ಶನಿವಾರ, ಜುಲೈ 31, 2021
25 °C

ಸರ್ಕಾರ ಜನಪರವಾಗಿ ಕೆಲಸ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಸರ್ಕಾರ ಭರವಸೆ ನೀಡುವುದರ ಬದಲು ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಬಡವರು, ನಿರ್ಗತಿಕರು ಮತ್ತು ಜನ ಸಾಮಾನ್ಯರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆಗ್ರಹಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರಗಳು ಜನಪರವಾಗಿರಬೇಕೆ ಹೊರತು ಜನರಿಂದ ದೂರವಾಗಬಾರದು’ ಎಂದರು.ಜಲತಜ್ಞ ಕೆ.ನಾರಾಯಣಸ್ವಾಮಿ ಮಾತನಾಡಿ, ‘ರಾಜಕೀಯದಲ್ಲಿ ಸಮಾನತೆ ದೊರೆತರೆ ಸಾಲದು, ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದೊರೆಯಬೇಕು. ಗಾಂಧೀಜಿ ಮತ್ತು ಅಂಬೇಡ್ಕರ್ ತತ್ವ, ಸಿದ್ಧಾಂತ ಪಾಲನೆಯಾಗಬೇಕು’ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ರಾಜ್ಯ ಸಂಘಟನಾ ಸಂಚಾಲಕ ಜಿ.ಎಂ ಶಿವಪ್ರಸಾದ್, ಜನಶಕ್ತಿ ಸಂಘಟನೆ ಮುಖಂಡ ಡಾ,ವಾಸು, ಪುರಸಭೆ ಅಧ್ಯಕ್ಷೆ ಗೀತಾಜಯಂಧರ್ ಉಪಾದ್ಯಕ್ಷ ವಿ.ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುರಸಭೆ ವತಿಯಿಂದ ಹಮಾಲಿ ಕಾರ್ಮಿಕರಿಗೆ 20 ಕೈಗಾಡಿಗಳನ್ನು ವಿತರಿಸಲಾಯಿತು.ಉಚಿತ ತರಬೇತಿ ಉದ್ಘಾಟನೆ

ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಯಾವುದೇ ಕಾರ್ಯ ಕೈಗೊಂಡಲ್ಲಿ ಯಶಸ್ಸು ದೊರೆಯುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣರೆಡ್ಡಿ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಚಂದನಪ್ರಿಯ ತರಬೇತಿ ಮತ್ತು ಅಭಿವೃದ್ಧಿ ಟ್ರಸ್ಟ್ ಏರ್ಪಡಿಸಿದ್ದ ಟ್ರಸ್ಟ್ ಹಾಗೂ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾರ್ಯವು ಬಡವರಿಗೆ, ಜನಸಾಮಾನ್ಯರಿಗೆ ಉಪಯುಕ್ತವಾಗಬೇಕು’ ಎಂದರು.ಪುರಸಭೆ ಅಧ್ಯಕ್ಷೆ ಗೀತಾಜಯಂಧರ್ ಮಾತನಾಡಿ, ‘ನೂತನ ಟ್ರಸ್ಟ್‌ನಿಂದ ಒಂದು ತಿಂಗಳು ಕಾಲ ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ’ ಎಂದರು.ಟ್ರಸ್ಟ್‌ನ ಅಧ್ಯಕ್ಷ ದೇವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ರಾಘವೇಂದ್ರ ಹನುಮಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ನೇತ್ರ ತಪಾಸಣಾ ಶಿಬಿರ


ಪಟ್ಟಣದ ಎಂಎಸ್‌ಎಸ್ ಶಾಲೆಯಲ್ಲಿ ಭಾನುವಾರ ನೇತ್ರ ತಪಾಸಣಾ ಶಿಬಿರ ನಡೆಯಿತು. ಮಾಜಿ ಶಾಸಕ ಅಶ್ವತ್ಥನಾರಾಯಣರೆಡ್ಡಿ ಶಿಬಿರ ಉದ್ಘಾಟಿಸಿದರು.ಒಟ್ಟು 300 ಜನರನ್ನು ತಪಾಸಣೆ ಮಾಡಲಾಯಿತು. ಅವರಲ್ಲಿ 150 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು.ಅಗತ್ಯವಿದ್ದಲ್ಲಿ ಕನ್ನಡಕ ಮತ್ತು ಔಷಧಿಯನ್ನು ಉಚಿತವಾಗಿ ಪೂರೈಸಲಾಗುವುದು ಎಂದು ಶಿಬಿರದ ವ್ಯವಸ್ಥಾಪಕ ಡಾ. ಜಯರಾಮೇಗೌಡ ತಿಳಿಸಿದರು.ಎಂಎಸ್‌ಎಸ್ ಕಾನ್ವೆಂಟ್ ಕಾರ್ಯದರ್ಶಿ ಪಠಾಣ್, ಕನ್ನಡ ಸೇನೆ ಸಂಘಟನೆ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.ರೈತಸಂಘ ಘಟಕ ಉದ್ಘಾಟನೆ

ಸಂಘಟನೆ ಮೂಲಕ ಹೋರಾಟ ಕೈಗೊಂಡಲ್ಲಿ ಮಾತ್ರ ಯಶಸ್ಸು ಗಳಿಸಬಹುದು. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಹೋರಾಟವೇ ಮಾರ್ಗ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಕಲ್ಲೂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ವಿನಾಯಕ ದೇವಾಲಯದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸಂಘಟನಾತ್ಮಕವಾಗಿ ಹೋರಾಟ ನಡೆಸಿದ್ದಲ್ಲಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.ರೈತ ಸಂಘದ ಕಾರ್ಯದರ್ಶಿ ಲೋಕೇಶಗೌಡ ಮಾತನಾಡಿ, ‘ಸುವರ್ಣ ಭೂಮಿ ಯೋಜನೆಯಡಿಯಲ್ಲಿ ಎಲ್ಲ ಫಲಾನುಭವಿಗಳಿಗೆ ಸಹಾಯಧನ ನೀಡಬೇಕು. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಬಿಡಬೇಕು’ ಎಂದರು.ಸಂಘದ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಮುದ್ದುರಂಗಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಗ್ರಾಮಸ್ಥರಾದ ವಿಜಯ ರಾಘವ, ರವಿಕುಮಾರ್, ಗಂಗರಾಜು, ಶಾಂತರಾಜು ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.