ಭಾನುವಾರ, ಮಾರ್ಚ್ 7, 2021
29 °C

ಸಲ್ಮಾನ್‌ಖಾನ್ ಡಿಫಿಕಲ್ಟೀಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಲ್ಮಾನ್‌ಖಾನ್ ಡಿಫಿಕಲ್ಟೀಸು

ಕಥೆ

ಅಡಿಫಿಕಲ್ಟೀಸು ಮನುಷ್ಯರಿಗೇ ತಾನೇ ಬರೋದು? ಆದರೂ ಹೀಗೆ ನಸೀಬಾಗಬಹುದೆಂದು ಸಲ್ಮಾನ್ ಖಾನ್‌ಗೆ ಗೊತ್ತಿರಲಿಲ್ಲ. ಮುಂಬಯಿಯ ಬಾಂದ್ರಾದಲ್ಲಿ ವಾಸ್ತವ್ಯವಿದ್ದ ಅವನಿಗೆ ಐಶ್ವರ್ಯಾಳಿಂದ ಹಿಡಿದು ಕಟ್ರೀನಾವರೆಗೆ ಅನೇಕ ತೊಂದರೆಗಳಿದ್ದರೂ ಈ ಹೈದರಾಬಾದಿನ ಹುಡುಗಿ ರೇಖಾರಾಣಿಯ ಪತ್ರ ಕಂಡು ಏನು ಮಾಡಬೇಕೋ ತಿಳಿಯಲಿಲ್ಲ.ಹಾಗೆ ನೋಡಿದರೆ ಏನೂ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಆ ಹುಡುಗಿ ಸಿಟ್ಟಿನಿಂದ ಬರೆದಿದ್ದ ಪತ್ರ ಬಂದಿತ್ತಾದರೂ, ಅದರಲ್ಲಿ ಅವಳ ಅತಾ-ಪತಾದ ಬಗ್ಗೆ ಏನೂ ಇರಲಿಲ್ಲವಾದ್ದರಿಂದ ಆ ಪತ್ರವನ್ನು ತನ್ನ ಬೀಯಿಂಗ್ ಹ್ಯೂಮನ್ ಫೌಂಡೇಷನ್ನಿಗೆ ಕಳಿಸಿ ಇರಿಸಿದ. ಅನೇಕ ದಿನಗಳ ನಂತರ ಅವನಿಗೆ ಕೊರಿಯರ್ ಅಲ್ಲದೇ, ಸ್ಪೀಡ್ ಪೋಸ್ಟ್ ಅಲ್ಲದೇ, ಈ-ಮೇಲ್ ಅಲ್ಲದೇ ಬರೇ ಕೈ ಬರಹದ ಇನ್ಲಾಂಡು ಲೆಟರು ಬಂದಿತ್ತು. ಹೀಗಾಗಿಯೇ ಆ ಪತ್ರ ಅವನ ಗಮನವನ್ನೂ ಸೆಳೆದಿತ್ತು.

*

ರಾಜೂ ಸೇಠ್ ಆಗಷ್ಟೇ ಕೊಂಡಿದ್ದ ಹೊಸ ಇನ್ನೋವಾ ಗಾಡಿಯನ್ನು ಪೆಂಟಯ್ಯನ ಕೈಗೆ ನೀಡಿದ್ದ. ಪ್ರತಿದಿನ ಹಿಮಾಯತ್ ನಗರ್, ಬಷೀರ್ ಬಾಗ್ ಪ್ರಾಂತಗಳಿಂದ ಹೈಟೆಕ್ ಸಿಟಿಗೆ ಒಂದು ಲೇಡೀಸ್ ಗುಂಪನ್ನು ಕರೆದೊಯ್ಯುವುದು ಪೆಂಟಯ್ಯನ ಡ್ಯೂಟಿ. ಶ್ರೀವಾಣಿ, ಶ್ರೀವಲ್ಲಿ, ಶ್ರೀಲತಾ, ಶ್ರೀದೇವಿ, ಶ್ರೀಲಕ್ಷ್ಮೀ...ಹೀಗೆ ಒಂದೇ ರೀತಿ ಕಾಣುವ, ಒಂದೇ ರೀತಿ ಮಾತಾಡುವ, ಉಡುವ, ತೊಡುವ ಆದರೂ ಭಿನ್ನ ಭಿನ್ನ ಹೆಸರನ್ನು ಹೊತ್ತ ಎಂಟು ಲೇಡೀಸನ್ನು ಪ್ರತೀ ಬಾರಿ ಸುತ್ತಲಿನ ಅಪಾರ್ಟ್‌ಮೆಂಟುಗಳಿಂದ ಹತ್ತಿಸಿಕೊಳ್ಳುವುದು, ಅವರ ಷಿಫ್ಟಿನನುಸಾರ ಹೈಟೆಕ್ ಸಿಟಿಯಲ್ಲಿ ಬಿಡುವುದು, ಮತ್ತು ಅಲ್ಲಿಂದ ವಾಪಸ್ಸು ಕರೆತರುವುದು. ಇದು ಪೆಂಟಯ್ಯನ ಪ್ರತಿನಿತ್ಯದ ಕೆಲಸ. ತಿಂಗಳಿನಂತ್ಯಕ್ಕೆ ರಾಜೂ ಸೇಠ್ ಅವನಿಗೆ ಹತ್ತು ಸಾವಿರ ರೂಪಾಯಿ ನೀಡಿ ಕೈ ತೊಳೆದುಕೊಳ್ಳುತ್ತಿದ್ದ.

*

ರೇಖಾರಾಣಿ ದೋಮಲ್ ಗೂಡಾದ ದ್ವಾರಕಾ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಳು. ಇಂಗ್ಲೀಷ್ ಮೀಡಿಯಂ ಎಂದು ಹೇಳುವುದನ್ನು ಅವಳು ಯಾವತ್ತೂ ಮರೆಯುತ್ತಿರಲಿಲ್ಲ. ಪ್ರತೀ ಬಾರಿಯೂ ತರಗತಿಯಲ್ಲಿ ಮೊದಲ ಅಥವಾ ಎರಡನೆಯ ಸ್ಥಾನದಲ್ಲಿರುತ್ತಿದ್ದ ಅವಳಿಗೆ ಡಿಗ್ರಿ ಮಾಡಿ ಒಂದು ಕಾಲ್‌ಸೆಂಟರಿನಲ್ಲಿ ಕೆಲಸ ಹಿಡಿಯಬೇಕೆಂಬ ಬಯಕೆಯಿತ್ತು.ಕಾಲ್‌ಸೆಂಟರಿನ ಹುಡುಗಿಯರೆಲ್ಲಾ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಾರೆಂದು ರೇಖಾರಾಣಿ ಕೇಳಿದ್ದಳು. ಬರುವ ಮೂರು ತಿಂಗಳುಗಳಲ್ಲಿ ಪರೀಕ್ಷೆ ಬರೆದು ಮುಗಿಸಿದರೆ ನಂತರ ಸಲ್ಮಾನ್ ಖಾನನ ಬಾಡಿಗಾರ್ಡ್ ತೋರಿಸುವುದಾಗಿ ಅಪ್ಪ ಪೆಂಟಯ್ಯ ಹೇಳಿದ್ದ. ಈಗಾಗಲೇ ವಾಂಟೆಡ್ ಮತ್ತು ದಬಾಂಗ್ ನೋಡಿದ್ದ ರೇಖಾ ತನ್ನ ಕಾಲ್‌ಸೆಂಟರಿನ ನೌಕರಿಯನ್ನು ಬಯಸಿದಷ್ಟೇ ಉತ್ಕಟವಾಗಿ ಬಾಡಿಗಾರ್ಡ್ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಳು.

*

ರಾಮುಲಮ್ಮ ಎರಡು ಮನೆಗಳಲ್ಲಿ ಪಾತ್ರೆ ತಿಕ್ಕುವ, ಕಸಗುಡಿಸುವ ಕೆಲಸ ಮಾಡುತ್ತಿದ್ದಳು. ಅವಳು ಒಟ್ಟಾರೆ ತಿಂಗಳಿಗೆ ಸಾವಿರದೈನೂರು ದುಡಿಯುತ್ತಿದ್ದಳು. ಇನ್ನೂ ಹೆಚ್ಚು ಮನೆಗಳನ್ನು ಒಪ್ಪಿಕೊಂಡರೆ ಸಂಪಾದನೆ ಹೆಚ್ಚಾಗಬಹುದಾದರೂ, ಮನೆಯಲ್ಲಿನ ಕೆಲಸ, ಮಗಳು ರೇಖಾರಾಣಿಯ ಓದು ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟು ಎರಡು ಮನೆಗೆಲಸ ಗಳನ್ನಷ್ಟೇ ಒಪ್ಪಿಕೊಂಡಿದ್ದಳು.

 

ಗಂಡ ಪೆಂಟಯ್ಯ ಮಧ್ಯಾಹ್ನ ಎರಡಕ್ಕೆ ಹೊರಟರೆ ರಾತ್ರಿ ಎರಡೂವರೆಗೆ ಮನೆಗೆ ವಾಪಸ್ಸಾಗುತ್ತಿದ್ದ. ಅವನು ಬಂದಾಗ ಅವನಿಗೆ ಉಣಬಡಿಸಿ ಹಾಸಿಗೆ ಹಾಸುತ್ತಿದ್ದ ರಾಮುಲಮ್ಮನಿಗೆ ಬೆಳಿಗ್ಗೆ ಏಳುವ ವೇಳೆಗೆ ತ್ರಾಣವಿರುತ್ತಿರಲಿಲ್ಲ. ತನ್ನ ಮನೆಗೆಲಸಕ್ಕೂ, ಮನರಂಜನೆಗೂ, ಸಮಯ ಬೇಕಾಗಿದ್ದರಿಂದ ಎರಡು ಮನೆಗೆಲಸಗಳು ಮಾತ್ರ ಸಾಕೆಂದು ಆಕೆ ನಿರ್ಧರಿಸಿದಂತಿತ್ತು.

*

ಕನಕಮ್ಮನಿಗೆ ದಿನಕ್ಕೆ ಆರು ಘಂಟೆಗಳ ಕಾಲ ಸೀರಿಯಲ್ಲುಗಳನ್ನು ನೋಡದಿದ್ದರೆ ಮನಸ್ಸು ಸ್ಥಿಮಿತದಲ್ಲಿರುತ್ತಿರಲಿಲ್ಲ. ಹೀಗಾಗಿಯೇ ಪೆಂಟಯ್ಯನ ಕೈಗೆ ಹೊಸ ಇನ್ನೋವಾ ಬಂದ ದಿನವೇ ಮನೆಗೆ ಒಂದು ಪುಟ್ಟ ಟಿ.ವಿ ಮತ್ತು ಕೇಬಲ್ ಕನೆಕ್ಷನ್ ಬರುವಂತೆ ಪೀಡಿಸಿ ಗೆದ್ದಿದ್ದಳು. ವಯಸ್ಸು ಮೀರಿದರೂ ಮದುವೆಯಾಗದೆಯೇ ಅಣ್ಣನ ಜೋಪಡಿಯಲ್ಲಿದ್ದ ಅವಳು ಮಾತುಮಾತಿಗೂ “ನೋಡೋಣ ದೇವರಿದ್ದಾನೆ” ಅನ್ನುತ್ತಲೇ ತನ್ನ ಮನೆಗೆಲಸ ಮಾತ್ರವೇ ಮಾಡಿಕೊಂಡಿದ್ದಳು.

 

ರೇಖಾರಾಣಿಗೆ ಮುಂಜಾನೆ ಶಾಲೆಗೆ ಹೋಗಲು ಸಹಾಯ, ರಾಮುಲಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಳು ಅಷ್ಟೇ. ಅಪಾರ್ಟ್‌ಮೆಂಟುಗಳ ಮನೆಗೆಲಸಕ್ಕೆ ಹಚ್ಚುತ್ತೇನೆಂದು ಎಷ್ಟೋಬಾರಿ ರಾಮುಲಮ್ಮ ಹೇಳಿದ್ದರೂ ಅವಳು ದೇವರಿದ್ದಾನೆ ಎನ್ನುತ್ತಿದ್ದಳೇ ಹೊರತು, ಜೋಪಡಿಯಿಂದ- ತನ್ನ ಟಿ.ವಿಯಿಂದ ದೂರ ಹೋದವಳೇ ಅಲ್ಲ.

*

ಪೆಂಟಯ್ಯ ಸಂಜೆಯ ಡ್ರಾಪ್ ಮಾಡಿ ರಾತ್ರಿಯ ಪಿಕಪ್ ಆಗುವವರೆಗೂ ಎಲ್ಲಿರುತ್ತಿದ್ದ ಎನ್ನುವುದು ಒಂದು ದೊಡ್ಡ ಗುಟ್ಟಾಗಿಯೇ ಉಳಿದಿತ್ತು. ಎಲ್ಲ ಡ್ರೈವರುಗಳಂತೆ ಒಂದು ಮೂಲೆಯಲ್ಲಿ ಹೋಗಿ ಕಾರ್ ನಿಲ್ಲಿಸಿ ಮಲಗಿಬಿಡುತ್ತಿದ್ದ. ಅಥವಾ ಮಿಕ್ಕ ಡ್ರೈವರುಗಳೆಲ್ಲ ಸೇರಿ ಒಂದು ಮೂಲೆಯಲ್ಲಿ ಕೂತು ಹರಟೆ ಕೊಚ್ಚುತ್ತಿದ್ದರು.

 

ಯಾವಾಗಲಾದರೂ ಒಂದು ಕೈ ಇಸ್ಪೀಟಾಡುವುದೂ ಇತ್ತು. ಅಂದು ಮಾತ್ರ ಅದೇನಾಯಿತೋ ತಿಳಿಯದು. ಅಯಿಲಯ್ಯ ಮತ್ತು ರಾಜುವಿನ ಜೊತೆ ಮಾತಾಡುತ್ತಿದ್ದವನು ಅವರ ಜೊತೆಗೆ ಊಟಕ್ಕೂ ಹೋದ. ಅವರಿಬ್ಬರಿಗೂ ಡ್ಯೂಟಿ ಮುಗಿದಿದ್ದು ಗಾಡಿಯನ್ನು ಸೇಠ್ ಮನೆಯಲ್ಲಿ ಬಿಟ್ಟು ಹೋಗುವುದಿತ್ತು. ಒಂದೊಂದೇ ಪೆಗ್ ವಿಸ್ಕಿ ಹಾಕಿದರೆ ಹೇಗೆಂದು ಯೋಚಿಸಿದರು. ತನಗೆ ಡ್ಯೂಟಿ ಇರುವುದಾಗಿ ಪೆಂಟಯ್ಯ ಹೇಳಿದ.ನಮಗೂ ಗಾಡಿ ಬಿಡುವುದಿದೆ, ಜಾಸ್ತಿ ಬೇಡ, ಒಂದೊಂದೇ ಎಂದರು. ಸರಿಯೆಂದು ಕೇವಲ ಮೂರು ಪೆಗ್ ಬಾಟಲ್ ಕೊಂಡು ಅಂಗಡಿಯ ಬಳಿಯೇ ಚುರುಮುರಿ ಮಾಡಿಸಿಕೊಂಡು, ರಸ್ತೆಯ ಬದಿಯಲ್ಲಿಯೇ ಬಿರಿಯಾನಿ ತಿಂದರು. ಪೆಂಟಯ್ಯ ಮತ್ತೆ ಗಾಡಿಯನ್ನು ಬದಿಗೆ ಹಾಕಿ ನಿದ್ದೆ ಮಾಡಲೆತ್ನಿಸಿದ. ನಿದ್ದೆ ಬರಲಿಲ್ಲ. ಕಾರಿನಲ್ಲಿದ್ದ ಡಿವಿಡಿ ಹಚ್ಚಿ ಮಹೇಶ್ ಬಾಬುವಿನ ಪೋಕಿರಿ ನೋಡುತ್ತಾ ಮೈ ಚಾಚಿದ.ಪಿಕಪ್ ಸಮಯಕ್ಕೆ ಸರಿಯಾಗಿ ಅಲ್ಲಿಂದ ಹೊರಟವನು ತೋಲಿ ಚೌಕಿಯತ್ತ ಬಂದಾಗ ವಿಪರೀತ ನಿದ್ದೆ ಆವರಿಸಿ ಬಂದು, ಒಂದು ಕ್ಷಣಕ್ಕೆ ಗಾಡಿಯ ಹದ ತಪ್ಪಿತು. ಹಿಂದೂ ಹೀಗೆ ಆದದ್ದುಂಟು. ಆಗೆಲ್ಲಾ ತಕ್ಷಣಕ್ಕೆ ಗಾಡಿ ಕಂಟ್ರೋಲಿಗೆ ಬರುತ್ತಿತ್ತು. ಆದರೆ ಅಂದು ಕಂಟ್ರೋಲು ಪೂರ್ತಿ ತಪ್ಪಿತು.ಡಿವೈಡರಿನ ಮೇಲಕ್ಕೆ ಜೋರಾಗಿ ಏರಿದ ಗಾಡಿ ಉಲ್ಟಾ ಬಿದ್ದು ಬಿಟ್ಟಿತು. ಪೆಂಟಯ್ಯನ ದೇಹಕ್ಕೆ ಗಾಯಗಳು ಏನೂ ಆಗಲಿಲ್ಲ... ಕಿವಿಯಿಂದ ತುಸುವೇ ರಕ್ತ ಸೋರಿತ್ತು. ಆದರೆ ತಾನು ಯಾರು, ಏನೆಂಬುದನ್ನು ಹೇಳಲಾರದೆಯೇ ಪೆಂಟಯ್ಯ ರಸ್ತೆಯ ಬದಿಯಲ್ಲಿ ಕೂತುಬಿಟ್ಟ.

*

ರಾಜೂ ಸೇಠ್‌ಗೆ ಪೆಂಟಯ್ಯನ ಮೇಲೆ ಎಲ್ಲಿಲ್ಲದ ಕೋಪ ಬಂದಿತು. ತನ್ನಲ್ಲಿದ್ದ ಅತ್ಯುತ್ತಮ ಕಾರನ್ನು ಅತೀ ನಂಬುಗಸ್ತ ಎನ್ನುವ ಪೆಂಟಯ್ಯನಿಗೆ ನೀಡಿದ್ದ. ಕಾರು ಜಖಂ ಆದಾಗ ಅವನಿಗೆ ದುಃಖವಾಯಿತೇ ಹೊರತು ಸಿಟ್ಟು ಬರಲಿಲ್ಲ. ಅನೇಕ ವರ್ಷಗಳಿಂದ ಈ ದಂಧೆಯಲ್ಲಿದ್ದವನಿಗೆ ಈ ರೀತಿಯ ಸುದ್ದಿ ದಿನನಿತ್ಯದ್ದಲ್ಲದಿದ್ದರೂ, ಈ ಥರದ ವಿಷಯಗಳು ನಡೆಯುವುದಿತ್ತು. ಆದರೆ ಪೆಂಟಯ್ಯನ ಟೆಸ್ಟುಗಳು ನಡೆದಾಗ ಅವನ ರಕ್ತದಲ್ಲಿ ಮದ್ಯದ ಅಂಶಗಳಿದ್ದು, ಅದರಿಂದಾಗಿ ಗಾಡಿಯ ವಿಮೆಯ ಹಣವೂ ಬರುವುದಿಲ್ಲ ಎಂದು ತಿಳಿದಾಗ ಮಾತ್ರ ಅವನಿಗೆ ವಿಪರೀತ ಸಿಟ್ಟೂ ಬಂದಿತ್ತು. ಎಂದೂ ಇಲ್ಲದೆ ಇಂದು ಯಾಕೆ ಇವನು ಹೀಗೆ ಮಾಡಿದ ಅನ್ನಿಸಿದರೂ ತನ್ನ ನಷ್ಟವನ್ನು ಲೆಕ್ಕ ಕಟ್ಟುತ್ತಲೇ ರಾಜೂ ಉರಿದುಹೋದ.

*

ರಸ್ತೆಯ ಮೇಲೆ ಸುಮ್ಮನೆ ಎವೆಯಿಕ್ಕುತ್ತ ಕುಳಿತಿದ್ದನೆನ್ನಲಾದ ಪೆಂಟಯ್ಯನನ್ನು ಸಣ್ಣ ಡಾಕ್ಟರು, ದೊಡ್ಡ ಡಾಕ್ಟರು, ನಿಮ್ಸ, ಶಸ್ತ್ರಚಿಕಿತ್ಸೆ ಹಾಗೂ ನಲವತ್ತೈದು ಸಾವಿರದ ಖರ್ಚಿನ ಬಳಿಕ ನಯವಾಗುವ ಲಕ್ಷಣಗಳೊಂದಿಗೆ ರಾಮುಲಮ್ಮ ಮನೆಗೆ ಬರಮಾಡಿಕೊಂಡಳು. ಕನಕಮ್ಮನ ಜೊತೆಗೆ ಈಗ ದೋಮಲಗೂಡಾದ ಜೋಪಡಿಯಲ್ಲಿ ಪೆಂಟಯ್ಯನೂ ಬಿದ್ದುಕೊಂಡಿರುತ್ತಿದ್ದ. ಕನಕಮ್ಮ ಪೆಂಟಯ್ಯನ ಶುಶ್ರೂಶೆ ಮಾಡುತ್ತಿದ್ದಳು.ಪೆಂಟಯ್ಯನಿಗೆ ಪೂರ್ತಿ ನಿಶ್ಶಕ್ತಿ ಮತ್ತು ತುಸು ಂಪರು, ಮರೆವೆ ಇದ್ದೇ ಇತ್ತು. ಅವನಿಗೆ ಸತ್ತರೂ ಕಾರನ್ನು ಕೊಡುವುದಿಲ್ಲವೆಂದು ಸೇಠ್ ಶಪಥಂಗೈದಿದ್ದ. ನಲವತ್ತೈದು ಸಾವಿರ ಖರ್ಚಿಗೆ ರಾಮುಲಮ್ಮಳ ಬಂಗಾರ ಮಾರಾಟವಾಗಿತ್ತು, ಇಪ್ಪತ್ತುಸಾವಿರ ರೂಪಾಯಿ ಕರಮಚಂದಾನಿ ಸೇಠ್ ಬಳಿ ಸಾಲವಾಗಿದ್ದು ತಿಂಗಳಿಗೊಂದು ಸಾವಿರ ರೂಪಾಯಿಯ ಬಡ್ಡಿಗೆ ತಪ್ಪದೇ ಪ್ರತೀ ತಿಂಗಳ ಐದನೆಯ ತಾರೀಖು ಆತ ಹಾಜರಾಗುತ್ತಿದ್ದ.ಇದಲ್ಲದೇ ತಮ್ಮನ್ನು ಅನೇಕ ದಿನಗಳ ಕಾಲ ಎಡೆಬಿಡದೇ ಮನೆಯಿಂದ ಹೈಟೆಕ್‌ಗೆ ಡ್ರೈವ್ ಮಾಡುತ್ತಿದ್ದ ಕೃತಜ್ಞತೆ ತೋರುವಂತೆ ಆ ಲೇಡೀಸ್ ಎಲ್ಲರೂ ಸೇರಿ ಒಂದು ಐದು ಸಾವಿರ ಕೊಟ್ಟಿದ್ದರು. ಅವರುಗಳಲ್ಲಿ ಶ್ರೀವಲ್ಲಿ ಎಂಬಾಕೆ ಮಾತ್ರ ಹೆಚ್ಚಿನ ಕರುಣೆ ತೋರಿಸಿ- ಏನಾದರೂ ಬೇಕಾದರೆ ತನ್ನ ಬಳಿಗೆ ಬರಬಹುದು ಎಂದು ತನ್ನ ಮೊಬೈಲು ನಂಬರಿದ್ದ ಕಾರ್ಡನ್ನೂ ನೀಡಿದ್ದಳು.

*

ರಾಮುಲಮ್ಮ ಮನೆಯನ್ನು ನಡೆಸಬೇಕಿತ್ತು. ರೇಖಾರಾಣಿ ಪರೀಕ್ಷೆಗಾಗಿ ಚೆನ್ನಾಗಿಯೇ ಓದುತ್ತಿದ್ದಳು. ಸಾವಿರದೈನೂರರಲ್ಲಿ ಮನೆ ನಡೆಯುವುದು ಸಾಧ್ಯವೇ ಇರಲಿಲ್ಲ. ಮೊದಲಿಗೆ ತಿಂಗಳಿಗೆ ನೂರೈವತ್ತು ಕಬಳಿಸುತ್ತಿದ್ದ ಕೇಬಲ್ಲನ್ನು ಕತ್ತರಿಸಲಾಯಿತು. ಇದರಿಂದಾಗಿ ಕನಕಮ್ಮ ಹೆಚ್ಚಿನ ಸಮಯವನ್ನು ಸಹೋದರನ ಶುಶ್ರೂಷೆಗೂ, ರೇಖಾರಾಣಿ ಸಲ್ಮಾನನನ್ನು ನೋಡದೇ ಪಠ್ಯಪುಸ್ತಕಗಳನ್ನೂ ನೋಡುವುದಕ್ಕೂ ಅನುಕೂಲವಾಯಿತು.ರಾಮುಲಮ್ಮ ಶ್ರೀವಲ್ಲಿಗೆ ಫೋನ್ ಮಾಡಿ, ಅವಳ ಬಳಿ ಒಂದೈದು ಸಾವಿರ ಕೈಗಡ ತೆಗೆದುಕೊಂಡು, ಅವಳ ಮನೆಗೆ ಸಂಜೆಯ ವೇಳೆಗೆ ಅಡುಗೆ ಕೆಲಸವನ್ನು ಒಪ್ಪಿ ತಿಂಗಳಿಗೆ ಒಂದೂವರೆ ಸಾವಿರ ಆದಾಯವನ್ನು ಹೆಚ್ಚಿಸಿಕೊಂಡಳು.ಶ್ರೀವಲ್ಲಿ ಅದೇ ಬಿಲ್ಡಿಂಗಿನಲ್ಲಿ ಮತ್ತೊಂದು ಮನೆಗೆಲಸವನ್ನು ಮಾಡಿಸಿ ರಾಮುಲಮ್ಮನ ಮಾಸಿಕ ಆದಾಯ ಒಂದೂವರೆಯಿಂದ ನಾಲ್ಕುಸಾವಿರ ಆಗುವಂತೆ ನೋಡಿಕೊಂಡಳು. ರಾಮುಲಮ್ಮ ಎಂದರೆ ನಂಬುಗೆಯ ಆಳು. ಹೀಗೆಂದು ಅನೇಕ ಬಾರಿ ಶ್ರೀವಲ್ಲಿ ಅವಳಿಗೆ ಮನೆಯ ಕೀಲಿಕೈಯನ್ನು ನೀಡಿ ತನ್ನ ಗಂಡನೊಂದಿಗೆ ಆಚೆ ಹೋಗುವುದೂ ಇತ್ತು.

*

ಮೊದಲಿಗೆ ಅಪ್ಪ ಪೆಂಟಯ್ಯ ಹಾಗೂ ಅವನು ಕರೆದೊಯ್ಯುತ್ತಿದ್ದ ಸಿನಿಮಾವನ್ನೇ ಎದುರು ನೋಡುತ್ತಿದ್ದ ರೇಖಾರಾಣಿ ಈ ದಿನಚರಿಗೂ ಒಗ್ಗಿಕೊಂಡಿದ್ದಳು. ಎರಡು ತಿಂಗಳುಗಳಿಂದ ಅಮ್ಮ ಹೊರಗೆ, ಅಪ್ಪ ಮನೆಯಲ್ಲಿ. ಕನಕಮ್ಮಳ ಎಡೆಬಿಡದ ಕಿಟಿಕಿಟಿಯ ನಡುವೆ ಓದು ಮುಂದುವರೆಸಿದ್ದಳು.

 

ರಾಮುಲಮ್ಮ ಅವಳನ್ನೂ ಆಗಾಗ ತನ್ನ ಜೊತೆ ಮನೆಗೆಲಸಕ್ಕೆ ಹಾಕಿಕೊಳ್ಳುತ್ತಿದ್ದಳು. ಶ್ರೀವಲ್ಲಿ ಮಾತ್ರ ರೇಖಾರಾಣಿ ಚೈಲ್ಡ್ ಲೇಬರಾದ್ದರಿಂದ ತನ್ನ ಮನೆಗೆ ಬರಬಾರದು ಎಂದು ಖಡಾಖಂಡಿತವಾದ ನಿಯಮವನ್ನು ಹಾಕಿದ್ದಳು. ಆದರೆ ತನಗೆ ಸಹಾಯವಾಗಲಿ, ಅವಳಿಗೂ ಕೆಲಸ ತಿಳಿಯಲಿ ಅನ್ನುವ ಉದ್ದೇಶದಿಂದ ರಾಮುಲಮ್ಮ ಅವಳನ್ನು ಎಲ್ಲೆಡೆಗೂ ಒಯ್ಯುವುದಿತ್ತು.

*

ಪರೀಕ್ಷೆ ಮುಗಿಯುವುದೇ ರೇಖಾರಾಣಿಯ ಜೀವನದಲ್ಲಿ ಒಂದು ಪ್ರಮುಖ ಘಟನೆ ಎಂಬಂತೆ ಅವಳು ಕುಣಿದಾಡತೊಡಗಿದ್ದಳು. ಪರೀಕ್ಷೆ ಮುಗಿಯುವ ವೇಳೆಗೆ ಸಲ್ಮಾನನ ಬಾಡಿಗಾರ್ಡ್ ಬಿಡುಗಡೆಯಾಗಿರುತ್ತದೆ. ಅದಕ್ಕೆ ಹೇಗಾದರೂ ಎಪ್ಪತ್ತೈದು ರೂಪಾಯಿ ಜೋಡಿಸಿ ಕಾಚೀಗೂಡಾದ ಕುಮಾರ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಅವಳು ಕಾಯುತ್ತಿದ್ದಳು.ಸಿನಿಮಾಕ್ಕೆ ದುಡ್ಡಾದರೆ ಸಾಕು, ಕಾಚೀಗೂಡಾದವರೆಗೂ ನಡೆದೇ ಹೋಗಿಬರುವುದಾಗಿ ರೇಖಾರಾಣಿ ಅನೇಕ ಬಾರಿ ರಾಮುಲಮ್ಮನಿಗೆ ಹೇಳಿದ್ದಳು. ಪೆಂಟಯ್ಯನಂತೂ ಅವಳನ್ನು ಸಿನಿಮಾಕ್ಕೆ ಒಯ್ಯುವ ಸ್ಥಿತಿಯಲ್ಲಿರಲಿಲ್ಲವಾದರೂ ಈ ಮಾತನ್ನು ಆಡಿದಾಗ ಅವನು ಹೆಮ್ಮೆಯಿಂದ ತಲೆಯಾಡಿಸುತ್ತಿದ್ದ.ರಾಮುಲಮ್ಮ ಎಪ್ಪತ್ತೈದು ರೂಪಾಯಿ ಸಾಮಾನ್ಯದ ಮೊತ್ತವೇನೂ ಅಲ್ಲ ಎಂದು ರೇಖಾರಾಣಿಗೆ ಅನೇಕ ಬಾರಿ ಹೇಳಿದಳು. ರೇಖಾರಾಣಿಗೂ ಅದು ತಿಳಿದ ವಿಚಾರವೇ. ಆದರೂ, ಮೂರು ತಿಂಗಳ ಕಷ್ಟಕ್ಕೆ ಫಲವಾಗಿ ಸಲ್ಮಾನ್ ಖಾನನ ಸಿನಿಮಾವೊಂದನ್ನು ನೋಡುವುದು ಮಹಾಪಾಪವೆಂದೇನೂ ಅವಳಿಗನ್ನಿಸಲಿಲ್ಲ.

*

ಆ ದಿನ ಸಂಜೆ ಮನೆಯಲ್ಲಿ ತಾನಿರುವುದಿಲ್ಲ. ಜೊತೆಗೆ ಗಂಡನ ಗೆಳೆಯರ ಮನೆಯಲ್ಲಿ ಡಿನ್ನರ್ ಇರುವುದರಿಂದ ಅಡುಗೆಯ ಕೆಲಸವಿರುವುದಿಲ್ಲ. ಕೇವಲ ಪಾತ್ರೆ ಮಾಡಿಹೋಗಬೇಕೆಂದು ಶ್ರೀವಲ್ಲಿ ರಾಮುಲಮ್ಮನಿಗೆ ಹೇಳಿ ಮನೆಯ ಚಾವಿ ಕೊಟ್ಟಿದ್ದಳು. ಮನೆಗೆಲಸದ ನಂತರ, ಮನೆಯಾಚೆಯಿದ್ದ ಪೋಸ್ಟ್ ಬಾಕ್ಸ್‌ನಲ್ಲಿ ಚಾವಿಯನ್ನು ಹಾಕಿ ಹೋಗುವುದು ಸಾಮಾನ್ಯ ಪರಿಪಾಠವಾಗಿತ್ತು.ರಾಮುಲಮ್ಮ ಹೇಗೂ ಶ್ರೀವಲ್ಲಿಯಿರುವುದಿಲ್ಲ ಎನ್ನುವುದನ್ನೂ, ರೇಖಾರಾಣಿಗೆ ಪರೀಕ್ಷೆಗಳು ಮುಗಿದು ಅವಳು ಮನೆಯಲ್ಲೇ ಇದ್ದಾಳೆನ್ನುವ ವಿಷಯವನ್ನೂ ಮನಸ್ಸಿನಲ್ಲಿಟ್ಟುಕೊಂಡು, ಮನೆಯಡಿಗೆಯನ್ನು - ಮುಖ್ಯವಾಗಿ ಒಂದು ಪಾಯಸವನ್ನು ರೇಖಾಳಿಗಾಗಿ ಮಾಡುವುದಾಗಿಯೂ ಹೇಳಿ ರೇಖಾರಾಣಿಯನ್ನು ಶ್ರೀವಲ್ಲಿಯ ಮನೆಗೆಲಸಕ್ಕೆ ಅಟ್ಟಿದಳು.ಅವಳು ಕೆಲಸ ಮುಗಿಸಿ ಬರುವಷ್ಟರಲ್ಲಿ ಒಳ್ಳೆಯ ಔತಣ ತಯಾರಿಸಿಡುವುದಾಗಿಯೂ ಹೇಳಿದಳು. ರೇಖಾರಾಣಿಗೆ ಇದರಿಂದ ಸಂತೋಷವೇನೂ ಆಗಲಿಲ್ಲ. ಸಲ್ಮಾನ್ ಖಾನ್ ಮತ್ತು ಬಾಡಿಗಾರ್ಡ್ ಕೇಳಿದರೆ ಪಾಯಸ ಕೊಡುತ್ತೇನೆಂಬ ರಾಮುಲಮ್ಮನ ಮೇಲೆ ಸಿಟ್ಟೇ ಬಂತು. ನನ್ನನ್ನು ಸಿನಿಮಾಕ್ಕೆ ಯಾವಾಗ ಕಳಿಸುತ್ತೀಯ ಹೇಳು ಎಂದು ಜಬರ್ದಸ್ತಿ ಕೇಳಿಯೇ ಬಿಟ್ಟಳು. ತಲೆಯ ಮೇಲೆ ಜೋರಾಗಿ ಮೊಟುಕಿ ರಾಮುಲಮ್ಮ ಅವಳನ್ನು ಶ್ರೀವಲ್ಲಿಯ ಮನೆಗೆಲಸಕ್ಕೆ ಕಳಿಸಿದಳು.

*

ಶ್ರೀವಲ್ಲಿಯ ಮನೆಗೆಲಸ ಮುಗಿಸಿ ಬರುವ ದಾರಿಯಲ್ಲಿ ರೇಖಾರಾಣಿಗೆ ಒಂದು ನೂರು ರೂಪಾಯಿಯ ನೋಟು ಸಿಕ್ಕಿತು. ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಆ ನೋಟು ಯಾರ ಕಣ್ಣಿಗೂ ಬೀಳಬಹುದಾಗಿದ್ದು, ತನ್ನ ಕಣ್ಣಿಗೆ ಬಿದ್ದಿತ್ತು. ಮೊದಲಿಗೆ ಬಗ್ಗಿ ತೆಗೆಯಲು ಹೆದರಿದಳಾದರೂ, ಗಾಂಧಿ ತಾತನ ಮುಖವಿರುವ ಜಾಗದಲ್ಲಿ ಸಲ್ಮಾನ್ ಖಾನನ ಮುಖ ಕಾಣಿಸಿದಂತಾಗಿ ಅವಳು ಅದನ್ನು ತನ್ನ ಕೈಯಲ್ಲಿ ಹಿಡಿದಳು.ಕೆಡವಿಕೊಂಡವರು ಅದನ್ನು ಹುಡುಕಿ ಬರಬಹುದೆಂದು ಸುತ್ತಮುತ್ತ ನೋಡಿದಳು. ಯಾರೂ ಕಾಣಲಿಲ್ಲ. ಮೈಸಮ್ಮ ತಾಯಿ ತನಗಾಗಿಯೇ - ತಾನು ಕಷ್ಟಪಟ್ಟು ಓದಿ ಪರೀಕ್ಷೆ ಮುಗಿಸಿದ್ದಕ್ಕಾಗಿಯೇ ಈ ಹಣವನ್ನು ಕಳಿಸಿರಬಹುದೆಂದು, ಕಣ್ಣಿಗೆ ಅದ್ದಿ ಮನೆಯತ್ತ ಓಡಿದಳು.

*

ನೂರು ರೂಪಾಯಿಯನ್ನು ಕಂಡ ಕೂಡಲೇ ರಾಮುಲಮ್ಮ ಕೆಂಡಾಮಂಡಲವಾದಳು. ಕೆಲಸಕ್ಕೆಂದು ಕಳಿಸಿದರೆ ಕಳ್ಳತನ ಮಾಡಿ ಬರುವುದಲ್ಲದೇ ರಸ್ತೆಯಲ್ಲಿ ನೂರು ರೂಪಾಯಿ ಸಿಕ್ಕಿತೆಂದು ಚೆವಿಲೋ ಪೂವು ಇಡುತ್ತೀಯಾ? ಯಾವ ಹೊಟ್ಟೆಯಲ್ಲಿ ಎಂಥಾ ಮಗಳಾಗಿ ಹುಟ್ಟಿದೆ ಎಂದು ಚೆನ್ನಾಗಿ ಬೈದದ್ದಲ್ಲದೇ ತಲೆಗೂ ಬೆನ್ನಿಗೂ ಇಕ್ಕಿದಳು.

 

ರೇಖಾರಾಣಿ ಏನೇ ಹೇಳಿದರೂ ಕೇಳುವ ಮೂಡಿನಲ್ಲಿ ರಾಮುಲಮ್ಮ ಇರಲಿಲ್ಲ. ಪೆಂಟಯ್ಯ ಮಾತಾಡಲು ಪ್ರಯತ್ನಿಸಿದರೂ ಆಡಲಾಗಲಿಲ್ಲ. ಹಿಂದೊಮ್ಮ ಇದ್ದಿಲಂಗಡಿಯಲ್ಲಿ ತಾನು ದುಡಿಯುತ್ತಿದ್ದಾಗ ಅಡವಿ ರಾಮುಡು ಚಿತ್ರನೋಡಿ ಬಂದದ್ದರ ಫಲಿತ ಅವನಿಗೆ ಫ್ಲಾಷ್ ಬ್ಯಾಕಿನಂತೆ ಹೊಳೆಯಿತು. ಆದರೂ ಅವನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ ಎಂದು ಎಲ್ಲರೂ ನಿರ್ಧರಿಸಿದ್ದರಿಂದ ಅವನೇನೂ ಮಾಡಲು ಸಾಧ್ಯವಾಗಲಿಲ್ಲ. ಉತ್ಕಟವಾಗಿ ಸಲ್ಮಾನ್ ಖಾನನ ಚಿತ್ರವನ್ನು ಬಯಸಿದ್ದೇ ತಪ್ಪಾಗಬಹುದೆಂದು ರೇಖಾರಾಣಿಗೆ ಅರ್ಥವಾಯಿತು. ರಾಮುಲಮ್ಮನಿಗೆ ಆ ಮುಸಲ್ಮಾನ ಹೀರೋನ ಬಗ್ಗೆ ಎಲ್ಲಿಲ್ಲದ ಸಿಟ್ಟು ಬಂತು.

*

ಶ್ರೀವಲ್ಲಿ ರಾಮುಲಮ್ಮ ನಿವೇದಿಸಿಕೊಂಡಿದ್ದನ್ನೆಲ್ಲಾ ಕೇಳಿದಳು. ಮೊದಲಿಗೆ ಜುವಿನೈಲಾದ ರೇಖಾರಾಣಿಯನ್ನು ಮನೆಗೆ ಕಳಿಸಿ ಚೈಲ್ಡ್ ಲೇಬರ್ ಕೈಲಿ ಕೆಲಸಮಾಡಿಸಿಕೊಂಡು ತನ್ನನ್ನು ಅಪರಾಧಕ್ಕೆ ಒಳಪಡಿಸಿದ್ದಕ್ಕೆ ವಿಪರೀತ ಉರಿದು ಹೋದಳು. ಈ ರೀತಿಯ ನಂಬಿಕೆ ದ್ರೋಹವನ್ನು ಎಂದಿಗೂ ಸಹಿಸುವುದಿಲ್ಲವೆಂದು ಅವಳು ಹೇಳಿದಳು.ಮೇಲಾಗಿ ಈ ನೂರು ರೂಪಾಯಿಯ ವಿಷಯ. ಅದು ತನ್ನದೇ ಅಲ್ಲವೇ ಅನ್ನುವ ಖಾತ್ರಿ ತನಗಿಲ್ಲವಾದರೂ, ರಾಮುಲಮ್ಮ ತನ್ನ ಮನೆಯಿಂದಲೇ ರೇಖಾರಾಣಿ ಕದ್ದಿದ್ದಾಳೆ ಎಂದು ಖಂಡಿತವಾಗಿ ಹೇಳಿಕೊಳ್ಳುತ್ತಿರುವುದರಿಂದ, ಅದನ್ನು ವಾಪಸ್ಸು ಪಡೆದಳು. ಇಬ್ಬರಿಗೂ ಛೀಮಾರಿ ಹಾಕಿ, ಕೆಲಸದಿಂದ ಮುಕ್ತಗೊಳಿಸಿದಳು. ಹೀಗೆ ರಾಮುಲಮ್ಮನಿಗೆ ಆ ಬಿಲ್ಡಿಂಗಿನ ಕೆಲಸವೂ ಜನರ ನಂಬುಕೆಯೂ ಹೋಯಿತು.

*

ಏನೂ ಮಾಡದೆಯೇ ಹೀಗೆ ತಮ್ಮ ಸಂಸಾರಕ್ಕೆ ಡಿಫಿಕಲ್ಟೀಸನ್ನು ತಂದೊದಗಿಸಿದ ಸಲ್ಮಾನ್ ಖಾನನ ಮೇಲೆ ರೇಖಾರಾಣಿಗೆ ಅತೀವ ಸಿಟ್ಟು ಬಂದು ಅವನಿಗೊಂದು ಪತ್ರ ಬರೆದಳು. ಆದರೆ ಅವನ ಮೇಲಿನ ಅಭಿಮಾನವನ್ನು ಎಂದೆಂದಿಗೂ ಕಳೆದುಕೊಂಡ ಅವಳಿಗೆ ತನ್ನ ವಿಳಾಸವನ್ನು ಅವನಿಗೆ ತಿಳಿಸಬೇಕೆಂದು ಅನ್ನಿಸಲಿಲ್ಲ... ಇನ್ನೆಂದೂ ಸಲ್ಮಾನನ ಸಿನಿಮಾಗಳನ್ನು ನೋಡುವುದಿಲ್ಲವೆಂದು ಶಪಥಂಗೈದಳು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.