ಸೋಮವಾರ, ಜನವರಿ 27, 2020
26 °C

ಸಲಿಂಗ ‘ಕಾಮಿ’ಗಳಲ್ಲ; ಸಲಿಂಗ ‘ಆಸಕ್ತರು’!

ಪ್ರಜಾವಾಣಿ ವಾರ್ತೆ/ ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

‌ಹುಬ್ಬಳ್ಳಿ: ‘ನಾವು ಸಲಿಂಗ ಕಾಮಿಗಳಲ್ಲ; ಸಲಿಂಗ ಆಸಕ್ತರು!’‘ಗಂಡಾಗಿ ಹುಟ್ಟಿ– ಹೆಣ್ಣಾಗಿ, ಹೆಣ್ಣಾಗಿ ಹುಟ್ಟಿ– ಗಂಡಾಗಿ ಬದುಕಿ, ಭಾವನೆಗಳನ್ನು ವ್ಯಕ್ತಿಪಡಿಸಿಕೊಳ್ಳುವ ವರ್ಗ ನಮ್ಮದು. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ; ಸ್ವತಂತ್ರವಾಗಿ ಇರುತ್ತೇವೆ...’‘ಸಲಿಂಗಕಾಮ’ಕ್ಕೆ ಮಾನ್ಯತೆ ನೀಡಿದ್ದ  ದೆಹಲಿ ಹೈಕೋರ್ಟಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಹೋರಾಟದ ಹಾದಿ ತುಳಿದಿರುವ ಸಲಿಂಗಿಗಳು ಇದೀಗ ಬಹಿರಂಗವಾಗಿ ವಾದಿಸುವುದು ಹೀಗೆ.ಏಡ್ಸ ಮುಕ್ತ ಸಮಾಜಕ್ಕಾಗಿ, ರಾಜ್ಯ ಏಡ್ಸ ಪ್ರಿವೆನ್ಸನ್‌ ಸೊಸೈಟಿ (ಕೆಎಸ್‌ಎಪಿಎಸ್‌) ಹಮ್ಮಿಕೊಂಡಿರುವ ‘ಟಾರ್ಗೆಟೆಡ್ ಇಂಟರ್‌ವೆನ್ಸನ್ (ಟಿಐ) ಫಾರ್ ಹೈ ರಿಸ್ಕ್ ಪೀಪಲ್' ಎಂಬ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 24,785 ಸಲಿಂಗಿಗಳು ತಮ್ಮ ಹೆಸರನ್ನು ನೋಂದಣಿ­ ಮಾಡಿಕೊಂಡಿದ್ದಾರೆ. ತಮ್ಮನ್ನು ‘ಸಲಿಂಗ ಆಸಕ್ತರು’ ಎಂದು ಕರೆಯಬೇಕು ಎನ್ನುವುದು ಇವರ ಬೇಡಿಕೆ.ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೆಎಸ್‌ಎಪಿಎಸ್‌ (ಟಿಐ) ಜಂಟಿ ನಿರ್ದೇಶಕ ವಿಜಯ ಹೂಗಾರ, ‘ಸುರಕ್ಷಿತ ಲೈಂಗಿಕತೆಗಾಗಿ ಕೆಎಸ್‌ಎಪಿಎಸ್‌ ಜೊತೆ ಗುರುತಿಸಿಕೊಂಡ ಸಲಿಂಗ ಆಸಕ್ತರ ಸಂಖ್ಯೆ ಬೆಂಗಳೂರು ನಗರ, ಬೆಳಗಾವಿ, ವಿಜಾಪುರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಾಸ್ತಿ ಇದೆ. ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಡಿ ಈ ಮಂದಿಯನ್ನು  ಹೆಚ್ಚು ಅಪಾಯಕ್ಕೆ ಗುರಿಯಾದವರು (ಹೈ ರಿಸ್ಕ್‌ ಪೀಪಲ್‌) ಎಂದು ಪರಿಗಣಿಸಿ ಸಮುದಾಯ ಆಧಾರಿತ ಸಂಘಟನೆ (ಸಿಬಿಒ), ಆಪ್ತ ಸಮಾಲೋಚನೆ ಮತ್ತಿತರ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.‘ಎಚ್‌ಐವಿ ಮುಕ್ತ ಸಮಾಜಕ್ಕಾಗಿ ಕೈಜೋಡಿಸಿಕೊಂಡಿದ್ದರಿಂದ ‘ಸಲಿಂಗ ಸಂಬಂಧ’ದ (LGBT: ಹೆಣ್ಣು -–ಹೆಣ್ಣು (Lesbian), ಗಂಡು-–ಗಂಡು (Gay),- ದ್ವಿಲಿಂಗಿ (Bisexual), ಲೈಂಗಿಕ ಅಲ್ಪಸಂಖ್ಯಾತರು (ಲಿಂಗ ಪರಿವರ್ತಿತರು– Transgender) ಈ ನಾಲ್ಕು ಗುಂಪುಗಳನ್ನು ಎಚ್‌ಐವಿ ಸೋಂಕಿತರು ಎನ್ನುವಂತೆ ಬಿಂಬಿಸಲಾ­ಗುತ್ತಿದೆ. ರಾಜ್ಯದಲ್ಲಿ ಅಂದಾಜು 40,000ದಷ್ಟು ಸಂಖ್ಯೆಯಲ್ಲಿರುವ ಸಲಿಂಗಿಗಳ ಮಧ್ಯೆ ಸ್ವಲ್ಪ ಪ್ರಮಾಣದಲ್ಲಿ ಎಚ್‌ಐವಿ ಬಾಧಿತರೂ ಇದ್ದಾರೆ. ಆದರೆ ಎಲ್ಲರನ್ನೂ ಅದೇ ಭಾವನೆಯಿಂದ ನೋಡುವುದರಿಂದ ಘನತೆ, ಗೌರವದಿಂದ ಬದುಕಲು ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯಾದ ‘ಫೋರಂ’ನ ಮಲ್ಲಪ್ಪ.‘ಸರ್ಕಾರದ ಬಳಿ ಇರುವ ದಾಖಲೆ­ಯಲ್ಲಿ ಎಚ್‌ಐವಿ ತಡೆ ಅಭಿಯಾನದ ವೇಳೆ ನೋಂದಣಿಗೊಂಡ ಸಲಿಂಗ ಆಸಕ್ತರ ಸಂಖ್ಯೆ ಮಾತ್ರ ಇದೆ. ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್‌ಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆಯು­ವವರ ಸಂಖ್ಯೆ ಇದು’ ಎನ್ನುತ್ತಾರೆ ಮಲ್ಲಪ್ಪ.‘ಬಡ ವರ್ಗದಲ್ಲಷ್ಟೇ ಅಲ್ಲ, ವೈದ್ಯರು, ಎಂಜಿನಿಯರ್‌ಗಳು, ಶ್ರೀಮಂತ ಜನರೂ ಈ ಗುಂಪಿನಲ್ಲಿ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಜೋಗಪ್ಪನವರು, ದೇವರ ಹೆಸರಿನಲ್ಲಿ ಮುತ್ತು ಕಟ್ಟಿ­ಕೊಂಡು ಹೊರಗಡೆ ಬಂದವರೂ ಗುಂಪಿನಲ್ಲಿದ್ದಾರೆ. ಈ ವರ್ಗದವರ ಭಾವನೆಗಳನ್ನು ಯಾರೂ ಅರ್ಥಮಾಡಿ­ಕೊಳ್ಳುವುದಿಲ್ಲ. ಬಲವಂತವಾಗಿ ಮದುವೆ ಮಾಡಲಾಗುತ್ತಿದೆ. ಇದರಿಂದ ಪರಸ್ಪರರ ಬಾಳು ಹಾಳಾದ ನಿದರ್ಶನವೂ ಇದೆ. ಕೋರ್ಟಿನಿಂದ ಸರಿಯಾದ ತೀರ್ಪು ಬರುತ್ತಿದ್ದರೆ ನಮಗೂ ಸಮಾಜದಲ್ಲಿ ಸ್ಥಾನಮಾನ ಸಿಗುತ್ತಿತ್ತು. ಬದುಕುವ ಹಕ್ಕು, ಘನತೆ ಕೊಡಿ ಎನ್ನುವುದಷ್ಟೇ ಬೇಡಿಕೆ. ಕ್ರಿಮಿನಲ್‌ಗಳಾಗಿ ನೋಡಬೇಡಿ’ ಎಂದು ಮಲ್ಲಪ್ಪ ವಿನಂತಿಸುತ್ತಾರೆ.

 

ಪ್ರತಿಕ್ರಿಯಿಸಿ (+)