ಬುಧವಾರ, ಜೂನ್ 3, 2020
27 °C

ಸರ್ವ ಧರ್ಮ ಕಾರಣಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ

ಹರೀಶ ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪುಟ್ಟ ಊರು ಸುಬ್ರಹ್ಮಣ್ಯ. ಸುತ್ತ ದರ್ಪಣ ತೀರ್ಥ ನದಿ. ನಂಬಿ ಬಂದ ಭಕ್ತರಿಗೆ ಇಂಬು ನೀಡುವ ಕಾರಣಿಕದ ಸನ್ನಿಧಿ ಈ ಕ್ಷೇತ್ರ. ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಿಂದ ಹಿಡಿದು ಸಿನಿಮಾ ತಾರೆಯರಾದ ಶಿಲ್ಪಾಶೆಟ್ಟಿ, ಜೂಹಿ ಚಾವ್ಲಾ, ಹೇಮಮಾಲಿನಿವರೆಗೆ ಎಲ್ಲರಿಗೂ ಈ ಕ್ಷೇತ್ರ ಅಚ್ಚು ಮೆಚ್ಚು.



ಸುಬ್ರಹ್ಮಣ್ಯ ನಾಗಕ್ಷೇತ್ರ. ಸರ್ಪರಾಜ ವಾಸುಕಿ ಸುಬ್ರಹ್ಮಣ್ಯನೊಂದಿಗೆ ಸನ್ನಿಹಿತನಾಗಿ ಇಲ್ಲಿ ಪೂಜೆ ಪಡೆಯುತ್ತಾನೆ. ಆದ್ದರಿಂದಲೇ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧಿ. ಮಕ್ಕಳಾಗದವರು, ಚರ್ಮರೋಗಗಳ ಸಮಸ್ಯೆ ಇರುವ ಸರ್ವ ಧರ್ಮೀಯರೂ ಕ್ಷೇತ್ರಕ್ಕೆ ಹರಕೆ ಹೊತ್ತು, ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಹಿಂದೆ ದಟ್ಟಾರಣ್ಯವಾಗಿತ್ತು. ಇಲ್ಲಿನ ಮೂಲ ನಿವಾಸಿಗಳು ಮಲೆಕುಡಿಯರು. ಒಮ್ಮೆ ಅರಣ್ಯದಲ್ಲಿ ತಿರುಗಾಡುತ್ತಿದ್ದ ಮಲೆಕುಡಿಯರಿಗೆ ಕುಕ್ಕೆ (ಬುಟ್ಟಿ)ಯಲ್ಲಿ ಲಿಂಗವೊಂದು ಸಿಕ್ಕಿತು. ಅದನ್ನು ತಂದು ಸುಬ್ರಹ್ಮಣ್ಯದಲ್ಲಿ ಪೂಜಿಸತೊಡಗಿದರು. ಕುಕ್ಕೆಯಲ್ಲಿ ಲಿಂಗವನ್ನು ತಂದ ಕಾರಣ ಸುಬ್ರಹ್ಮಣ್ಯದ ಜತೆ ಕುಕ್ಕೆಯೂ ಸೇರಿಕೊಂಡಿತು ಎಂಬ ಐತಿಹ್ಯವಿದೆ. ಲಿಂಗವನ್ನು ಕುಕ್ಕ ಎಂಬ ಮಲೆಕುಡಿಯ ತಂದ ಕಾರಣ ‘ಕುಕ್ಕ’ ಪದ ಮುಂದೆ ಕುಕ್ಕೆ ಎಂದಾಯಿತು ಎನ್ನಲಾಗಿದೆ.

ಸೇವೆಗಳು

ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸೇವೆಗಳು. ಸರ್ಪ ಹತ್ಯೆ, ನಾಗದೋಷ ಪರಿಹಾರಕ್ಕಾಗಿ ಈ ಸೇವೆಗಳನ್ನು ಜನರು ಸಲ್ಲಿಸುತ್ತಾರೆ. ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳೂ ಸಮರ್ಪಣೆಯಾಗುತ್ತವೆ.ಮುಖ್ಯ ಗುಡಿಯ ಜತೆಗೆ ದೇವಳದ ಒಳಾಂಗಣದಲ್ಲಿ ಸೂರ್ಯ, ವಿಷ್ಣು, ಗಣಪತಿ ದೇವರನ್ನೊಳಗೊಂಡ ಉಮಾ ಮಹೇಶ್ವರ ಗುಡಿಯಿದೆ. ಕುಕ್ಕೆಲಿಂಗ ದೇವರು, ಬಲ್ಲಾಳರಾಯನ ವಿಗ್ರಹಗಳ ದರ್ಶನವನ್ನೂ ಪಡೆಯಬಹುದು. ಹೊರಾಂಗಣದಲ್ಲಿ ಹೊಸಳಿಗಮ್ಮನ ಗುಡಿ, ಶೃಂಗೇರಿ ಮಠ, ಸಂಪುಟ ನರಸಿಂಹ ಸ್ವಾಮಿ ಮಠ ಇದೆ. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಈಗಿನ ಮಠಾಧಿಪತಿ.



ಕಾಶಿಕಟ್ಟೆ ಮಹಾಗಣಪತಿ, ಬಿಲದ್ವಾರ, ವನದುರ್ಗಾದೇವಿ ದೇವಸ್ಥಾನ, ಇಪ್ಪತ್ತೊಂದು ಅಡಿಯ ಎತ್ತರದ ಅಭಯ ಮಹಾ ಗಣಪತಿ, ಅಗ್ರಹಾರ ಸೋಮನಾಥ ದೇವಾಲಯವಿದೆ. ಸುಬ್ರಹ್ಮಣ್ಯ- ಧರ್ಮಸ್ಥಳ ರಸ್ತೆಯಲ್ಲಿ ಮೂರು ಕಿ.ಮಿ. ದೂರದಲ್ಲಿರುವ ಕುಲ್ಕುಂದ ಬಸವೇಶ್ವರ ದೇವಾಲಯದ ಕಲ್ಲಿನ ಬಸವನ ವಿಗ್ರಹ ಪ್ರಮುಖ ಆಕರ್ಷಣೆ. ಮಾರ್ಗಶಿರ ಶುದ್ಧ ಷಷ್ಠಿಯಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಬೆಂಗಳೂರಿನಿಂದ ಹಗಲು ರೈಲಿನಲ್ಲಿ ಬರುವವರಿಗೆ ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ಮಧ್ಯೆ  ಪ್ರಯಾಣಿಸುವುದು ಅಪೂರ್ವ ಅನುಭವ ಉಂಟು ನೀಡುತ್ತದೆ.



ಸುಬ್ರಹ್ಮಣ್ಯ ಕ್ಷೇತ್ರ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ಆಡಳಿತಾಧಿಕಾರಿ. ನಿಂಗಯ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ದೇವಳದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿಗಳು: 08257-281700, 281224 ಅಥವಾ www.kukke.org ನೋಡಬಹುದು.



ಹೀಗೆ ಬನ್ನಿ

ಸುಬ್ರಹ್ಮಣ್ಯಕ್ಕೆ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಧರ್ಮಸ್ಥಳದಿಂದ ನೇರ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಬೆಂಗಳೂರು ಮತ್ತು ಮಂಗಳೂರಿನಿಂದ ರೈಲು ಮೂಲಕವೂ ಬರಬಹುದು.  ಸುಬ್ರಹ್ಮಣ್ಯಕ್ಕೆ 15 ಕೀ.ಮೀ ದೂರದಲ್ಲಿ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣವಿದೆ. ಹತ್ತಿರದ ವಿಮಾನ ನಿಲ್ದಾಣ ಮಂಗಳೂರು. ಮಂಗಳೂರು, ಧರ್ಮಸ್ಥಳಗಳಿಂದ ಖಾಸಗಿ ಬಸ್‌ಗಳಿವೆ.



ವಸತಿ ವ್ಯವಸ್ಥೆ

ದೇವಳದ ವತಿಯಿಂದ ಆಶ್ಲೇಷ, ಅಕ್ಷರ, ಕಾರ್ತಿಕೇಯ, ಸ್ಕಂದ ಕೃಪಾ, ಕುಮಾರಕೃಪಾ ಮೊದಲಾದ ವಸತಿ ಗೃಹಗಳು, ಛತ್ರ ಮತ್ತು ಕಾಟೇಜ್‌ಗಳಿವೆ.ಜತೆಗೆ ಖಾಸಗಿ ವಸತಿ ಗೃಹಗಳೂ ಇವೆ. ವಿಶೇಷ ದಿನ, ವಾರದ ಅಂತ್ಯದಲ್ಲಿ ಕ್ಷೇತ್ರಕ್ಕೆ ಬರುವವರು ಮುಂಚಿತವಾಗಿ ವಸತಿ ಕಾಯ್ದಿರಿಸಿಕೊಳ್ಳಬೇಕು.ದೇವಳ ವತಿಯಿಂದ ಉಚಿತ ಲಗೇಜು ಕೊಠಡಿ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಉಚಿತ ಊಟದ ವ್ಯವಸ್ಥೆಯಿದೆ.



ಸೇವಾ ಶುಲ್ಕ

ಸರ್ಪಸಂಸ್ಕಾರ ಸೇವೆಗೆ ಮೊದಲೇ ದಿನ ನಿಗದಿ ಮಾಡಿಕೊಳ್ಳಬೇಕು. ಅದು ಎರಡು ದಿನ ನಡೆಯುವ ವಿಶೇಷ ಸೇವೆ. ಆಶ್ಲೇಷ ಬಲಿ. ನಾಗಪ್ರತಿಷ್ಠೆಗೆ ಮುಂಚಿತವಾಗಿ ಹಣ ಪಾವತಿಸಿ ರಶೀದಿ ಪಡೆಯಬೇಕು. ಸರ್ಪ ಸಂಸ್ಕಾರಕ್ಕೆ 2500 ರೂ, ನಾಗಪ್ರತಿಷ್ಠೆಗೆ 400ರೂ, ಆಶ್ಲೇಷ ಬಲಿ ಪೂಜೆಗೆ 400ರೂ ಮತ್ತು ಇಡೀ ದಿನದ ಮಹಾಪೂಜೆಗೆ 400 ರೂ ಶುಲ್ಕವನ್ನು ದೇವಳದ ಆಡಳಿತ ಮಂಡಳಿ ನಿಗದಿ ಮಾಡಿದೆ. ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 3.30ರಿಂದ ರಾತ್ರಿ 8ರವರೆಗೆ ದೇವರ ದರ್ಶನಕ್ಕೆ ಅವಕಾಶ. ಮಧ್ಯಾಹ್ನ 12 ಮತ್ತು ರಾತ್ರಿ 7.30ಕ್ಕೆ ಮಹಾಪೂಜೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.