ಮಂಗಳವಾರ, ಆಗಸ್ಟ್ 3, 2021
24 °C

ಸವಾಲುಗಳಿಗೆ ಎದೆಯೊಡ್ಡಿ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಉತ್ತರ ಪ್ರದೇಶದ ಮೊಹ್ಮದ್ ಕೈಫ್ ಬಳಗ ಕರ್ನಾಟಕದ ಸಿ.ಎಂ. ಗೌತಮ್ (ಚಿದಂಬರಮ್ ಮುರಳೀಧರನ್ ಗೌತಮ್) ಅವರನ್ನು ಎಂದಿಗೂ ಮರೆಯುವುದಿಲ್ಲ!

ಕಳೆದ ವಾರ ಕರ್ನಾಟಕವನ್ನು ಸೋಲಿಸಿ ಪ್ರಸಕ್ತ ವರ್ಷದ ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್ ತಲುಪುವ ಉತ್ತರಪ್ರದೇಶದ ಕನಸಿಗೆ ಅಡ್ಡ ನಿಂತವರು ಗೌತಮ್. ಭರ್ಜರಿ ಶತಕ ಗಳಿಸಿದ್ದು ಅಲ್ಲದೇ ‘ಬಿ’ ಗುಂಪಿನ ಅಗ್ರಸ್ಥಾನದಲ್ಲಿರುವ ಕರ್ನಾಟಕವನ್ನು ಅಲ್ಪ ಮೊತ್ತ ಗಳಿಸುವ ಅಪಾಯದಿಂದಲೂ ಪಾರು ಮಾಡಿದರು.

ಕೈಫ್ ಬಳಗವಷ್ಟೇ ಅಲ್ಲ, ಈ ಋತುವಿನಲ್ಲಿ ಕರ್ನಾಟಕದ ಎದುರಿಗೆ ಆಡಿದ ಬಹುತೇಕ ಎಲ್ಲ ತಂಡಗಳಿಗೂ ಗೌತಮ್ ಇದೇ ರೀತಿ ಅಡ್ಡ ನಿಂತಿದ್ದರು. ಏಳನೇ ಕ್ರಮಾಂಕದಲಿ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೊಂದಿಗೆ

ಗೌತಮ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಬಂದಾಗಿನಿಂದಲೂ ತಂಡಕ್ಕೆ ‘ಟ್ರಬಲ್ ಶೂಟರ್’ ಆಗಿ ಹೊರಹೊಮ್ಮಿದ್ದಾರೆ. 2008-09ರ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದು ಆರಂಭಿಕ ಬ್ಯಾಟ್ಸ್‌ಮನ್ ಆಗಿ. ಆಗಿನ್ನೂ ವಿಕೆಟ್ ಕೀಪರ್ ಗ್ಲೌಸ್ ಧರಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ.

ಅದೇ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ಅವರ ಆಟ ರಂಗೇರಿತು. ತಂಡ ಸಂಕಷ್ಟದಲ್ಲಿದ್ದಾಗ ತಮ್ಮ ಜೀವನದ ಚೊಚ್ಚಲ ಶತಕ ಗಳಿಸಿದರು. ತಿಲಕನಾಯ್ಡು ನಂತರ ವಿಕೆಟ್ ಹಿಂದೆಯೂ ತಮ್ಮ ಕೌಶಲ ಪ್ರದರ್ಶನ ಆರಂಭಿಸಿದ ಗೌತಮ್ ಹಿಂದಿರುಗಿ ನೋಡಿಲ್ಲ.

ಬೆಂಗಳೂರಿನ ಎಚ್‌ಎಎಲ್ ಉದ್ಯೋಗಿಯಾಗಿರುವ ಅಪ್ಪ ಮುರಳೀಧರ್ ಫುಟ್‌ಬಾಲ್ ಆಟಗಾರ. ಅವರಿಂದಲೇ ಆಟದ ಮೈದಾನದತ್ತ ಗೌತಮ್‌ಗೆ ಒಲವು ಬೆಳೆಯಿತು. ಆದರೆ, ಫುಟ್‌ಬಾಲ್ ಬದಲು ಕ್ರಿಕೆಟ್‌ನತ್ತ ಅವರು ವಾಲಿದರು. 11ನೇ ವಯಸ್ಸಿಗೆ ಬ್ಯಾಟ್ ಹಿಡಿದರು. 

ಕ್ಲಬ್ ಮತ್ತು ಶಾಲಾ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬೆಳೆದರು. ಬಲಗೈ ಬ್ಯಾಟ್ಸ್‌ಮನ್, ವಿಕೆಟ್ ಹಿಂದೆಯೂ ತಮ್ಮ ಪರಿಣತಿ ಗಳಿಸಲು ಆರಂಭಿಸಿದರು. 16, 19 ಮತ್ತು 25 ವರ್ಷದೊಳಗಿನವರ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದರು. ಬ್ಯಾಟಿಂಗ್ ಮೂಲಕ ರನ್ನುಗಳನ್ನು ಹರಿಸುತ್ತ, ವಿಕೆಟ್ ಹಿಂದೆ ಚುರುಕಿನ ಪ್ರದರ್ಶನ ನೀಡುತ್ತಿದ್ದವರನ್ನು ರಾಜ್ಯ ತಂಡ ಕೈಬೀಸಿ ಕರೆಯಿತು.

ಆದರೆ, ಪೈಪೋಟಿಯ ಯುಗದಲ್ಲಿ ತಂಡದಲ್ಲಿ ಉಳಿಯಲು ಉತ್ತಮ ಪ್ರದರ್ಶನವೊಂದೇ ದಾರಿ ಎಂದು ಅರಿತಿರುವ ಅವರು ಎಂದಿಗೂ ಮೈಮರೆತಿಲ್ಲ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ತಮ್ಮ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ.

ಇದೇ ಋತುವಿನಲ್ಲಿ ಒಡಿಶಾ ವಿರುದ್ಧ ಬೆಂಗಳೂರಿನಲ್ಲಿ ಶತಕ ಗಳಿಸಿ, ಮನೀಶ್ ಪಾಂಡೆಯೊಂದಿಗೆ ಕಟ್ಟಿದ ಇನಿಂಗ್ಸ್ ಕರ್ನಾಟಕಕ್ಕೆ ಭರ್ಜರಿ ವಿಜಯದ ಕಾಣಿಕೆ ನೀಡಿತ್ತು. ಕಾಲುನೋವಿನಿಂದ ಚೇತರಿಸಿಕೊಂಡು ಬಂದಿದ್ದ ಅವರು ಮೈಸೂರಿನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಗಳಿಸಿದ ಅರ್ಧಶತಕ ತಂಡಕ್ಕೆ ಆಸರೆಯಾಯಿತು. ಕಳೆದ ಐದು ಪಂದ್ಯಗಳಲ್ಲಿ ಎರಡು ಶತಕಗಳ ಸಹಾಯದಿಂದ 395 ರನ್ನುಗಳನ್ನು  ಅವರು ಗಳಿಸಿದ್ದಾರೆ.

ಗ್ರೀನ್ ಪಾರ್ಕ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ 135 ರನ್ನುಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 416 ರನ್ನುಗಳ ಮೊತ್ತ ಗಳಿಸಲು ಗೌತಮ್ ಅವರು ವಿನಯಕುಮಾರ ಮತ್ತು ಉದಿತ್ ಪಟೇಲ್ ಅವರ ಜೊತೆಗೆ ಜೊತೆಯಾಟ ಸಹಕಾರಿಯಾಯಿತು. ತಮ್ಮ ಸಹ ಬ್ಯಾಟ್ಸ್‌ಮನ್ ಉತ್ತಮ ಟಚ್‌ನಲ್ಲಿದ್ದಾಗ, ಅವರಿಗೆ ಪ್ರೋತ್ಸಾಹ ಕೊಡುತ್ತ ತಾವು ಇನ್ನೊಂದು ಕಡೆ ನಿಧಾನವಾಗಿ ಆಡುತ್ತ ಇನಿಂಗ್ಸ್ ಕಟ್ಟುವ ಅವರ ತಾಳ್ಮೆ ಗಮನಾರ್ಹ. ಸ್ಕ್ವೇರ್‌ಲೆಗ್ ಶಾಟ್. ಪುಲ್, ಡ್ರೈವ್‌ಗಳನ್ನು ಕಲಾತ್ಮಕವಾಗಿ ಆಡಬಲ್ಲರು.

“ಸವಾಲುಗಳು ಇದ್ದಾಗಲೇ ಚೆನ್ನಾಗಿ ಆಡಬೇಕು. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ನಮ್ಮ ಆಟದಿಂದ ತಂಡಕ್ಕೆ ಒಳ್ಳೆಯದಾದರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನನ್ನ ಆಟದ ಬಗ್ಗೆ ನನಗೆ ತೃಪ್ತಿಯಿದೆ” ಎಂದು ಹೇಳುವ ಗೌತಮ್ ತಾವಾಡಿದ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 1123 ರನ್ ಗಳಿಸಿದ್ದಾರೆ. ಬೌಲರ್‌ಗಳು ವಿಜೃಂಭಿಸುವ ಪಿಚ್‌ಗಳಲ್ಲಿಯೇ ರನ್‌ಗಳ ಬೇಟೆಯಾಡುವುದು ಕರಗತವಾಗಿ ಬಿಟ್ಟಿದೆ.

50 ಕ್ಯಾಚ್: ಕರ್ನಾಟಕ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಯಾವುದೇ ಕಾಲದಲ್ಲಿಯೂ ಸವಾಲಿನ ಮಾತು.

ವಿಶ್ವಶ್ರೇಷ್ಠ ಸ್ಪಿನ್ನರ್ ಮತ್ತು ಮಧ್ಯಮ ವೇಗಿಗಳ ಬೌಲಿಂಗ್‌ಗೆ ಕೀಪಿಂಗ್ ಮಾಡಿದ ಇತಿಹಾಸ ಇಲ್ಲಿಯ ವಿಕೆಟ್ ಕೀಪರ್‌ಗಳಿಗಿದೆ. ಸೈಯ್ಯದ್ ಕಿರ್ಮಾನಿ, ಸದಾನಂದ ವಿಶ್ವನಾಥ್, ಸದ್ಯ ತಂಡದ ಸಹ ತರಬೇತುದಾರರಾಗಿರುವ ಸೋಮಶೇಖರ ಶಿರಗುಪ್ಪಿ, ನಂತರ ಸುದೀರ್ಘ ಕಾಲದವರೆಗೆ ತಿಲಕನಾಯ್ಡು ಸೇರಿದಂತೆ ಎಲ್ಲರೂ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದವರೇ. ಈಗಲೂ ತಂಡದಲ್ಲಿರುವ ಆರ್. ವಿನಯಕುಮಾರ, ಅಭಿಮನ್ಯು ಮಿಥುನ್ ಮತ್ತು ಎಡಗೈ ಮಧ್ಯಮ ವೇಗಿ ಎಸ್. ಅರವಿಂದ್. ಸ್ಪಿನ್ನರ್ ಸುನೀಲ ಜೋಶಿಗೆ ಕೀಪಿಂಗ್ ಮಾಡುವುದು ಸುಲಭದ ಮಾತಲ್ಲ.

ಆದರೆ ಗೌತಮ್ ಈ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ್ದಾರೆ. ಕಾನ್ಪುರದಲ್ಲಿ ಎರಡು ಕ್ಯಾಚ್ ಪಡೆಯುವ ಮೂಲಕ ಒಟ್ಟು 50 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿರುವ 24 ವರ್ಷದ ಗೌತಮಗೂ ಟೀಂ ಇಂಡಿಯಾದಲ್ಲಿ ಆಡುವ ಗುರಿಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.