ಸೋಮವಾರ, ಜೂನ್ 21, 2021
29 °C

ಸರ್ವ ಶಿಕ್ಷಣ ಅಭಿಯಾನ: ವಿದೇಶಿ ನಿಯೋಗ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಸರ್ವಶಿಕ್ಷಣ ಅಭಿಯಾನದ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು 25 ದೇಶಗಳ 34 ಅಧಿಕಾರಿಗಳನ್ನು ಒಳಗೊಂಡ ನಿಯೋಗವು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕ್ಲಸ್ಟರ್ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿತು.ಈ ವೇಳೆ ರಾಷ್ಟ್ರೀಯ ಶಿಕ್ಷಣ ವಿಶ್ವವಿದ್ಯಾಲಯ ಆಡಳಿತ ಮುಖ್ಯಸ್ಥ ಡಾ.ರಾಜು ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಕರ್ನಾಟಕ ಉತ್ತಮ ಹಂತದಲ್ಲಿದೆ. ಸರ್ವ ಶಿಕ್ಷಣ ಅಭಿಯಾನದ ಕಲಿಕೆಯ ಸರಳ ವಿಧಾನಗಳನ್ನು ಇಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ವಿ.ವೆಂಕಟೇಶಯ್ಯ ಮಾತನಾಡಿ, ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು 90 ಕ್ಲಸ್ಟರ್ ಕೇಂದ್ರಗಳಿವೆ. ಬಿಆರ್‌ಸಿ ಮತ್ತು ಸಿಆರ್‌ಸಿ ಅಧಿಕಾರಿಗಳು ಇಲ್ಲಿನ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳನ್ನು ತೆರೆಯಲಾಗಿದೆ.ಮಕ್ಕಳ ಶಾಲಾ ಸಂಸತ್ತು, ಮಕ್ಕಳ ಗ್ರಾಮ ಸಭೆ,  ಪ್ರತಿಭಾ ಕಾರಂಜಿ, ಮೆಟ್ರಿಕ್ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಶಿಕ್ಷಣಕ್ಕೆ ಪೂರಕವಾದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಸಮವಸ್ತ್ರ ಹಾಗೂ ಶೈಕ್ಷಣಿಕ ಪರಿಕರಗಳು ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ನಿಯೋಗಕ್ಕೆ ವಿವರ ನೀಡಿದರು.ಸರ್ವಶಿಕ್ಷಣ ಅಭಿಯಾನ ಜಿಲ್ಲಾ ಉಪ ನಿರ್ದೇಶಕ ಭಾಸ್ಕರ್ ವಿಷ್ಣುಭಟ್, ಹಿರಿಯ ಅಧಿಕಾರಿ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಸಮನ್ವಯಾಧಿಕಾರಿ ಈಶ್ವರ ಮೂರ್ತಿ, ಬಿಆರ್‌ಸಿ ನಾಗೇಶ್, ಸಿಆರ್‌ಪಿ ಶಿವಕುಮಾರ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.