ಗುರುವಾರ , ಏಪ್ರಿಲ್ 15, 2021
24 °C

ಸರ್ಕಾರಿ ಭದ್ರತಾ ಮುದ್ರಣಾಲಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚೆಕ್ ಪುಸ್ತಕ, ಉತ್ತರ ಪತ್ರಿಕೆಗಳು, ಪ್ರಶ್ನೆಪತ್ರಿಕೆಗಳು, ರಸೀದಿ ಪುಸ್ತಕಗಳು, ಪರ್ಮಿಟ್ ಪುಸ್ತಕ, ಬಜೆಟ್ ಪುಸ್ತಕ ಇತ್ಯಾದಿ ಗೌಪ್ಯ ವರದಿಗಳ ಪ್ರಕಟಣೆಗಾಗಿ ರಾಜ್ಯದಲ್ಲಿ ಮೊದಲ ಬಾರಿಗೆ `ಸರ್ಕಾರಿ ಭದ್ರತಾ ಮುದ್ರಣಾಲಯ~ ಆರಂಭಿಸಲಾಗಿದೆ.ಪ್ರಸ್ತುತ ಕೇಂದ್ರ ಸರ್ಕಾರದ ಭದ್ರತಾ ಮುದ್ರಣಾಲಯ ಬಿಟ್ಟರೆ, ರಾಜ್ಯಗಳ ಮಟ್ಟದಲ್ಲಿ ಭದ್ರತಾ ಮುದ್ರಣಾಲಯ ಇಲ್ಲ. ಇದರ ಅಗತ್ಯ ಮನಗಂಡಿರುವ ರಾಜ್ಯ ಸರ್ಕಾರ, ನಗರದ ಪೀಣ್ಯ ದಲ್ಲಿರುವ ಸರ್ಕಾರಿ ಮುದ್ರಣಾಲಯದ ಆವರಣದಲ್ಲಿಯೇ ಪ್ರತ್ಯೇಕವಾದ `ಭದ್ರತಾ ಮುದ್ರಣಾಲಯ~ ಪ್ರಾರಂಭಿಸಿದೆ.ಗುರುವಾರ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಗೌಪ್ಯತೆ ಕಾಪಾಡುವುದು ಬಹಳ ಮುಖ್ಯ.ಆಯ-ವ್ಯಯದಲ್ಲಿನ ಅಂಶಗಳು ಮುದ್ರಣಾಲಯ ಸಿಬ್ಬಂದಿಗೆ ಗೊತ್ತಿರುತ್ತದೆ. ಬಜೆಟ್ ಮಂಡನೆಗೂ ಮೊದಲೇ ಆ ಅಂಶಗಳು ಬಹಿರಂಗವಾದರೆ ಅನಾಹುತ ವಾಗುತ್ತದೆ. ಆದ್ದರಿಂದ ರಹಸ್ಯ ಪಾಲನೆ ಮುಖ್ಯವಾದುದು ಎಂದರು.ಪ್ರಶ್ನೆಪತ್ರಿಕೆಗಳು ಬಹಿರಂಗವಾದರೆ ಕಷ್ಟಪಟ್ಟು ಓದುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆ ದೃಷ್ಟಿಯಿಂದ ಗೌಪ್ಯತೆ ಮಹತ್ವದ್ದಾಗಿದೆ. ರಾಜ್ಯದ ಮುದ್ರಣಾಲಯ ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ ಉತ್ತಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ಮಾಡಿದರು.ನೌಕರರ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ನಿಟ್ಟಿನಲ್ಲಿ ಕ್ರಮಕೈಗೊಂಡರೆ, ಅದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. `ಇಡೀ ದೇಶ ಇತ್ತ ನೋಡುತ್ತಿದೆ. ಖಾಸಗಿಯವರ ಸ್ಪರ್ಧೆಯನ್ನು ಎದುರಿಸುವ ಮೂಲಕ ಅತ್ಯುತ್ತಮ ಸೇವೆ ನೀಡಬೇಕು. ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಮುಂದೆಯೂ ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸಿ~ ಎಂದು ಸಚಿವ ಶಿಕ್ಷಣ ಸಚಿವ ಕಾಗೇರಿ ಕಿವಿಮಾತು ಹೇಳಿದರು.ಸದ್ಯ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಭದ್ರತಾ ಮುದ್ರಣಾಲಯ ಆರಂಭಿಸಲಾಗಿದೆ. ಮುಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು. ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಬೇರೆ ರಾಜ್ಯಗಳಿಂದ ಮುದ್ರಣ ಕಾರ್ಯಕ್ಕೆ ಬೇಡಿಕೆ ಬರುತ್ತದೆ ಎಂದರು.ಶಾಸಕ ಎಂ.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಮುನಿರಾಜು, ಪಾಲಿಕೆ ಸದಸ್ಯೆ ಆಶಾ ಸುರೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ನಿರ್ದೇಶಕ ಎಂ.ರವಿಶಂಕರ್ ಉಪಸ್ಥಿತರಿದ್ದರು.

ದಿನಗೂಲಿ ನೌಕರರ ಸಮಸ್ಯೆ: ಶೀಘ್ರ ಪರಿಹಾರ

ಸರ್ಕಾರಿ ಮುದ್ರಣಾಲಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚಿಂತನೆ ನಡೆದಿದೆ. ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಇದು ಮುದ್ರಣಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ 392 ದಿನಗೂಲಿ ನೌಕರರ ಸಮಸ್ಯೆ ಮಾತ್ರ ಅಲ್ಲ. ಇಡೀ ರಾಜ್ಯದಲ್ಲಿ ದಿನಗೂಲಿ ನೌಕರರು ಇದ್ದಾರೆ ಎಂದರು.ಇದಕ್ಕೂ ಮೊದಲು ಸರ್ಕಾರಿ ಕೇಂದ್ರ ಮುದ್ರಣಾಲಯ ನೌಕರರ ಸಂಘದ ಉಪಾಧ್ಯಕ್ಷ ಕೇಶವಮೂರ್ತಿ ಮೊದಲಾದವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ದಿನಗೂಲಿ ನೌಕರರ ಸೇವೆ ಕಾಯಂಗೊಳಿಸುವಂತೆ ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.