ಬುಧವಾರ, ಜೂನ್ 16, 2021
21 °C

ಸಾಂಸ್ಕೃತಿಕ ವೈರುಧ್ಯಕ್ಕೆ ಪ್ರೀತಿಯ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಗೂ ನಗರಕ್ಕೂ ಇರುವ ಸಾಂಸ್ಕೃತಿಕ ವೈರುಧ್ಯ ನಿರ್ದೇಶಕ ಪ್ರವೀಣ್ ನಾಯಕ್ ಅವರನ್ನು ಕಾಡಿದೆ. ಆ ವೈರುಧ್ಯದ ಮೂಲ ಅವರಿಗೆ ಹಳ್ಳಿಗಿಂತ ನಗರದಲ್ಲಿಯೇ ಸ್ಪಷ್ಟವಾಗಿ ಗೋಚರಿಸಿದೆ. ಬಸವನಗುಡಿಗೂ ಕೋರಮಂಗಲದ ಜನಜೀವನಕ್ಕೂ ಇರುವ ಸಾಂಸ್ಕೃತಿಕ ವ್ಯತ್ಯಾಸ ಅವರಿಗೆ ಸಿನಿಮಾ ವಸ್ತುವಾಗಿ ಕಂಡಿದೆ. ಹಳ್ಳಿಯಿಂದ ನಗರಕ್ಕೆ ಬರುವ ಯುವಕನೊಬ್ಬ ಇಲ್ಲಿನ ಸಾಂಸ್ಕೃತಿಕ ವೈರುಧ್ಯವನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿದ್ದಾರೆ ಪ್ರವೀಣ್.ಮೂಲತಃ ಛಾಯಾಗ್ರಾಹಕರಾಗಿರುವ ಪ್ರವೀಣ್ ನಾಯಕ್, ಕೆಲ ಕಾಲ ಚಿತ್ರರಂಗದಿಂದ ದೂರವಿದ್ದರು. ಈಗ ‘ಶಂಕ್ರ’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಶ್ರೀನಗರ ಕಿಟ್ಟಿ ಇಲ್ಲಿ ಪಟ್ಟಣಕ್ಕೆ ಬಂದ ಪುಟ್ಟ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುಗ್ಧ ಶಂಕ್ರನಾಗಿ ಕಾಣಿಸಿಕೊಳ್ಳುತ್ತಿರುವ ಅವರ ಪಾತ್ರಕ್ಕೆ ಎರಡು ಛಾಯೆಗಳಿವೆ. ಈ ಸಾಂಸ್ಕೃತಿಕ ಅಧಃಪತನದ ಚಿತ್ರಣದ ಜೊತೆಗೆ ಪ್ರೇಮಕಥೆಯೂ ಅರಳುತ್ತದೆ. ಚಾನೆಲ್‌ಗಳಲ್ಲಿ ದಿನಬೆಳಗ್ಗೆ ಶುರುವಾಗುವ ಜ್ಯೊೋತಿಷ, ಜನರನ್ನು ವಂಚಿಸುವ ದೇವಮಾನವರು ಸಹ  ಇಲ್ಲಿ ಜಾಗಪಡೆದಿದ್ದಾರೆ. ದೇವಮಾನವನ ಪರಕಾಯ ಪ್ರವೇಶಿಸುತ್ತಿರುವುದು ರಂಗಾಯಣ ರಘು. ಫೋಟೊಶೂಟ್‌ನಲ್ಲಿಯೇ ತಮ್ಮ ಪಾತ್ರದ ಎಲ್ಲಾ ಭಾವಭಂಗಿಗಳನ್ನೂ ಅಭಿನಯಿಸಿ ತೋರಿಸಿದ್ದಾರೆ ಎಂದು ರಂಗಾಯಣ ರಘು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಪ್ರವೀಣ್.ದೇವಮಾನವರ ಹೆಸರಿನಲ್ಲಿ ಜನರನ್ನು ವಂಚಿಸುವವರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ರಂಗಾಯಣ ರಘು. ಇರುವ ವಂಚಕರ ನಡುವೆ ಕಡಿಮೆ ವಂಚಿಸುವರೇ ಒಳ್ಳೆಯವರು. ಅಂಥ ಪಾತ್ರ ತಮ್ಮದು ಎಂದರು ಅವರು.ಈಗಿನ ಯುವಜನಾಂಗಕ್ಕೆ ಆಪ್ತ ಎನಿಸುವ ಕಥನ ಇದು ಎನ್ನುವುದು ಕಿಟ್ಟಿ ಅವರ ಅಭಿಪ್ರಾಯ. ಪ್ರೀತಿಯಿಂದ ಹೇಗೆ ಎಲ್ಲವನ್ನೂ ಸರಿಪಡಿಸಬಹುದು ಎಂಬ ನೀತಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದ ಕಿಟ್ಟಿ, ಮಾತಿನ ಉತ್ತರಾರ್ಧವನ್ನು ಛಾಯಾಗ್ರಾಹಕ ಮನೋಹರ ಜೋಶಿ ಅವರ ಹೊಗಳಿಕೆಗೆ ಮೀಸಲಿಟ್ಟರು.ನಿರ್ದೇಶಕ ಪ್ರವೀಣ್ ನಾಯಕ್ ಛಾಯಾಗ್ರಹಣ ಹಿನ್ನೆಲೆಯವರಾಗಿರುವುದರಿಂದ ತಮ್ಮ ಕೆಲಸಗಳು ಸಲೀಸಾಗುತ್ತಿದೆ ಎನ್ನುವ ಖುಷಿ ಮನೋಹರ ಜೋಶಿ ಅವರದು. ಚಿತ್ರೀಕರಣ ಸ್ಥಳದಲ್ಲಿ ಗೊಂದಲಗಳು ಇರಬಾರದು ಎನ್ನುವ ಮುಂದಾಲೋಚನೆಯಿಂದ ಚಿತ್ರೀಕರಣ ಸ್ವರೂಪದ ಸಂಪೂರ್ಣ ಚರ್ಚೆಯನ್ನು ಮಾಡಲಾಗಿದೆ ಎಂದರು ಜೋಶಿ.ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮುನ್ನವೇ ಹಾಡುಗಳ ಸಂಯೋಜನೆ, ಧ್ವನಿಮುದ್ರಣ ಎಲ್ಲವೂ ಪೂರ್ಣಗೊಂಡಿರುವುದು ವಿಶೇಷ. ಮನೋಮೂರ್ತಿ ಆರು ಹಾಡುಗಳನ್ನು ಹೊಸೆದು ಸಿದ್ಧಪಡಿಸಿದ್ದಾರೆ. ಕೇರಳ ಮೂಲದ ಐಶ್ವರ್ಯಾ ದೇವನ್‌ ಚಿತ್ರದ ನಾಯಕಿ. ಚಿತ್ರತಂಡದ ಮೊದಲ ಸುದ್ದಿಗೋಷ್ಠಿಯಲ್ಲಿ ಅವರು ಹಾಜರಿರಲಿಲ್ಲ.ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಆನಂದ್. ರಂಗಭೂಮಿ ಹಿನ್ನೆಲೆ ಇರುವ ಅವರಿಗಿದು ಮೊದಲ ಚಿತ್ರ. ಮಾತಿನ ಉಸಾಬರಿ ತಮಗೆ ಬೇಡ ಎಂದು ಅವರು ಅದನ್ನು ಪತ್ನಿ ಲಲಿತಾ ಅವರಿಗೆ ವಹಿಸಿಕೊಟ್ಟಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.