ಶುಕ್ರವಾರ, ಮೇ 7, 2021
20 °C

ಸಾಂಪ್ರದಾಯಿಕ ಕಲೆಗೆ ಉತ್ತೇಜನ: ಉಮಾಶ್ರೀ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಂದಾವನದಲ್ಲಿನ ರಾಧಾ ಕೃಷ್ಣರ ಪ್ರಣಯ ಲೀಲೆ, ಶೃಂಗಾರ ಕಾವ್ಯದ ಸುಂದರ ಕಥೆ, ಪ್ರೇಮಿಗಳಿಗೆ ರಸರಮ್ಯ ವರ್ಣನಾತೀತ ರಾಗ ಕಾವ್ಯದಂತೆ ಮೂಡಿರುವ ಶಿಲ್ಪ ಕಲಾಕೃತಿಗಳು..`ಗೀತಗೋವಿಂದ' ಮಹಾಕಾವ್ಯದಿಂದ ಆಯ್ಕೆ ಮಾಡಿ, ಮರದ ಮಾಧ್ಯಮದಲ್ಲಿ ಸಾರುವ ರಾಧಾ ಕೃಷ್ಣರ ಪ್ರಣಯ ಕ್ರೀಡೆಗಳು ಮರದ ಹದಿನಾಲ್ಕು ಉಬ್ಬುಶಿಲ್ಪ ರೂಪದಲ್ಲಿ ಅಭಿವ್ಯಕ್ತಿಗೊಂಡಿವೆ.ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಸ್ತೂರ ಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ `ಗೀತ ಗೋವಿಂದ' ಮರದ 14 ಉಬ್ಬು ಶಿಲ್ಪಗಳ ಪ್ರದರ್ಶನದಲ್ಲಿ ಮನಸೂರೆಗೊಳ್ಳುವ ಕಲಾಕೃತಿಗಳಿವು.ಇತ್ತೀಚೆಗೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ `ಸಾಂಪ್ರದಾಯಿಕ ಕಲೆ ಉಳಿಸಲು ಸರ್ಕಾರ ಬದ್ಧವಾಗಿದೆ. ಸಾಂಪ್ರದಾಯಿಕ ಕಲೆಗಳಿಗೆ ಅಗತ್ಯವಾದ ಉತ್ತೇಜನವನ್ನು ಸರ್ಕಾರ ನೀಡುತ್ತದೆ' ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ.ಜ್ಞಾನಾನಂದ ಅವರು, `ಶಿಲ್ಪಕಲಾ ಅಕಾಡೆಮಿಯು ಸರ್ಕಾರದ ಸಂಸ್ಥೆಯಾದರೂ ಇಂದು ಪ್ರೋತ್ಸಾಹವಿಲ್ಲದೆ ನಶಿಸುವ ಹಂತದಲ್ಲಿದೆ. ಸರ್ಕಾರ ಸಂಪ್ರದಾಯ ಶಿಲ್ಪದ ಶಾಲಾ ಕಾಲೇಜುಗಳನ್ನು ಮುಚ್ಚಿ, ಸಮಕಾಲೀನ ಶಾಲೆಗೆ ಸಂಬಂಧಪಟ್ಟ ಶಿಲ್ಪ ಶಾಲೆಗಳನ್ನು ತೆರೆಯುತ್ತಿದೆ' ಎಂದು ದೂರಿದರು.`ಇಂದಿನ ಸಾಂಪ್ರದಾಯಿಕ ಶಿಲ್ಪಿಗೆ ಯಾವುದೇ ಪ್ರತಿಫಲವೇ ಇಲ್ಲ. ದಕ್ಷಿಣ ಭಾರತದಲ್ಲಿ ಕೇವಲ 4,500 ಶಿಲೆ ಮತ್ತು ಲೋಹ ಶಿಲ್ಪಿಗಳಿದ್ದಾರೆ. ನಾವೀಗ ಸಾಂಪ್ರದಾಯಿಕ ಕಲೆಯನ್ನು ಮರೆತು ಎಲ್ಲವನ್ನೂ ವಾಣಿಜ್ಯೀಕರಣಗೊಳಿಸುತ್ತಿದ್ದೇವೆ' ಎಂದು ವಿಷಾದಿಸಿದರು.

ಗೀತ ಗೋವಿಂದ...

ಜಯದೇವ ಕವಿಯ ಗೀತ ಗೋವಿಂದ ಕಾವ್ಯವು ಮಧುರ ಭಕ್ತಿ ಸಂಪ್ರದಾಯಕ್ಕೆ ಸೇರಿದ್ದು, ಶೃಂಗಾರ ರಸ ಪ್ರಧಾನವಾಗಿದ್ದು, ಎಲ್ಲಾ ರಸಗಳ ಮಿಶ್ರಣವೇ ಈ ಕಾವ್ಯವಾಗಿದೆ. ರಾಧಾಕೃಷ್ಣರ ಪ್ರೇಮ, ಶೃಂಗಾರವನ್ನು ವಿವರಿಸಿ ಸಾರುವ ಕಾವ್ಯವಾಗಿದೆ. ಕಾವ್ಯವು 12 ಸರ್ಗಗಳು, 24 ಅಷ್ಟಪದಿಗಳು, 64 ವರ್ಣನಾತ್ಮಕ ಶ್ಲೋಕಗಳನ್ನು ಒಳಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.