ಗುರುವಾರ , ಮೇ 13, 2021
22 °C

ಸಲ್ಲದ ವರ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ನಟ ದರ್ಶನ್ ಪ್ರಕರಣದ ವಿಚಾರಣೆಯನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಟಿವಿ ಛಾಯಾಗ್ರಾಹಕರ ಜೊತೆ ಅಸಭ್ಯವಾಗಿ ವರ್ತಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೆಲವು ವಕೀಲರ ದುರ್ವರ್ತನೆ ಖಂಡನೀಯ.

 

ವರದಿಗಾರರನ್ನು ನ್ಯಾಯಾಲಯದ ಕೊಠಡಿಯಿಂದ ಹೊರದಬ್ಬಿದ್ದಲ್ಲದೆ ವರದಿಗಾರ್ತಿಯೊಬ್ಬರನ್ನು ವಿವಸ್ತ್ರಗೊಳಿಸುವ ಬೆದರಿಕೆ ಹಾಕಿದ್ದು ಅನಾಗರಿಕ ವರ್ತನೆ. ಮೂರು ದಿನಗಳ ಹಿಂದೆಯೂ ಟಿವಿ ಚಾನೆಲ್‌ವೊಂದರ ಛಾಯಾಗ್ರಾಹಕರ ಕ್ಯಾಮರಾವನ್ನು ಕಿತ್ತು ಪುಡಿ ಪುಡಿ ಮಾಡಲಾಗಿತ್ತು. ಸಾರ್ವಜನಿಕ ಆಸಕ್ತಿವುಳ್ಳ ಘಟನೆಯನ್ನು ವರದಿ ಮಾಡುವುದು ಮಾಧ್ಯಮ ಪ್ರತಿನಿಧಿಗಳಿಗೆ ಇರುವ ಹಕ್ಕು.

 

ಅವರ ಕಾರ್ಯಕ್ಕೆ ಅಡ್ಡಿಪಡಿಸುವುದು ಕಾನೂನಿನ ಪ್ರಕಾರ ಅಪರಾಧ. ಇದೆಲ್ಲ ವಕೀಲರಿಗೆ ತಿಳಿಯದ ಸಂಗತಿಯೇನಲ್ಲ. ಆದರೆ ಕೆಲವು ಗೂಂಡಾಪ್ರವೃತ್ತಿಯ ವಕೀಲರಿಂದ ಆಗಿಂದಾಗ್ಗೆ ಇಂತಹ ಕಹಿ ಘಟನೆಗಳು ಮರುಕಳಿಸುತ್ತಲೇ ಇವೆ. ಇದು ಕಳವಳಕಾರಿ ಸಂಗತಿ.

 

ಮಾಧ್ಯಮದವರ ಮೇಲೆ ವಕೀಲರು ಹೀಗೆ ಅನಾಗರಿಕವಾಗಿ ವರ್ತಿಸಿರುವುದು ಇದೇ ಮೊದಲನೇ  ಸಲವೇನಲ್ಲ. ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ವಕೀಲರು ಕೇವಲ ಮಾಧ್ಯಮದವರ ಜೊತೆ ಮಾತ್ರವಲ್ಲ, ನ್ಯಾಯಾಲಯದ ಆವರಣಗಳಲ್ಲಿಯೇ ಪೊಲೀಸರ ವಿರುದ್ಧವೂ ಹೀಗೆಯೇ ನಡೆದುಕೊಂಡಿರುವ ಘಟನೆಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿವೆ.ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿಗಾಗಿ ಪ್ರಶ್ನಿಸಿದ ಸಂಚಾರ ಪೊಲೀಸರ ವಿರುದ್ಧವೂ ಕೆಲವು ವಕೀಲರು ಜಗಳ ಮಾಡಿದ ಹಲವು ಘಟನೆಗಳಿವೆ. ಇಂತಹ ವರ್ತನೆ ತಮಗೂ ಮತ್ತು  ತಮ್ಮ ವೃತ್ತಿಗೂ ಗೌರವ ತರುವುದಿಲ್ಲ ಎನ್ನುವ ಸತ್ಯಸಂಗತಿಯನ್ನು ಇನ್ನಾದರೂ ಅವರು ಮನವರಿಕೆ ಮಾಡಿಕೊಳ್ಳಬೇಕು.ಸಂವಿಧಾನ ಮತ್ತು ಕಾಯ್ದೆ ಕಾನೂನುಗಳನ್ನು ಪಾಲಿಸಬೇಕಾದ ವಕೀಲರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಗಮನಿಸಿದರೆ ಅವರ ಕಾನೂನು ತಿಳುವಳಿಕೆ ಬಗೆಗೆ ಶಂಕೆ ಉಂಟಾಗುತ್ತದೆ.ಕೆಲವೇ ವಕೀಲರ ಈ ವರ್ತನೆ ಬಗೆಗೆ ಇಡೀ ವಕೀಲ ವೃಂದ ತಲೆತಗ್ಗಿಸುವಂತಾಗಿದೆ. ತಮ್ಮ ಮೇಲೆ ನಡೆಸಿದ ಗೂಂಡಾಗಿರಿ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಅವಮಾನಕ್ಕೊಳಗಾದ ಮಾಧ್ಯಮ ಪ್ರತಿನಿಧಿಗಳು ಪೊಲೀಸ್, ಬಾರ್ ಕೌನ್ಸಿಲ್ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಬೇಕು.ಹಿರಿಯ ವಕೀಲರು ಇಂತಹ ಕೆಲವು ಕಿಡಿಗೇಡಿ ವಕೀಲರನ್ನು ಗುರುತಿಸಿ ಅವರಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರಬೇಕು. ಮಾಧ್ಯಮ ಪ್ರತಿನಿಧಿಗಳ ಮೇಲೆ ಗೂಂಡಾಗಿರಿ ನಡೆಸಿದವರ ವಿರುದ್ಧ ಬಾರ್ ಕೌನ್ಸಿಲ್ ತನ್ನ ಶಿಸ್ತು ಸಮಿತಿಯ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು.ಬೆರಳೆಣಿಕೆಯಷ್ಟು ಅವಿವೇಕಿ ವಕೀಲರಿಂದ ವೃತ್ತಿಯ ಘನತೆಗೆ  ಕುಂದುಂಟಾಗಲಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಮೂಲಕ ವಕೀಲಿ ವೃತ್ತಿಯ ಪಾವಿತ್ರ್ಯವನ್ನು ಹಿರಿಯ ವಕೀಲರು ಕಾಪಾಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.