ಶುಕ್ರವಾರ, ಮೇ 14, 2021
23 °C
ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯವೈಖರಿ ಸರ್ಕಾರಿ ಹಿಡಿತದಿಂದ ಮುಕ್ತವಾಗಿರಬೇಕು

ಸರ್ಕಾರದ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸ್ವಾಯತ್ತತೆ

-ಕಾ.ತ. ಚಿಕ್ಕಣ್ಣ,ಬೆಂಗಳೂರು Updated:

ಅಕ್ಷರ ಗಾತ್ರ : | |

ಜೂನ್ 6ರ ಸಂಚಿಕೆಯಲ್ಲಿ ಡಾ.ಬರಗೂರು ರಾಮಚಂದ್ರಪ್ಪನವರ “ಅಕಾಡೆಮಿ, ಪ್ರಾಧಿಕಾರ ಮತ್ತು ಸರ್ಕಾರ” ಎಂಬ ಲೇಖನಕ್ಕೆ ಪೂರಕವಾದ ಟಿಪ್ಪಣಿ ಇದು. `ಸಾಂಸ್ಕೃತಿಕ ಸ್ವಾಯತ್ತತೆ' ಬಗ್ಗೆ ಅವರು ಎತ್ತಿರುವ ಪ್ರಶ್ನೆ ನನ್ನದೂ ಸಹ. ಕಾರಣ ಎಲ್ಲ ಅಕಾಡೆಮಿಗಳಿಗೂ ಸಾಮಾನ್ಯ ನಿಯಮಾವಳಿರೂಪಿಸುವ ಸಂದರ್ಭದಲ್ಲಿ ನಡೆದ ಸಭೆಗಳಲ್ಲಿ ನಾನೂ ಭಾಗವಹಿಸಿದ್ದೆ. ಮತ್ತು ಸಭೆಗಳ ತರುವಾಯ ಡಾ.ಬರಗೂರು ರಾಮಚಂದ್ರಪ್ಪ, ನಾನು ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಜೆ.ಎನ್. ಶಾಮರಾವ್ ಕೂಡಿ ಕರಡು ನಿಯಮಾವಳಿಯ ರಚನೆ ಮಾಡಿದೆವು. ಅಕಾಡೆಮಿಗಳಿಗಿದ್ದ ಹಿಂದಿನ ಛಾರ್ಟರ್‌ಗಳ ಅಂಶಗಳು ಮತ್ತು ಆಗಿನ ಅಕಾಡೆಮಿಗಳ ಅಧ್ಯಕ್ಷರ ಸಮಾಲೋಚನೆಯೊಂದಿಗೇ ಎಲ್ಲ ಅಕಾಡೆಮಿಗಳ ಸಾಮಾನ್ಯ ನಿಯಮಾವಳಿ ರಚಿಸಲಾಯಿತು.ಈ ಬಗೆಯ ಸಾಮಾನ್ಯ ನಿಯಮಾವಳಿಗೆ ಕಾರಣಗಳೂ ಇದ್ದವು. ಅಷ್ಟೊತ್ತಿಗೆ ಅಂದರೆ ಸುಮಾರು 2005ರ ಹೊತ್ತಿಗೆ 13 ಅಕಾಡೆಮಿಗಳಾಗಿದ್ದವು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಿಡಿದು ಬ್ಯಾರಿ ಅಕಾಡೆಮಿಯವರೆಗೆ. ಅವುಗಳ ಕಾರ್ಯವ್ಯಾಪ್ತಿ, ಕಾರ್ಯಚಟುವಟಿಕೆಗಳು, ಅವುಗಳ ಅನುದಾನ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಅಲ್ಲದೆ ಹಲವು ಹಳೆಯ ಸಂಗತಿಗಳು ಯಾಂತ್ರಿಕವಾಗಿ ಮುಂದುವರಿಯುತ್ತಿದ್ದವು. ಆಗ ಮೂಡಿಬಂದದ್ದು ಈ ಸಾಮಾನ್ಯ ನಿಯಮಾವಳಿ. ಎಲ್ಲ ಅಕಾಡೆಮಿಗಳ ಪ್ರಮುಖ ಆಶಯ ಭಾಷೆ/ಸಾಹಿತ್ಯ/ಕಲೆಗಳ ಅಭಿವೃದ್ಧಿ ಕುರಿತೇ ಆಗಿದ್ದರಿಂದ ಈ ಬಗೆಯ ಸಾಮಾನ್ಯ ನಿಯಮಾವಳಿಗೆ ಕಾರಣವಾಯಿತು.ಪ್ರಸ್ತುತ ಬರಗೂರು ರಾಮಚಂದ್ರಪ್ಪನವರ ಲೇಖನದಲ್ಲಿ ಪ್ರಸ್ತಾಪಿಸಿರುವ ನಿಯಮ 10 ವಿಷಯ: ನಾವು ಕರಡು ರೂಪಿಸುವಾಗ “ರಾಜ್ಯ ಸರ್ಕಾರವು ತನ್ನ ಕಾರ್ಯನೀತಿ, ಹಣಕಾಸು ಮತ್ತು ಸಾರ್ವಜನಿಕ ಮಹತ್ವವುಳ್ಳ ವಿಷಯಗಳ ಮೇಲೆ ತಾನು ಅವಶ್ಯವೆಂದು ಭಾವಿಸುವಂಥ ಸೂಚನೆಗಳನ್ನು ಅಕಾಡೆಮಿಗಳಿಗೆ ನೀಡಬಹುದು.ಅಕಾಡೆಮಿಯು ಅಂಥ ಸೂಚನೆಗಳನ್ನು ಪಾಲಿಸಬೇಕಾದ ಸಂದರ್ಭದಲ್ಲಿ, ಆರ್ಥಿಕ ವಿಷಯಗಳಲ್ಲಿ ಅಗತ್ಯವಾದ ಸಂಪನ್ಮೂಲವನ್ನು ಸರ್ಕಾರ ಭರಿಸುವುದು” ಎಂಬುದಾಗಿ ಇತ್ತು. ಆದರೆ ಅದು “ಸೂಚನೆಗಳನ್ನು ಪಾಲಿಸತಕ್ಕದು ಮತ್ತು ಅವಶ್ಯವೆಂದು ಭಾವಿಸುವಂಥ ವರದಿಗಳನ್ನು ಮತ್ತು ಇತರೆ ಮಾಹಿತಿಗಳನ್ನು ಒದಗಿಸತಕ್ಕುದು” ಎಂಬ ವಾಕ್ಯಗಳು ಆದೇಶ ಹೊರಡಿಸುವಾಗ ಸರ್ಕಾರದ ಹಂತದಲ್ಲಿ ಸೇರ್ಪಡೆಯಾದವು. ಇದು ಆದೇಶಕ್ಕೆಂದೇ ತಯಾರುಗೊಂಡ ನೌಕರಿ ಮನಸ್ಸುಗಳ ಮಾದರಿ.ಆದರೆ ಪ್ರಕಟಣೆಗಳಿಗೆ ವಾರ್ಷಿಕ ಅನುದಾನದಲ್ಲಿ ಶೇಕಡಾ 5ರಷ್ಟನ್ನು ಪುಸ್ತಕಗಳ ಮುದ್ರಣಕ್ಕೆ ಬಳಸಬೇಕು ಎಂಬ ಡಾ.ಬರಗೂರರ ಪ್ರಸ್ತಾಪಿತ ವಿಷಯದಲ್ಲಿ ಅದು ಹಾಗಿಲ್ಲ; ಶೇಕಡಾ 15ರಷ್ಟು ಎಂದು ಇದೆ. ಒಟ್ಟಿನಲ್ಲಿ ಸರ್ಕಾರವು 10ನೆಯ ನಿಯಮವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿದ್ದು ಬಿಟ್ಟರೆ ನಾವು ಕರಡಿನಲ್ಲಿ ರೂಪಿಸಿದ್ದ ಉಳಿದ ಸಂಗತಿಗಳನ್ನು ಸಾಮಾನ್ಯವಾಗಿ ಬದಲಾಯಿಸಿಲ್ಲ. ಆದರೂ ಈ ನಿಯಮಗಳು ಚಾಲ್ತಿಗೆ ಬಂದು ಎಂಟು ವರ್ಷಗಳಾಗಿವೆ.ಆಗ ಇದ್ದ ಕಾಯಕಧರ್ಮ, ರಾಜಧರ್ಮ, ಮನೋಧರ್ಮಗಳ ಹವಾಮಾನ ತೀವ್ರವಾಗಿ ಬದಲಾಗಿದೆ. ಅಕಾಡೆಮಿಗಳ ಸ್ವರೂಪದಲ್ಲಿದ್ದ ಕೆಲವು ಸಂಸ್ಥೆಗಳು ಪ್ರಾಧಿಕಾರಗಳಾಗಿ ಮಾರ್ಪಟ್ಟಿವೆ. ಇಂಥ ಮಾರ್ಪಾಟಿತ ಅಕಾಡೆಮಿ ಅಧ್ಯಕ್ಷರ ಸ್ಥಾನಮಾನ ಈಗ ರಾಜ್ಯ ಸಚಿವರ ಸ್ಥಾನಮಾನಕ್ಕೇರಿದೆ. ಈ ಬಗೆಯ ಪಲ್ಲಟಗಳಿಗೆ ನನಗೆ ತಿಳಿದಿರುವಂತೆ ಯಾವುದೇ ಸಾಂಸ್ಕೃತಿಕ ಮಹತ್ವ ಒತ್ತಾಸೆಯಾಗಿರಲಿಲ್ಲ.; ಇದೆಲ್ಲ ಸಾಂಸ್ಕೃತಿಕ ರಾಜಕಾರಣದ ಫಲ. ಇವುಗಳ ಜೊತೆಗೆ, ಅಧ್ಯಕ್ಷರ ನೇಮಕ, ಕಾರ್ಯಾವಧಿ, ಮಧ್ಯಂತರ ವಜಾ ಅಥವಾ ರಾಜೀನಾಮೆ ಮುಂತಾದವುಗಳನ್ನು ಅನುಲಕ್ಷಿಸಿಯೂ ಸಹ ಈಗಿರುವ ನಿಯಮಗಳನ್ನು ಕಾಲದ ಕಾವಿಗಿಟ್ಟು ಪರಿಷ್ಕರಿಸುವ ಅಗತ್ಯವಿದೆ.ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ವಾರ್ಷಿಕ ಕ್ರಿಯಾಯೋಜನೆಗಳನ್ನು ಅನುಮೋದನೆಗೆ ಕಳುಹಿಸಿಕೊಡಬೇಕು ಮತ್ತು ಅವು ಸರ್ಕಾರ ನೀಡುವ ಬಜೆಟ್‌ಗೆ ಅನುಗುಣವಾಗಿರಬೇಕು ಎಂಬ ನಿರ್ದೇಶನವನ್ನು ಸರ್ಕಾರ ನೀಡುತ್ತದೆ. ಈ ನಿಯಮವೂ ಸಹ ಚರ್ಚಾರ್ಹ ಸಂಗತಿ. ಇದನ್ನು ನಿಯಮಗಳನ್ನು ಪರಿಷ್ಕರಿಸುವ ಸಮಯದಲ್ಲಿ ಎತ್ತಿಕೊಳ್ಳಬಹುದು. ಆದರೆ ಈ ಸಂಸ್ಥೆಗಳಿಗೆ ನಾಮನಿರ್ದೇಶನಗೊಳ್ಳುವ ಸಂರಚನೆಯ ಮೊದಲ ಹಂತದ ವಿಷಯವಿದೆಯಲ್ಲ ಅದು ಸರಿಯಾಗಿದೆಯೆ? ಅಲ್ಲಿ ಅರ್ಹರಿಗೆ ಆದ್ಯತೆ ಸಿಗುತ್ತದೆಯೆ? ಮತ್ತು ಅದು ಪಾರದರ್ಶಕವಾಗಿರುತ್ತದೆಯೆ? ನಾನು ಅರ್ಹತೆಯನ್ನು ಕೇವಲ ಶ್ರೇಷ್ಠತೆ ಎಂಬ ವ್ಯಸನಿಯಾಗಿ ಬಳಸಿಲ್ಲ-ಅದು ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ನ್ಯಾಯತತ್ವಗಳಿಗೆ ಅನ್ವಯಿಸಿ ಬಳಸಿದ್ದೇನೆ.ಇತ್ತೀಚಿನ ಸರ್ಕಾರಗಳಿಂದ ನಾವು ಗುಣಮೌಲ್ಯಗಳನ್ನು ಕಾಪಾಡಿಕೊಳ್ಳಲಾಗುತ್ತಿಲ್ಲವೆಂಬ ವಿಚಾರ ಹೊಸದೇನಲ್ಲ. ಸರ್ಕಾರಕ್ಕೆ ಈ ಬಗೆಯ ಸಂಸ್ಥೆಗಳಿಗೆ ನಾಮನಿರ್ದೇಶನವೆಂಬುದು ಒಂದು ಕಾಲಾವಧಿಯ ವಿಧಿ. ಇತ್ತೀಚೆಗೆ ಈ ಕಾಲಾವಧಿಯನ್ನು ಸರ್ಕಾರ ಮುರಿಯುತ್ತಿದೆ, ಒಮ್ಮೆ ಉಪೇಕ್ಷೆ ಮಾಡುತ್ತದೆ, ಒಮ್ಮೆ ಘನ ಪ್ರತಿಷ್ಠೆಯಾಗಿಯೂ ತೆಗೆದುಕೊಳ್ಳುತ್ತದೆ.ಹೀಗೆ, ಸರ್ಕಾರದ ನಿರ್ಧಾರಗಳ ಸಂದರ್ಭದಲ್ಲಿ ರಾಜಕೀಯವೇ ಪ್ರವೇಶ ಮಾಡುತ್ತದೆ. ಆದರೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಿರುವ ಸಂಗತಿಯೆಂದರೆ ಹೀಗೆ ಸಾಂಸ್ಕೃತಿಕ ಸಂಸ್ಥೆಗಳಲ್ಲಿ `ಗೌರವ' ಪದ ಹೊಂದಬಯಸುವ ಸಾಹಿತಿಗಳು, ಕಲಾವಿದರು ಅಥವಾ ಇಂಥವರು ತನ್ನ ನಾಮನಿರ್ದೇಶನಕ್ಕೆ ಹಾತೊರೆಯುವ ಮುನ್ನ ತನ್ನ ಬಯೊಡೆಟಾದ ಜೊತೆಗೆ ಈ ಸಾಂಸ್ಕೃತಿಕ ಸಂಸ್ಥೆಗಳು ಹೇಗಿರಬೇಕು? ಅವುಗಳಿಂದ ಸಾಂಸ್ಕೃತಿಕ ಲೋಕಕ್ಕೆ ಸಲ್ಲಿಸಬಹುದಾದ ಕಾಣಿಕೆಗಳೇನು ಎಂಬ ಅಜೆಂಡವೂ ಇರುತ್ತದೆಯೆ? ಎಂಬುದು. ಇದು ಸರ್ಕಾರದ ಪ್ರಭುಗಳಿಗೆ ಗೊತ್ತಿರುವುದಿಲ್ಲವೆಂದಲ್ಲ. ಅವರು ತಮ್ಮ ಪೊಲಿಟಿಕಲ್ ಕೆಮಿಸ್ಟ್ರಿಗೆ ಬಹುಮುಖ್ಯವೆಂದೇನೂ ತಿಳಿದಿರುವುದಿಲ್ಲ. ತನ್ನವರಿಗೊಂದು ಸ್ಥಾನ ಕೊಟ್ಟ ಸಮಯದ ತೃಪ್ತಿ ಸಿಗಬಹುದಷ್ಟೆ.ಇದರ ತಾತ್ಪರ್ಯವೆಂದರೆ ತನ್ನ ಪರವಾದ, ತನ್ನ ಒಡನಾಟದಲ್ಲಿರುವ ವ್ಯಕ್ತಿಗಳಿಗೆ ಮಣೆ ಹಾಕುತ್ತದೆ ಎಂದೆ! ಇದನ್ನು ಅರಿತ ಸಾಹಿತಿ/ಕಲಾವಿದರು `ಸ್ಥಾನ' ಹೊಂದಲು ಸ್ನೇಹವನ್ನು ಬಳಸಿ, ಒತ್ತಡಗಳನ್ನು ಪ್ರಯೋಗಿಸಿ, ಜಾತಿಯನ್ನು ಸಮೀಕರಿಸಿ, ಬಲ್ಲವರು ತನ್ನ ಭಾಷೆ-ಬರಹಗಳಿಂದ ಸಮ್ಮೊಹನಗೊಳಿಸಿ ಒಟ್ಟಿನಲ್ಲಿ ಸ್ಥಾನಿಕರಾಗುತ್ತಾರೆ. ನಾವು ರೂಪಿಸಿಕೊಂಡಿರುವ ಆಡಳಿತ ಸಂರಚನೆ ಏನೆಂದರೆ ಸಾಂಸ್ಕೃತಿಕ ಸಂಸ್ಥೆಗಳನ್ನು ಸರ್ಕಾರ ರಚಿಸುವುದು; ಅವುಗಳಿಗೆ ಅನುದಾನವನ್ನು ಸರ್ಕಾರ ನೀಡುವುದು; ಇವುಗಳನ್ನು ವ್ಯವಹರಿಸುವ ಮಂದಿಯನ್ನು ಸರ್ಕಾರ ನಾಮನಿರ್ದೇಶನ ಮಾಡುವುದು.ಈ ವಿದ್ವಜ್ಜನರೇ ಈ ಪರಿಮಿತಿಯೊಳಗೆ ತಮ್ಮ ಕಾರ್ಯಕ್ರಮಗಳನ್ನು ಸಿದ್ಧಪಡಿಸುವವರು. ಇದೆಲ್ಲ ಒಪ್ಪಿತ ಎಂದಾದ ಮೇಲೆ ಸಂಸ್ಥೆಗಳಲ್ಲಿ ಮತ್ತು ಅಲ್ಲಿನ ಕಾರ್ಯನಿರ್ವಹಣೆಯಲ್ಲಿ ಗುಣಮೌಲ್ಯಗಳನ್ನು ಶೇಕಡಾ ನೂರರಷ್ಟು ಕಾಣುವುದು ಸಾಧ್ಯವೇ ಎಂಬುದು ಪ್ರಶ್ನೆ. ವಿಧಾನಸೌಧವನ್ನು ಪ್ರದಕ್ಷಿಣೆ ಮಾಡಿ ಬರುವವರೇ ಹೆಚ್ಚಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಸರ್ಕಾರದ ಹಿಡಿತದಿಂದ ಮುಕ್ತರಾಗಬೇಕೆಂಬ ಮಾತು ಸತ್ವರಹಿತವಾಗುತ್ತದೆ. ಹೀಗಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಸ್ವಾಯತ್ತತೆಯ ಸಂಗತಿ ನಾಮನಿರ್ದೇಶನದಂಥ ಮೊದಲ ಘಟ್ಟದಿಂದಲೇ ಸಡಿಲಗೊಳ್ಳುತ್ತದೆ ಎಂಬುದು.ಈ ಮುಜುಗರದ ಮಾತುಗಳನ್ನು ಆಡಲು ಕೆಲವು ಘಟನೆಗಳ ತುಣುಕುಗಳನ್ನು ನೆನಪಿಸಿಕೊಳ್ಳಬಯಸುತ್ತೇನೆ. ಒಬ್ಬ ಅಧ್ಯಕ್ಷರು ತನಗೆ 60 ವರ್ಷ ತುಂಬಿತು ಅಂತ ಆ ವರ್ಷ 60 ಪ್ರಶಸ್ತಿಗಳನ್ನು ಅಕಾಡೆಮಿಯಿಂದ ಕೊಡಮಾಡಿಕೊಂಡರು. ಇನ್ನೊಬ್ಬರು ಸರ್ಕಾರ ನೀಡಿದ ಅನುದಾನದಲ್ಲಿ ಶೇಕಡಾ 75ರಷ್ಟನ್ನು ಪುಸ್ತಕಗಳನ್ನು ಮುದ್ರಿಸಿ ಮುನ್ನುಡಿ ಬರೆದುಕೊಂಡರು. ಹೊರರಾಜ್ಯದಲ್ಲಿ ಸಾಮಾನ್ಯ ಸಭೆ ಏರ್ಪಡಿಸುವುದು; ಅಕಾಡೆಮಿಕ್ ಶಿಬಿರಗಳನ್ನು ಬದಿಗಿಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಪ್ರಾಯೋಜಿಸುವುದು; ಪ್ರಶಸ್ತಿಗಳ ಆಯ್ಕೆಯಲ್ಲಿ ತಮ್ಮ ತಮ್ಮ ಆಪ್ತರಿಗೆ `ಪಾಲು' ಕೊಡಿಸುವ ಸದಸ್ಯರು-ಅದು ಆಗದಿದ್ದರೆ ಅತಿರೇಕದಿಂದ ವರ್ತಿಸುವುದು; ಕೆಲವು ಅಧ್ಯಕ್ಷರು ಪ್ರತಿ ಕಾರ್ಯಕ್ರಮಕ್ಕೂ ಸರ್ಕಾರಿ ಅಧಿಕಾರಿಗಳನ್ನೇ ಕಾಯಂ ಅತಿಥಿಗಳನ್ನಾಗಿ ಆಹ್ವಾನಿಸುವುದು; ಇಲಾಖೆಯ ನಿರ್ದೇಶಕರು ಸಂಸ್ಥೆಗಳ ಪ್ರಕಟಣೆಗಳಿಗೆ ತಮ್ಮ ಮಾತು ಎಲ್ಲಿಗೆ ಬರಬೇಕೆಂಬ ಸೂಚನೆಗೆ ಅಧ್ಯಕ್ಷರು ವಿನೀತರಾಗುವುದು ಮುಂತಾದವು. ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಧಾರಣೆಗೊಳ್ಳುವ ಅಧ್ಯಕ್ಷ/ಸದಸ್ಯರೆಲ್ಲ ಸಾರಾಸಗಟಾಗಿ ಹೀಗೇ ಇರುತ್ತಾರೆಂದು ನಾನು ಹೇಳುತ್ತಿಲ್ಲ.ಆದರೆ ಇತ್ತೀಚಿನ ದಿನಗಳಲ್ಲಿ ಅಂಥವರ ಸಂಖ್ಯೆ ವೃದ್ಧಿಸುತ್ತಿದೆಯಲ್ಲ ಎಂಬ ವಿಷಾದ ಅಷ್ಟೆ. ನಾನು ಅಧ್ಯಕ್ಷ, ಕುರ್ಚಿಗೆ; ನಾನು ಸದಸ್ಯ, ಲೆಟರ್‌ಹೆಡ್‌ಗೆ ಅಂತ ಆಗಬಾರದು. ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತ ಸಂರಚನೆಗೆ ಕೇವಲ ಸರ್ಕಾರ ಕಟಿಬದ್ಧವಾಗಿರಬೇಕು ಎಂದು ಹೇಗೆ ನಿರೀಕ್ಷಿಸುತ್ತೇವೆಯೋ ಅಷ್ಟೇ ಸ್ಪಷ್ಟವಾಗಿ ನಾವೂ ಸಹ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕಾದ ಅಂಕದ ಮೇಲೆ ಸತ್ಪಾತ್ರವನ್ನೇ ತೊಡಬೇಕಾಗುತ್ತದೆ.ಸಾಂಸ್ಕೃತಿಕ ಸಂಸ್ಥೆಗಳಿಗೆ ಪ್ರವೇಶದ ಪಥ, ಬಂದ ಆಮೇಲೆ ಪ್ರಚಾರ, ಸ್ವಾರ್ಥ, ಗುಂಪುಗಾರಿಕೆಯನ್ನು ಬಿಟ್ಟು ಜನಮುಖಿ ಕ್ರಿಯೆಗಳಲ್ಲಿ ಋಷಿಯ ನಡೆ ಇರಬೇಕಾಗುತ್ತದೆ. ಸರ್ಕಾರವೆಂಬುದು ಸಾಂಸ್ಕೃತಿಕ ಸಂಸ್ಥೆಗಳನ್ನು ಉಪೇಕ್ಷಿಸಲೂ ಬಲ್ಲದು ಪ್ರತಿಷ್ಠೆಯಾಗಿ ಪರಿಗಣಿಸಲೂ ಬಲ್ಲದು. ಸರ್ಕಾರಕ್ಕೆ ಈ ಎರಡು ಬಗೆಯ ದಂಡಗಳನ್ನು ಕೊಡ ಮಾಡುವವರು ನಾವು!

ಆದ್ದರಿಂದ ಇವತ್ತಿನ ತುರ್ತು ಎಂದರೆ ಮೊದಲು ನಮ್ಮನ್ನು ನಾವು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.