ಬುಧವಾರ, ಜನವರಿ 29, 2020
28 °C
ಎಸ್ಮಾ ಕಾಯ್ದೆ ಜಾರಿಗೆ ವಿರೋಧ

ಸರ್ಕಾರಿ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ನೌಕರರ ಪ್ರತಿಭಟನೆ

ಬೆಂಗಳೂರು: ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯನ್ನು (ಎಸ್ಮಾ) ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ನಗರದ ಬಹುಮಹಡಿ ಕಟ್ಟಡದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.ಮಧ್ಯಾಹ್ನ 1.30ಕ್ಕೆ ಬಹುಮಹಡಿ ಕಟ್ಟಡದ ಬಳಿ ಜಮಾಯಿಸಿದ ನೌಕರರು, ಪ್ರಜಾಪ್ರಭುತ್ವ ವಿರೋಧಿ ಎಸ್ಮಾ ಕಾಯ್ದೆಯನ್ನು ಜಾರಿಗೆ ತರುವುದು ಸಮಂಜಸವಲ್ಲ. ಈ ಕರಾಳ ಕಾಯ್ದೆ­ಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸ­ಬಾರದು ಎಂದು ಒತ್ತಾಯಿಸಿದರು.ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಮಾತನಾಡಿ, ‘ದುಡಿಯುವ ವರ್ಗಕ್ಕೆ ಗೌರವಯುತ ವೇತನ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸು­ವಲ್ಲಿ ವಿಫಲವಾಗಿರುವ ಸರ್ಕಾರ, ನೌಕರರ ಹಕ್ಕನ್ನು ಹತ್ತಿಕ್ಕಲು ಎಸ್ಮಾ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಬಿಜೆಪಿ ಆಡಳಿತದ ಸರ್ಕಾರ ಕೂಡ ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸಿ ರಾಷ್ಟ್ರಪತಿಗಳ ಅನುಮತಿಗೆ ಕಳುಹಿಸಿತ್ತು. ಆಗ ನೌಕರರಿಂದ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಅದನ್ನು ಹಿಂಪಡೆಯಲಾಗಿತ್ತು. ಈಗ ಕಾಂಗ್ರೆಸ್‌್ ಸರ್ಕಾರ ಪುನಃ ಅದೇ ತಪ್ಪು ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಸ್ಮಾ ಕಾಯ್ದೆಗೆ ವಿಧಾನಸಭೆಯ ಸ್ಪೀಕರ್‌ ಅಸಮ್ಮತಿ ಸೂಚಿಸಿದರೂ ಕೂಡ ಸರ್ಕಾರದ ಅದನ್ನು ಲೆಕ್ಕಿಸದೆ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಅನುಷ್ಠಾನಕ್ಕೆ ಒಪ್ಪಿಗೆ ಪಡೆದಿದೆ. ಕಡಿಮೆ ವೇತನ ಕೊಟ್ಟು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುವುದು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೇಮಕಾತಿ,  ಪಿಂಚಣಿ ಖಾಸಗೀಕರಣ, ನೌಕರರ ಶೋಷಣೆ ಸೇರಿದಂತೆ ಮತ್ತಿತರ ಕಾರ್ಮಿಕ ವಿರೋಧಿ ಕ್ರಮವನ್ನು ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಈ ಮಾರ್ಗೋಪಾಯ ಕಂಡುಕೊಂಡಿದೆ’ ಎಂದು ಆರೋಪಿಸಿದರು.‘ಕಾರ್ಮಿಕ ಕಾನೂನುಗಳ ಪ್ರಕಾರ ಕರ್ತವ್ಯದ ಜೊತೆಗೆ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಷ್ಕರ ನಡೆಸುವ ಹಕ್ಕು ಕಾರ್ಮಿಕರಿಗೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಕ್ಕಿಗಾಗಿ ಹೋರಾಟ ನಡೆಸುವುದು ಕಾನೂನು ಬಾಹಿರವಲ್ಲ. ಆದರೆ, ಹೋರಾಟ ಮಾಡುವ ಕಾರ್ಮಿಕರನ್ನು ವಾರಂಟ್‌ ಇಲ್ಲದೆ ಬಂಧಿಸಿ ಜೈಲಿಗೆ ಕಳುಹಿಸುವ ಕಾನೂನು ಸರ್ಕಾರದ ಸರ್ವಾಧಿಕಾರಿ ಧೋರಣೆ­ಯನ್ನು ತೋರುತ್ತದೆ’ ಎಂದರು.‘ಎಸ್ಮಾ ಕಾಯ್ದೆ ಜಾರಿಯಲ್ಲಿಲ್ಲ­ದಿದ್ದರೂ ಸಾರಿಗೆ, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಆದರೂ ಏಕಾಏಕಿ ಎಸ್ಮಾ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಇದನ್ನು ಹಿಂಪಡೆಯದಿದ್ದರೆ ರಾಜ್ಯ­ದಾದ್ಯಂತ ಹೋರಾಟ ನಡೆಸಲಾಗು­ವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)