ಸೋಮವಾರ, ಜನವರಿ 27, 2020
24 °C
ಹೊರ ರಾಜ್ಯಗಳಿಗೆ ಅಕ್ರಮವಾಗಿ ಹತ್ತಿ ಸಾಗಣೆ

ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ

ರಾಜೇಶ್‌ ರೈ ಚಟ್ಲ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದಲ್ಲಿ ಬೆಳೆದ ಹತ್ತಿ ಅಕ್ರಮವಾಗಿ ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಕರ್ನಾಟಕ ಕಾಟನ್‌ ಅಸೋಸಿಯೇಷನ್‌ ಪ್ರಕಾರ ಈ ನಷ್ಟದ ಮೊತ್ತ ವಾರ್ಷಿಕ ಬರೋಬ್ಬರಿ ₨ 400 ಕೋಟಿಗೂ ಹೆಚ್ಚು!‘ಮೈಸೂರು ಮೂಲಕ ತಮಿಳುನಾಡಿಗೆ ಹಾಗೂ ಗುಲ್ಬರ್ಗ – ವಿಜಾಪುರ ಮಾರ್ಗವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ ರಾಜ್ಯಗಳಿಗೆ  ಸಾವಿರಾರು ಲೋಡ್‌ ಹತ್ತಿ ಅಕ್ರಮವಾಗಿ ಸಾಗಣೆಯಾಗುತ್ತಿದೆ. 4–5 ವರ್ಷಗಳಿಂದ  ಅವ್ಯಾಹತವಾಗಿ ನಡೆಯುತ್ತಿರುವ ಈ ದಂಧೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ.ಗುಲ್ಬರ್ಗ ಮೂಲಕ ನಿತ್ಯ ಹತ್ತಿ ತುಂಬಿದ ಸರಾಸರಿ 200 ಲಾರಿಗಳು ಹೊರ ರಾಜ್ಯಗಳಿಗೆ ಹೋಗುತ್ತಿದ್ದು, ಸುಮಾರು ₨ 64.60 ಲಕ್ಷ ನಷ್ಟ ಉಂಟಾಗುತ್ತಿದೆ’ ಎಂದು ಕಾಟನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಬಿ. ಅನ್ನೆಪ್ಪನವರ ಅಂಕಿ–ಅಂಶಗಳ ಸಹಿತ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಉತ್ತರ ಕರ್ನಾಟಕದ ಕೃಷಿ ಉತ್ಪನ್ನಗಳಲ್ಲಿ ಹತ್ತಿ ಪ್ರಮುಖ ಬೆಳೆಯಾಗಿದೆ. ಹುಬ್ಬಳ್ಳಿ, ವಿಜಾಪುರ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ  ಆವಕವಾಗುತ್ತಿದೆ. ಆದರೆ ಈ ಮಧ್ಯೆ, ಹೊರ ರಾಜ್ಯಗಳ ವ್ಯಾಪಾರಸ್ಥರು, ರಾಜ್ಯದ ಬೊಕ್ಕಸಕ್ಕೆ ತುಂಬಬೇಕಿದ್ದ ಶೇ 1.5 ಸೆಸ್‌ ಮತ್ತು ಶೇ 5 ವ್ಯಾಟ್‌ ಪಾವತಿಸದೇ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಕಣ್ಣುತಪ್ಪಿಸಿ ಇಲ್ಲವೇ ಅಧಿಕಾರಿಗಳ ಜೊತೆ ‘ಹೊಂದಾಣಿಕೆ’ ಮಾಡಿಕೊಂಡು ಈ ಅಕ್ರಮ ನಡೆಯುತ್ತಿದೆ’ ಎಂದು ಅವರು ಆರೋಪಿಸುತ್ತಾರೆ.‘ಈ ದಂಧೆ ಹಿಂದೆ ಅಧಿಕಾರಿಗಳ, ಸ್ಥಳೀಯ ರಾಜಕಾರಣಿಗಳ ಲಾಬಿಯೂ ಇದೆ. ಹೊರ ರಾಜ್ಯಗಳ ವರ್ತಕರಿಂದ ಹತ್ತಿ ಸಾಗಣೆ ನಡೆಯುತ್ತಿದ್ದರೂ ರೈತರೇ ಸಾಗಣೆ ಮಾಡುತ್ತಿರುವಂತೆ ಬಿಂಬಿಸಲಾಗುತ್ತದೆ. ರಾಜ್ಯದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಖುಲ್ಲಾ ಲಾರಿಯಲ್ಲಿ ಹತ್ತಿ ಸಾಗಣೆ ಆಗುತ್ತಿರುವುದರಿಂದ ರೈತರು ರವಾನಿಸುವುದು ಅಸಾಧ್ಯ.

ಹೊರರಾಜ್ಯಗಳಿಗೆ ಈ ರೀತಿ ಸಾಗಣೆಯಿಂದ ರಾಜ್ಯದಲ್ಲಿ ಹತ್ತಿ ಅವಲಂಬಿತ ಜಿನ್ನಿಂಗ್‌ ಮತ್ತು ಪ್ರೆಸಿಂಗ್‌ ಉದ್ದಿಮೆದಾರರು, ಅರಳೆ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು ಬೆಳಗಾವಿಯಲ್ಲಿ ಭೇಟಿಯಾಗಿ ಈ ವಿಷಯವನ್ನು ತಿಳಿಸಲಾಗಿದೆ. ತಕ್ಷಣ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಾಣಿಜ್ಯ ಇಲಾಖೆಯ ಆಯುಕ್ತರಿಗೂ ಅಕ್ರಮ ವಹಿವಾಟಿನ ಸಂಪೂರ್ಣ ಮಾಹಿತಿ ನೀಡಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)