ಸೋಮವಾರ, ಮೇ 17, 2021
21 °C

ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ರೂ. 25 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ವತಿಯಿಂದ ಬಾಗಲಕೋಟೆ ನಗರದಲ್ಲಿ ನಿರ್ಮಾಣವಾಗಲಿರುವ  ಸಾಂಸ್ಕೃತಿಕ ಭವನಕ್ಕೆ(ನೌಕರರ ಭವನ) ರೂ. 25 ಲಕ್ಷ ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ನಗರದ ಕಲಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದ ಆರು ಕೋಟಿ ಜನತೆಗೆ ಸಿಗದಷ್ಟು ಸೌಲಭ್ಯಗಳು ಕೇವಲ ಆರು ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ ಸಿಗುತ್ತಿರುವುದು ನಿಮ್ಮೆಲ್ಲರ ಪುಣ್ಯವಾಗಿದೆ, ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಬಡ ಜನತೆಯ ಪರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.ಆರನೇ ವೇತನ ಆಯೋಗದಲ್ಲಿ ಇರುವ ನ್ಯೂನತೆಯನ್ನು ಸರಿಪಡಿಸಿ ನೌಕರರಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುವುದಾಗಿ ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ ಘಟಕದ ಅಧ್ಯಕ್ಷ ಎಲ್. ಭೈರಪ್ಪ, ಸರ್ಕಾರಿ ನೌಕರರು ಬೇರೆಯವರನ್ನು ಓಲೈಸಲು ಕೆಲಸ ಮಾಡದೆ ಪ್ರಮಾಣಿಕವಾಗಿ ಸರ್ಕಾರಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ರಾಜ್ಯ ಸರ್ಕಾರ 6ನೇ ವೇತನ ಆಯೋಗವನ್ನು ಜಾರಿಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸದ ಅವರು, 6ನೇ ವೇತನ ಆಯೋಗದಲ್ಲಿ ಕೆಲ ನ್ಯೂನತೆ ಇದ್ದು, ಅದನ್ನು ಸರಿಪಡಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ `ನಾಗರಿಕ ಸನ್ನದು ಕಾಯ್ದೆಯಲ್ಲಿ ಸಣ್ಣಪುಟ್ಟ ನ್ಯೂನತೆ ಇದೆ ಎಂದು ಹೆಸರಿಸಿದ ಅವರು, ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಮೂಲಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಕಚೇರಿಗಳಿಗೆ ಕಲ್ಪಿಸಬೇಕು ಎಂದು ಹೇಳಿದರು.ನಿಯೋಜಿತ ನೌಕರರ ಭವನದ ನೀಲನಕ್ಷೆ ಅನಾವರಣಗೊಳಸಿದ ಸಂಸದ ಪಿ.ಸಿ.ಗದ್ದಿಗೌಡರ ಅವರು, ನೌಕರರ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ರೂ. 10 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.ಸನ್ಮಾನ: ರಾಜ್ಯ ಪ್ರಶಸ್ತಿ ಪುರಸ್ಕೃತ ನೌಕರರಾದ ಸಿದ್ದರಾಮ ಮನಹಳ್ಳಿ, ಮನೋಹರ ಮಂದೋಲಿ, ಡಾ. ಎ.ಎನ್.ದೇಸಾಯಿ, ಎಸ್.ಪಿ.ಬಾಡಗಂಡಿ, ದೊಡ್ಡಣ್ಣ ಎಚ್.ಗದ್ದನಕೇರಿ, ಎಸ್.ರುದ್ರಸ್ವಾಮಿ, ಮುಕ್ಕಣ್ಣವರ, ಎಚ್.ಡಿ ಧನ್ನೂರ, ಬಸವರಾಜ ಎಸ್.ಮಠ, ವಿದ್ಯಾರ್ಥಿಗಳಾದ ಅರ್ಜುನ ಹಲಕುರ್ಕಿ ಮತ್ತು ಮೇಘಾ ಗೂಗಾಡ ಅವರನ್ನು ಕಾರ್ಯಕ್ರಮದಲ್ಲಿ ಗಣ್ಯರು ಸನ್ಮಾನಿಸಿದರು.ಶಾಸಕ ವೀರಣ್ಣ ಚರಂತಿಮಠ `ಜಿಲ್ಲಾ ಮಾಹಿತಿ ಸಹಾಯವಾಣಿ ಸಂಚಿಕೆ~ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಬೆಳಗಾವಿ ಜಿಲ್ಲೆಯ ಕಕಮರಿ ಶ್ರೀಸದ್ಗುರು ರಾಯಲಿಂಗೇಶ್ವರ ಸಂಸ್ಥಾನಮಠದ ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಲಿಂಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಸಕ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಪಂ.ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಸ್.ಸಣ್ಣಮುದ್ದಯ್ಯ, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಡಾ.ಚೌಡಯ್ಯ, ಉಪಾಧ್ಯಕ್ಷ ಶ್ರೀನಿವಾಸ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಠಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.