ಮಂಗಳವಾರ, ಜೂನ್ 15, 2021
27 °C

ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೇಷನ್ ವೈಡ್ ಪ್ರೈಮರಿ ಹೆಲ್ತ್‌ಕೇರ್ ಸರ್ವೀಸ್ (ನೇಷನ್ ವೈಡ್) ಮತ್ತು  ರೋಟರಿ ಕ್ಲಬ್ ಇಂದಿರಾನಗರ ಘಟಕದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಿ.ನಾರಾಯಣಪುರ ಮತ್ತು ಗರುಡಾಚಾರ್‌ಪಾಳ್ಯದ 800ಕ್ಕೂ ಅಧಿಕ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನೇಷನ್ ವೈಡ್ ಮತ್ತು ನಿಯೋನೇಟಲ್ ಕೇರ್ ಅಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ (ಎನ್‌ಸಿಆರ್‌ಐ) ಏಳು ಮಂದಿ ವೈದ್ಯರು 6 ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಸ್ವಚ್ಛತೆಯ ಅರಿವು, ಕಬ್ಬಿಣಾಂಶದ ಕೊರತೆ, ಕಲಿಕೆಯಲ್ಲಿನ ತೊಡಕುಗಳು, ದಂತ ಮತ್ತು ದೃಷ್ಟಿ ದೋಷ ಸಮಸ್ಯೆಗಳ ಜೊತೆಗೆ ಸಾಮಾನ್ಯ ಆರೋಗ್ಯ ಪರೀಕ್ಷೆ, ಮಾನಸಿಕ ಪ್ರಗತಿ, ಬೆಳವಣಿಗೆ (ಎತ್ತರ, ತೂಕ, ಎದೆಯ ಅಳತೆ) ಬಗ್ಗೆ ತಪಾಸಣೆ ನಡೆಸಿದರು.ಈ ಸಂದರ್ಭದಲ್ಲಿ ಶೇ 15ರಷ್ಟು ಮಕ್ಕಳು ಸರಾಸರಿಗಿಂತಲೂ ಕಡಿಮೆ ತೂಕ ಇದ್ದರೆ, ಇಬ್ಬರು ಮಕ್ಕಳು ಮಾತ್ರವೇ ಹೆಚ್ಚಿನ ತೂಕ ಇರುವುದು ಪತ್ತೆಯಾಯಿತು. ಶೇ 50ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಶೇ 35 ರಷ್ಟು ಮಕ್ಕಳು ವಿಟಮಿನ್ `ಎ~ ಕೊರತೆಯಿಂದ ಬಳಲುತ್ತಿರುವುದು ಕಂಡು ಬಂದಿತು ಎಂದು ನೇಷನ್‌ವೈಡ್ ಪ್ರಾಥಮಿಕ ಹೆಲ್ತ್‌ಕೇರ್ ಸರ್ವೀಸಸ್‌ನ ಡಾ. ಆದರ್ಶ್ ಸೋಮಶೇಖರ್ ಮಾಹಿತಿ ನೀಡಿದರು.ಶೇ 10ರಷ್ಟು ಮಕ್ಕಳಿಗೆ ಹೆಚ್ಚಿನ ನೇತ್ರ ತಪಾಸಣೆ ಅಗತ್ಯವಿದ್ದು, ಈ ಮಕ್ಕಳಿಗೆ ಶಾಲಾ ಕೊಠಡಿಯಲ್ಲಿನ ಕಪ್ಪು ಹಲಗೆ ಮೇಲಿನ ಅಕ್ಷರಗಳನ್ನು ಓದಲು ಆಗುತ್ತಿರಲಿಲ್ಲ. ಇಬ್ಬರು ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಗಿದ್ದು, ಇವರನ್ನು ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಈ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಇಂದಿರಾನಗರದ ರೋಟರಿ ಕ್ಲಬ್ ಘಟಕ ಭರಿಸಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.