಕವಾಗಿಯೇ ನಡೆಯುತ್ತಿತ್ತು. ನಾನಲ್ಲಿದ್ದ ಕೆಲವೇ ತಿಂಗಳಲ್ಲಿ ಅವರ ಮತ್ತೊಂದು ಚಾಣಾಕ್ಷತನದ ವಿಷಯವೂ ತಿಳಿದು ಬಂತು.ಕಂಪೆನಿ ನಡೆಸಲು ಬೇಕಾದ ನಿರ್ವಹಣಾ ಬಂಡವಾಳ ನಿರ್ವಹಣಾ ಬಂಡವಾಳವನ್ನು (ವರ್ಕಿಂಗ್ ಕ್ಯಾಪಿಟಲ್) ಅವರು ಹೊಂದಿಸಿಕೊಳ್ಳುತ್ತಿದ್ದ ರೀತಿಯೇ ಇದು. ತಮ್ಮ ಬಳಿ ಇದ್ದ ಕಂಪೆನಿಯ ಸ್ಥಿರ ಆಸ್ತಿ ತೋರಿಸಿ ಅವುಗಳ ಮೇಲೆ ಬ್ಯಾಂಕೊಂದರಿಂದ ಕಡಿಮೆ ಬೆಲೆಗೆ ಸಾಲ ತರುತ್ತಿದ್ದರು.ಸ್ವಲ್ಪ ಸಮಯದ ನಂತರ ಅದೇ ಆಸ್ತಿಯನ್ನು ಇನ್ನೊಂದು ಹೆಸರಿನಲ್ಲಿ ಮತ್ತೊಂದು ಬ್ಯಾಂಕಿಗೆ ತೋರಿಸಿ ಅವರಿಂದಲೂ ಸಾಲ ತಂದು, ಅದರಲ್ಲಿ ಮೊದಲನೆಯ ಬ್ಯಾಂಕಿನ ಸಾಲ  ತೀರಿಸುವ ಯೋಚನೆ ಅವರದು. ಇದೇ ರೀತಿ ತಮ್ಮಲ್ಲಿದ್ದ ಒಂದೇ ಆಸ್ತಿ ಹಾಗೂ ಸಲಕರಣೆಗಳನ್ನು ಐದಾರು ಕಂಪೆನಿಗಳ ಅಡಿಯಲ್ಲಿ ಹತ್ತಾರು ಬ್ಯಾಂಕುಗಳಿಗೆ ತೋರಿಸಿ ಸಾಲ ಪಡೆದಿದ್ದರು. ಎಲ್ಲ ಬ್ಯಾಂಕುಗಳಿಗೂ ಸಾಲ ತೀರಿಸುತ್ತ ಕಂಪೆನಿ ನಡೆಸಲು ಬೇಕಾದ ಬಂಡವಾಳವನ್ನೂ ಅದರಲ್ಲೇ ಪೂರೈಸಿಕೊಳ್ಳುತ್ತಿದ್ದದ್ದು ಅವರ ಹೆಗ್ಗಳಿಕೆ.ಅದೆಷ್ಟೇ ಚಾಣಾಕ್ಷತನದ ಪರಮಾವಧಿಯಾದರೂ ಇಂತಹ ವಿಚಾರಗಳಲ್ಲಿ ಎಲ್ಲವೂ ಎಲ್ಲ ಕಾಲದಲ್ಲೂ ಯೋಜಿಸಿದಂತೆಯೇ ನಡೆಯುವುದಿಲ್ಲ. ಒಂದು ದಿನ ಅವರಿಗೆ ಯಾವುದೋ ಕಂಪೆನಿಯಿಂದ ಬರಬೇಕಾದ ಭಾರೀ ಮೊತ್ತದ ಹಣ ಬರದೆ ಬ್ಯಾಂಕುಗಳಿಗೆ ನೀಡುತ್ತಿದ್ದ ಕಂತುಗಳು ಹಾಗೇ ನಿಂತುಬಿಟ್ಟವು. ಎಚ್ಚೆತ್ತುಕೊಂಡ ಒಂದು ಬ್ಯಾಂಕು ವಿಚಾರಣೆ ನಡೆಸುತ್ತಿದ್ದಂತೆಯೇ ಇನ್ನಿತರ ಬ್ಯಾಂಕುಗಳು ಕೂಡ ತನಿಖೆಯಲ್ಲಿ ಶಾಮೀಲಾದದ್ದೇ ತಡ, ಮೂರೇ ತಿಂಗಳಲ್ಲಿ ಕಂಪೆನಿ ಮುಚ್ಚಿಹೋಯಿತು.

 

ಕೆಲಸ ಹೋಗಿದ್ದರೂ ಈ ವಿಷಯ ತಿಳಿದ ಕಂಪೆನಿಯ ಬಹುತೇಕರಿಗೆ ಇಲ್ಲಿ ಯಾವುದೇ ತಪ್ಪು ಕಂಡಿರಲಿಲ್ಲ. ಬದಲಾಗಿ ವಸ್ತುಸ್ಥಿತಿಯಿಂದ ಚೇತರಿಸಿಕೊಳ್ಳಲು ಬೇಕಾದ ಕಾಲಾವಕಾಶವನ್ನು ಕೊಡದೆ ಬ್ಯಾಂಕುಗಳೇ ಇಲ್ಲಿ ದೊಡ್ಡ ವಿಲನ್‌ಗಳಾಗಿ ಬಿಟ್ಟವು!‘ಬಿಸಿನೆಸ್ ಎಥಿಕ್ಸ್’ ಅಥವಾ ‘ವ್ಯಾವಹರಿಕ ನೈತಿಕತೆ’ ಎಂಬ ವಿಷಯವೇ ಹಾಗೆ.

ಇದರಲ್ಲಿ ಒಬ್ಬೊಬ್ಬರದು ಒಂದೊಂದು ನಿಲುವು. ಯಾರದೂ ಎಂದೆಂದಿಗೂ ಏಕರೀತಿಯ ಅಭಿಪ್ರಾಯವೇ ಇಲ್ಲ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬ ಮಾತು ಬಂದಾಗಲೆಲ್ಲ ಯಾವುದು ಎಷ್ಟು ಸರಿ ಹಾಗೂ ಯಾವುದು ಎಷ್ಟು ತಪ್ಪು ಎಂಬ ವ್ಯಾವಹಾರಿಕ ಮೀಮಾಂಸೆಯಲ್ಲೇ ಮುಳುಗಿ ಹೋಗುತ್ತದೆ ಈ ಬಿಸಿನೆಸ್ ಪ್ರಪಂಚ. ಮೂಲದಲ್ಲಿನ ಆ ಸರಿ - ತಪ್ಪುಗಳೆಲ್ಲ ಕಂಪೆನಿಯ ಲಾಭ - ನಷ್ಟಗಳ ಹಿನ್ನೆಲೆಯಲ್ಲಿ ಎಲ್ಲೋ ಕಣ್ಮರೆಯಾಗಿ ಬಿಡುತ್ತವೆ.ಇದಕ್ಕೆ ಲಂಚವೆಂಬ ಶಾಪಗ್ರಸ್ಥವಾದ ಭಾರತೀಯ ಸಮೂಹ ಮಾತ್ರ ಪ್ರೇರಿತವೆಂದೇನಲ್ಲ. ತೆಗೆದುಕೊಂಡ ಲಂಚಕ್ಕೆ ರಸೀತಿ ಬರೆದುಕೊಡುವಷ್ಟರ ಮಟ್ಟಿಗೆ ಮುಂದುವರೆದ ಕಾಂಬೋಡಿಯ ರಾಷ್ಟ್ರದಿಂದ ಹಿಡಿದು ಅನೈತಿಕವಾಗಿ ಹಂಚಿದ ಹಣವನ್ನು ಲಂಚವೆಂದು ಪರಿಗಣಿಸಲಾರದಷ್ಟು ಮುಗ್ಧರಾದ ಅಮೆರಿಕದಂತಹ ರಾಷ್ಟ್ರಗಳವರೆಗೆ ಎಲ್ಲರೂ ಇದರಲ್ಲಿ ಶಾಮೀಲು ಎಲ್ಲರದೂ ಸಮಪಾಲು!ನಾನು ಅಮೆರಿಕದ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದ ಸಮಯ. ಸೇಲ್ಸ್ ಕಾನ್ಫ್‌ರೆನ್ಸಿಗೆಂದು ವಿಶ್ವದ ಬಹುತೇಕ ಕಡೆಗಳಿಂದ ಆಗಮಿಸಿದ್ದ ಎಲ್ಲ ಸೇಲ್ಸ್ ಎಂಜಿನಿಯರುಗಳೂ ಒಂದೆಡೆ ಜಮಾಯಿಸಿದ್ದೆವು. ಇಂಡೋನೇಷ್ಯಾದ ನನ್ನ ಸಹಪಾಠಿ ಸೇಲ್ಸ್ ಡೈರೆಕ್ಟರಿಗೊಂದು ಪ್ರಶ್ನೆ ಹಾಕಿದ್ದ - ‘ಸರ್, ನಮ್ಮ ದೇಶದಲ್ಲಿ ಎಲ್ಲರೂ ಲಂಚ ತೆರಲೇ ಬೇಕು. ಚೀನಾದ ನಮ್ಮ ಎದುರಾಳಿಗಳು ಖುಲ್ಲಂ ಖುಲ್ಲಾ ಲಂಚ ಕೊಡುತ್ತಾರೆ.

 

ದೊಡ್ಡ ದೊಡ್ಡ ಆರ್ಡರುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇವರ ವಿರುದ್ಧ ಅದು ಹೇಗೆ ತಾನೆ ನಾವು ಲಂಚ ಕೊಡದೆ ಗೆಲ್ಲಲಾದೀತು?’ ಪಾಪ ಅವನಿಗೆ ಅವನದೇ ಯೋಚನೆ. ಕಂಪೆನಿಯ ನೀತಿಸಂಹಿತೆಯ ಮೇರೆಗೆ ಲಂಚ ಕೊಡುವಂತಿಲ್ಲ. ಅಮೆರಿಕದ ಕಂಪೆನಿಯಾದ್ದರಿಂದ ಈ ವಿಚಾರದಲ್ಲಿ ಅವರದು ಎಂದಿಗೂ ಬಹಳ ಎತ್ತರದ ಅಚಲವಾದ ನಿಲುವು.ಏನು ಉತ್ತರ ಬರಬಹುದೆಂದು ನಿರೀಕ್ಷಿಸುತ್ತಿದ್ದ ನಮ್ಮನ್ನು ಉದ್ದೇಶಿಸಿ ಸೇಲ್ಸ್ ಡೈರೆಕ್ಟರ್ ಮಾತಾಡಿದ್ದರು - ‘ನೋಡಿ ಆರ್ಡರ್ ಗಿಟ್ಟಿಸುವುದಕ್ಕೆ ಲಂಚ ನೀಡುವುದು ಅಪರಾಧವಾಗುತ್ತದೆ. ನಾವುಗಳು ಈ ವಿಷಯದಲ್ಲಿ ಚೀನಿಯರ ಹಾಗೆ ಅಲ್ಲ. ನಮ್ಮ ಯಾವುದೇ ವ್ಯವಹಾರದಲ್ಲಿ ಅನೈತಿಕತೆ ಇರಲೇಬಾರದು. ಆದರೆ, ಲಂಚ ನೀಡದಿದ್ದರೆ ನಿಮ್ಮ ದೇಶದಲ್ಲಿ ನಮಗೆ ಉಳಿಗಾಲವೆಂದು ಬೇರೆ ಹೇಳುತ್ತೀರಿ. ಆದ್ದರಿಂದ ಹೀಗೆ ಮಾಡಿ. ನಿಮ್ಮ ದೇಶದ ಕಂಪೆನಿಯೊಂದನ್ನು ನಮ್ಮ ಪಾರ್ಟನರ್ ಮಾಡಿಕೊಳ್ಳಿ.ಅವರಿಗೆ ನಾವು ಸೇಲ್ಸ್ ಕಮೀಷನ್ ಅಥವಾ ಫೀ ಎಂದು ಮುಂಗಡವಾಗಿ ಹಣ ನೀಡೋಣ. ಅದರಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ ನಮಗೆ ಆರ್ಡರ್ ಕೊಡಿಸುವುದೊಂದೇ ಅವರ ಕರ್ತವ್ಯ. ನಮ್ಮ ಹಾಗೂ ಆ ಕಂಪೆನಿಯ ನಡುವೆ ಕಾಗದಗಳು ಹಾಗೂ ಒಪ್ಪಂದಗಳೂ ಸರಿ ಇದ್ದರೆ ಅಷ್ಟು ಸಾಕು!’ತುಂಟತನದ ಕಣ್ಣು ಹೊಡೆದು ಮಾತು ಮುಗಿಸಿದ್ದ ಅವರ ಒಟ್ಟಾರೆ ಉಪದೇಶದ ಅರ್ಥ ಬಹಳ ಸರಳ. ನಾವು ಬದುಕುಳಿಯಲು ಕೊಲೆ ಮಾಡಬೇಕಾಗಿ ಬಂದಾಗ ನಾನೇ ಖುದ್ದಾಗಿ ಮುಂದೆ ನಿಂತು ಕೊಲೆ ಮಾಡಿದರೆ ಅದು ಅನೈತಿಕ. ಆದರೆ ಯಾರಿಗಾದರೂ ಸುಪಾರಿ ನೀಡಿ ಕೊಲೆ ಮಾಡಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಈ ನಿಟ್ಟಿನಲ್ಲಿ ಯೋಚಿಸುವವರೇ ಅಧಿಕವಾಗಿರುವುದರಿಂದ ಕಂಪೆನಿಯ ವ್ಯವಹಾರಗಳಲ್ಲಿ ನೈತಿಕತೆ ಎಂಬುದು ಊಸರವಳ್ಳಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ಸಂದರ್ಭಕ್ಕನುಗುಣವಾಗಿ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ!ಇಲ್ಲಿ ನನಗೊಂದು ಮಾರ್ಮಿಕವಾದ ನಗೆ ಚಟಾಕಿ ನೆನಪಿಗೆ ಬರುತ್ತಿದೆ. ಗಂಡ ಮಹಾನ್ ಕಳ್ಳ. ಅವನ ಸಹಾಯಕ್ಕಿದ್ದವನೇ ಕ್ಯಾತ. ಗುಂಡನ ಹೆಂಡತಿ ಗುಂಡನನ್ನು ಉದ್ದೇಶಿಸಿ ಕೇಳುತ್ತಾಳೆ - ‘ಈ ನಡುವೆ ನೀವೇಕೆ ನಿಮ್ಮ ಕೆಲಸದಲ್ಲಿ ಕ್ಯಾತನನ್ನು ಕರೆದುಕೊಂಡು ಹೋಗುತ್ತಿಲ್ಲ?’ ಅದಕ್ಕೆ ಗುಂಡ ಹೇಳುತ್ತಾನೆ - ‘ಈ ನಡುವೆ ನನಗೆ ಅವನ ಪ್ರಾಮಾಣಿಕತೆಯ ಬಗ್ಗೆ ಸಂಶಯ ಬಂದಿದೆ. ನನ್ನಲ್ಲೇ ಪಳಗಿ ನನ್ನ ಗಳಿಕೆಯಲ್ಲೇ ಕಳ್ಳತನ ಮಾಡುತ್ತಿದ್ದಾನೆ ಎಂಬ ಗುಮಾನಿ. ಅದಕ್ಕೆ ಅವನನ್ನು ಜೊತೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲ’.ಈಗ ಹೇಳಿ. ಗುಂಡನೇ ಕಳ್ಳ. ಅವನ ಕಸುಬೇ ಕಳ್ಳತನ. ಆದರೆ ಅವನಿಗೆ ಕ್ಯಾತನ ನೀಯತ್ತಿನ ಬಗ್ಗೆ ಆಕ್ಷೇಪಣೆ. ಕಂಪೆನಿಯ ಸ್ತರದಲ್ಲೂ ಇದೇ ರೀತಿಯ ದ್ವಂದ್ವಗಳನ್ನು ಈ ವಿಷಯದಲ್ಲಿ ನಾವು ಕಾಣುತ್ತೇವೆ. ಅನೈತಿಕ ವ್ಯವಹಾರಗಳನ್ನು ಮಾಡಿದಾಗ ಅವುಗಳು ಯಾವುದೋ ಪುರುಷಾರ್ಥ ಸಾಧನೆಗೆಂಬ ಸಮಜಾಯಿಷಿ ನೀಡುತ್ತಾರೆ. ಅದರ ಅರ್ಧದಷ್ಟು ತಪ್ಪನ್ನು ಎದುರಾಳಿ ಕಂಪೆನಿ ಮಾಡಿದಾಗ ಜಗತ್ತಿನ ಎಲ್ಲರೆದುರು ತಾವು ಸತ್ಯಹರಿಶ್ಚಂದ್ರರೆಂದು ಸಾರಲು ಮುಂದಾಗುತ್ತಾರೆ. ‘ತಾನು ಮಾಡಿದ್ದು ಉತ್ತಮ ಬೇರೆಯವರು ಮಾಡಿದ್ದು  ಮಧ್ಯಮ. ಎದುರಾಳಿಗಳು ಮಾಡಿದ್ದೆಲ್ಲ ಹಾಳು!’ ಎಂಬ ಹೊಸ ಗಾದೆ  ಹುಟ್ಟು ಹಾಕಿ ಬಿಡುತ್ತಾರೆ.ಹಾಗಾದರೆ ಲಾಭದ ಏಕಮೇವ ಧ್ಯೇಯದಲ್ಲಿ ತೊಡಗಿರುವ ಕಂಪೆನಿಗಳ ವ್ಯವಹಾರಗಳಲ್ಲಿ ನೈತಿಕತೆ ಎಂಬ ಸ್ಥಾನವಿದೆಯೆ? ಅದನ್ನು ಉಳಿಸಿ ಬೆಳೆಸುವ ಹೊಣೆ ಯಾರದು? ನೈತಿಕತೆಯ ವಿಚಾರದಲ್ಲಿ ಯಾವುದೇ ಸಂಧಿ ಮಾಡಿಕೊಳ್ಳದೆ ಕಂಪೆನಿಗಳನ್ನು ಕಟ್ಟಿ ಬೆಳೆಸಲು ಸಾಧ್ಯವೆ?ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಮುನ್ನ ನಾವೆಲ್ಲರೂ ಅರ್ಥಮಾಡಿಕೊಳ್ಳಲೇ ಬೇಕಾದ ಒಂದು ವಿಷಯವಿದೆ. ನೈತಿಕತೆ ಎಂಬುದು ಕೇವಲ ದಾರ್ಶನಿಕರು ತಮ್ಮದಾಗಿಸಿ ಕೊಳ್ಳಬೇಕಾದ ಸ್ವತ್ತಲ್ಲ. ಅಥವಾ ಜೀವನದಲ್ಲಿ ನಾವೆಲ್ಲ ನಮ್ಮ ಸಂಬಂಧಗಳ ನಡುವೆ, ನಮ್ಮ ನಡೆ - ನುಡಿ ಆಚಾರಗಳ ಒಳಗೆ ಮಾತ್ರ ರೂಪಿಸಿಕೊಳ್ಳಬೇಕಾದ ಚಿಂತನೆಯಲ್ಲ. ನದಿಯಲ್ಲಿ ಹರಿಯುತ್ತಿರುವ ನೀರು ಕಂಪೆನಿಯೊಂದರ ಕಾರ್ಯಕ್ಷೇತ್ರ - ಕೆಲಸಕಾರ್ಯ.ಧನದ ಸಾಗರವನ್ನು ಸೇರುವುದೇ ಅದರ ಗುರಿ. ಇಲ್ಲಿ ನೈತಿಕತೆ ಎಂಬುದು ದಡ ಇದ್ದ ಹಾಗೆ! ಎಲ್ಲೆ ಮೀರದೆ ದಡದ ವ್ಯಾಪ್ತಿಯಲ್ಲೇ ಹರಿಯುವಾಗ ಆ ನದಿಗೂ ಒಂದು ಸ್ಥಾನಮಾನ. ಅದೇ ಅದರ ದೀರ್ಘಾವಧಿಯ ಯಶಸ್ಸಿನ ಗುಟ್ಟು. ಸಾಮ್ರಾಜ್ಯಗಳನ್ನು ಕಟ್ಟಿದ್ದೇವೆ ಎಂಬ ಅಹಂನಲ್ಲಿ ದಡ ತೊರೆದು ಹರಿವ ನದಿಗೆ ನದಿ ಎನ್ನುವುದಿಲ್ಲ. ಅದಕ್ಕೆ ದೈವತ್ವ ಕಲ್ಪಿಸಿ ಪ್ರಾರ್ಥನೆಗಳಲ್ಲಿ ಉಲ್ಲೇಖಿಸುವುದೂ ಇಲ್ಲ.ನೈತಿಕತೆ ಕಂಪೆನಿಯೊಂದರ ಯಶಸ್ಸಿಗೆ ಅದೆಷ್ಟು ಕಾರಣವೆಂದು ಅಳೆವ ಮುನ್ನ ಒಂದು ಮಾತು. ಅನೈತಿಕ ವ್ಯವಹಾರಗಳನ್ನೇ ವೇದವಾಕ್ಯವನ್ನಾಗಿಸಿಕೊಂಡ ಹರ್ಷದ್ ಮೆಹ್ತಾ, ರಾಮಲಿಂಗರಾಜು ಮುಂತಾದವರು ನೆನಪಿನಲ್ಲಿ ಉಳಿಯದೆ, ತಾವು ಗಳಿಸಿಟ್ಟ ಹಣವನ್ನೂ ಅನುಭವಿಸದೆ ಕಾಲಕಸವಾಗಿ ಹೋಗಿದ್ದಾರೆ. ಆದರೆ ನೈತಿಕತೆಯನ್ನು ವ್ಯವಹಾರದ ಸ್ತರದಲ್ಲಿ ಕಾಪಾಡಿಕೊಂಡು ಕಂಪೆನಿಗಳನ್ನು ಕಟ್ಟಿ ಬೆಳೆಸಿದ ನಾರಾಯಣಮೂರ್ತಿ, ಬಿಲ್‌ಗೇಟ್ಸ್ ಮುಂತಾದವರು ನಮ್ಮ ಮುಂದಿನ ಪೀಳಿಗೆಯವರೂ ಓದಿಕೊಳ್ಳಬಲ್ಲ ವಸ್ತುವಾಗಿದ್ದಾರೆ.ಅರೆಕಾಲದ ಯಶಸ್ಸಿನಂತೆ ಚಿರಕಾಲದ ಸಾರ್ಥಕತೆ ಬಯಸುವ ಎಲ್ಲ ಕಂಪೆನಿಗಳಲ್ಲೂ ನೈತಿಕತೆ ಅತ್ಯಂತ ಮುಖ್ಯವಾದದ್ದು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.