ಭಾನುವಾರ, ಏಪ್ರಿಲ್ 18, 2021
32 °C

ಸರ್ವಾಧಿಕಾರಿ ವರ್ತನೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಅವರ ಧೋರಣೆ, ಕಾರ್ಯವೈಖರಿ ವಿರುದ್ಧ ಇದೇ ಪ್ರಥಮ ಬಾರಿಗೆ ಸಮಾಜದ ಹಲವು ವರ್ಗಗಳಿಂದ ತೀವ್ರ ಆಕ್ಷೇಪ ಕೇಳಿಬಂದಿದ್ದು, ಅವರ `ಸರ್ವಾಧಿಕಾರಿ~ ವರ್ತನೆ, ಬಲಪಂಥೀಯರನ್ನು ಬೆಂಬಲಿಸುವ ಪ್ರವೃತ್ತಿಯನ್ನು ಟೀಕಿಸಲಾಗಿದೆ.ಚಿತ್ರ ನಿರ್ಮಾಪಕ ಮಹೇಶ್‌ ಭಟ್‌, ಇತಿಹಾಸಕಾರ ಕೆ. ಎನ್‌. ಪಣಿಕ್ಕರ್‌ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶಬನಂ ಹಶ್ಮಿ ಅವರು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅಣ್ಣಾ ಹಜಾರೆ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.`ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸಿನಿಮಾ ಕತೆಯಂತೆ ಕಾಣಿಸುತ್ತಿದೆ. ಇದು ಟಿವಿಗಳ ಟಿಆರ್‌ಪಿಯನ್ನು ಹೆಚ್ಚಿಸೀತೇ ಹೊರತು ಭ್ರಷ್ಟಾಚಾರ ಸಮಸ್ಯೆಗೆ ಪರಿಹಾರ ನೀಡಲಾರದು~ ಎಂದು ಮಹೇಶ್‌ ಭಟ್‌ ಹೇಳಿದರು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಹಜಾರೆ ಅವರು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಮೂವರೂ ಒಕ್ಕೊರಲಿನಿಂದ ಆಕ್ಷೇಪಿಸಿದರು.ಲೋಕಪಾಲ ಮಸೂದೆಯನ್ನು ಜಾರಿಗೆ ತರುವ ವಿಧಾನವೇ ಸರಿಯಾಗಿಲ್ಲ. ದೇಶದಲ್ಲಿ ಕಾಯಂ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ರೂಪಿಸುವ ಹುನ್ನಾರ ನಡೆದಿದೆ.  ಭ್ರಷ್ಟಾಚಾರ ನಿಗ್ರಹಕ್ಕೆ ಶಾಸನವೊಂದು ರೂಪುಗೊಳ್ಳಬೇಕಾದುದೇನೋ ನಿಜ, ಆದರೆ ಲೋಕಪಾಲ ಮಸೂದೆ ಪ್ರಜಾಪ್ರಭುತ್ವವನ್ನು ದಮನ ಮಾಡೀತೇ ಹೊರತು ಭ್ರಷ್ಟಾಚಾರವನ್ನು ಹತ್ತಿಕ್ಕಲಾರದು~ ಎಂದು ಪಣಿಕ್ಕರ್‌  ಅಭಿಪ್ರಾಯಪಟ್ಟರು.ಹಜಾರೆ ಅವರು ಆರಂಭಿಸಿರುವ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬಲಪಂಥೀಯ ಸಂಘಟನೆಗಳು ಅಪಹರಣ ಮಾಡಿವೆ ಎಂದು ಅವರು ದೂರಿದರು. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಹಜಾರೆ ಪ್ರಶಂಸಿಸಿದ್ದನ್ನು ಅವರು ಟೀಕಿಸಿದರು.`ಹಜಾರೆ ಅವರು ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡುತ್ತಿದ್ದರೂ ಕೋಮುವಾದವನ್ನು ಕಡೆಗಣಿಸುತ್ತಿದ್ದಾರೆ. ಅಭಿವೃದ್ಧಿಗಾಗಿ ಮೋದಿ ಅವರನ್ನು ಪ್ರಶಂಸಿದರೂ, ಅವರ ನೈತಿಕ ಸಮಸ್ಯೆಯನ್ನು ಬದಿಗೆ ಸರಿಸುವ ಧೋರಣೆ ಸರಿಯಲ್ಲ~ ಎಂದು ಮಹೇಶ್‌ ಭಟ್‌ ಹೇಳಿದರು.ಬೆದರಿಕೆ ದುರದೃಷ್ಟಕರ-ಬಿಜೆಪಿ: ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮತ್ತು ಇತರ ನಾಗರಿಕ ಸಮಾಜದ ಸದಸ್ಯರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ನಿವೃತ್ತ ನ್ಯಾಯಮೂರ್ತಿ ಅಥವಾ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುವ ಪ್ರವೃತ್ತಿ ದುರದೃಷ್ಟಕರ ಎಂದು ಹೇಳಿದೆ.`ಭ್ರಷ್ಟಾಚಾರ ವಿರುದ್ಧ ಚಳವಳಿಯಲ್ಲಿ ತೊಡಗಿರುವ ಎಲ್ಲಾ ಕಾರ್ಯಕರ್ತರನ್ನು ಅವಮಾನಿಸುವ ಪ್ರವೃತ್ತಿ ಯುಪಿಎ ಅಥವಾ ಸರ್ಕಾರದ ಯೋಗ್ಯತೆಗೆ ತಕ್ಕುದಲ್ಲ~ ಎಂದು ಪಕ್ಷದ ಹಿರಿಯ ನಾಯಕ ಅರುಣ್‌ ಜೇಟ್ಲಿ ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.