ಬುಧವಾರ, ಜನವರಿ 22, 2020
28 °C
ತೀರ್ಪು ಪುನರ್‌ಪರಿಶೀಲನೆ: ಸುಪ್ರೀಂಕೋರ್ಟ್‌ಗೆ ಮೊರೆ

ಸಲಿಂಗ ಕಾಮ: ಕೇಂದ್ರದ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಲಿಂಗ ಕಾಮ ಅಪರಾಧ ಎನ್ನುವ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಕೇಂದ್ರವು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದೆ.ವಯಸ್ಕರ ನಡುವೆ ಸಮ್ಮತಿಯ ಸಲಿಂಗಕಾಮ ಅಪ­ರಾ­­ಧವಲ್ಲ ಎಂದು ದೆಹಲಿ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌್ ಡಿ.11ರಂದು ರದ್ದುಗೊಳಿಸಿತ್ತು. ಅಲ್ಲದೇ ಭಾರತೀಯ ದಂಡ ಸಂಹಿ­ತೆಯ 377ನೇ ಸೆಕ್ಷನ್‌ ಬದಲಾಯಿಸಲು ಸಂವಿ­ಧಾನದಲ್ಲಿ ಅವಕಾಶ ಇಲ್ಲ ಎಂದೂ ಸ್ಪಷ್ಟಪಡಿ­ಸಿತ್ತು.ವಕೀಲ ದೇವದತ್ತ ಕಾಮತ್‌ ಅವರು ಕೇಂದ್ರ ಸರ್ಕಾರದ ಪರ ಸುಪ್ರೀಂ­ಕೋರ್ಟ್‌ಗೆ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದರು. ಮೌಖಿಕ ವಾದ­ಮಂಡ­ನೆಯು  ನ್ಯಾಯಾಲಯ ಸಭಾಂಗಣ­ದಲ್ಲಿ ಮುಕ್ತವಾಗಿ ನಡೆಯಲು ಅವಕಾಶ ಮಾಡಿಕೊಡ­ಬೇಕು ಎಂದು ಕೇಂದ್ರ ಕೋರಿಕೊಂಡಿದೆ. ಸಾಮಾನ್ಯವಾಗಿ ಪುನರ್‌ಪರಿಶೀಲನಾ ಅರ್ಜಿಗಳ ಇತ್ಯರ್ಥ ವಿಚಾರಣಾ ಕೊಠಡಿಯಲ್ಲಿ ನಡೆಯುತ್ತದೆ.ಅರ್ಜಿಯಲ್ಲಿ ಕೇಂದ್ರ ಹೇಳಿದ್ದೇನು: ‘ನ್ಯಾಯ­ಮೂರ್ತಿ­ಗ­ಳಾದ ಜಿ.ಎಸ್‌. ಸಿಂಘ್ವಿ ಹಾಗೂ ಎಸ್‌.ಜೆ.­ಮುಖ್ಯೋ­ಪಾ­ಧ್ಯಾಯ ಅವರಿದ್ದ ಪೀಠ ಡಿ. 11ರಂದು ನೀಡಿದ್ದ ತೀರ್ಪು ದೋಷ­ಪೂರ್ಣವಾಗಿದೆ. ಸಲಿಂಗ­ಕಾಮ ಸೇರಿ­ದಂತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪ­ರಾಧ ಎಂದು ಹೇಳುವ ಸೆಕ್ಷನ್‌ 377, ಆಧುನಿಕ ಕಾಲ­ಘಟ್ಟಕ್ಕೆ ಹೊಂದದ ಬ್ರಿಟಿಷರ ಕಾಲದ ಹಳೆಯ ಕಾಯ್ದೆ.’‘ಸಂವಿಧಾನದ 14,15 ಹಾಗೂ 21ನೇ ಕಲಂಗಳ ಪ್ರಕಾರ ಇದಕ್ಕೆ ಕಾನೂನು ಮಾನ್ಯತೆ ಇಲ್ಲ. ಹಾಗಾಗಿ ಇದೊಂದು ನಿರಂಕುಶ ಹಾಗೂ ಅರ್ಥ­ಹೀನ ಕಾಯ್ದೆ. ತಾನೇ ಹಾಕಿದ ಕಾನೂನು ನೆಲೆಗಟ್ಟಿಗೆ ವ್ಯತಿರಿಕ್ತವಾದಂತಹ ಅನೇಕ ತೀರ್ಮಾನಗಳನ್ನು ಸುಪ್ರೀಂಕೋರ್ಟ್‌ ಕೊಟ್ಟಿದೆ’ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.‘ದೆಹಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹಲವರು ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಗಳ ವಿಚಾರಣೆ ವೇಳೆ ಕೇಂದ್ರವು ಈ ವಿಚಾರವಾಗಿ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿತ್ತು. ಹೈಕೋರ್ಟ್‌ ತೀರ್ಪಿನಲ್ಲಿ  ಕಾನೂನು ಲೋಪವಿಲ್ಲ’ ಎಂದು ಗೃಹ ಸಚಿವಾಲಯ ಖಡಾಖಂಡಿತವಾಗಿ ತಿಳಿಸಿತ್ತು. ಹೀಗಾಗಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ  ಮೇಲ್ಮನವಿ ಸಲ್ಲಿಸಿರಲಿಲ್ಲ. ಸುಪ್ರೀಂ­ಕೋರ್ಟ್‌ ಈ ಎಲ್ಲ ಅಂಶಗಳನ್ನು  ಪರಿಗಣಿಸಲೇ ಇಲ್ಲ’.‘ಕಾನೂನು ರೂಪಿಸಿ, ಜಾರಿ ಮಾಡುವುದು ಸಂಸತ್ತಿನ ಕೆಲಸ.  ಆದರೆ ಅವುಗಳ ಸಂವಿಧಾನಬದ್ಧತೆಯನ್ನು ಸುಪ್ರೀಂಕೋರ್ಟ್‌ ಮುಂದೆ ಸಮರ್ಥಿಸಿ­ಕೊಳ್ಳಬೇಕಾಗಿರು­ವುದು ಸರ್ಕಾರದ ಕೆಲಸ’ ಎಂದು ಪುನರ್‌ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ.ಹೈಕೋರ್ಟ್‌ ತೀರ್ಪಿನ ವಿಷಯದಲ್ಲಿ ಮಧ್ಯಪ್ರವೇಶಿಸಿದ ಮೂರನೇ ವ್ಯಕ್ತಿಗಳ ಕಾನೂನುಬದ್ಧ ಹಕ್ಕನ್ನು ಕೂಡ ಕೇಂದ್ರವು ಪ್ರಶ್ನಿಸಿದೆ.‘ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ­ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ­ದ­ವರಲ್ಲಿ ಹೆಚ್ಚಿನವರು ಹೊರಗಿನವರು.  ಇವರೆಲ್ಲ ಮೂಲ ಪ್ರಕರಣದ ಕಕ್ಷಿ­ದಾರರಲ್ಲ. ವಿಚಾ­ರಣೆ ಹಂತ­ದಲ್ಲಿಯೇ ಈ ಮೇಲ್ಮನವಿಗಳನ್ನು ಕೋರ್ಟ್‌ ತಿರಸ್ಕರಿಸಬೇಕಾಗಿತ್ತು.   ಕಾನೂನುಗಳ  ಸಂವಿಧಾನಬದ್ಧತೆ   ಸಮರ್ಥಿಸಿಕೊಳ್ಳುವ ವಿಶೇಷ ಅಧಿಕಾರ ಸರ್ಕಾರಕ್ಕೆ ಇದೆಯೇ ಹೊರತೂ ಹೊರಗಿನವರಿಗಲ್ಲ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.‘ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸ­ದಿರಲು ಕೇಂದ್ರವು ನಿರ್ಧರಿಸಿದ ನಂತರವೂ ಸಂಸತ್ತು ಕಾನೂನು ತಿದ್ದುಪಡಿ ಮಾಡಿಲ್ಲ’ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯವನ್ನು ಕೂಡ ಕೇಂದ್ರ ಪ್ರಶ್ನಿಸಿದೆ.‘ಇದು ತಪ್ಪು ಗ್ರಹಿಕೆ. ಯಾವುದೇ ಒಂದು ಕಾನೂನು ಅಸಾಂವಿಧಾನಿಕ ಎಂದು  ಘೋಷಣೆಯಾದರೆ ಅದಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇಲ್ಲ. ಕಾನೂನು ರಚಿಸುವುದು ಮಾತ್ರ ಸಂಸತ್ತಿನ ಹೊಣೆಗಾರಿಕೆ. ಆದರೆ, ಅದರ ಸಂವಿಧಾನ ಬದ್ಧತೆಯನ್ನು ನಿರ್ಧರಿಸ­ಬೇಕಾಗಿರುವುದು ನ್ಯಾಯಾಲಯ’ ಎಂದು ಕೇಂದ್ರ ಹೇಳಿದೆ.‘ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಕಾನೂನನ್ನು ರದ್ದುಪಡಿಸುವುದು ಸುಪ್ರೀಂಕೋರ್ಟ್‌ನ ಆದ್ಯ ಕರ್ತವ್ಯ’ ಎಂದೂ ಅರ್ಜಿಯಲ್ಲಿ ಮನದಟ್ಟು ಮಾಡಿಕೊಡಲಾಗಿದೆ.‘ದೇಶದ ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಸಲಿಂಗಿಗಳು, ದ್ವಿಲಿಂಗಿ­ಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡವರನ್ನು (ಎಲ್‌ಜಿಬಿಟಿ) ಹೈಕೋರ್ಟ್‌ ಪರಿಗಣಿಸಿಲ್ಲ. 150ಕ್ಕೂ ಹೆಚ್ಚು ವರ್ಷಗಳಲ್ಲಿ ಕೇವಲ  200ಕ್ಕೂ ಕಡಿಮೆ ಸಂಖ್ಯೆಯ ಸಲಿಂಗಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಹೀಗಾಗಿ ಐಪಿಸಿಯ ಸೆಕ್ಷನ್‌ 377 ‘ಎಲ್‌ಜಿಬಿಟಿ’ ಸಮುದಾಯದ ಹಕ್ಕನ್ನು ಉಲ್ಲಂಘಿಸುವುದಿಲ್ಲ’ ಎಂಬ ಸುಪ್ರೀಂ­ಕೋರ್ಟ್‌ ಹೇಳಿಕೆಯನ್ನೂ ಕೇಂದ್ರ ಪ್ರಶ್ನಿಸಿದೆ.‘ಸಂವಿಧಾನಬದ್ಧತೆಯನ್ನು ನಿರ್ಧರಿ­ಸುವಾಗ ಇಂಥ ಅಂಕಿಅಂಶಗಳು ಗೌಣ­ವಾಗು­ತ್ತವೆ. ಈ ವಿಷಯವಾಗಿ ಇರುವ ವ್ಯವಸ್ಥಿತ ಕಾನೂನನ್ನು ಸುಪ್ರೀಂಕೋರ್ಟ್‌ ಗಣನೆಗೆ ತೆಗೆದುಕೊಂಡಿಲ್ಲ.  2006ರಲ್ಲಿ ದೆಹಲಿ ಹೈಕೋರ್ಟ್‌ ಹಾಗೂ 2012ರಲ್ಲಿ ಸುಪ್ರೀಂಕೋರ್ಟ್‌ ಮುಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲ್ಲಿಸಿದ್ದ ಪ್ರಮಾಣಪತ್ರ­ವನ್ನು ಸಹ ಸುಪ್ರೀಂಕೋರ್ಟ್‌ ಕಡೆಗಣಿಸಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.ಪ್ರಮಾಣಪತ್ರದಲ್ಲಿ ಏನಿತ್ತು..?: ‘ಕಾನೂನು ಜಾರಿ ಸಂಸ್ಥೆಗಳ ಕಿರು­ಕುಳಕ್ಕೆ ಹೆದರಿ ಸಲಿಂಗ ಕಾಮಿ ಪುರುಷರು (ಎಂಎಸ್ಎಂ–ಮೆನ್‌ ಹ್ಯಾವಿಂಗ್‌ ಸೆಕ್ಸ್‌ ವಿತ್‌ ಮೆನ್‌) ಮುಖ್ಯವಾಹಿನಿಯಿಂದ ದೂರವಾಗಿ ಬದುಕುತ್ತಿದ್ದಾರೆ. ಅಗತ್ಯ ಆರೋಗ್ಯ ಸೇವೆಗಳಿಂದ ವಂಚಿತರಾ­ಗಿದ್ದಾರೆ. ಅಸುರಕ್ಷಿತ ಲೈಂಗಿಕ  ಸಂಪರ್ಕ­ದಿಂದ ಇವರು ಏಡ್ಸ್‌ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿದೆ’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.‘ಎಲ್‌ಜಿಬಿಟಿ ಸಮುದಾಯಕ್ಕೆ ಅನ್ಯಾಯವಾಗ­ಬಾರದು ಎಂದು ಸುಪ್ರೀಂಕೋರ್ಟ್‌ ಮುಂದೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲಾಗುತ್ತಿದೆ. ಸಲಿಂಗ ಕಾಮ ಅಪರಾಧ ಎಂದು ತೀರ್ಪು ನೀಡಿದಾ­ಗಿನಿಂದ ಇವರೆಲ್ಲ ಆತಂಕದಿಂದ ಜೀವಿ­ಸುತ್ತಿ­ದ್ದಾರೆ. ಈ  ಕೂಡಲೇ ಇವರ ಈ ಆತಂಕ ದೂರಮಾಡಬೇಕಾಗಿದೆ’ ಎಂದು ಕೇಂದ್ರ ಹೇಳಿದೆ.

ತೀರ್ಪು ಪ್ರಶ್ನಿಸಿದವರು ಹೊರಗಿನವರು

ಹೈಕೋರ್ಟ್‌್ ತೀರ್ಪು ಪ್ರಶ್ನಿಸಿ ಸುಪ್ರೀಂ­ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದವರಲ್ಲಿ ಹೆಚ್ಚಿನವರು ಹೊರಗಿನವರು.  ಇವರೆಲ್ಲ ಮೂಲ ಪ್ರಕರಣದ ಕಕ್ಷಿದಾರರಲ್ಲ. ವಿಚಾರಣೆ ಹಂತದಲ್ಲಿಯೇ ಈ ಮೇಲ್ಮನವಿ­ಗಳನ್ನು ಕೋರ್ಟ್‌ ತಿರಸ್ಕರಿಸ­ಬೇಕಾಗಿತ್ತು.   ಕಾನೂನುಗಳ  ಸಂವಿ­ಧಾನ­ಬದ್ಧತೆ   ಸಮರ್ಥಿಸಿ­ಕೊಳ್ಳುವ ವಿಶೇಷ ಅಧಿಕಾರ ಸರ್ಕಾರಕ್ಕೆ ಇದೆಯೇ ಹೊರತೂ ಹೊರಗಿನವರಿಗಲ್ಲ

– ಕೇಂದ್ರ ಸರ್ಕಾರ

ಪ್ರತಿಕ್ರಿಯಿಸಿ (+)