ಸೋಮವಾರ, ಮಾರ್ಚ್ 8, 2021
18 °C

ಸವಾಲು ಎದುರಿಸುವ ಮುನ್ನ...

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಸವಾಲು ಎದುರಿಸುವ ಮುನ್ನ...

ಪ್ರವಾಸಿ ನ್ಯೂಜಿಲೆಂಡ್‌ ಎದುರು ಬೆಂಗಳೂರಿನಲ್ಲಿ ಏಕದಿನ ಕ್ರಿಕೆಟ್‌ ಸರಣಿ ಆಡಲು ಭಾರತದ ಮಹಿಳೆಯರು ಸಿದ್ಧರಾಗುತ್ತಿದ್ದಾರೆ. ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕೆಳ ಕ್ರಮಾಂಕದಲ್ಲಿರುವ ಆತಿಥೇಯರ ಮುಂದೆ ದೊಡ್ಡ ಸವಾಲು ಇದೆ.ಕೊನೆಯ ರ‍್ಯಾಂಕ್‌...

ಇದು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಸದ್ಯದ ಸ್ಥಾನಮಾನ. ಏಕದಿನ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಆತಿಥೇಯ ಮಹಿಳೆಯರು ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿ ಹಲವು ತಿಂಗಳು ಕಳೆದಿವೆ. ಹಾಗಾಗಿ ಸೋಲು–ಗೆಲುವಿನ ಲೆಕ್ಕಾಚಾರಕ್ಕಿಂತ ಇವರ ಆಟದ ಗುಣಮಟ್ಟದ ಬಗ್ಗೆಯೇ ಕ್ರಿಕೆಟ್‌ ಅಭಿಮಾನಿಗಳಲ್ಲಿ ಅನುಮಾನ ಶುರುವಾಗಿದೆ.

‘ಕೆಲ ವರ್ಷಗಳಿಂದ ಭಾರತ ಮಹಿಳೆಯರ ಆಟದ ಗುಣಮಟ್ಟ ತೀರಾ ಕೆಳಮಟ್ಟದಲ್ಲಿದೆ. ವಿಪರ್ಯಾಸವೆಂದರೆ ಏಕದಿನ ಕ್ರಿಕೆಟ್‌ನಲ್ಲಿ 200ಕ್ಕಿಂತ ಹೆಚ್ಚು ಸ್ಕೋರ್ ಮಾಡಲು ಇವರಿಗೆ ಸಾಧ್ಯವಾಗುತ್ತಿಲ್ಲ. ಕಡಿಮೆ ಪಂದ್ಯಗಳನ್ನು ಆಡುತ್ತಿರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಭಾರತ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ. ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ತಂಡ ಆಯ್ಕೆ ಮಾಡಲು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಚಾಲೆಂಜರ್‌ ಟ್ರೋಫಿ ಏಕದಿನ ಟೂರ್ನಿಯಲ್ಲಿಯೇ  ಮಹಿಳೆಯರ ಆಟದ ಬಣ್ಣ ಬಯಲಾಯಿತು.ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್‌ ಹಾಗೂ ಜೂಲನ್‌ ಗೋಸ್ವಾಮಿ ಹೊರತು ಪಡಿಸಿ ಈ ಟೂರ್ನಿಯಲ್ಲಿ ಉಳಿದವರೆಲ್ಲರೂ ಆಡಿದರು. ಆದರೆ, 50 ಓವರ್‌ಗಳಲ್ಲಿ 150 ರನ್‌ ಗಳಿಸಲು ಪರದಾಡಿದರು. ಕೆಲವರು 90 ಎಸೆತ ಎದುರಿಸಿ ಗಳಿಸಿದ್ದು ಕೇವಲ 25 ರನ್‌. ವಿಪರ್ಯಾಸವೆಂದರೆ ಇಡೀ ಟೂರ್ನಿಯಲ್ಲಿ ದಾಖಲಾಗಿದ್ದು ಒಂದು ಸಿಕ್ಸರ್‌.ಕಿವೀಸ್‌ ಎದುರಿನ ಐದು ಪಂದ್ಯಗಳ ಏಕದಿನ ಸರಣಿಗೆ ಸಿದ್ಧರಾಗಲು 21 ಮಂದಿ ಸಂಭವನೀಯ ಆಟಗಾರ್ತಿಯರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.  ರಾಜಸ್ತಾನದವರೇ ಏಳು ಮಂದಿ ಇದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ವಿ.ಆರ್. ವನಿತಾಗೆ ಅವಕಾಶ ಲಭಿಸಿದೆ. ಮಿಥಾಲಿ ರಾಜ್‌ ತಂಡ ಮುನ್ನಡೆಸಲಿದ್ದಾರೆ.ನ್ಯೂಜಿಲೆಂಡ್‌ ತಂಡದವರು ಇಂಗ್ಲೆಂಡ್‌ನಂಥ ಬಲಿಷ್ಠ ತಂಡವನ್ನು ಮಣಿಸಿ ಬಂದಿದ್ದಾರೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಸಮಬಲ ಸಾಧಿಸಿದ್ದರು. ಹಾಗಾಗಿ ಭಾರತದ ಮಹಿಳೆಯರಿಗೆ ಕಠಿಣ ಸವಾಲು ಎದುರಿಗಿದೆ. ನ್ಯೂಜಿಲೆಂಡ್‌ ಎದುರು ಸರಣಿ ಆಡಿ ನಾಲ್ಕು ವರ್ಷಗಳು ಕಳೆದಿವೆ. ಹೋದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯರು ಸೋಲು ಕಂಡಿದ್ದರು. ಆ ಸೋಲು ಇನ್ನೂ ಕಾಡುತ್ತಿದೆ.ಭಾರತದ ಅಸ್ತ್ರ ಸ್ಪಿನ್‌

ನ್ಯೂಜಿಲೆಂಡ್‌ ತಂಡವನ್ನು ಮಣಿಸಲು ಭಾರತ ತಂಡದ ಅಸ್ತ್ರವೆಂದರೆ ಸ್ಪಿನ್‌ ಬೌಲಿಂಗ್‌. ಎಡಗೈ ಸ್ಪಿನ್ನರ್‌ ರಾಜೇಶ್ವರಿ ಹಾಗೂ ಆಫ್‌ ಸ್ಪಿನ್ನರ್‌ ಪ್ರೀತಿ ಬೋಸ್‌ ಅವರ ಮೇಲೆ ಈಗ ಹೆಚ್ಚು ನಂಬಿಕೆ. ಬ್ಯಾಟಿಂಗ್‌ ವಿಭಾಗದಲ್ಲಿ ಹರ್ಮನ್‌ಪ್ರೀತ್‌ ಕೌರ್‌, ಪೂನಮ್‌ ರಾವತ್‌, ತಿರುಷ್‌ ಕಾಮಿನಿ, ಸ್ಮೃತಿ ಮಂದಾನಾ ಹಾಗೂ ವೇದಾ  ಮೇಲೆ ಹೆಚ್ಚು ಭರವಸೆ ಇದೆ. ಐಸಿಸಿ ಮಹಿಳಾ ಬೌಲಿಂಗ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ವೇಗಿ ಜೂಲನ್‌ ಗೋಸ್ವಾಮಿ ಈಗಲೂ ಅಗ್ರಸ್ಥಾನದಲ್ಲಿದ್ದಾರೆ.ಆದರೆ, ಗಾಯದ ಸಮಸ್ಯೆ ಕಾರಣ ಅವರು ಕೆಲ ತಿಂಗಳಿಂದ ಕ್ರಿಕೆಟ್‌ ಆಡಿಲ್ಲ. ಉಭಯ ತಂಡಗಳು ಐದು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿವೆ. ಸರಣಿಗೂ ಮುನ್ನ ನ್ಯೂಜಿಲೆಂಡ್‌ ತಂಡದವರು ಭಾರತ ‘ಎ’ ಎದುರು ಒಂದು ಅಭ್ಯಾಸ ಪಂದ್ಯ ಆಡಲಿದ್ದಾರೆ. ‘ಎ’ ತಂಡವನ್ನು ಕರ್ನಾಟಕದ ವಿ.ಆರ್‌. ವನಿತಾ ಮುನ್ನಡೆಸಲಿದ್ದಾರೆ. ಜೂನ್‌ 28ರಂದು ಸರಣಿ ಆರಂಭವಾಗಲಿದ್ದು, ಐದೂ ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿವೆ. ಟ್ವೆಂಟಿ–20 ಪಂದ್ಯಗಳು ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಡೆಯಲಿವೆ.ಆಸಕ್ತಿಯೂ ಕಡಿಮೆ...

ಸಾಮಾನ್ಯವಾಗಿ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಕ್ರಿಕೆಟ್‌ ನಡೆದಾಗಲೆಲ್ಲಾ ಹೆಚ್ಚು ಪ್ರೇಕ್ಷಕರು ಸೇರುತ್ತಾರೆ. ಕೆಪಿಎಲ್‌ ಹಾಗೂ ರಣಜಿ ಪಂದ್ಯಗಳೇ ಇದಕ್ಕೆ ಸಾಕ್ಷಿ. ಆದರೆ, ಮಹಿಳೆಯರ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಬಂದಿದ್ದು ಬೆರಳೆಣಿಕೆ ಮಂದಿ. ಮಹಿಳಾ ಪ್ರೇಕ್ಷಕರಂತೂ ಅಪರೂಪ.  ರಾಜಧಾನಿಯಿಂದ ಹೊರಗಡೆ ಇಂಥ ಪ್ರಮುಖ ಟೂರ್ನಿ ಆಯೋಜಿಸುತ್ತಿರುವ ಬಿಸಿಸಿಐ ನಡೆ ಉತ್ತಮವಾಗಿದೆ. ಆದರೆ, ಟೂರ್ನಿ ನಡೆಸುತ್ತಿರುವ ವಿಧಾನದ ಬಗ್ಗೆ ಕೆಲವರಲ್ಲಿ ಅಸಮಾಧಾನವಿದೆ. ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಪಂದ್ಯ ವೀಕ್ಷಿಸಲು ಅನುವು ಮಾಡಿಕೊಡಲು ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರಯತ್ನಿಸಬಹುದಿತ್ತು ಎಂಬುದು ಮಾಜಿ ಆಟಗಾರರ ಅಭಿಪ್ರಾಯ. ಏಕೆಂದರೆ ಇಂಥ ಟೂರ್ನಿಗಳನ್ನು ವೀಕ್ಷಿಸುವ ಬಾಲಕಿಯರು ಹಾಗೂ ಯುವತಿಯರಿಗೆ ಮುಂದೊಮ್ಮೆ ತಾವೂ ಕ್ರಿಕೆಟ್‌ ಆಡಬೇಕು ಎಂದೆನಿಸದೆ ಇರದು.

*

ಮಿಂಚಿದ ರಾಜ್ಯದ ಆಟಗಾರ್ತಿಯರು...

ಸದ್ಯ ಭಾರತ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ರಾಜ್ಯದ ಆಟಗಾರ್ತಿ ಯರೆಂದರೆ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ವಿ.ಆರ್‌. ವನಿತಾ. ಇವರಲ್ಲಿ ವೇದಾ ಹಾಗೂ ರಾಜೇಶ್ವರಿ ಅವರು ಚಾಲೆಂಜರ್‌ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ನೀಡಿದರು. ಅದರಲ್ಲೂ ರಾಜೇಶ್ವರಿ ಮೂರು ಪಂದ್ಯಗಳಿಂದ ಏಳು ವಿಕೆಟ್‌ ಕಬಳಿಸಿ ಮಿಂಚಿದರು.ಮೈಸೂರಿನ ರಕ್ಷಿತಾ ಕೆ. ಕಾಳೇಗೌಡ ಇಂಡಿಯಾ ಬ್ಲ್ಯೂ ತಂಡದಲ್ಲಿ ಆಡಿದರು. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಕ್ಷಿತಾ ಉತ್ತಮ ಬ್ಯಾಟ್ಸ್‌ಮನ್‌. ಈಗಾಗಲೇ ಕೆಎಸ್‌ಸಿಎ ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. ಇಂಡಿಯಾ ಗ್ರೀನ್‌ ತಂಡದಲ್ಲಿ       ಬೆಂಗಳೂರಿನ ದಿವ್ಯಾ ಜ್ಞಾನಾನಂದ ಮತ್ತು ಹುಬ್ಬಳ್ಳಿಯ ಪುಷ್ಪಾ ಕಿರೇಸೂರ್‌ ಆಡಿದರು. ಪುಷ್ಪಾ ಅವರ ಆಟವನ್ನು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥೆ ಶಾಂತಾ ರಂಗಸ್ವಾಮಿ ಕೊಂಡಾಡಿದರು.

*

ಗ್ಲೇಡ್ಸ್‌ ಮತ್ತು ಕ್ರಿಕೆಟ್‌ ಪ್ರೀತಿ...

ಮೈಸೂರಿನಲ್ಲಿ ಈಗ ಒಂದಲ್ಲ ಒಂದು ಟೂರ್ನಿ ನಡೆಯುತ್ತಲೇ ಇರುತ್ತವೆ. ಕೆಪಿಎಲ್‌, ರಣಜಿ, ‘ಎ’ ಟೂರ್ನಿ, ಅಂತರವಲಯ ಪಂದ್ಯಗಳು... ಹೀಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣಕ್ಕೆ ಬಿಡುವೇ ಇರುವುದಿಲ್ಲ. ಈ ನಗರಿಗೆ ಈಗ ಮಹಿಳಾ ಕ್ರಿಕೆಟ್‌ನ ಸ್ಪರ್ಶವಾಗಿದೆ.ಕೆಲ ತಿಂಗಳ ಹಿಂದೆಯಷ್ಟೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳೆಯರ ನಡುವೆ ಟೆಸ್ಟ್‌ ಪಂದ್ಯ ನಡೆದಿತ್ತು. ಹೋದ ವಾರ ಮಹಿಳಾ ಚಾಲೆಂಜರ್‌ ಟ್ರೋಫಿ ಏಕದಿನ ಟೂರ್ನಿಗೆ ವೇದಿಕೆ ಒದಗಿಸಿತ್ತು. ಮುಂದಿನ ತಿಂಗಳು ಅಂತರ ವಲಯ ಬಾಲಕಿಯರ ಟೂರ್ನಿ ನಡೆಯಲಿದೆ. ‘ಮೈಸೂರಿನಲ್ಲಿ ಮಹಿಳೆಯರ ಟೂರ್ನಿ ಆಯೋಜಿಸಲು ಅವಕಾಶ ಲಭಿಸಿದ್ದು ಖುಷಿ ನೀಡಿದೆ. ಕ್ರಿಕೆಟ್‌ ಆಡಲು ಸ್ಥಳೀಯ ಯುವತಿಯರಿಗೆ ಇದು ಪ್ರೇರಣೆ ಆಗಬಹುದು’ ಎನ್ನುತ್ತಾರೆ ಕೆಎಸ್‌ಸಿಎ ಮೈಸೂರು ವಲಯ ಸಂಯೋಜಕ ಎಸ್‌. ಬಾಲಚಂದರ್‌.

*

ನ್ಯೂಜಿಲೆಂಡ್‌ ಎದುರು ಭಾರತದ ಸಾಧನೆ

ಪಂದ್ಯ  39

ಗೆಲುವು 13

ಸೋಲು 25

ಟೈ 1

*

ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಸಾಧನೆ

ಭಾರತ

ಪಂದ್ಯ  211

ಗೆಲುವು 109

ಸೋಲು 97

ಟೈ/ರದ್ದು 1/4

ನ್ಯೂಜಿಲೆಂಡ್‌

ಪಂದ್ಯ 278

ಗೆಲುವು 136

ಸೋಲು 134

ಟೈ/ರದ್ದು 2/6

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.